ಕಣ್ಣಿಂದ ಓದುವ ಕಾವ್ಯ ಚಿತ್ರಕಲೆ

By admin

ಕಣ್ಣಿಂದ ಓದುವ ಕಾವ್ಯ ಚಿತ್ರಕಲೆ

ಬಡವ ಬಲ್ಲಿದವನೆಂಬ ಬೇಧವ ಮಾಡದೆ ಎಲ್ಲರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಚಿತ್ರಕಲೆ ತಾನು ಹೆಚ್ಚು ಸೇರುವುದು ಬಡತನವೆಂಬ ಪೊರಕೆಯ ಗುಡಿಸಲೊಳಗೆ,ಅಡೆ ತಡೆಗಳ ತೊಳಲಾಟದಲ್ಲಿ ಅರಳಿ ನಗು ಚೆಲ್ಲುವ ಚಂದ್ರಮನಂತೆ,ಕಷ್ಟ ಸುಖವನ್ನು ಲೆಕ್ಕಿಸದೆ ಪುನಃ ಧ್ಯಾನಸ್ಥ ಸ್ಥಿತಿಯುಳ್ಳವರ ಮನ ಹೊಕ್ಕು ತನ್ನ ಪಾಡಿಗೆ ತಾನು ಸುಖಾ ಸುಮ್ಮನೆ ರೂಪ ಪಡೆಯುವುದು.ಗೆರೆ ಬಣ್ಣ ಭಾವದೊಂದಿಗೆ ಬದುಕಿನ ಬಹು ಆಸಕ್ತಿದಾಯಕ ಸಂಗತಿಗಳನ್ನು ಹೊತ್ತು ಸಾಗುತ್ತದೆ.ಖುಷಿ ಸಂಭ್ರಮ ದುಃಖಗಳಾಚೆ ಇಚ್ಛೆಯಿಟ್ಟು ಕರ್ತವ್ಯ ನಿರ್ವಹಿಸುವ ಹೃದಯವಂತರನ್ನು ಹುಡುಕುತ್ತ ಪಯಣಿಸುವ ವಿಶಿಷ್ಟ ಕಲಾ ಪ್ರಕಾರ ಈ ಚಿತ್ರಕಲೆ.

ಎದೆತುಂಬಾ ನೋವನ್ನಿಟ್ಟುಕೊಂಡು,ಇಲ್ಲವೇ ಅದ್ಯಾವ ಪರಿವು ಇಲ್ಲದೆ ನಗುವಿನ ಮುಖವನ್ನು ಹೊಂದಿ ಚಿತ್ರಬಿಡಿಸಲು ಕುಳಿತರೂ ಸಹ ತನ್ನದೆಯಾದ ಸ್ವರೂಪ ಪಡೆಯುವುದರಲ್ಲಿ ಮೇಲುಗೈ ಸಾಧಿಸಿದೆ. ಯಾವ ಕಾಲದಲ್ಲಾದರೂ ಅರಳಬಲ್ಲ,ಯಾವ ಸ್ಥಿತಿಯಲ್ಲೂ ರೂಪ ಪಡೆದು ನಗಬಲ್ಲ,ಅಳಿಸಬಲ್ಲ,ಅಷ್ಟೇ ಯಾಕೆ ಸಾಮಾಜಿಕ ಸಂವೇದನೆಗಳ ಸಂಗತಿಗಳನ್ನು ತಿಳಿಸಬಲ್ಲ ಪ್ರಾಯೋಗಿಕ ಕಲೆಯಾಗಿದೆ.ಚಿತ್ರ ಬಿಡಿಸುವ ಮನಸ್ಸಿನ ಮೇಲೆಯೇ ತನ್ನ ಅರ್ಥನಾದದ ಫಸಲನ್ನು ಪಸರಿಸುತ್ತದೆ.ಗೆರೆ ಎಳೆವವನ ಕೈ ಎಷ್ಟೊಂದು ಹದವಾಗಿರುತ್ತದೆಯೋ ಅದರ ಶ್ರಮದಾಯಕತ್ವದ ಮೇಲೆ ಅರ್ಥಗರ್ಭಿತ ಚಿತ್ರಗಳು ಮೂಡುತ್ತವೆ.

ಕ್ಯಾನವಾಸ್ ಗೆ ಎಳೆವ ಗೆರೆ,ಹಚ್ಚುವ ಬಣ್ಣ ಯಾವ ನೆಲೆಯಲ್ಲಿರುತ್ತದೆ ಎಂಬ ಅರಿವನ್ನು ಚಿತ್ರಿಸುವವನ ಗುಣದ ಮೇಲೆ ಪ್ರಕಟವಾಗುವಂತಹದ್ದು.ಎಳೆ ಮಕ್ಕಳ ಕೈಗಳ ರೇಖಾಚಿತ್ರಕಲೆ ಆ ಮಗುವಿನ ಆಸಕ್ತಿಯ ಮೇಲೆ ರೂಪ ಪಡೆದಿರುತ್ತದೆ.ವಯಸ್ಕರು,ಮಧ್ಯ ವಯಸ್ಕರು,ವಯಸ್ಸಾದ ಹಿರಿಯರು ಹೀಗೆ ಅವರವರ ಅನುಭವದ ಹಿನ್ನಲೆಯಲ್ಲಿ ಕ್ಯಾನವಾಸ್ ತನ್ನ ವಿಶಿಷ್ಟ ಗಮನ ಸೆಳೆಯುತ್ತಿರುತದೆ.
ಅದೇ ಕಲಾ ಲೋಕದ ಅರಿವಿನ ಪ್ರಜ್ಞೆಯೊಂದಿದ ಕೈಗಳಿಂದ ಚಿತ್ರ ಅರಳಿದರೆ ಅದರ ಮೈಮಾಟ ನೋಟವೇ ವಿಶಿಷ್ಟವಾದದ್ದು.ಕಲಾ ಲೋಕದಲ್ಲಿ ನಡೆದ ವಿಶಿಷ್ಟ ಪ್ರಯೋಗಗಳ ಅನುಸಂಧಾನಗಳೇ ಕಾಲಾನುಕ್ರಮದಲ್ಲಿ ಅಭಿವ್ಯಕ್ತಿಯಾಗುತ್ತ ಜೀವ ಪಡೆದಿರುತ್ತವೆ.ಕಲಾವಿದ ಕಾಲದ ಕೌತುಕಮಯ ಚಿಂತನೆಗಳಿಗೆ ಪೂರಕವಾಗುತ್ತಾ,ಅದರ ಪ್ರತಿಸ್ಫೂರ್ತಿಯ ಭಾವಬಿಂಬಗಳೇ ಚಿತ್ರರೂಪ ಪಡೆವ ವಿಧಾನಗಳಂತೆ ತೋರ್ಪಡಿಸುತ್ತವೆ.
ಆಯಾ ಕಲಾವಿದ ಅವನು ನೋಡುವ ದೃಷ್ಟಿಯ ಅಸ್ಮಿತೆಗಳ ಸಂವಾದದಲ್ಲಿ ಕಲಾ ಚಿಂತನೆಗಳು ಪ್ರಕಟವಾಗುತ್ತವೆ.ಈ ಹಿನ್ನಲೆಯಲ್ಲಿ ವಾಸ್ತವತೆಯ ಕಲಾ ಚಿಂತನೆಗಳು ಜನ ಸಾಮಾನ್ಯರ ನೋಡುವ ನೋಟಕ್ಕೆ ಸಿಗದೆ ಅನೇಕ ಅರ್ಥಗಳ ಸಂಕೀರ್ಣತೆಯ ಸಂದಿಗ್ದತೆಯನ್ನು ರಾರಾಜಿಸುತ್ತ ನಡೆದಿವೆ.
ಪಾರಂಪರಿಕ ನಡೆಯ ವಸ್ತುಸ್ಥಿತಿಯಾಚೆ ಆಧುನಿಕತೆಯ ಒಳಗೂ ನಿಂತು ಸಮಕಾಲೀನ ಹೊರಹುಗಳ ರೂಪತೆ ಬಹು ವಿಸ್ತಾರದಿಂದ ಅರ್ಥದ ಹೊಳೆಯನ್ನು ಹರಿಸುತ್ತಿದೆ.ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಅರ್ಥನಾದದ ಗುಂಗನ್ನು ನೋಡುಗರೆದೆಗೆ ಆಪ್ತತೆಯಿಂದ ನಾಟಿಸಲು ಪ್ರಯತ್ನಿಸುತ್ತಿಲ್ಲ.ಅರ್ಥ ವಿವರಣೆಯಾಚೆಗಿನ ಒಂದು ಅಮೂರ್ತ ಚಿಂತನೆಯ ಸಂಕೀರ್ಣ ಭಾವವನ್ನು ಕಟ್ಟಿಕೊಟ್ಟಾಗ ದಾರಿಯ ಕವಲು ತಿಳಿಸಲು ಒಂದಿಷ್ಟು ತೊಡಕುಗಳಾಗುವ ಸಂದರ್ಭಗಳು ಎದುರಾಗಬಹುದೇ ಎಂಬ ಕಲ್ಪಿತ ಪ್ರೇಶ್ನೋತ್ತರಗಳ ಚರ್ಚೆ ನಡೆದಂತಿದೆ.ಅದೇನೇ ಇದ್ದರೂ ಅರ್ಥ ಹೇಳುವ,ಹೇಳದೆ ಮೌನವಾಗಿ ಕಣ್ಣಿನಿಂದಲೇ ಅರ್ಥೈಸಿಕೊಂಡು ಸಾಗುವ ವಿಶಿಷ್ಟ ದೃಶ್ಯಭಾಷೆ ಈ ಚಿತ್ರಕಲೆ.

ಇಂತಹ ಕಲಾ ಪ್ರಕಾರವನ್ನು ಪ್ರಸ್ತುತ ದಿನಮಾನಗಳಲ್ಲಿ ಎಲ್ಲರೂ ಕಲಿಯುವ ಬಯಕೆ ಹೊಂದಿದ್ದರೂ ಸಹ ಬಯಕೆಯ ನಿರಾಕರಣೆಯೇ ಬಹು ಹೆಚ್ಚಾಗಿ ಕಾಣಿಸುತ್ತ ಸಾಗುತ್ತಿದೆ.ಕಾರಣಕ್ಕೆ ಹಲವು ಉತ್ತರಗಳು ಮುಂದಿನ ವಿವರಣೆಗಳಂತಿವೆ. ನಾವೇ ಕಂಡುಕೊಂಡ ಸತ್ಯದ ಪ್ರತಿ ಉತ್ತರಗಳು.ಪ್ರತಿಯೊಂದು ಮಗುವು ಹುಟ್ಟಿನ ಗುಣದಂತೆ ಸಹಜವಾಗಿ ಅಸಾಮಾನ್ಯ ಪ್ರತಿಭಾವಂತರು.ಆದರೆ ಬೆಳೆಯುತ್ತ ಬೆಳೆಯುತ್ತ ಅವರ ಪ್ರತಿಭೆಯನ್ನು ನಾವೇ ಕೊಲೆ ಮಾಡುವ ಕೊಲೆಗಡುಕರಾಗಿಬಿಟ್ಟಿದ್ದೇವೆ.ಕಲೆಯನ್ನ ಕಲಿತ ಅದೆಷ್ಟೋ ಪಧವಿಧರರು ಬೀದಿ ಬದಿ ನಿಂತು ಸೈನ್ ಬೋರ್ಡ್ ಬರೆದು ಬದುಕು ಬೇಕೆಂದರೆ ಡಿಜಿಟಲ್ ಹಾವಳಿಯ ಜಾತ್ರೆ ನಡೆದಿದೆ.ಇನ್ನೂ ಸರಕಾರದ ಕಣ್ತೆರೆಸಿ ಕೆಲಸ ಕೊಡಿಸುವ ಮನಸ್ಸುಗಳ ಕೊರತೆ,ಇಲ್ಲ ಸಲ್ಲದೆ ದಿನಕೊಂದು ಹೆಸರಿನ ಜೀವ ತೆಳೆದ ಕೋರ್ಸ್,ಯಾವುದು ಸರಿ ಯಾವುದು ತಪ್ಪುಗಳೆನ್ನುತ್ತಲೇ ಕಾಲ ಕಳೆವ ಗೋಜು ಕಣ್ಣಾರೆ ಕಂಡ ಯುವ ಕಲಾ ಮನಸ್ಥಿತಿಗಳು ಬೇಸರದಿಂದ ನಡೆದಂತಿದೆ.ಪ್ರಾಥಮಿಕ ಪ್ರೌಢ ವಯಸ್ಸಿನ ಹಂತದಲ್ಲಿ ಕಲಾ ಕಲಿಕೆಗೆ ನೀರೆರೆದ ಪರಿ ಅಬ್ಬರಿಸಿ ಅಳುವ ಕಂದಗಳಿಗೆ ಸಿಹಿಯಾದ ತಿನಿಸು ಕೊಟ್ಟಂತಹ ಅನುಭವಗಳಿಂದ ಕಲಾ ಪ್ರತಿಭೆಗಳು ಪುಟಿಯುತ್ತಲೇ ಪ್ರತಿಭಾ ಕಾರಂಜಿಯಲ್ಲಿ ಅರಳಿ ಕಾಲೇಜು ಹಂತದಲ್ಲಿ ನಿರಾಶೆಗೊಳ್ಳುತ್ತಿವೆ.ಪದವಿ ಮುಗಿಯುವುದರೊಳಗಾಗಿ ಸಹಜತೆಯ ನಿರಾಶೆ ಮೂಡಿ ಸೋತು ಸೊರಗಿ ಸುಣ್ಣವಾಗಿರುವಂತಿವೆ.ಅಲ್ಲಲ್ಲಿ ಪ್ರಾಯೋಗಿಕ ನೆಲೆಯ ಗಟ್ಟಿ ಕನಸಿನ ಬಣ್ಣ ರೇಖೆ ಬರೆದ ಕೈಗಳು ಒಂದಿಷ್ಟು ಶ್ರಮದಾಯಕ ನಡೆಯಿಂದ ಕಲಾ ಲೋಕದಲ್ಲಿ ಗುರುತಿಸಿಕೊಂಡಿರುವ ಉದಾಹರಣೆಗಳಿವೆ.ಹಾಗಂತ ಎಲ್ಲರೂ ಹೀಗೇ ಸಾಗುವರೆಂಬ ಭರವಸೆಯನ್ನು ಕೊಡಲಿಕ್ಕಾಗದು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಹಾಕುವ ಓಟಿನ ಮಹತ್ವವನ್ನು ಕಲಾ ಲೋಕವು ಅರಿತುಕೊಂಡು ತಮ್ಮ ಹಕ್ಕನ್ನು ತಾನು ಪ್ರತಿಪಾದಿಸಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ.ಪ್ರತಿವರ್ಷದಂತೆ ಕಲೆಯನ್ನ ಕಲಿತ ವಿದ್ಯಾರ್ಥಿಗಳ ಬದುಕು ಸರಕಾರ ಉದ್ಯೋಗವನ್ನು ರೂಪಿಸುವಂತಹ ಕಾರ್ಯಗಳು ನಡೆಯಬೇಕಿದೆ. ಸ್ವ ಸಾಮರ್ಥ್ಯದ ತಳಹದಿಯ ಮೇಲೆ ದುಡಿದ ಹಲವರು ಕಲಾವಂತರೆಂಬ ಹಿರಿಮೆಯನ್ನು ಕಂಡುಕೊಂಡರೂ ಸಹ ಸರಕಾರದ ಮಟ್ಟದಲ್ಲಿ ಮತ್ತೆ ಮತ್ತೆ ಕೆಲಸ ಕೊಡುವ ನೆಲೆಯಲ್ಲಿ ಕಲಾ ಶಿಕ್ಷಣ ಪ್ರಬಲಗೊಳ್ಳಬೇಕಿದೆ. ಈ ಹಂತಕ್ಕೆ ಕಲಾ ಲೋಕವು ತನ್ನ ಸತ್ವಯುತ ಚಿಂತನೆಯ ಸ್ವರೂಪದೊಂದಿಗೆ ಏಕರೂಪ ಪಠ್ಯಕ್ರಮ ರೂಪಿಸುವುದರೊಂದಿಗೆ ಸರಕಾರಕ್ಕೆ ಗೊಂದಲ ಸೃಷ್ಟಿಸುವ ಕೆಲಸವನ್ನು ಬಿಡಬೇಕಿದೆ. ಕಾಲ ಕಾಲಕ್ಕೆ ನೀಡುವ ಸರಕಾರದ ನಡೆ ನುಡಿಗಳನ್ನು ಪಾಲಿಸುತ್ತಾ ತನ್ನ ಘನತೆಯನ್ನು ಕಾಪಾಡಿಕೊಂಡು ಸಾಗುತ್ತಿದ್ದರೆ ಕಲಾ ಲೋಕದ ಬೆರಗೆ ಬೇರೆ,ಆಗ ನೋಡುಗರ ಚಂಚಲತೆ ಒಂದೆಡೆಗೆ ನಿಂತು ಸಕಾರಾತ್ಮಕ ಭಾವ ಪ್ರಚೋದನೆಗೊಳ್ಳುವುದು.ಇಂತಹ ಅನೇಕ ಸಂದಿಗ್ದತೆಯನ್ನು ಅನುಭವಿಸುತ್ತಿರುವ ಕಲಾ ಲೋಕ ನೋಡುವ ಕಣ್ಣುಗಳಿಗೆ ಹೊಸ ಲೋಕದ ಅನುಭವಗಳನ್ನು ನೀಡುತ್ತಲೇ ಶ್ರೇಷ್ಠತೆಯ ಕಡೆ ಹೆಜ್ಜೆ ಹಾಕುತ್ತಿದೆ.

ಇನ್ನೂ ಸರಕಾರ ಭರಿಸುವ ಕೆಲಸಗಳಾಚೆ ಸ್ವ ಪ್ರಯತ್ನದ ಮೇಲೆಯೂ ತನ್ನ ಬದುಕನ್ನು ರೂಪಿಸಿಕೊಳ್ಳಬಹುದು.ನಿರಂತರವಾಗಿ ಧ್ಯಾನದ ಪ್ರತೀಕವಾಗಿ ದುಡಿಯುತ್ತ,ಕಾಲ ಕಾಲಕ್ಕೆ ಬದಲಾಗುವ ಡಿಜಿಟಲ್ ಮಾಧ್ಯಮದಂತಹ ಉಪಕರಣಗಳ ಬಳಕೆಯಿಂದ ಪ್ರಯೋಗಗಳ ಕ್ರಿಯಾಶೀಲತೆ ಮತ್ತಷ್ಟು ವೃದ್ಧಿಸಿಕೊಳ್ಳುತ್ತಾ ಸಾಗಬೇಕಿದೆ.
ಕ್ಯಾನವಾಸ್,ಕಾಗದದಂತಹ ಮಾಧ್ಯಮಗಳ ಬಳಕೆಯಿಂದ ಹಿಡಿದು ಕಾಂಕ್ರೀಟ್ ಕಟ್ಟಡಗಳ ಭಿತ್ತಿಗೆ ಹೊಸ ಬಗೆಯ ಮ್ಯೂರಲ್ ಚಿತ್ರಗಳ ರಚನೆ,ಯಂತ್ರೋಪಕರಣಗಳಿಂದ ಮುದ್ರಣವಾಗುವ ಮಾಧ್ಯಮಗಳಲ್ಲಿ ಕಲಾಕಾರರಾಗಿ,ಪುಸ್ತಕಗಳ ಒಳ ರೇಖಾವಿನ್ಯಾಸಕಾರರಾಗಿ,ಪತ್ರಿಕಾ ಮಾಧ್ಯಮದಂತಹ ಕೆಲಸಗಳಲ್ಲಿ ಚಿತ್ರಕಲೆ ಬಹು ಆಸಕ್ತಿದಾಯಕವಾಗಿ ಸಂಯೋಜನೆಗೊಳ್ಳುತ್ತ ಬಹು ಬೇಡಿಕೆಯಿರುವ ಕಲಾ ಪ್ರಕಾರವಾಗಿ ಕಾಣಿಸುತ್ತದೆ. ಈ ಕಲೆಯನ್ನು ತಿಳುವಳಿಕೆಯ ನೆಲೆಯಿಂದ ಬಳಸಿಕೊಳ್ಳುವುದಾದರೆ ಎಲ್ಲ ರಂಗಗಳಲ್ಲಿ ಬಹು ಬೇಡಿಕೆಯಾಗಿ ಕಾಣುವ ಮಹತ್ವದ ಕಲೆಯಾಗಿ ಕಂಡುಬರುತ್ತದೆ.

ಮಾನವನ ಹುಟ್ಟು,ಬೆಳವಣಿಗೆ ಮತ್ತು ಅಂತ್ಯದವರೆಗೆ ಜೊತೆಯಾಗಿಯೇ ಸಾಗುತ್ತ ಬದುಕಿನ ವೈವಿಧ್ಯಮಯ ನೆಲೆಗಳನ್ನು ಪಸರಿಸುತ್ತ ಸಾಗುವ ಕರಳು ಬಳ್ಳಿಯ ಪಸರಿಸುವಿಕೆಯಾಗಿದೆ.ಸಣ್ಣವರು ದೊಡ್ಡವರು ವಯಸ್ಕರು ಹೀಗೆ ಭಿನ್ನವಾದ ಬೇಧಗಳನ್ನು ಮಾಡದೆ ಎಲ್ಲ ಕಾಲಕೂ ಶ್ರದ್ಧೆ ಭಕ್ತಿ ಪ್ರಾಮಾಣಿಕತೆಯ ಮನಸ್ಸಿನ ಆಧಾರದ ಮೇಲೆ ಅರಳುವ ಚೈತನ್ಯಶೀಲ ಕಲೆ ಇದಾಗಿದೆ.ಮಕ್ಕಳಾಗಿ
ಚಿತ್ರ ಬರೆವ,ವಯಸ್ಕರಾಗಿ ಗೆರೆ ಬಣ್ಣ ಮೆಚ್ಚುವ,ವಯಸ್ಸಾದವರು ಸಹ ಭಾವನೆಗಳನ್ನು ನೆಲ ಗೋಡೆಗೆ ಗೀಚಿ ಮನ ಹಗುರು ಮಾಡಿಕೊಳ್ಳವ ಸದಾ ಕಾಲದ ಜೀವಂತ ನೆಲೆ.ಹಾಗಾಗಿ ಮಾನವನ ಬದುಕಿನ ಅತ್ಯಂತ ಪ್ರೀತಿಯ ಅಭಿವ್ಯಕ್ತಿ ಮಾಧ್ಯಮವಾಗಿ ಚಿತ್ರಕಲೆ ತನ್ನ ಅಸ್ತಿತ್ವವನ್ನು ಪಡೆದಿದೆ.

ಲೇಖನ : ಡಾ.ಬಸವರಾಜ ಎಸ್.ಕಲೆಗಾರ
ಅತಿಥಿ ಉಪನ್ಯಾಸಕರು
ದೃಶ್ಯಕಲಾ ಅಧ್ಯಯನ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಪಾವಟೆ ನಗರ : 580003
ಮೊಬೈಲ್ : 9980780144
ಮೇಲ್ : bskalegar84@gmail.com