ಕೊಪ್ಪಳ| ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ ಯೋಜನೆಗೆ ಖಂಡನೆ : ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಆಗ್ರಹ”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್:
ಬೆಂಗಳೂರು: ‘ರಾಜ್ಯ ಸರ್ಕಾರ ‘ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ’ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಹರಾಜು ಪ್ರಕ್ರಿಯೆಗೆ ದಾರಿ ಮಾಡಿಕೊಡಲು ಮುಂದಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಘಟಕ ಆರೋಪಿಸಿದ್ದಾರೆ.
ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರ ಮತ್ತು ಸಮಿತಿಯ ರಾಜ್ಯ ಕಾರ್ಯದರ್ಶಿ ಮಹೇಶ್ ಎಸ್. ಜಿ. ಅವರು, “ಶಿಕ್ಷಣ ಸಚಿವ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅವರು, “ಎಡಿಬಿಯಿಂದ ₹2,000 ಕೋಟಿ ಸಾಲ ಪಡೆದು 700 ಕೆಪಿಎಸ್‌ಗಳನ್ನು ಸ್ಥಾಪಿಸುವ ಯೋಜನೆಯ ಹಿಂದಿರುವ ನೈಜ ಉದ್ದೇಶ 7,000 ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಎಂಬುದು ಇದೀಗ ಬಹಿರಂಗವಾಗಿದೆ. ಶಾಲೆಗಳನ್ನು ಮುಚ್ಚುವ ಮುನ್ನವೇ ಈ ಕಟ್ಟಡಗಳನ್ನು ಖಾಸಗಿ ನೋಂದಾಯಿತ ಸಂಸ್ಥೆಗಳಿಗೆ ನೀಡುವುದಾಗಿ ಸಚಿವರು ಸ್ಪಷ್ಟಪಡಿಸಿರುವುದು ಸರ್ಕಾರದ ನೈಜ ನಿಲುವನ್ನು ಹೊರಗೆಳೆಯುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ಸರ್ಕಾರಿ ಶಾಲೆಗಳನ್ನು ಹರಾಜು ಹಾಕಿ ಅವುಗಳ ಆಸ್ತಿಯನ್ನು ಜಾಹೀರಾತು ಸ್ಥಳಗಳಾಗಿ ಬಳಸುವ ಯತ್ನ, ರಾಜ್ಯ ಸರ್ಕಾರ ಆರ್ಥಿಕವಾಗಿಯೂ ನೈತಿಕವಾಗಿಯೂ ದಿವಾಳಿಯಾಗಿದೆ ಎಂಬುದನ್ನು ತೋರಿಸುತ್ತದೆ. ಬಡ, ರೈತ ಕಾರ್ಮಿಕರ ಮಕ್ಕಳು — ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಯೇ ಏಕೈಕ ಆಶ್ರಯ. ಅದನ್ನೇ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ರಾಜಕೀಯ ಪ್ರಭಾವಿಗಳ ಕೈಗೆ ಒಪ್ಪಿಸಲು ಸರ್ಕಾರ ಬಯಸುತ್ತಿರುವುದು ಗಂಭೀರ ವಿಷಯ” ಎಂದು ಆತಂಕ ವ್ಯಕ್ತಪಡಿಸಿದರು.
ಎಡಿಬಿ ಹಾಗೂ ವಿಶ್ವಬ್ಯಾಂಕ್ ಸಾಲದ ಷರತ್ತುಗಳನ್ನು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕೆಂದು ಆಗ್ರಹಿಸಿದ ಅವರು, “ಸರ್ಕಾರಿ ಶಾಲೆಗಳ ಆಸ್ತಿಯನ್ನು ರಕ್ಷಿಸಲು ಹೊಸ ಮಸೂದೆ ತರಬೇಕೆಂದಿರುವುದು ಕಾರ್ಪೊರೇಟ್ ಪರವಾದ ಅನುಮಾನ ಮೂಡಿಸುತ್ತದೆ. ಇರುವ ಕಾನೂನುಗಳನ್ನೇ ದಿಟ್ಟವಾಗಿ ಜಾರಿಗೊಳಿಸಿ ಸರ್ಕಾರಿ ಆಸ್ತಿಗಳನ್ನು ಕಾಪಾಡಬೇಕು” ಎಂದು ಒತ್ತಾಯಿಸಿದರು.
“ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ ಯೋಜನೆ ಕೈ ಬಿಟ್ಟು ಸರ್ಕಾರಿ ಶಿಕ್ಷಣವನ್ನೇ ಬಲಪಡಿಸಬೇಕು. ಸರ್ಕಾರಿ ಶಾಲೆಗಳ ಹರಾಜಿಗೆ ವಿರೋಧವಾಗಿ ರಾಜ್ಯದ ಜನತೆ ಏಕಗತಿಯಾಗಿ ಬೀದಿಗಿಳಿದು ಹೋರಾಟ ನಡೆಸಬೇಕು” ಎಂದು ಶಿಕ್ಷಣ ಉಳಿಸಿ ಸಮಿತಿಯು ಎಚ್ಚರಿಕೆ ನೀಡಿದೆ.