
ರಾಕ್ಷಸಿಯರ ಮಧ್ಯೆ ಭಯಭಿತ, ಕರುನಾಜನಕ ಸ್ಥಿತಿಯಲಿಯI
ಸೀತೆಗೆ ರಾವಣ ಮುಖ್ಯವಾಗಿ ನುಡಿದ: II
“ಹಸ್ತಿದಂತಹದ ತೊಡೆಯವಳೇ,ಕಂಡು ಎನ್ನ, ಹೆದರಿI
ಹೊಟ್ಟೆ ವಕ್ಷಗಳನ್ನು ಮುಚ್ಚಿಕೊಂಡಿರುವಿ, II
ಓ ವಿಶಾಲಾಕ್ಷಿ, ಎಲ್ಲರನ್ನೂ ಮೆಚ್ಚಿಸು ನಿನ್ನ ಅಂದ,I
ಬಯಸಿರುವೆ ನಿನ್ನ, ಗೌರವಿಸು ಎನ್ನ, ಓ ಪ್ರೀಯಳೆ, II
ಓ ಸೀತೆ,ಇಚ್ಚಾರೂಪಿ ರಾಕ್ಷಸರಿಲ್ಲ, ಮಾನವನಿಲ್ಲ ಇಲ್ಲಿ,I
ಹೆದರದಿರು ಕಂಡು ನನ್ನ, ತೊರೆ ಅಂಜಿಕೆ, II
ಓ ಅಂಜಿದವಳೇ,ಪರಸ್ತ್ರೀ ಅಪಹರಿವದು ಇಲ್ಲವೆ I
ಬಲವಂತವಾಗಿ ಪಡೆಯುವದು, ನಿಸ್ಸಂದೇಹ,ರಾಕ್ಷಸ-ಧರ್ಮ,II
ಮೈಥಿಲಿ, ಹುಟ್ಟದೇ ನಿನ್ನಲಿ ಕಾಮ ಬಯಕೆI
ಕಾಮದಿಚ್ಚೆಯಿದ್ದರೂ ನನ್ಲಿನ, ನಾ ಮುಟ್ಟುವದಿಲ್ಲ ನಿನ್ನ , II
ಓ ದೇವಿ, ಹೆದರದಿರು, ನಂಬು ನನ್ನ,I
ನಿಜವಾಗಿ ನಿನ್ನ ಪ್ರೀತಿಸುವೆ, ಶೋಕಿಸಬೇಡಾ, II
ಸರಿ ಕಾಣದು, ಏಕವೇಣಿ, ನೆಲ-ಹಾಸಿಗೆ, ಧ್ಯಾನ,I
ಮಲೀನ-ಉಡಪು, ಅಕಾಲಿಕ ಉಪವಾಸ ನಿನ್ನ, II
ಓ ಸೀತೆ, ಒಲಿದು ನನಗೆ, ನೀ ಪಡೆದುಕೋI
ಅದ್ಭುತ ಆಭರಣ, ಶ್ರೀಗಂಧ,ಪರಿಮಳ ದ್ರವ್ಯ, II
ಅತ್ಯುತ್ತಮ ಪೇಯಿ, ಹಾಸಿಗೆ,ಆಸನ,I
ನೃತ್ಯ, ಗಾಯನ,ವಾದ್ಯಗಳ ಲಾಭ; II
ನೀ ಸ್ತ್ರೀರತ್ನಾಮಣಿ, ಅಲಂಕಾರ ಯೋಗ್ಯ ನಿನ್ನ ಅಂಗಗಳುI,
ಅಂದದ ಮೈಕಟ್ಟಿನವಳೇ, ಪಡೆದು ನನ್ನ, ಅರ್ಹಳಾಗು, II
ವ್ಯರ್ಥವಾಗುತಿಹದು ನಿನ್ನ ಅಂದದ ವರ ಯವ್ವನ,I
ಗತಿಸಿದ ಯವ್ವನ ಪುನಃ ಹಿಂದಿರುಗದು ಹರಿದ ನೀರಿನಂತೆ, II
ಓ ಅಪ್ರಥಿಮ ಅಂದದವಳೇ, ನನಗನಿಸುತಿದೆ, I
ನಿನ್ನ ಸೃಷ್ಠಿಸಿದ ಸೃಷ್ಠಿಕೃತ, ನಿನಗೆ ಸಮ ಇನ್ನೊಂದು ಸೃಷ್ಠಿಸಿಲ್ಲ,II
ಓ ಸೌಂದರ್ಯ ಯವ್ವನ ಸಂಪನ್ನ ಸೀತೆ,I
ಬಿಡರು ನಿನ್ನ ಯಾರೂ, ಸ್ವಯಂ ಸೃಷ್ಠಿಕೃತನೂ, II
ಓ ಚಂದ್ರ ಮುಖಿ, ನಿನ್ನ ಪೃಷ್ಠ, ಅಂಗಾಂಗಳ ನೋಡಿI
ಅಂಟಿಕೊಂಡಿವೆ ಅವುಗಳಲ್ಲಿ ನನ್ನ ಕಂಗಳು, II
ಓ ಸೀತೆ, ನನ್ನ ಪತ್ನಿಯಾಗು, ಅತ್ತತ್ತ ಅಪಹರಿಸ ತಂದI
ನನ್ನ ಪತ್ನಿಯರಲಿ ಹೊಂದುವಿ ಘನಸ್ಥಾನ, II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ತನ್ನ ಅಲಂಕಾರತ್ವ ಕಾವ್ಯ ಮೋಡಿಯನ್ನು ಮುಂದುವರೆಸುತ ಸೀತೆಯನ್ನು ಮೆಚ್ಚಿಸಲು ರಾವಣ ಬಳಸಿದ ತಂತ್ರಗಳನ್ನು ಮತ್ತು ರಾವಣ ಕಂಡ ಸೀತೆಯ ಚೆಲುವನ್ನು ವಿವರಿಸಿರುವರು: (1)ಹೊಗಳಿಕೆಯಿಂದ ಮನ ಬದಲಿಸುವ ಸಲಿಗೆ ಮಾತುಗಳು: ಸೀತೆಯ ಮನ ಬದಲಿಸಲು ರಾವಣ ಸಲಿಗೆಯ ಮಾತುಗಳ ಆಶ್ರಯ ಪಡೆದಿರುವನು ಉಧಾಹರಣೆ: ಓ ವಿಶಾಲಾಕ್ಷಿ, ಓ ಪ್ರೀಯಳೆ, ಓ ಮೈಥಿಲಿ, ಓ ಅಂದದ ಮೈಕಟ್ಟಿನವಳೇ, ಓ ಆಕರ್ಷಕ ಚಲುವೇ, ಓ ಅಪ್ರಥಿಮ ಅಂದದವಳೇ, ಓ ಅಂದದ ಯವ್ವನ ಸಂಪನ್ನ ಸೀತೆ, ಓ ಚಂದ್ರ ಮುಖಿ, ಓ ಕನಕವರ್ಣಿ, ಓ ಏಕವೇಣಿ ಸೀತೆ, ಓ ಸೀತೆ ನೀನು ಸ್ತ್ರೀರತ್ನಾಮಣಿ, ಓ ದಡ್ಡಳೇ, ಇತ್ಯಾದಿ. ಹೆಣ್ಣಿನ ಅಂದವನ್ನು ಅವಳ ಮುಂದೆ ಬಣ್ಣಿಸುವದರಿಂದ ಎಂತೆಂಥ ಹೆಣ್ಣಿನ ಮನ ಕರಗುವದು ಹಾಗು ಅದು ಅದರ ಬಲೆಗೆ ಬೀಳುವದು ಎಂಬ ಸಾರ್ವತ್ರಿಕ ನಂಬಿಕೆಯನ್ನು ಬಲ್ಲ ರಾವಣ ಆ ಅಸ್ತ್ರವನ್ನು ಸೀತೆಯ ಮೆಚ್ಚುಗೆ ಪಡೆಯಲು ಬಳಿಸುವನು, ಹೆಣ್ಣನ್ನು ಒಲಿಸಿಕೊಳ್ಳುವ ಈ ತಂತ್ರ ಅನಾದಿಕಾಲದಿಂದ ಬಂದದ್ದು ಆದಿಕವಿ ವಾಲ್ಮೀಕಿ ಮುಖೇನ ತಿಳಿದು ಬರುವದು. (2) ರಮಿಸುವ ಮಾತುಗಳು: ಸೀತೆಯನ್ನು ಸಮಾಧಾನ ಪಡಿಸಲು ರಾವಣನು ತಾನು ಅವಳನ್ನು ಅಪಹರಿಸಿದ ಕೃತ್ಯದ ಸಮರ್ಥನೆ ಹೀಗೆ ಮಾಡಿಕೊಂಡಿರುವನು “ಓ ಪ್ರೀಯಳೆ, ನನ್ನನು ಗೌರವಿಸು; ಪರಸ್ತ್ರೀಯರನು ಅಪಹರಿಸುವದು ಇಲ್ಲವೆ ಬಲವಂತವಾಗಿ ಪಡೆಯುವದು, ನಿಸ್ಸಂದೇಹವಾಗಿ ಅದು ರಾಕ್ಷಸ-ಧರ್ಮ” ತಾನು ರಾಕ್ಷಧರ್ಮವನ್ನು ಪಾಲಿಸಿದ್ದು ಅದು ಅಧರ್ಮ ಅಲ್ಲವೆಂದು ಸೀತೆಯನ್ನು ರಾವಣ ರಮಿಸಲು ಪ್ರಯತ್ನಿಸುವನು, ಗಂಡು ಹೆಣ್ಣಿನ ಮನ ಬದಲಿಸಲು ತನ್ನ ಕೃತ್ಯವು ಧರ್ಮಸಮ್ಮತವೆಂದು ಸಮರ್ಥನೆ ಮಾಡಿಕೊಳ್ಳು ತಂತ್ರವನ್ನು ಆದಿಕವಿ ತಿಳಿಸಿರುವರು. (3) ಅತೀ ಆಕರ್ಷಣೀಯ ಸ್ತ್ರೀ ಸೌಂದರ್ಯಕ್ಕೆ ಮರಳಾಗುವದು ಪುರುಷನ ಸಹಜ ಗುಣ: ಸ್ತ್ರೀಯ ಯವ್ವನದ ಅತೀ ಆಕರ್ಷಣಿಯ ಅಂದಕ್ಕೆ ಆಸೆ ಪಡುವದು ಪ್ರಕೃತಿ ಸಹಜ ಗುಣ, ಅದರಂತೆ ಸೀತೆಯ ಯವ್ವನದ ಮೈಮಾಟಕ್ಕೆ ತಾನು ಆಸೆಪಟ್ಟಿದಾಗಿ ರಾವಣ ಹೀಗೆ ನುಡಿವನು “ ಹಸ್ತಿದಂತಹದ ತೊಡೆಯವಳೇ, ನನ್ನ ಕಂಡು ಹೆದರಿ ನಿನ್ನ ಹೊಟ್ಟೆ, ಸ್ತನಗಳನ್ನು ಮುಚ್ಚಿಕೊಂಡಿರುವಿ; ನಿನ್ನ ಅಂದವು ಎಲ್ಲರನ್ನೂ ಮೆಚ್ಚಿಸುವದು, ಅದಕ್ಕೆ ಸೋತು ನಾನು ನಿನ್ನ ಬಯಸಿರುವೆ” ಅದರಂತೆ ಮುಂದುವರೆದು “ ಓ ಅಪ್ರಥಿಮ ಅಂದದವಳೇ, ನನಗನಿಸುತಿದೆ, ನಿನ್ನ ಸೃಷ್ಠಿಸಿದ ಸೃಷ್ಠಿಕೃತ, ನಿನಗೆ ಸಮ ಇನ್ನೊಂದು ಸೃಷ್ಠಿಸಿಲ್ಲ; ಓ ಅಂದದ ಯವ್ವನ ಸಂಪನ್ನ ಸೀತೆ, ನಿನ್ನ ಕಂಡವರು ಯಾರೂ ನಿನ್ನ ಬಿಡರು, ನಿನ್ನ ಸೃಷ್ಠಿಸಿದ ಸ್ವಯಂ ಸೃಷ್ಠಿಕೃತನೂ ನಿನ್ನಲ್ಲಿ ಮೋಹಿಸುವನು; ಓ ಚಂದ್ರ ಮುಖಿ, ನಿನ್ನ ಪೃಷ್ಠ ಮತ್ತು ಅಂಗಾಂಗಳ ನೋಡಿ ನನ್ನ ಕಣ್ಣುಗಳು ಅವುಗಳಲ್ಲಿಯೇ ಅಂಟಿಕೊಂಡಿವೆ” ‘ಹೆಣ್ಣಿಗೆ ತನ್ನ ಯವ್ವನಭರಿತ ಸೌಂದರ್ಯವೇ ತನಗೆ ಶತ್ರು’ಎಂಬ ಸತ್ಯವನ್ನು ಆದಿಕವಿ ಋಜುವಾತ ಪಡಿಸಿರುವರು, ಅದೇ ವೇಳೆ ರಾವಣನು ಸೀತೆಯಲ್ಲಿ ಕಂಡ ಅಪ್ರಥಿಮ ಸೌಂದರ್ಯದ ಬಗ್ಗೆ ಆದಿಕವಿ ವಾಲ್ಮೀಕಿಯು ತನ್ನೆಲ್ಲ ಕಾವ್ಯ ಆಯಾಮಗಳನ್ನು ಬಳಸಿ ಬಣ್ಣಿಸಿರುವದು ವಿಶೇಷ,(4) ಯವ್ವನವು ಸ್ಥಿರ ಅಲ್ಲ: ರಾವಣನ್ನು ಸೀತೆಗೆ ಯವ್ವನವು ಸ್ಥಿರವಾಗಿ ಉಳಿಯದು,ಅದು ಹರಿಯುವ ನೀರಿನಂತೆ,ಅದನ್ನು ವ್ಯರ್ಥ ಹೋಗಲು ಬೀಳಬಾರದು ಎಂದು ಸೀತೆಯನ್ನು ಪುಸಲಾಯಿಸಲು ಪ್ರಯತ್ನಿಸುವನು.ಸ್ತ್ರೀಗೆ ಇಂತಹ ಪುಸಲಾಯಿಸುವ ಮಾತುಗಳು ಅವಳನ್ನು ದಾರಿತಪ್ಪಿ ಸಲು ಪ್ರಚೋದಿಸುವವು.ಇಂತಹ ಹೋಗಳಿಕೆಗಳಿಂದ ಸ್ತ್ರೀ ಯರು ಎಚ್ಚರವಿರಬೇಕು ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿ ಜಗಕ್ಕೆ ಉಪದೇಶಿಸಿುವರು, (5) ರಾವಣನಲ್ಲಿ ಸೀತೆಯ ಪ್ರೀತಿ: ತನಗೆ 1000 ಸುಂದರ ಯುವ ಪತ್ನಿಯರಿದ್ದರೂ ರಾವಣನ ಮನವು ಸೀತೆಯ ಪ್ರೇಮವನ್ನು ಇಚ್ಚಿಸುವದು, ಪ್ರೇಮದಿಂದ ಸೀತೆಯನ್ನು ಪಡೆಯುವ ಛಲ ರಾಮಣನಲ್ಲಿ ಹುಟ್ಟುವದು, ಅದನ್ನು ಆದಿಕವಿ ವಾಲ್ಮೀಕಿಯು ರಾಮಣನ ಶಬ್ದಗಳಲ್ಲಿ ಹೀಗೆ ಹೇಳಿರುವರು”ಮೈಥಿಲಿ, ಹುಟ್ಟದೇ ನಿನ್ನಲಿ ಕಾಮ ಬಯಕೆ, ಕಾಮದಿಚ್ಚೆಯಿದ್ದರೂ ನನಲಿ, ನಾ ಮುಟ್ಟುವದಿಲ್ಲ ನಿನ್ನ , ಓ ದೇವಿ, ಹೆದರದಿರು, ನಂಬು ನನ್ನ, ನಿಜವಾಗಿ ನಿನ್ನ ಪ್ರೀತಿಸುವೆ, ಶೋಕಿಸಬೇಡಾ,” ಸೀತೆಯಲ್ಲಿ ಹುಟ್ಟಿದ ರಾವಣನ ಪ್ರೇಮವು ಸೀತೆಗೆ ತನ್ನ ಪವಿತ್ರತೆ ಕಾಯ್ದುಕೊಳ್ಳಲು ಸಹಾಯವಾಗುವದು, ಆ ವಿಷಯವನ್ನು ರಾಮನು ಮೆಚ್ಚಿದನ್ನ ಆದಿಕವಿ ವಾಲ್ಮೀಕಿಯು ಯುದ್ಧ ಕಾಂಡದಲ್ಲಿ ತಿಳಿಸಿರುವರು, ಒಂದು ರೀತಿಯಲ್ಲಿ ರಾಮಾಯಣವೂ ಬರ ಬರುತ್ತಾ ತ್ರೀಕೋನ ಪ್ರೇಮ ಕಥೆಯಾಗಿ ಪರಿವರ್ತನೆಗೊಳ್ಳುವದನ್ನು ಆದಿಕವಿ ವಾಲ್ಮೀಕಿಯು ಪರೋಕ್ಷವಾಗಿ ವ್ಯಕ್ತ ಪಡಿಸಿರುವರು. ವಿವಾಹಿತ ಸ್ತ್ರೀಯನ್ನು ಪ್ರೀತಿಸುವದು ಅಪರಾಧವೆಂಬ ತತ್ವವನ್ನು ಈ ಸನ್ನಿವೇಸ ಮುಖೇನ ಆದಿಕವಿ ವಾಲ್ಮೀಕಿಯು ಜಗಕ್ಕೆ ಉಪದೇಶಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
