ಸುಂದರಕಾಂಡ ರಾಮಾಯಣ ಭಾಗ-76

By admin


ಮತ್ತೊಂದು ರಾತ್ರಿ ಕಳೆದ ಹನುಮ ಶಿಂಶಪದಲಿ,I
ಮಂತ್ರ ಪಠಣ ಬ್ರಹ್ಮರಾಕ್ಷಸರ ಕೇಳಿಬಂತು ನಸುಕಿನಲಿ, II
ಕರಣಹಿತ ವಾದ್ಯ ನಾದಗಳಿಂದ ನಸುಕಿನಲಿI
ನಡೆದಿತ್ತು ರಾವಣನ- ಎಬ್ಬಿಸುವ ಕಾರ್ಯ, II
ನೆನಪಿಸಲು ಸೀತೆಯನ, ಹೂ-ಹಾರಗಳ I
ಧರಿಸಿದ ರಾವಣ ನಿದ್ರೆಯಿಂದ ಎಚ್ಚತ್ತನು, II
ಕಾಮದಮಲಿನಲಿ ಸೀತೆ ನೆನಪಿನಲಿ ಮಲಗಿದ ರಾವಣI
ಆ ಆಸೆಗಳನ್ನು ಚಿವುಟದೇ ಮತ್ತೆ ಚುರುಕನಾದ, II
ಪ್ರವೇಶಿಸಿದ ಆಭರಣಗಳ ಸುಶೋಭಿತ ರಾವಣI
ಪುಷ್ಪ ಫಲಗಳಭರಿತ ಅಶೋಕವನ, II
ಪುಷ್ಪ-ಶೋಭಿತ ಸರೋವರಗಳು, ಹಕ್ಕಿಗಳ ಇಂಚರ,I
ಅಶೋಕವನ ಪ್ರವೇಶಿಸಿದ ರಾವಣ, II
ವಿಭಿನ್ನ ಭಂಗಿಯ ಕೃತ್ರಿಮ ಜಿಂಕೆಗಳು, ಪ್ರಾಣಿಗಳ ಹಿಂಡು,I
ರತ್ನ ವಜ್ರ ಶೋಭಿತ ಕಮಾನು ಪ್ರವೇಶಿಸಿದ ನೋಡುತ, II
ನೂರು ಸುಂದರಿಯರು ಹಿಂಭಾಲಿಸಿದ್ದರುI
ಮುಂದೆ ಮುಂದೆ ರಾವಣ, ಹಿಂದೆ ಹಿಂದೆ ಸ್ತ್ರೀಯರು, II
ಹಿಡಿದಿದ್ದರು ಕೆಲವರು ಚಿನ್ನದ ಹಣತೆ, ಕೆಲವರು ಚಾಮರ, I
ಇನ್ನು ಕೆಲವರು ತಾಳೆ-ಎಲೆ ಬಿಸಣಿಕೆ, ಹಿಡಿದಿದ್ದರು II
ಕೆಲವು ಸ್ತ್ರೀಯರು ಸಣ್ಣ ಚಿನ್ನದ ಕಲಶಗಳು ನಡೆದಿದ್ದರು ಹಿಂದೆI
ಇನ್ನು ಕೆಲವರು ಹಿಡಿದು ವೃತ್ತಾಕಾರ ದಿಂಬಗಳು, II
ಹಿಡಿದಿದ್ದಳು ರಾವಣನ ಬಲಗಡೆಯ ಸ್ತ್ರೀI
ಮದ್ಯತುಂಬಿದ ರತ್ನ-ಶೋಭಿತ ಕಲಶ, II
ನಡೆದಿದ್ದಳು ಮತ್ತೊಬ್ಬ ಸ್ತ್ರೀ ಹಿಂದೆ ಹಿಡಿದು I
ರಾಜಹಂಸ ಸಮ ಚಿನ್ನ-ಹಿಡಿಕೆ, ಚಂದ್ರಮಾನಂತಹ ಛತ್ರಿ,II
ಮೋಡಗಳಿಗೆ ಮಿಂಚು ಬೆನ್ನಟ್ಟಿದಂತೆI
ಬೆನ್ನಟ್ಟಿದ್ದರು ನಿದ್ರೆಗಣ್ಣಿನ ಸ್ತ್ರಿಯರು ಪತಿ ರಾವಣನ, II
ಅಸ್ತವ್ಯಸ್ತ ಕೊರಳ ಹಾರ,ಕೈತೊಡಿಗೆಗಳು,I
ಕೆದರಿದ ತಲೆಗೂದಲು, ಬೆವತ ಮುಖಗಳು, II
ಮದ್ಯದಮಲು,ನಿದ್ರೆಗಣ್ಣುಗಳು, ಮೈಮೆಲೆ ಅಸ್ತವ್ಯಸ್ತ I
ಹೂ-ಹಾರಗಳು, ಮಾದಕ ಕಣ್ಣುಗಳು, II
ಪ್ರೀತಿ, ಗೌರವ ದ್ಯೋತಕವಾಗಿ ಬೆನ್ನಟ್ಟಿದರುI
ರಾವಣನ ಪತ್ನಿಯರು, ಪತಿ ಹಿಂದೆ ಹಿಂದೆ, II
ಕಾಮತೃಷೆಗೆ ತಮ್ಮನ್ನೇ ಅರ್ಪಿಸಿದ ಸ್ತ್ರೀಯರ ಪತಿI
ರಾವಣ ನಡೆದಿದ್ದ ಮನದಲಿ ಸೀತೆಯ ಆಸೆ ಹೊತ್ತು, II
ಕೇಳಿಸಿತು ವಾಯುಪುತ್ರ ಹನುಮನಿಗೆI
ನಡುಪಟ್ಟಿ ಗೆಜ್ಜೆ, ಕೈ ಬಳೆಗಳ ನಿನಾದ, ಸುಂದರ ಸ್ತ್ರೀಯರ, II
ಕಂಡನು ಹನುಮ ಪ್ರವೇಶದ್ವಾರ ಬಳಿ ರಾವಣನ,I
ಅಪ್ರಥಿಮ ಸಾಧನೆಗೈದ ಬರುವ ಮಹಾಪರಾಕ್ರಮಿಯಂತೆ, II
ಸುಗಂಧ-ದ್ರವ್ಯ ಮಜ್ಜಿತ ರಾವಣI
ಕಂಗೊಳಿಸಿದನು ಹಣತೆಗಳ ಬೆಳಕಿನ ಮಧ್ಯೆ, II
ಬಾಣೇರಿಸಿಕೊಂಡ ಬಂದ ಮನ್ಮಥನಂತೆ, ಕೆಂಗಣ್ಣುI
ಮೋಹ, ಕಾಮದಮಲಿನ ರಾವಣ ಕಂಡನು ಹನುಮಗೆ, II
ತುಂಬಿದ ಎಲೆಗಳ ರೆಂಬೆಗಳ ಮಧ್ಯೆ ಕುಳಿತI
ಹನುಮ ತನ್ನೆಡೆ ಬರುವ ರಾವಣನನ್ನೆ ದಿಟ್ಟಿಸಿದ, II
ಸೌಂದರ್ಯ ಯವ್ವನತುಂಬಿತ ರಾವಣ-ಪತ್ನಿಯರುI
ಎಲ್ಲದಿಸೆಗಳಿಂದ ಬರುವದನು ಕಂಡನು ಹನುಮ, II
ಪ್ರಾಣಿ ಪಕ್ಷಿಗಳ ಸದ್ದು ಗದ್ದಲಗಳ ಮಧ್ಯೆ,I
ಸುಂದರ ಪತ್ನಿಯರೊಂದಿಗೆ ಬಂದನು ಬಲಶಾಲಿ ರಾವಣ,II
ವಿಸ್ವವಸುಪುತ್ರ ರಾಕ್ಷಸರಾಜ ಉದ್ದಗಿವಿ ರಾವಣI
ಪತ್ನಿಯರ ಮಧ್ಯೆ ಕಂಡನು ನಕ್ಷತ್ರಗಳ ಮಧ್ಯೆ ಚಂದ್ರನಂತೆ, II
ಕೆಳಗೆ ಜಿಗಿದ ಕುಪಿತ ಅಜಾನುಬಾಹು ರಾವಣ I
ಕಂಪನ ಕಂಡು ಹನುಮ,ಬಿಗಿದಪ್ಪಿದ ರಂಬೆಗಳನು, II
ಕಪ್ಪಗೂದಲು, ಆಕರ್ಷಕಂಗ, ಬಿಗಿದ ಸ್ತನಗಳು, I
ಕಪ್ಪಂಚಿನ ಕಣ್ಣುಗಳ ಸೀತೆ ಹತ್ತಿರ ಬಂದ ನೋಡಲು ರಾವಣ. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ರಾವಣನ ಅತೃಪ್ತ-ಲೈಂಗಿಕ ತೃಷೆಯ ವಿಕಾರ ಮನೋಸ್ಥಿತಿಯನ್ನು ಪರಿಣಾಮಕಾರಿಯಾಗಿ ವಿವರಿಸಿರುವರು: (1)ವಿಕೃತ ಲೈಂಗಿಕ ಪಿಪಾಸಿ ರಾವಣ: ತನ್ನ ಸುಂದರ ಯವ್ವನ ಪತ್ನಿಯರಿಂದ ನಿತ್ಯ ಲೈಂಗಿಕ ಚಟುವಟಿಗಳಲ್ಲಿ ತೊಡಗಿದ್ದರೂ ಸೀತೆ ಮೇಲಿನ ಅವನ ಲೈಂಗಿಕ ಆಸೆ ಕಡಿಮೆಯಾಗಲಿಲ್ಲ ಅದನ್ನು ಆದಿಕವಿ ಹೀಗೆ ಹೇಳಿರುವರು ಸೀತೆಯ ನೆನಪು ಮಾಡಿಕೊಡುತಿದ್ದಂತೆ ಹೂ-ಹಾರಗಳ ಧರಿಸಿದ ರಾವಣನು ನಿದ್ರೆಯಿಂದ ಎಚ್ಚತ್ತನು, ಕಾಮದಮಲಿನಲಿ ಸೀತೆ ನೆನಪಿನಲಿ ಮಲಗಿದ ರಾವಣ ಆ ಆಸೆಗಳನ್ನು ಚಿವುಟದೇ ಮತ್ತೆ ಚುರುಕನಾದನು” ಇದರಿಂದ ರಾವಣನೊಬ್ಬ ವಿಕೃತ ಲೈಂಗಿಕ ಪಿಪಾಸಿಯಾಗಿದ್ದನೆಂದು ತಿಳಿದು ಬರುವದು. (2) ಸ್ತ್ರೀತನಕ್ಕೆ ಅವಮಾನ: ನಿತ್ಯ ಇಡೀ ರಾತ್ರಿ ರಾವಣನ ಕಾಮತೃಷೆ ತಿರಿಸುವ ಅವನ ಸುಂದರ ರಾಣಿಯರು ಅಶೋಕವನದಲ್ಲಿ ಅಸ್ತವ್ಯಸ್ತ ಕೊರಳ ಹಾರಗಳು, ಕೈತೊಡಿಗೆಗಳು, ಕೆದರಿದ ತಲೆಗೂದಲು, ಬೆವತ ಮುಖಗಳು, ಮದ್ಯದಮಲು, ನಿದ್ರೆಗಣ್ಣುಗಳು, ಮೈಮೆಲೆ ಅಸ್ತವ್ಯಸ್ತ ಹೂ-ಹಾರಗಳು, ಮಾದಕ ಕಣ್ಣುಗಳು, ಈ ಅಸ್ತವ್ಯಸ್ತಗಳ ಮಧ್ಯೆಯೇ ಪ್ರೀತಿ, ಗೌರವ ದ್ಯೋತಕವಾಗಿ ಅವರು ರಾವಣನ ಬೆನ್ನಟ್ಟಿದ್ದರು ಹಾಗು ಪತಿ ರಾವಣನ ಕಾಮತೃಷೆಗೆ ತಮ್ಮನ್ನೇ ಅರ್ಪಿಸಿದ ಆ ರಾವಣನ ರಾಣಿಯರು ತನ್ನ ಹಿಂದೆ ಬರುತಿದ್ದರೂ ರಾವಣನು ಮನದಲಿ ಸೀತೆಯ ಆಸೆ ಹೊತ್ತು ಅವರ ಮುಂದೆ ನಡೆದಿದ್ದನು, ಈ ಪ್ರಸಂಗವು ರಾವಣನಿಂದ ರಾಣಿಯರ ಸ್ತ್ರೀತನಕ್ಕೆ ಮಾಡಿದ ಅವಮಾನ ಮತ್ತು ಲೈಂಗಿಕ ಶೋಷಣೆ. (3) ಸ್ತ್ರೀ-ದೌರ್ಜನ್ಯ ಕುಖ್ಯಾತ: ಕೆಂಗಣ್ಣು ಮೋಹ, ಕಾಮದಮಲಿನ ರಾವಣನು ಅಪ್ರಥಿಮ ಸಾಧನೆಗೈದು ಬರುವ ಮಹಾಪರಾಕ್ರಮಿಯಂತೆ ಸುಗಂಧ-ದ್ರವ್ಯ ಮಜ್ಜಿತನಾಗಿ ಹಣತೆಗಳ ಬೆಳಕಿನ ಮಧ್ಯೆ ಕಂಗೊಳಿಸುತ ಹಾಗು ಬಾಣೇರಿಸಿಕೊಂಡ ಬಂದ ಮನ್ಮಥನಂತೆ ಸೀತೆ ಬಳಿ ಬಂದ ದೃಶ್ಯವು ರಾವಣನೊಬ್ಬ ಸ್ತ್ರೀ-ದೌರ್ಜನ್ಯ ಕುಖ್ಯಾತನೆಂದು ಬಿಂಬಿಸುವದು. ನಂತರದ ಕವಿಗಳು ತಮ್ಮ ರಾಮಾಯಣ ಆವೃತ್ತಿಗಳಲ್ಲಿ, ಸಾಹಿತ್ಯಗಳಲ್ಲಿ ವ್ಯಕ್ತಿ ಪೂಜೆ ಭರಾಟೆಯಲ್ಲಿ ರಾವಣನ ಸ್ತ್ರೀಪೀಡಕ ವ್ಯಕ್ತಿ ವನ್ನು ಗೌಣಗೊಳಿಸಿ ಅವನೊಬ್ಬ ಶ್ರೇಷ್ಠ ಶಿವಭಕ್ತ ನೆಂದು ವೈಭವೀಕರಣ ಮಾಡಿರುವರು. ಆದರೆ ಆದಿಕವಿ ವಾಲ್ಮೀಕಿ ಯು ರಾವಣನ ಎಲ್ಲ ಅವಗುಣಗಳನ್ನು ಯಥಾವತ್ತಾಗಿ ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ