ವಿದ್ಯುತ್ ಕಳ್ಳತನ ನಿಯಂತ್ರಿಸಲು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಸಮರ್ಪಕ ನಿರ್ವಹಣೆಗೆ ನಿಗಾವಹಿಸಿ: ಇಂಧನ ಸಚಿವ ಕೆ.ಜೆ.ಜಾರ್ಜ್

By admin

ವಿದ್ಯುತ್ ಕಳ್ಳತನ ನಿಯಂತ್ರಿಸಲು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಸಮರ್ಪಕ ನಿರ್ವಹಣೆಗೆ ನಿಗಾವಹಿಸಿ: ಇಂಧನ ಸಚಿವ ಕೆ.ಜೆ.ಜಾರ್ಜ್

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಅನಧಿಕೃತವಾಗಿ ಹುಕ್ ಗಳ ಮೂಲಕ ವಿದ್ಯುತ್ ಕಳ್ಳತನವನ್ನು ತಡೆಯುವ ಮತ್ತು ಹೆಚ್ಚಿನ ಲೋಡ್ ದಿಂದಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗುವುದನ್ನು ತಡೆಯಲು ಅವಶ್ಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಇಂಧನ ಖಾತೆ ಸಚಿವರಾದ ಶ್ರೀ ಕೆ.ಜೆ. ಜಾರ್ಜ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ.ನಿ ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ವಿದ್ಯುತ್ ನ ಕೊರತೆ ಇಲ್ಲದಿದ್ದರೂ ಸಮರ್ಪಕ ನಿರ್ವಹಣೆ ಅತ್ಯವಶ್ಯಕವಾಗಿದೆ. ಪಂಪ್ ಸೆಟ್ ಗಳಿಗಾಗಿ ಹಾಗೂ ಇತರೆ ಅವಶ್ಯಕತೆ ಮತ್ತು ಕೈಗಾರಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಆಗದಂತೆ ನಿಗಾವಹಿಸುವಂತೆ ಅವರು ಸೂಚಿಸಿ, ಅಧಿಕ ಲೋಡ್ ದಿಂದಾಗಿ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗದಂತೆ ನೋಡಿಕೊಳ್ಳಲು
ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈಗಾಗಲೇ ಸ್ಥಾಪಿಸಿರುವ ವಿದ್ಯುತ್ ಉಪ ಕೇಂದ್ರ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್ಸ ಮಾಡುವ ಕಾರ್ಯ ಆದ್ಯತೆ ಮೇಲೆ ಕೈಗೊಳ್ಳಬೇಕು. ವಿದ್ಯುತ್ ಕೇಂದ್ರವಾರು ಸಂಪೂರ್ಣ ಲಿಂಕ್ ಲೈನ್ ಆಗಿರುವ ಬಗ್ಗೆ ಕ.ವಿ.ಪ್ರಸರಣ ನಿಗಮ ಹಾಗೂ ಗು ವಿದ್ಯುತ್ ಸರಬರಾಜು ಕಂ ಅಧಿಕಾರಿಗಳು ಅವಶ್ಯಕ ನಿಗಾವಹಿಸುವಂತೆ ಅವರು ಸೂಚಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಿರುವ ಕಡೆಗಳಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.ವಿಶೇಷವಾಗಿ ತಾಂಡಾ,ದೊಡ್ಡಿ ಮತ್ತು ಅರ್ಹರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಒಂಬತ್ತು ವಿದ್ಯುತ್ ಉಪಕೇಂದ್ರಗಳಾದ ಕೆಂಭಾವಿ ,ಹುಣಸಿಹೊಳೆ, ಕವಳೂರ,ಕಂದಕೂರ,ಅಡಕಲಬಂಡಿ,ವನದುರ್ಗ,ಹಯ್ಯಳ.ಬಿ, ಕೊಡೆಕಲ್,ಗಡ್ಡೆಸುಗೂರ್ ಗಳಜಮೀನಿನ ಹಾಗೂ ಟೆಂಡರ್ ಪ್ರಕ್ರಿಯೆ ಬೇಗ ಪೂರ್ಣಗೊಳಿಸಿ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಯಾದಗಿರಿ ಹಾಗೂ ವಡಗೇರಾಗಳಲ್ಲಿ ವಿದ್ಯುತ್ ಸರ್ಕಲ್ ಕಚೇರಿ ಸ್ಥಾಪನೆ, ರಾಜ್ಯ ದಲ್ಲಿ
ಹೊಸದಾಗಿ ನೇಮಕವಾಗುವ ಲೈನ್ ಮನ್ಗಳ ಪೈಕಿ ಯಾದಗಿರಿಗೆ ಅವಶ್ಯಕತೆಕಡೆ ಒದಗಿಸುವ ಬಗ್ಗೆ ,ಕುಸುಮ-ಬಿ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಗೆ ಉತ್ತೇಜಿಸುವ ಹಾಗೂ ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ವಿದ್ಯುತ್ ಸೌಕರ್ಯಗಳಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ, ಜನವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಿರಲುವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.ಜಿಲ್ಲೆಗೆ ಅವಶ್ಯಕತೆ ಇರುವ ಸಿಬ್ಬಂದಿಗಳ ಕೊರತೆ ನೀಗಿಸಲುಗುಲ್ಬರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್ಚುವರಿ ಸಿಬ್ಬಂದಿಗಳ ಸೇವೆ ಯಾದಗಿರಿ ಗೆ ಬಳಿಸಿಕೊಳ್ಳಬೇಕು. ಸ್ಥಾಪನೆಯಾದವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಅವರು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಸಂಸದ ಕುಮಾರ್ ನಾಯಕ,ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ವೇಣುಗೋಪಾಲ್ ನಾಯಕ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿ.ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ ಕುಮಾರ್ ಪಾಂಡೆ, ಜೆಸ್ಕಾಂ ಎಮ್ ಡಿ ಕೃಷ್ಣಾ ಬಾಜಪೈ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಧರಣೇಶ್ ಸೇರಿದಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳ ಕುರಿತು ಕಿರು ಪುಸ್ತಕ ಬಿಡುಗಡೆ: ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಇಂದು ಪಂಚಗ್ಯಾರಂಟಿ ಯೋಜನೆಗಳ ಕುರಿತು ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದಿರುವ ಈ ಕಿರು ಪುಸ್ತಕವು 2024-25ನೇ ಸಾಲಿನ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ,ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಹಾಗೂ ಯುವ ನಿಧಿ ಯೋಜನೆ ಗಳ ಅಂಕಿ ಅಂಶ, ಫಲಾನುಭವಿ ಗಳ ಅಭಿಪ್ರಾಯ ಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಇಂಧನ ಸಚಿವ ಶ್ರೀ ಕೆ.ಜೆ.ಜಾರ್ಜ್, ಸಂಸದ ಜಿ ಕುಮಾರ್ ನಾಯಕ್, ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.