LOCAL EXPRESS: “ಕೊಪ್ಪಳ|ಮಹಿಳಾ ಸಬಲೀಕರಣಕ್ಕೆ ಸಂವಿಧಾನವೇ ಆಧಾರ : ಡಾ.ಲಮಾಣಿ ಅಭಿಮತ.!”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕೆಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಕರೆ ನೀಡಿದರು.
ಅವರು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮಹಿಳೆಯರು ಶಿಕ್ಷಣ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಬಲರಾಗಲು ಸಂವಿಧಾನ ನೀಡಿರುವ ಹಕ್ಕುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಸಂವಿಧಾನಕ್ಕೂ ಮುನ್ನ ದೇಶದಲ್ಲಿ ತಾರತಮ್ಯ ಮತ್ತು ಅಸಮಾನತೆ ಇತ್ತಾಗಿ, ಇಂದು ಸಮಾಜದಲ್ಲಿ ಉಂಟಾಗುತ್ತಿರುವ ಜಾತಿ–ಧರ್ಮ ಆಧಾರಿತ ವಿಭಜನೆಗೆ ಪರಿಹಾರ ಸಂವಿಧಾನದಲ್ಲೇ ಅಡಗಿದೆ ಎಂದರು. ಸಮಾನ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ವೈಜ್ಞಾನಿಕ ಚಿಂತನೆಗೆ ಒತ್ತು ಕೊಟ್ಟಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ ಎನ್ನುತ್ತಾ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಠೋಬ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಗುಂಜಳ್ಳಿ ಸೇರಿ ಹಿರಿಯ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕುಗಳು, ಅವಕಾಶಗಳು, ಮಹಿಳಾ ಸಬಲೀಕರಣ ಮತ್ತು ಮತದಾನದ ಮಹತ್ವವನ್ನು ವಿವರಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪಠಣ ಬೋಧಿಸಲಾಯಿತು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.