
ಆಭರಣ ಭೂಷಿತ ಸದ್ರೂಪಿ ಯುವ ರಾವಣ, I
ಕಂಡು ಸೀತೆ ನಡುಗಿದಳು ಬಿರುಗಾಳಿಗೆ ಸಿಕ್ಕ ಕದಳಿಯಂತೆ, II
ಮುಚ್ಚಿಕೊಂಡಳು ಕಿರಚುತ ವಿಶಾಲಾಕ್ಷಿ ಸುವರ್ಣ ಸೀತೆI
ತೊಡೆಗಳಿಂದ ಹೊಟ್ಟೆಯನು, ಕೈಗಳಿಂದ ಸ್ತನಗಳನು, II
ರಾಕ್ಷಸಿಯರ ಮಧ್ಯೆ ಕಂಡನು ರಾವಣ ದುಃಖಿತ ಸೀತೆಯನುI
ಸಮುದ್ರದಲಿ ಅಪಾಯಕ್ಕೀಡಾದ ಹಡಗಿನಂತೆ,II
ಕಂಡನು ಹನುಮ ಬರಿ ನೆಲದ ಮೇಲೆ ಕುಳಿತI
ಅಚಲ ಸೀತೆಯನು ಮುರಿದು ನೆಲಕ್ಕೆ ಬಿದ್ದ ರೆಂಬೆಯಂತೆ, II
ಕಂಡಳು ನಿರಾಭರಣ ಚೆಲುವೆ ಸೀತೆ ಮಸಕಿದ ಆಭರಣದಲಿ,I
ರಾಡಿಮೆತ್ತಿದ ಕಮಲ-ದೇಟಿನಂತೆ, ಹೊಳೆಯದೆ, II
ರಾಜರ ಸಿಂಹ ರಾಮನ ಬಳಿ ಹೋದಾಗಲೂ ಸೀತೆI
ಇಡುತಿದ್ದಳು ತನ್ನಾಸೆಯ ಕುದುರೆಗಳನ್ನು ಹಿಡಿತದಲಿ, II
ರಾಮನ ಧ್ಯಾನದಲಿ,ಅನಂತ ದುಃಖದಲಿI
ಅಳುತಿದ್ದಳು ಚಿಂತೆಯಲಿ ಬಂಧಿತ ಸೀತೆ, II
ಕಂಡಳು ಸೀತೆ ಬುಸುಗುಡುವ ನಾಗಿಣಿಯಂತೆ,I
ಧುಮಕೇತು ಗ್ರಹಣ ಪೀಡಿತ ರೋಹಿನಿಯಂತೆ, II
ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ, ಮದುವೆಯಾದ ಸೀತೆI
ಕಂಡಳು ದರಿದ್ರ ಮನೆತನದ ಸ್ತ್ರೀಯಂತೆ, ಪತನಗೊಂಡ II
ಖ್ಯಾತಿಯಂತೆ, ಅವಮಾನಿತ ನಂಬಿಗೆಯಂತೆ,I
ಕ್ಷೀಣಿತ ಜ್ಞಾನದಂತೆ, ಕಮರಿದ ಆಸೆಯಂತೆ ಕಂಡಳು ಸೀತೆ, II
ಹುಸಿಗೊಂಡ ನಿರೀಕ್ಷೆಯಂತೆ, ಮೀರಿದ ಆಜ್ಞೆಯಂತೆ,I
ನಂದುವ ಜ್ವಾಲೆಯಂತೆ, ಕದ್ದ ಪೂಜೆಯಂತೆ ಕಂಡಳು ಸೀತೆ, II
ದಮನಿತ ಕಮಲದಂತೆ, ಶೂರರು ಸತ್ತ ಸೈನ್ಯದಂತೆ,I
ಕತ್ತಲು ಮೆತ್ತ ಬೆಳಕಿನಂತೆ, ಒಣಗಿದ ನದಿಯಂತೆ ಕಂಡಳು ಸೀತೆ, II
ನಂದಿತ ಯಜ್ಞದಂತೆ, ಆರಿದ ಬೆಂಕಿಯಂತೆ,I
ರಾಹು ನುಂಗಿದ ಹುಣ್ಣಿಮೆ ಚಂದ್ರನಂತೆ ಕಂಡಳು ಸೀತೆ, II
ಅನೆ ಹೊಕ್ಕು ನಾಶ ಪಡಿಸಿದ ಕಮಲI
ಹೂ ಎಲೆಗಳ ಹೊಂಡದಂತೆ ಕಂಡಳು ಸೀತೆ, II
ಬತ್ತಿದ ನದಿ ನೀರಿಗಾಗಿ ಹಂಬಲಿಸಿದಂತೆ,I
ಪತಿಗಾಗಿ ಹಂಬಲಿಸಿದಳು ಹೊಸ ಚಂದ್ರಮಾದಂತಹ ಸೀತೆ ,II
ವಜ್ರ-ಮನೆಲಿರುವ ಕೋಮಲಾಂಗಗಳ ಸೀತೆನೊಂದಿಹಳು I
ಬುಡಮೇಲಾದ ಕಮಲಕಾಂಡದಂತೆ ಶಕೆಗೆ, II
ಹಿಂಡಿನ ನಾಯಕನಿಲ್ಲದ, ದುಃಖದುಸಿರು ಬಿಡುವ I
ಸೆರೆ ಸಿಕ್ಕ ಹೆಣ್ಣಾನೆಯಂತೆ ಕಂಡಳು ಶೋಕ ಪೀಡಿತ ಸೀತೆ, II
ಮಳೆಗಾಲ ಅಂತ್ಯದ ದಟ್ಟ ಮರಗಳ ಮಧ್ಯೆI
ಭೂಮಿ ಹೊಳೆದಂತೆ ಕಂಡಳು ಸೀತೆ,II
ದುಃಖ, ಉಪವಾಸ, ಚಿಂತೆ, ಭಯ ಮಧ್ಯೆI
ಕೊರಗಿ ಸೊರಗಿದ್ದಳು ಸೀತೆ, II
ದುಃಖ ಚಿಂತೆಯಳ ಮಧ್ಯೆ ಕೈಮುಗಿದುI
ರಾಮನಿಂದ ರಾವಣನ ಸೋಲಿಗೆ ಕೋರುತಿದ್ದಳು ದೈವ, II
ರಾಮನಿಗಾಗಿ ಜಪಿಸುವ, ಅಳುವ, ಸೀತೆಗೆI
ಹತ್ಯೆ ಬೆದರಿಕೆ ಹಾಕುತ ಗದ್ದರಿಸಿದ ರಾವಣ. II
ಸುಂದರ ಕಾಂಡ
ಉಪಮಾಲಂಕಾರಗಳನ್ನು ಸರಣಿಯಾಗಿ ಬಳಿಸುತ, ಕುಣಿಸುತ ಆದಿಕವಿ ವಾಲ್ಮೀಕಿಯು ಒಂದೆಡೆ ಸೀತೆಯ ಕರುಣಾಜನಿಕ ಬಾಹ್ಯ ನೋಟವನ್ನು ಮತ್ತೊಂದೆಡೆ ಅವಳ ಮದಕರಿ ದಿಟ್ಟತನದ ನೋಟಗಳನ್ನು ಈ ಸನ್ನಿವೇಶದಲ್ಲಿಬಹು ಮಾರ್ಮಿಕವಾಗಿ ಬಣ್ಣಿಸಿರುವರು: (1) ಉಪಮಾಲಂಕಾರಗಳ ಸುರಿಮಳೆ: ಸೀತೆಯ ಸ್ಥಿತಿಯನ್ನು ವಿವರಿಸುವಾಗ ಆದಿಕವಿಯು ಸೂಕ್ತ ಉಪಮಾಲಂಕಾರಗಳನ್ನು ವಿದ್ವತ್ತಪೂರಕವಾಗಿ ಬಳಸಿರುವರು ಉಧಾಹರಣೆಗೆ “ಸೀತೆಯು ಬುಸುಗುಡುವ ನಾಗಿಣಿಯಂತೆ, ಧುಮಕೇತು ಗ್ರಹಣ ಪೀಡಿತ ರೋಹಿನಿಯಂತೆ ಕಂಡಳು; ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ ವಿವಾಹಿತ ಸೀತೆಯು ದರಿದ್ರ ಮನೆತನದ ಸ್ತ್ರೀಯಂತೆ, ಪತನಗೊಂಡ ಖ್ಯಾತಿಯಂತೆ, ಅವಮಾನಿತ ನಂಬಿಗೆಯಂತೆ, ಕ್ಷೀಣಿತ ಜ್ಞಾನದಂತೆ, ಕಮರಿದ ಆಸೆಯಂತೆ, ಹುಸಿಗೊಂಡ ನಿರೀಕ್ಷೆಯಂತೆ, ಮೀರಿದ ಆಜ್ಞೆಯಂತೆ, ನಂದುವ ಜ್ವಾಲೆಯಂತೆ, ಕದ್ದ ಪೂಜೆಯಂತೆ, ದಮನಿತ ಕಮಲದಂತೆ, ಶೂರರು ಸತ್ತ ಸೈನ್ಯದಂತೆ, ಕತ್ತಲು ಮೆತ್ತ ಬೆಳಕಿನಂತೆ, ಒಣಗಿದ ನದಿಯಂತೆ, ನಂದಿತ ಯಜ್ಞದಂತೆ, ಆರಿದ ಬೆಂಕಿಯಂತೆ, ರಾಹು ನುಂಗಿದ ಹುಣ್ಣಿಮೆ ಚಂದ್ರನಂತೆ, ಅನೆ ಹೊಕ್ಕು ನಾಶ ಪಡಿಸಿದ ಕಮಲ ಹೂ ಎಲೆಗಳ ಹೊಂಡದಂತೆ ಹನುಮಾನನಿಗೆ ಕಂಡಳು”. (2) ಇಂದ್ರಿನಿಯಂತ್ರಿತ ದಿಟ್ಟತನ: ಸೀತೆಯಲ್ಲಿ ತನ್ನ ಇಂದ್ರಿಗಳನ್ನು ನಿಯಂತ್ರಿಸುವ ಮತ್ತು ಸವಾಲುಗಳನ್ನೆದಿರಿಸುವ ದಿಟ್ಟವಿರುವದನ್ನು ಆದಿಕವಿ ಹೀಗೆ ಬಣ್ಣಿಸಿರುವರು “ರಾಜರ ಸಿಂಹ ರಾಮನ ಬಳಿ ಹೋದಾಗಲೂ ಸೀತೆಯು ತನ್ನಾಸೆಯ ಕುದುರೆಗಳನ್ನು (ಕಾಮೇಂದ್ರಿಗಳನ್ನು) ಹಿಡಿತದಲಿ ಇಡುತಿದ್ದಳು” ಅದರಂತೆ” ಹನುಮನಿಗೆ ಬರಿ ನೆಲದ ಮೇಲೆ ಕುಳಿತ ದಿಟ್ಟ ಸೀತೆಯು ಮುರಿದು ನೆಲಕ್ಕೆ ಬಿದ್ದ ರೆಂಬೆಯಂತೆ ಕಂಡಳು”; ಅದರಂತೆ ರಾವಣನ ಕಂಡು ಸೀತೆ ತನ್ನ ಎದೆ ಕಿಬ್ಬೊಟ್ಟಗಳನ್ನು ಕೈಗಳಿಂದ ಮುಚ್ಚಿಕೊಳ್ಳು ಮೂಲಕ ತನ್ನ ರಕ್ಷಣೆಯ ದಿಟ್ಟತನ ಪ್ರದರ್ಶಿಸುವಳು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
