ಬೆಳಗಿಗೊಂದು ಕವಿತೆ
ಒಮ್ಮೊಮ್ಮೆ ನಾವೂ ಕಾಲ ಮೇಲೆ ಕಾಲು ಹಾಕಿ ವಿರಾಮದಿ..ವಿವರವಾಗಿ ಪತ್ರಿಕೆ ಓದುತ್ತಾ ಕೂರುತ್ತೇವೆ.. ಓ…ನಳನ ವಂಶಜರೇ..! ಕೊಡಬಹುದೇ ನಮಗೂ…ಒಂದು ಕಪ್ಪು ಬೆಚ್ಚಗಿನ ಚಹಾವ…?
ಒಮ್ಮೊಮ್ಮೆ ನಾವೂ ಸ್ನಾನದ ಕೋಣೆಯ ಹೊಕ್ಕು ಜಾಣತನದಿ ಟವೆಲ್ ಮರೆಯುತ್ತೇವೆ…ಓ…ರಾಧಾ ರಮಣರೇ…! ಕೊಡಬಹುದೇ ನಮಗೂ ಟವೆಲ್ ಜೊತೆಗೊಂದು ಗರಿಗರಿಯಾದ ಮುತ್ತ…?
ತಿಂಗಳಿಗೊಮ್ಮೆಹೊಟ್ಟೆಯಲ್ಲಿ ನೋವು ಕಂಡು ಸೊಂಟದ ನರ ಎಳೆವಾಗ ಓ… ವಿಷ್ಣು ಸುತರೇ…ಪಕ್ಕದಿ ಕುಳಿತು ಮೆದುವಾಗಿ ಒತ್ತಬಹುದೇ..ನಮಗೂ ಪ್ರೀತಿಯಿಂದ ಕೈ ಕಾಲು…ಸೊಂಟವ..?
ರವಿಕೆಯ ಹುಕ್ಸ್ ಗಳಿಗೆ ತಾಕದ ಕೈಯನ್ನು ಇನ್ನಿಲ್ಲದಂತೆ ಚಾಚುವಾಗ..ಓ…ಭೀಮ ಪುತ್ರರೇ…ನಿಮ್ಮ ಪಾದ ಪೂಜಿಸಿದ ಕೈಗಳನ್ನು ಮೆಲ್ಲಗೆ ಬಿಡಿಸಿ ಬೆನ್ನು ಸವರಿ..ತಾಕಿಸಬಹುದೇ ಅಗಲಿದ ಹುಕ್ಸುಗಳ ಕೊನೆಯ..?
ಸ್ನಾನದ ಬಳಿಕ ಗಡಿಬಿಡಿಯಲ್ಲಿ ಗೋಡೆಯ ಬದಿಗೊತ್ತಿ ಬಂದ.. ನಮ್ಮ ಒಳ ಉಡುಪುಗಳಿಗೂ ಒಮ್ಮೊಮ್ಮೆ… ಹಚ್ಚಬಹುದೇ ಪರಿಮಳದ ಸಾಬೂನಿನ ನೊರೆಯ… ಓ… ಶ್ರೀ ರಾಮ ಕುಲ ತಿಲಕರೇ..?
ಮಂಡಿಯೂರಿ ಕುಳಿತು ಅವಸರದಿ ಉಟ್ಟ..ಅಂದಗೆಟ್ಟ ಸೀರೆಯ…ನೆರಿಗೆಯ ನೇವರಿಸಿ ಸುಕ್ಕು ಬಿಡಿಸಿ..ಹೊಂದಿಸಿ ಕೊಡಬಹುದೇ… ಓ….ಶಿವ ಸಂಭೂತರೇ?
ಹರಿಸೇವೆ..ಹರಸೇವೆ..
ಪರ ಸೇವೆ…ಪತಿ ಸೇವೆಗಳಲ್ಲಿ ಪತರಗುಟ್ಟುತ್ತಿರುವ ಪತ್ನಿಯರ
ಪರದಾಟಕ್ಕೆ ಈ ನೆಪದಲ್ಲಾದರೂ ಪುಟ್ಟ ಪುಟ್ಟ ವಿರಾಮಗಳನ್ನು ಇಡಬಹುದೇ…ಓ…ಪತಿ ಪರಮೇಶ್ವರರೇ…!
-ಜಾಹಿಧಾ ಕೊಡಗು
