ಸೀತೆ ಹುಡುಕಲು ಕಳಿಸಿ ದಕ್ಷಿಣದಿಕ್ಕಿನತ್ತ ವಾನರರನು I ಭಾಗ-24

By admin


ಸೀತೆ ಹುಡುಕಲು ಕಳಿಸಿ ದಕ್ಷಿಣದಿಕ್ಕಿನತ್ತ ವಾನರರನು, I
ದೈತ ಮೋಡಾಕಾರದ ಸಬಲ ವಾನರ ಸುಶೇಣನ II
ಕರೆದ ಸುಗ್ರೀವ; ಮಹರ್ಷಿಪುತ್ರ ಮಾರೀಚ ವ ಅರ್ಚಿಷ್ಮಂತI
ಮಹಾವೀರರೊಳಗೊಂಡು ಎರಡು ಶತ ಸಹಸ್ರ II
ವಾನರ ಸೇನೆ ರಚಿಸಿದ,ಸುಶೇಣ ನೇತೃತ್ವದಲಿ;I
ತಾರಾಳ ಪಿತ ಶೂರ ಸುಶೇಣನಿಗೆ ಸುಗ್ರೀವ ನುಡಿದ: “ಓ ವಾನರ ವೀರರೇ, II
ಹುಡುಕಿರಿ ಸೀತೆಯನು; ಸೌರಾಷ್ಟ್ರ,ಬಾಹ್ಲಿಕಾ ವ I
ಚಂದ್ರಚಿತ್ರ ಜನಪದ ರಾಜ್ಯಗಳ ರಮ್ಯ ಪೂನಗು-ವೃಕ್ಷ , II
ವಕುಲ ವ ಉದ್ದಲಕ ಅರಣ್ಯಗಳಲಿ, ಪರ್ವತ, ಹಳ್ಳಿ, ನಗರಗಳಲಿ,I
ಪಶ್ಚಿಮಕ್ಕೆ ಹರಿವ ಶೀತಜಲ ನದಿ ಪ್ರದೇಶ ವ II
ಮರಳುಗಾಡಗಲಿ ಹುಡುಕಿರಿ ಸೀತೆಯನ;I
ಜಲಾವೃತ ಗಿರಿಗಳನು ದಾಟಿದಾಗ ಅಗಮ್ಯಪಶ್ಚಿಮ ಸಮುದ್ರ ದೃಶ್ಯ, II
ದೈತ ಮೋಸಳೆ ಮೀನ ಅಲೆಗಳ ತಾಣ ದೃಶ್ಯ; I
ಕೇತಕ, ತಮಾಲ,ತೆಂಗು ವನಗಳಲಿ ವಿಹರಿಸಲಿ ವಾನರರು, II
ಸಿಗಬಹುದು ಮಾರ್ಗಮಧ್ಯೆ ಸೀತೆ ರಾವಣರ ಸುಳಿವು;I
ಪರ್ವತ ವನಗಳಡಿಯಲಿ ಸಮುದ್ರತೀರ,ಮುರಸಿ,ಜಾತಪುರ,II
ಅವಂತಿ,ಅಂಗಲೇಪ ಪಟ್ಟಣಗಳ ಸೌಂದರ್ಯ; I
ಅಲಕ್ಷಿತ ವನ ರಾಷ್ಟ್ರರ ಪಟ್ಟಣಗಳ ಬೀಡು, ಮೂಲೆ ಮೂಲೆಯಲಿ II
ಹುಡುಕಿರಿ ಸೀತೆಯನ; ಸಿಂಧುನದಿ–ಸಮುದ್ರ ಸಂಗಮ ತಾಣದಲಿದೆ I
ಶತ ಕೊಂಬುಗಳಂತಹ ಹೇಮಗಿರಿ ನಾಮ II
ಬೃಹತ್ ಪರ್ವತ; ರಮ್ಯ ಪರ್ವವತ ತುದಿಯಲಿ ರೆಕ್ಕೆ-ಸಿಂಹಗಳ ತಾಣ, I
ಗಜಗಾತ್ರ ಮೀನಗಳನ ಹಿಡಿದು ತಂದ ರಾಶಿ;II
ಕಾರ್ಮೋಡ್ಗಾತ್ರದ ಆನೆ ಹಿಂಡುಗಳ ತಾಣ ಪರ್ವತದಲಿ,I
ರೆಕ್ಕೆ-ಸಿಂಹಗಳ ಬದಿಯಲ್ಲಿಯೇ ಸಂಚರಿಸುವವು; II
ವಿಚಿತ್ರ ಗಿಡಗಳ ಹೇಮಗಿರಿ ತುದಿಯಲಿ,I
ರೂಪಬದಲಿಸಿ ಹುಡುಕಬಹುದು ವಾನರರು; II
ದೂರ ಸಾಗಿದಂತೆ ಸುಮುದ್ರಗುಂಟ, ಕಾಣುವದು ಶತ ಯೋಜನೆI
ಎತ್ತರದ ‘ಪಾರಿಯಾತ್ರ’ ಹೊನ್ನಶಿಖರ ಪರ್ವತ, II
ವಾಸಿಸಿಹರು ಪಾರಿಯಾತ್ರ ದಲಿ ಇಪತ್ತನಾಲ್ಕು ಕೋಟಿ I
ಇಚ್ಚಾರೂಪಧಾರಕ ಜಘಮಘಿಸಿವ ಗಂಧರ್ವರು; II
ಗಂಧರ್ವರು ಮಾಹಾಕ್ರೂರಿಗಳು, ಹಲ್ಲೆಮಾಡಬಹುದುI
ಯಾವುದೆ ದೆಶೆಯಿಂದ, ರೇಗಿಸಬೇಡಿ ಅವರನು; II
ರಕ್ಷಣೆಯಲಿಹರು ಗಂಧರ್ವರು ಹಣ್ಣು ಗೆಡ್ಡೆಗಳ,I
ಓ ವಾನರರೇ, ಮಾಡದಿರಿ ಹಣ್ಣು ಹರಿಯುವ ಸಾಹಸ;II
ಕಪಿಗಳಂತೆ ವರ್ತಿಸಿ ಸಾಹಸ ಮಾಡದೆ ಹುಡುಕಿದರೆ ಜಾನಕಿಯನ, I
ಗಂಧರ್ವರಿಂದ ಭಯಪಡುವ ಅಗತ್ಯವಿಲ್ಲ;II
ಪಾರಿಯಾತ್ರ-ಪರ್ವತದಾಚೆ ಸಾಗಿರಿ ವಜ್ರ-ಪರ್ವತದತ್ತ,I
ಸಮುದ್ರದಲಿ ವಜೃದಂತೆ ಹೊಳೆವದು ವಜ್ರಗಿರಿ, II
ನೂರು ಯೋಜನೆ ಎತ್ತರ ವಿಭಿನ್ನ ಗಿಡಮರಗಳ ವಜೃಗಿರಿ; I
ಓ ವಾನರರೇ, ವಜೃಗಿರಿಯಾಚೆ ಕಾಲ-ಭಾಗಂತರದಲಿ II
ಸಮುದ್ರದಲಿದೆ ಚಕ್ರವಾನ ನಾಮ ಪರ್ವತ; I
ವಿಶ್ವಕರ್ಮ ನಿರ್ಮಿಸಿದ ಸಮುದ್ರ ಭುವಿಯಲಿ ಚಕ್ರವಾನ ಶಿಖದಲಿ, II
ಸಹಸ್ರ ಹಲ್ಲಿನ ಚಕ್ರ; ಭಯಾನಕ ದಾನವ ಹಯಗ್ರೀವನ ತಾಣ I
ಚಕ್ರವಾನ, ಅದ್ಭುತ ಪಾಂಚಜನ್ಯ ಶಂಖ, II
ಚಕ್ರಗಳಿದವು ಹಯಗ್ರೀವನಲಿ; ಪುರುಷೋತ್ತಮನು ವಧಿಸಿ ಹಯಗ್ರೀವನ I
ಪಡೆದ ಪಾಂಚಜನ್ಯ ಶಂಖ, ಚಕ್ರ; II
ರಾವಣನ ಗುಹೆಗಳಿವೆ ಚಕ್ರವಾನ ಶಿಖರದಲಿ I
ಓ ವಾನರರೇ, ಸೀತೆಯನ ಮೂಲೆ ಮೂಲೆ ಶೋಧಿಸಿ; II
ಕಿಷ್ಕಿಂಧಕಾಂಡ ರಾಮಾಯಣ

ಪಶ್ಚಿಮದಿಕ್ಕಿನಲಿ ಸೀತೆಯನ್ನು ಹುಡುಕಲು ಸುಗ್ರೀವನು ದೈತ ಮೋಡಾಕಾರದ ಸಬಲ ವಾನರ ಸುಶೇಣನನ್ನು ಕರೆದು ಅವನೊಂದಿಗೆ ವಾನರ ಸೈನ್ಯವನ್ನು ಕಳಿಸಿ ಅವರಿಗೆ ಮಾರ್ಗಸೂಚಿಯನ್ನು ನೀಡಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: (1) ಸುಗ್ರೀವನು ಮಹರ್ಷಿಪುತ್ರ ಮಾರೀಚ ಮತ್ತು ಅರ್ಚಿಷ್ಮಂತ ಮಹಾವೀರರೊಳಗೊಂಡು ಎರಡು ಶತ ಸಹಸ್ರ ವಾನರ ಸೇನೆ ರಚಿಸಿ ಸುಶೇಣನಿಗೆ ಅದರ ನೇತೃತ್ವ ವಹಿಸಿದನು, (2) ಪಶ್ಚಿಮ ಪ್ರದೇಶಗಳ ವಿವರಣೆ: ರಾಣಿ ತಾರಾಳ ತಂದೆ ಶೂರ ಸುಶೇಣನಿಗೆ ಸುಗ್ರೀವನು ಜಂಬುದ್ವೀಪದ ಪಶ್ಚಿಮ ದಿಕ್ಕಿನ ಪ್ರದೇಶಗಳ ಮಾರ್ಗಸೂಚಿ ಹೀಗೆ ನೇಡಿದನು “ಇಲ್ಲಿಂದ ಸೌರಾಷ್ಟ್ರ, ಬಾಹ್ಲಿಕಾ ಮತ್ತು ಚಂದ್ರಚಿತ್ರ ಜನಪದ ರಾಜ್ಯಗಳ ರಮ್ಯ ಪೂನಗು-ವೃಕ್ಷ , ವಕುಲ ಮತ್ತು ಉದ್ದಲಕ ಅರಣ್ಯಗಳಲ್ಲಿ, ಪರ್ವತ, ಹಳ್ಳಿ, ನಗರಗಳಲ್ಲಿ, ಪಶ್ಚಿಮಕ್ಕೆ ಹರಿವ ಶೀತಜಲ ನದಿ ಪ್ರದೇಶ ಮತ್ತು ಮರಳುಗಾಡಗಲ್ಲಿಯ ಜಲಾವೃತ ಗಿರಿಗಳನು ದಾಟಿದಾಗ ಅಗಮ್ಯಪಶ್ಚಿಮ ಸಮುದ್ರ ದೃಶ್ಯ ಕಾಣುವದು, ಅದು ದೈತ ಮೋಸಳೆ, ಮೀನ ಮತ್ತು ಸಮುದ್ರ ಅಲೆಗಳ ತಾಣ, ಅಲ್ಲಿಯ ಕೇತಕ, ತಮಾಲ, ತೆಂಗು ವನಗಳಲ್ಲಿ ವಾನರರು ವಿಹರಿಸಲಿ, ಆ ಮಾರ್ಗಗಳ ಮಧ್ಯೆ ಸೀತೆ ಮತ್ತು ರಾವಣರ ಸುಳಿವು ಸಿಗಬಹುದು; ಆ ಪರ್ವತ ವನಗಳ ಅಡಿಯಲ್ಲಿ ಸಮುದ್ರತೀರ ಹಾಗು ಮುರಸಿ, ಜಾತಪುರ, ಅವಂತಿ, ಅಂಗಲೇಪ ಪಟ್ಟಣಗಳ ಸೌಂದರ್ಯಗಳನ್ನು ಕಾಣುವಿರಿ; ಅದು ಅಲಕ್ಷಿತ ವನ ರಾಷ್ಟ್ರರ ಪಟ್ಟಣಗಳ ಬೀಡು, ಆ ಪ್ರದೇಶಗಳ ಮೂಲೆ ಮೂಲೆಯಲ್ಲಿ ಸೀತೆಯನ್ನು ಹುಡುಕಿರಿ; ಅಲ್ಲಿಯೇ ಶತ ಕೊಂಬುಗಳಂತಹ ಹೇಮಗಿರಿ ನಾಮ ಬೃಹತ್ ಪರ್ವತ ಸಿಂಧುನದಿ –ಸಮುದ್ರ ಸಂಗಮ ತಾಣದಲ್ಲಿದೆ, ಆ ರಮ್ಯ ಪರ್ವವತ ತುದಿಯಲಿ ರೆಕ್ಕೆ-ಸಿಂಹಗಳು ವಾಸವಾಗಿವೆ ಹಾಗು ಅವು ಗಜಗಾತ್ರ ಮೀನಗಳನ್ನು ಹಿಡಿದು ತಂದು ತಿಂದು ರಾಶಿ ರಾಶಿಯಾಗಿ ಚಲ್ಲಿವೆ; ಆ ಪರ್ವತದಲಿ ಕಾರ್ಮೋಡ್ಗಾತ್ರದ ಆನೆ ಹಿಂಡುಗಳು ವಾಸವಾಗಿವೆ, ಅವು ರೆಕ್ಕೆ-ಸಿಂಹಗಳ ಬದಿಯಲ್ಲಿಯೇ ಸಂಚರಿಸುವವು; ಆ ವಿಚಿತ್ರ ಗಿಡಗಳ ಹೇಮಗಿರಿ ತುದಿಯಲ್ಲಿ ನೀವು ರೂಪಬದಲಿಸಿ ಸೀತೆಯನ್ನು ಹುಡುಕಬಹುದು; ಸುಮುದ್ರಗುಂಟ ಅಲ್ಲಿಂದ ದೂರ ಸಾಗಿದಂತೆ ನಿಮಗೆ ಶತ ಯೋಜನೆ ಎತ್ತರದ ‘ಪಾರಿಯಾತ್ರ’ ಹೊನ್ನಶಿಖರದ ಪರ್ವತವು ಕಾಣುವದು, ಆ ಪಾರಿಯಾತ್ರ (ಇಂದಿನ ಪಾಕಿಸ್ತಾನ ದೇಶದ ಸುಲೇಮನ-ಪರ್ವತ ವಲಯ) ದಲ್ಲಿ ಇಪತ್ತನಾಲ್ಕು ಕೋಟಿ ಇಚ್ಚಾರೂಪಧಾರಕ ಜಘಮಘಿಸಿವ ಗಂಧರ್ವರು ವಾಸಿಸಿರುವರು, ಆ ಗಂಧರ್ವರು ಮಾಹಾಕ್ರೂರಿಗಳು, ಅವರು ಯಾವುದೇ ದೆಶೆಯಿಂದ ನಿಮ್ಮ ಮೇಲೆ ಹಲ್ಲೆಮಾಡಬಹುದು, ನೀವು ಅವರನ್ನು ರೇಗಿಸಬೇಡಿ, ಆ ಗಂಧರ್ವರು ಅಲ್ಲಿಯ ಹಣ್ಣು ಗೆಡ್ಡೆಗಳ ರಕ್ಷಣೆಯಲಿರುವರು; ಅಲ್ಲಿ ಹಣ್ಣು ಹರಿಯುವ ಸಾಹಸ ಮಾಡಬೇಡಿರಿ, ಅವರ ಮುಂದೆ ಕಪಿಗಳಂತೆ ವರ್ತಿಸಿ, ಸಾಹಸ ಮಾಡದೇ ಜಾನಕಿಯನ್ನು ಹುಡುಕಿರಿ ಹಾಗೆ ಮಾಡಿದಲ್ಲಿ ನಿಮಗೆ ಗಂಧರ್ವರಿಂದ ಭಯಪಡುವ ಅಗತ್ಯವಿಲ್ಲ; ಪಾರಿಯಾತ್ರ-ಪರ್ವತದಾಚೆ ಮುಂದೆ ವಜ್ರ-ಪರ್ವತದತ್ತ ಸಾಗಿರಿ, ಅಲ್ಲಿಯ ಸಮುದ್ರದಲಿ ವಜ್ರದಂತೆ ವಜ್ರಗಿರಿ ಹೊಳೆವದು, ಆ ವಜ್ರಗಿರಿಯು ನೂರು ಯೋಜನೆ ಎತ್ತರವಿದ್ದು ವಿಭಿನ್ನ ಗಿಡಮರಗಳಿಂದ ತುಂಬಿದೆ; ಆ ವಜ್ರಗಿರಿಯಾಚೆ ಕಾಲ-ಭಾಗ ಆಂತರದಲಿ ಸಮುದ್ರವಿದೆ ಹಾಗು ಆ ಸಮುದ್ರದಲಿದೆ ‘ಚಕ್ರವಾನ’ ನಾಮ ಪರ್ವತ; ಆ ಸಮುದ್ರ ಭುವಿಯ ಚಕ್ರವಾನ ಶಿಖದಲಿ ಸಹಸ್ರ ಹಲ್ಲಿನ ಚಕ್ರವನ್ನು ವಿಶ್ವಕರ್ಮ ನಿರ್ಮಿಸಿರುವನು; ಭಯಾನಕ ದಾನವ ಹಯಗ್ರೀವನು ಆ ಚಕ್ರವಾನ ತಾಣದಲ್ಲಿಯೇ ವಾಸವಾಗಿರುವನು, ಹಯಗ್ರೀವನ ಬಳಿ ಅದ್ಭುತ ಪಾಂಚಜನ್ಯ ಶಂಖ ಮತ್ತು ಚಕ್ರಗಳಿದವು; ಪುರುಷೋತ್ತಮನು ಹಯಗ್ರೀವನನ್ನು ವಧಿಸಿ ಆ ಅದ್ಭುತ ಪಾಂಚಜನ್ಯ ಶಂಖ ಮತ್ತು ಚಕ್ರಗಳನ್ನು ತನ್ನ ವಶಕ್ಕೆಪಡೆದನು; ಆ ಚಕ್ರವಾನ ಶಿಖರದಲ್ಲಿಯೂ ರಾವಣನ ಗುಹೆಗಳು ಇರುವವು; ಆ ಪ್ರದೇಶದ ಮೂಲೆ ಮೂಲೆ ಸೀತೆಯನ್ನು ಶೋಧಿಸಿರಿ”. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಪಶ್ಚಿಮ ದಿಕ್ಕಿನ ಭೌಗೋಲಿಕ ಪ್ರದೇಶಗಳಲ್ಲಿ ಪ್ರಸ್ತಾಪಿಸಿದ ಪ್ರದೇಶಗಳು (ಅ)ಸೌರಾಷ್ಟ್ರ, ಬಾಹ್ಲಿಕಾ ಮತ್ತು ಚಂದ್ರಚಿತ್ರ ಜನಪದ ರಾಜ್ಯಗಳು(ಇಂದಿನ ಭಾರತದ ಗುಜರಾತ,ರಾಜಸ್ಥಾನ, ಪಂಜಾಬ ಮತ್ತು ಅದಕ್ಕೆ ಹೋದಿಕೊಂಡ ಪಾಕಿಸ್ತಾನದ ಸಿಂಧ ಮತ್ತು ಇತರೆ ಪ್ರದೇಶಗಳು), (ಆ) ಸಿಂಧುನದಿ –ಸಮುದ್ರ ಸಂಗಮ ಪ್ರದೇಶಗಳು, (ಇ) ಪಾರಿಯಾತ್ರ-ಪರ್ವತಗಳು (ಇಂದಿನ ಪಾಕಿಸ್ತಾನ ದೇಶದ ಸುಲೇಮನ-ಪರ್ವತ ವಲಯ), (ಈ) ಪಾರಿಯಾತ್ರ ಪರ್ವತ ಪ್ರದೇಶಗಳಲ್ಲಿ ಇಪತ್ತನಾಲ್ಕು ಕೋಟಿ ಇಚ್ಚಾರೂಪಧಾರಕ ಜಘಮಘಿಸುವ ಮಾಹಾಕ್ರೂರಿ ಗಂಧರ್ವರು ವಾಸಿಸಿರುವ ಉಲ್ಲೇಖ, ಮತ್ತು (ಉ) ಸಮುದ್ರದಲಿ ವಜ್ರದಂತೆ ಹೊಳೆವ ವಜ್ರಗಿರಿ-ಪರ್ವತ ಮತ್ತು ‘ಚಕ್ರವಾನ’ ನಾಮ ಪರ್ವತ— ಚಕ್ರವಾನ ಪರ್ವತ ಪ್ರದೇಶದಲ್ಲಿ ಪುರುಷೋತ್ತಮನು (ವಿಷ್ಣು) ಹಯಗ್ರೀವನನ್ನು ವಧಿಸಿ ಅದ್ಭುತ ಪಾಂಚಜನ್ಯ ಶಂಖ ಮತ್ತು ಚಕ್ರಗಳನ್ನು ತನ್ನ ವಶಕ್ಕೆಪಡೆದ ಉಲ್ಲೇಖವನ್ನು ಆದಿಕವಿ ವಾಲ್ಮೀಕಿಯು ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ