🚨 LOCAL BREAKING : ಕೊಪ್ಪಳ| ಜ.5 ರಂದು ಗವಿಮಠ ಜಾತ್ರೆಯ ಮಹಾರಥೋತ್ಸವ: ಉದ್ಘಾಟನೆಗೆ ರಾಜ್ಯಪಾಲ ವಿಜಯಶಂಕರ್ ಸೇರಿ ಹಲವು ಗಣ್ಯರ ಭಾಗಿ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿ ಪಡೆದ ಇಲ್ಲಿನ ಗವಿಸಿದ್ದೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ಸಂಜೆ 5.30ಕ್ಕೆ ಜರುಗಲಿದೆ. ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗವಿಮಠ ಪ್ರಕಟಣೆ ತಿಳಿಸಿದೆ.
ಮೂಲತಃ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ನಿವಾಸಿಯಾಗಿರುವ ವಿಜಯಶಂಕರ್ ಅವರು ಈ ವರ್ಷದ ಫೆಬ್ರುವರಿ 22ರಂದು ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿರುವ ಸಿದ್ಧೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು. ತವರು ಜಿಲ್ಲೆಯ ಐತಿಹಾಸಿಕ ಜಾತ್ರೆಗೆ ಅವರು ಉದ್ಘಾಟನಾ ಗೌರವ ಪಡೆಯುವುದು ವಿಶೇಷವೆಂದು ಮಠದ ಮೂಲಗಳು ತಿಳಿಸಿವೆ.
ಈ ಬಾರಿ ಪ್ರತೀ ವರ್ಷದಂತಿರುತ್ತಿದ್ದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯುವುದಿಲ್ಲ ಎಂದು ತಿಳಿದುಬಂದಿದೆ.
ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಲೇಖಕ ಮತ್ತು ನಿರೂಪಕ ನಾ. ಸೋಮೇಶ್ವರ, ಚಲನಚಿತ್ರ ನಟ ದತ್ತಣ್ಣ, ಮೂರುಸಾವಿರ ಮಠದ ಸ್ವಾಮೀಜಿ, ಕಡಬಗೇರಿ ಮಂಜುನಾಥ, ರಘು ಆಚಾರ್ ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಮೂಲಗಳು ತಿಳಿಸಿದೆ.