ಕಿಷ್ಕಿಂಧಕಾಂಡ ರಾಮಾಯಣ ಭಾಗ-46

By admin


ತನ್ನ ಪಕ್ಕಗಳು ಸುಟ್ಟ ಕಾರಣ ವಿವರಿಸುತI
ಸಂಪತಿ ತನ್ನ ಗಾಥೆ ಮುಂದುವರೆಸಿದ: II
“ಓ ದೇವರೂಪಿ ಮುನಿಯೆ, ಸುಡು ಬಿಸಿಲಿನಿಂದ ರಕ್ಷಿಸಿದೆI
ಜಟಾಯುವನು, ನನ್ನ ಪಕ್ಕ ಹರಡಿ, ಅದರಡಿ; II
ರಾಕ್ಷಸನ್ಮೇಲೆ ಜಯ ಸಾಧಿಸಲು ಹಾರಿದೆವು ನಾವು ಬಹು ಎತ್ತರಕ್ಕೆ,I
ಭೂಮಂಡಲ ಕಂಡಿತೆಮಗೆ ರಥ-ಗಾಲಿಯಂತೆ; II
ಪರ್ವತ ನದಿಗಳು ನೂಲಿನ ಹೆಣೆಕೆಯಂತೆ ಕಂಡವು,|ಹಿಮಾಲಯ,
ವಿಂಧ್ಯಗಳು ಸರೋವರದಲಿದ್ದ ಆನೆಗಳಂತೆ ಕಂಡವು;II
ದಣಿದೆವು, ಬೆವರಿದೆವು ಸೂರ್ಯನ ಶಾಖದಿI
ನೆಲಕ್ಕೆ ಬಿದ್ದೇವು ನಿತ್ರಾಣಗೊಂಡು ಸಹೋದರರು; II
ಜಟಾಯು ಜನಸ್ಥಾನದಲಿ ಬಿದ್ದಿರಬೇಕು,ಅನಿಸುತೆI
ದಕ್ಷಿಣ-ವಿಂಧ್ಯ ಪರ್ವತದಲಿ ನಾನು ಬಿದ್ದೆ”.II
ಕಿಷ್ಕಿಂಧಕಾಂಡ ರಾಮಾಯಣ

ತನ್ನ ಪಕ್ಕಗಳು ಸುಟ್ಟ ಕಾರಣವನ್ನು ಮುನಿಗೆ ವಿವರಿಸುತ ಸಂಪತಿ ತನ್ನ ಗಾಥೆಯನ್ನು ವಾನರರಿಗೆ ಮುಂದುವರೆಸಿದನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು “ಓ ದೇವರೂಪಿ ಮುನಿಯೆ, ಸುಡು ಬಿಸಿಲಿನಿಂದ ಜಟಾಯುವನ್ನು ನನ್ನ ಪಕ್ಕ ಹರಡಿ, ಅದರಡಿ ರಕ್ಷಿಸಿದೆನು; ರಾಕ್ಷಸನ್ಮೇಲೆ ಜಯ ಸಾಧಿಸಲು ನಾವು ಬಹು ಎತ್ತರಕ್ಕೆ ಹಾರಿದೆವು, ಆಕಾಶದಿಂದ ನಮಗೆ ಭೂಮಂಡಲವು ರಥ-ಗಾಲಿಯಂತೆ ಕಂಡಿತು; ಭೂಮಂಡಲದಲ್ಲಿಯ ಪರ್ವತ ಮತ್ತು ನದಿಗಳು ನೂಲಿನ ಹೆಣೆಕೆಯಂತೆ ಕಂಡವು, ಹಿಮಾಲಯ ಮತ್ತು ವಿಂಧ್ಯಗಳು ಸರೋವರದಲಿದ್ದ ಆನೆಗಳಂತೆ ಕಂಡವು; ನಾವು ಸಹೋದರರು ಸೂರ್ಯನ ಬಿಸಿಲಿನಿಂದ ದಣಿದೆವು, ಬೆವರಿದೆವು, ನಿತ್ರಾಣಗೊಂಡು ನೆಲಕ್ಕೆ ಬಿದ್ದೇವು; ಜಟಾಯು ಜನಸ್ಥಾನದಲ್ಲಿ ಬಿದ್ದಿರಬೇಕೆಂದು ನನಗೆ ಅನಿಸುತು ಹಾಗು ನಾನು ದಕ್ಷಿಣ-ವಿಂಧ್ಯ ಪರ್ವತದಲ್ಲಿ ಬಿದ್ದೆನು” ಎಂದು ಪುನಃ ತಾನು ಗಾಯಗೊಂಡ ಕಥೆಯನ್ನು ಹೇಳಿತು. ಸಂಪತಿ ಮೂಲಕ ಆದಿಕವಿ ವಾಲ್ಮೀಕಿಯು (1) ಗಗನದಿಂದ/ಅಂತರಿಕ್ಷದಿಂದ ಭೂಮಿಯು ಚಕ್ರದಂತೆ ದುಂಡಗೆ ಇದೆ ಮತ್ತು(2) ಭೂಗ್ರಹದ ಮೇಲಿನ ಮಹಾಪರ್ವತ ಮತ್ತು ನದಿಗಳು ನೂಲಿನ ಹೆಣೆಕೆಯಂತೆ ಕಾಣಿಸುವ ಭೂಗೋಲ ಮತ್ತು ಖಗೋಲಶಾಸ್ತ್ರ ವಿಷಯವನ್ನು ಮಂಡಿಸಿರುವರು. ನೂಲಿನ ಹೆಣಿಕೆ ಪದ ಪ್ರಯೋಗವು ತ್ರೇತಾಯುಗದಲ್ಲಿ ನೇಯ್ಕಾರಿಕೆ ತಂತ್ರಜ್ಞಾನ ಇದ್ದ ಬಗ್ಗೆ ಉಲ್ಲೇಕಿಸುತ್ತದೆ, ಆದಿಚಿಂತಕ ವಾಲ್ಮೀಕಿಯು ನೀಡಿದ ದಾಖಲೆಗಳು ಭರತಖಂಡವು ತ್ರೇತಾಯುಗದಲ್ಲಿಯೇ ಒಂದು ವೈಜ್ಞಾನಿಕವಾಗಿ ಮುಂದುವರೆದ ಭೂಪ್ರದೇಶವಾಗಿತ್ತು ಎಂಬದು ಸ್ಪಷ್ಟವಾಗುತ್ತದೆ, ಆದರೆ ಕೆಲವು ಬುದ್ಧಿ ಜೀವಿಗಳು ವಾಲ್ಮೀಕಿ ರಚಿಸಿದ ರಾಮಾಯಣವು ಪೂರ್ವಕಾಲದ ಇತಿಹಾಸವಾಗಿರದೇ ಒಂದು ಕಪೋಲಕಲ್ಪಿತ ಕಥೆಯೆಂದೇ ವಾದಿಸುವರು, ಅದು ಅವರ ವಿತ್ತಂಡ ವಾದ ವಿರಬಹುದು ಇಲ್ಲವೇ ಅಧ್ಯಯನದ ಅಭಾವವಿರಬಹುದು. ಸಂಶೋಧನೆಗಳು ವೈಜ್ಞಾನಿಕ ತಳಹದಿ ಮೇಲೆ ನಡೆಯುತ್ತವೆ, ವಾಲ್ಮೀಕಿ ರಾಮಾಯಣವು ಸಂಶೋಧನೆಗಳಿಗೆ ಒಂದು ಮಹಾಸಾಗರವಾಗಿ ತೆರೆದು ಕೊಂಡಿದೆ, ಅದರ ಸತ್ಯ ಅರಿಯುವದು ಅದನ್ನು ಈಜುವವನ ಸಾಮರ್ಥ್ಯವನ್ನು ಅವಲಂಭಿಸಿದೆ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌