
ಅಜೋ
ಪಾಪದ ಕೊಡ ತುಂಬುತ್ತದೆಯೇ?
ತೀರಾ ಅಸಹಾಯಕ ಸ್ಥಿತಿಯಲ್ಲಿ ಅತಿಯಾದ ಕೇಡುಮಾರಿಗಳಿಗೆ ಇನ್ನೇನು ಅವರ
ಪಾಪದ ಕೊಡ ತುಂಬುತ್ತಿದೆ..
ಎಂದು ಸಮಾಧಾನ ಪಡುತ್ತೇವೆ. ಇದು ನಿಜವೇ ? ಅಥವಾ ಸಮಾಧಾನ ಮಾಡಿಕೊಳ್ಳಲು ಇರುವ ಬರಿ ಪೊಳ್ಳು ಮಾತೇ? ಇದು ಹಲವು ಬಾರಿ ನನ್ನನ್ನು ಕಾಡಿದೆ.
ಲೋಕಕ್ಕೆ ಕೇಡು ಮಾಡುವ ಅವರು ತಮ್ಮ ಪಾಪದ ಕೊಡದ ಬುಡದಲ್ಲಿ ತೂತು ಮಾಡಿ ಮಾಡಿದ ಪಾಪವೆಲ್ಲಾ ಸೋರಿ ಹೋಗುವಂತೆ ಮಾಡಿರಬಹುದಲ್ಲವೇ? ನಾವು ಮಾತ್ರ ಬುಡದಲ್ಲಿ ಸೋರಿ ಹೋಗುತ್ತಿರುವ ಪಾಪವನ್ನು ನೋಡದೆ ‘ಪಾಪದ ಕೊಡ’ ತುಂಬುತ್ತಿದೆ ಎಂದು ನೋಡುತ್ತಾ ಕುಳಿತಿದ್ದೇವೆ. ಈಗಿನ ಅಸಮಾನತೆಯ ಅಂತರ ಹೆಚ್ಚುತ್ತಿರುವುದನ್ನು ನೋಡಿದರೆ ಹೀಗೆ ಅನ್ನಿಸುತ್ತೆ.
‘ಕೊಡ’ ಹಿಂದೆ ನಮ್ಮ ಹಿರೀಕರು ನೀರು ತುಂಬಲು ಬಳಸುತ್ತಿದ್ದ ಸಣ್ಣ ಗಾತ್ರದ ಒಂದು ವಸ್ತು. ಆ ಕಾಲದಲ್ಲಿ ಹುಟ್ಟಿದ ನುಡಿಗಟ್ಟಾದ ಕಾರಣ ಕೊಡ ಎನ್ನುವ ವಸ್ತುವನ್ನು ‘ಪಾಪ’ ತುಂಬಲು ಬಳಸಿರಬಹುದು. ಅಥವಾ ಈ ನುಡಿಗಟ್ಟು ಹುಟ್ಟಿದ ಕಾಲದಲ್ಲಿ ಮಾಡುವ ಪಾಪದ ಪ್ರಮಾಣವೂ ‘ಕೊಡ’ ದ ಗಾತ್ರಕ್ಕೆ ಸೀಮಿತವಾಗಿರಬಹುದು.
ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಎಲ್ಲವೂ.. ಹಾಗೆಯೇ ನೀರು ತುಂಬುವ ಸಂಗ್ರಾಹಕ ಕೊಡದ ಆಕಾರವೂ ಬದಲಾಗಿ ದೊಡ್ಡದಾಗಿದೆ. ಬೃಹತ್ ಗಾತ್ರದಲ್ಲಿ ಹಿಗ್ಗಿಕೊಂಡಿದೆ. ನೂರಾರು ‘ಕೊಡ’ ತುಂಬುವ ಟ್ಯಾಂಕರ್, ಲಕ್ಷಾಂತರ ಕೊಡದ ಅಳತೆಯ ಉಗ್ರಾಣಗಳು.. ಇಂದು ಬೃಹತ್ ಕೋಲ್ಡ್ ಸ್ಟೋರೇಜಲ್ಲಿ ಪಾಪವನ್ನು ತುಂಬಿಡಲಾಗುತ್ತಿದೆ. ಒಂದು ಉಗ್ರಾಣ ತುಂಬಿದರೆ ಮತ್ತೊಂದು.. ಮಗದೊಂದು..ಕೊನೆಯಿಲ್ಲ. ಆದರೂ ನಾವು ನಮ್ಮ ಸಮಾಧಾನಕ್ಕೆ ಅವರ ‘ಪಾಪದ ಕೊಡ’ ತುಂಬಿದೆ. ಇನ್ನು ಉಳಿಗಾಲವಿಲ್ಲ ಎನ್ನುತ್ತೇವೆ. ಇದೆಲ್ಲಾ ನಮ್ಮ ಬದುಕಿನ ಲೋಕದ ಕಣ್ಣೋಟಗಳಷ್ಟೇ..
ಇಲ್ಲಿ ‘ಪಾಪ’ ತುಂಬಿದವರಿಗೆ ಏನೋ ಆಗುತ್ತೆ ಅನ್ನೋದೆಲ್ಲ ಕೆಲವು ಕಾಕತಾಳೀಯ ಘಟನೆಗಳನ್ನು ಆಧರಿಸಿ ಹುಟ್ಟಿಕೊಂಡ ಮಿತ್ ಗಳಷ್ಟೆ. ಇಡೀ ದೇಶವನ್ನೆ ನಾಚಿಸುವಂತ ಅಂಬಾನಿಯ ಬೃಹತ್ ಮನೆ.. ಮುಂದೆ ಚರಿತ್ರೆಯಲ್ಲಿ ‘ಅರಮನೆಯಂಥ’ ಮನೆ ಎಂದು ದಾಖಲಾಗಬಹುದು. ಅದು ಪಠ್ಯಪುಸ್ತಕದಲ್ಲಿ ಅಚ್ಚಾಗಿ ಭವಿಷ್ಯದ ಮಕ್ಕಳಿಗೆ ಪಾಠವೂ ಆಗಬಹುದು. ವಾಸ್ತವದಲ್ಲಿ ಈ ದೇಶದ ಅಸಮಾನತೆಯ ಅಂತರ ಹೆಚ್ಚುತ್ತಿರುವುದರ ಆತ್ಯಂತಿಕ ಸಂಕೇತವಾಗಿರುವ, ದೇಶದ ಲಕ್ಷಾಂತರ ಕೋಟಿ ತೆರಿಗೆ ವಂಚಿಸಿದ್ದರ ಫಲದಂತಿರುವ ಈ ಬೃಹತ್ ಮನೆಯನ್ನು ಸಮಾನ್ಯ ಜನರು ನೆಲಸಮ ಮಾಡಿದರು ಎನ್ನುವುದು ಜನ ಚರಿತ್ರೆಯಲ್ಲಿ ದಾಖಲಾಗಬೇಕು.
ಕೇಡುಮಾರಿಗಳನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿ
ಭಾವನಾತ್ಮಕವಾಗಿ ಕಟ್ಟಿಕೊಂಡ ಅವರ ‘ಪಾಪದ ಕೊಡ’ ತುಂಬಿ ನಾಶವಾಗುತ್ತಾರೆ ಎನ್ನುವ ನುಡಿಗಟ್ಟು ನಮ್ಮ ಹಿರಿಯರು ನಮ್ಮನ್ನು ನಂಬಿಸಿದ, ಪಾಪಮಾಡಿದವರ ವಿರುದ್ಧ ಎದುರಾಡದಂತೆ ತಡೆಯುವ ಒಂದು ರಮ್ಯ ಕಲ್ಪನೆಯಷ್ಟೇ..
ಹೀಗೆ ನಾವು ಅವರ ‘ಪಾಪದ ಕೊಡ’ ತುಂಬಿದೆ ಇನ್ನೇನು ನಾಶವಾಗುತ್ತಾರೆ ಎಂದು ಕಾಯುತ್ತಲೇ..ಏನನ್ನೂ ಮಾಡದೆ ಸುಮ್ಮನೆ ಕೈಕಟ್ಟಿ ಕೂರುವುದಿದೆಯಲ್ಲ ಅದು ನಮ್ಮ ಪಾಪದ ಕೊಡವನ್ನು ತುಂಬಿಸುತ್ತಿರುತ್ತದೆ ಅಥವಾ ಅವರ ಪಾಪದಲ್ಲಿ ನಮ್ಮನ್ನೂ ಪಾಲುದಾರರನ್ನಾಗಿಸುತ್ತಿರುತ್ತದೆ. ಅಂತೆಯೇ ಅವರನ್ನು ಮತ್ತಷ್ಟು ಮಗದಷ್ಟು ಕೇಡುಮಾಡಲು, ಅನ್ಯಾಯ ಅಕ್ರಮ ಮಾಡಲು ನಾವುಗಳು ಅವರಿಗೆ ಪರವಾನಿಗೆಯನ್ನು ನವೀಕರಿಸುತ್ತಿರುತ್ತೇವೆ.
ಅಂತಹ ನವೀಕರಣದ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಲ್ಲಿ ನಾವೆಲ್ಲರೂ ಸೇರಿದ್ದೇವೆ.
*ಅಜೋ*
