ಸುಂದರಕಾಂಡ ರಾಮಾಯಣ ಭಾಗ-78

By admin


ಓ ದಡ್ಡಳೇ, ಬಲವಂತವಾಗಿ ಪಡೆದ ನನ್ನ ರತ್ನ ವೈಢೂರ್ಯI
ಸಂಪತ್ತು, ರಾಜ್ಯಕ್ಕೆ ನೀನೇ ಒಡತಿಯಾಗುವಿ, II
ಓ ಆಕರ್ಷಕ ಚಲುವೇ, ಗೆದ್ದು ಭೂಮಂಡಲದI
ಎಲ್ಲ ರಾಜ್ಯಗಳನು ಒಪ್ಪಿಸುವೆ ರಾಜಾ ಜನಕನಿಗೆ, II
ಯಾರು ಇಲ್ಲ ನನಗೆ ಸಮ ಭೂಮಂಡಲದಲಿI
ನೋಡು ನನ್ನ ಮಹಾಶಕ್ತಿಯನು, II
ಸುರ ಅಸುರರ ಸಾಮ್ರಜ್ಯಗಳನ್ನು ಸೋಲಿಸಿ ಪತನಗೊಳಿಸಿವೆI
ಧ್ವಜಗಳನ್ನು, ಯಾರೂ ನನ್ನ ವಿರುದ್ಧ ತಲೆ ಎತ್ತರು, II
ಬಯಸು ನನ್ನ, ಶೃಂಗರಿಸಿಕೋ ಆಭರಣಗಳಿಂದ,I
ನೋಡುವೆ ಆಭರಣಧರಿತ ನಿನ್ನ ಅಂಗಗಳ ಅಂದ, II
ಓ ಸುಂದರಮುಖಿ ದಡ್ಡಳೇ,ನಿನ್ನ ಬಯಕೆಯಂತೆI
ಐಶ್ವರ್ಯವನು ಅನುಭವಿಸು, ಕುಡಿ, ಆನಂದಿಸು, II
ನಿನ್ನಿಚ್ಚೆಯಂತೆ ದಾನ ಮಾಡು ಸಿರಿ ಸಂಪತ್ತನ್ನು I
ವರ್ತಿಸು ಅಟಲ ಮುಕ್ತಳಂತೆ, ನೀಡು ಆದೇಶಗಳನು, II
ನನ್ನ ಕರುಣೆ ನಿನ್ನ ಲವಲವಿಕೆ, ಬಂಧುಗಳಿಗೆI
ಹಿತ, ನೋಡು ನನ್ನ ಖ್ಯಾತಿ ಸಂಪತ್ತನು ಸಂಚರಿಸಿ,II
ಓ ಚಲುವೇ,ನೆನಪಿಸಿ ಫಲವೇನು, ಸಂನ್ಯಾಸಿವೇಶದ ರಾಮನ,I
ಕಮರಿದ ವಿಜಯದಾಸೆ, ಗತದೈವ, ವನವಾಸ ದಿನಗಳ, II
ಉಪವಾಸ, ಧ್ಯಾನ, ನೆಲದಮೇಲೆ ಮಲಗುವದು ನಿರರ್ಥಕI
ಬದುಕಿಹನೋ, ಸತ್ತಿಹನೋ ರಾಮಾ, ಸಂದೇಹ,II
ಓ ಸೀತೆ, ಅವಕಾಶಸಿಗದು ರಾಮನಿಗೆ ನೋಡಲು ನಿನ್ನI
ಕಾರ್ಮೋಡಗಳಿಂದ ತುಂಬಿದ ಚಂದ್ರನ ಬೆಳಕಿನಂತೆ,II
ಕೀರ್ತಿಳನ್ನು ಹಿರಣ್ಯಕಶಪು ಕಸಿದಂತೆ ಇಂದ್ರನ ಕೈಯಿಂದI
ರಾಮನಿಗೆ ಅಸಾಧ್ಯ ಕಸಿಯಲು ನನ್ನ ಕೈಗಳಿಂದ ನಿನ್ನ, II
ಓ ಅಂದದ ನಗೆಯವಳೆ, ದಂತದವಳೆ, ಕಣ್ಣಿನವಳೆ, ದಡ್ಡಳೆ, I
ಕದಿಯುತ್ತಿರುವಿ ನನ್ನ ಹೃದಯ ಗರುಡ ಹಾವು ಕದ್ಧಂತೆ, II
ದುಸ್ಥಿತಿ, ಕೊಳಕು ರೇಷ್ಮೆ ಬಟ್ಟೆ, ಕೊರಗಿದ ದೇಹ, I
ಅಶೃಂಗಾರಿತ ನಿನ್ನ ನೋಡಿ ಕಳಕೊಂಡೆ ಪತ್ನಿಯರಲ್ಲಿ ಆಸಕ್ತಿ,II
ಓ ಜಾನಕಿ, ಸದ್ಗುಣ ಸಂಪನ್ನ ಯಾವಳೇ ಸ್ತ್ರೀI
ಸಾರ್ವಭೌಮಳು ನನ್ನ ಅಂತಪುರದಲಿ, II
ಓ ಕಪ್ಪುಕೇಶಿನಿ, ಸೇವೆ ಸಲ್ಲಿಸುವರು ನಿನಗೆI
ನನ್ನ ಅಂತಪುರದ ಸ್ತ್ರೀಯರು, ಅಪ್ಸರೆಯರು, II
ಓ ಸೀತೆ ರಾಮ ಸಮನಲ್ಲ ನನಗೆ, ಶೌರ್ಯದಲಿ, ಸಂಪತ್ತಿನಲಿ,I
ಖ್ಯಾತಿಯಲಿ, ತಪಸ್ಸಿನಲಿ, ಬಲದಲಿ; ಓ ಲಲನೇ,II
ಅನುಭೋಗಿಸು ನನ್ನ ಸುಖ ಸಂಪತ್ತನ್ನು, ಸಂಚರಿಸು, I
ಆಟವಾಡು ಸ್ವತಂತ್ರದಿ, ಭೋಗಿಸಲಿ ನಿನ್ನವರು ; ಓ ಕನಕವರ್ಣಿ, II
ಸಂಚರಿಸು ನನ್ನೊಂದಿಗೆ ಸಮುದ್ರದಡ, I
ಅರಣ್ಯಗಳಲಿ ಮುತ್ತಲಿ ಭ್ರಮರಗಳು ನಮ್ಮ ಹೂಹಾರಗಳ ಸುತ್ತ”.II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ತನ್ನ ಅಲಂಕಾರತ್ವ ಕಾವ್ಯ ಮೋಡಿಯನ್ನು ಮುಂದುವರೆಸುತ ಸೀತೆಯನ್ನು ಮೆಚ್ಚಿಸಲು ರಾವಣ ಬಳಸಿದ ತಂತ್ರಗಳನ್ನು ಮತ್ತು ರಾವಣ ಕಂಡ ಸೀತೆಯ ಚೆಲುವನ್ನು ವಿವರಿಸಿರುವರು: (1) ಹೆಣ್ಣಿಗೆ ಆಮಿಷಗಳನ್ನು ಒಡ್ಡುವದು: ಹೆಣ್ಣನ್ನು ಒಲಿಸಿಕೊಳ್ಳಲು ಆಭರಣ, ಸಂಪತ್ತಗಳ ಆಸೆ ಅವಳಗೆ ತೋರಿಸುವದು ಮತ್ತೊಂದು ತಂತ್ರ , ಅದನ್ನು ರಾವಣನು ಸೀತೆ ಪ್ರತಿ ಹೀಗೆ ಬಳಿಸಿರುವನು “ ನಾನು ನಿಜವಾಗಿಯು ನಿನ್ನನ್ನು ಪ್ರೀತಿಸುವೆ,… ನನಲ್ಲಿ ನಿನ್ನ ಮೆಚ್ಚುಗೆ ವ್ಯಕ್ತಪಡಿಸಿ ನೀನು ಪಡೆದುಕೋ ಅದ್ಭುತ ಆಭರಣ, ಶ್ರೀಗಂಧ, ಪರಿಮಳ ದ್ರವ್ಯ, ಅತ್ಯುತ್ತಮ ಪೇಯಿ, ಹಾಸಿಗೆ, ಆಸನಗಳ ಸೌಕರ್ಯ ಮತ್ತು ನೃತ್ಯ, ಗಾಯನ, ವಾದ್ಯಗಳ ಮನರಂಜನೆಗಳ ಲಾಭಗಳನ್ನು, … ಓ ಸೀತೆ ನೀನು ಸ್ತ್ರೀರತ್ನಾಮಣಿ, ನಿನ್ನ ಅಂಗಗಳು ಅಲಂಕಾರ ಯೋಗ್ಯ; ಓ ಅಂದದ ಮೈಕಟ್ಟಿನವಳೇ, ನಿನ್ನ ಅಂದದ ವರಯವ್ವನ ವ್ಯರ್ಥವಾಗುತಿರುವದು, ಪುನಃ ಹಿಂದಿರುಗಿ ಹರಿಯದ ನದಿನೀರಿನಂತೆ ಗತಿಸಿದ ಯವ್ವನ ಪುನಃ ಬರುವದಿಲ್ಲ; “ಓ ಸೀತೆ, ನೀನು ನನ್ನ ಪತ್ನಿಯಾಗು, ನಾನು ಎಲ್ಲಕಡೆಯಿಂದಲೂ ಅಪಹರಿಸ ತಂದ ನನ್ನ ಪತ್ನಿಯರಲಿಯೇ ಅಗ್ರಸ್ಥಾನ ಹೊಂದುವಿ; ನಾನು ಬಲವಂತವಾಗಿ ಪಡೆದ ನನ್ನ ರತ್ನ ವೈಢೂರ್ಯ ಸಂಪತ್ತು ಮತ್ತು ಲಂಕಾರಾಜ್ಯಕ್ಕೆ ನೀನೇ ಒಡತಿಯಾಗುವಿ,… ನಾನು ಗೆದ್ದು ಭೂಮಂಡಲದ ಎಲ್ಲ ರಾಜ್ಯಗಳನು ನಿನ್ನ ತಂದೆ ರಾಜಾ ಜನಕನಿಗೆ ಒಪ್ಪಿಸುವೆ, …. ನನ್ನ ಈ ಐಶ್ವರ್ಯವನ್ನು ನಿನ್ನ ಬಯಕೆಯಂತೆ ಅನುಭವಿಸು, ಮಧುರಸ ಕುಡಿದು ಆನಂದಿಸು; ಸಿರಿ ಸಂಪತ್ತನ್ನು ನಿನ್ನಿಚ್ಚೆಯಂತೆ ದಾನ ಮಾಡು; ವರ್ತಿಸು ಅಟಲ ಮುಕ್ತಳಂತೆ (ಸ್ವತಂತ್ರ ಜೀವಿಯಂತೆ), ನೀಡು ಆದೇಶಗಳನು; ನನ್ನ ಕರುಣೆ ನಿನ್ನ ಲವಲವಿಕೆಯಿಂದ ನಿನ್ನ ಬಂಧಗಳಿಗೆ ಹಿತ ನೀಡುವವು; ಎಲ್ಲ ಕಡೆ ಸಂಚರಿಸಿ ನನ್ನ ಖ್ಯಾತಿ ಸಂಪತ್ತನು ನೋಡು, …. ಕಮರಿದ ವಿಜಯದಾಸೆ, ಗತದೈವ, ಗತ ವನವಾಸ ದಿನಗಳ ನೆನಪು, ಉಪವಾಸ, ಧ್ಯಾನ, ನೆಲದಮೇಲೆ ಮಲಗುವದು ಇವೆಲ್ಲವೂ ನಿನಗೆ ಸಹಾಯ ಮಾಡುವದಿಲ್ಲ; ನನ್ನ ಸುಖ ಸಂಪತ್ತನ್ನು ಅನುಭೋಗಿಸು, ಸಂಚರಿಸು, ಆಟವಾಡು ಸ್ವತಂತ್ರವಾಗಿ, ನಿನ್ನ ಸಂಬಂಧಿಗಳೂ ಭೋಗಿಸಲಿ ಈ ಸುಖವನ್ನು”. (2)ಅನಿವಾರ್ಯ ಸ್ಥಿತಿ ನಿರ್ಮಾಣ: ಈ ಭೂಮಂಡಲದಲಿ ತನಗೆ ಸಮ ಯಾರು ಇಲ್ಲ, ತಾನು ಮಹಾಶಕ್ತಿವಮತನು: ಸುರ ಅಸುರರ ಸಾಮ್ರಾಜ್ಯಗಳನ್ನು ತಾನು ಸೋಲಿಸಿ ಅವರ ಧ್ವಜಗಳನ್ನು ಪತನಗೊಳಿಸಿದವ ಅರ್ಥಾತ್ ಅವರನ್ನು ನಿರ್ನಾಮ ಮಾಡಿರುವವ, ಯಾರೂ ತನ್ನ ವಿರುದ್ಧ ತಲೆ ಎತ್ತರು; ಈ ತನ್ನ ಪರಾಕ್ರಮ ತಿಳಿದು ಸೀತೆಗೆ ತನ್ನನ್ನು ಬಯಸು/ಒಪ್ಪಿಕೋ‌ ಎಂದು ರಾವಣ ಅವಳಿಗೆ ಅವಳ ಅಸಹಾಯಕತೆಯನ್ನು ಮನವಿಕೆ ಮಾಡಿಕೊಡುವನು; ತನ್ನ ಭದ್ರ ಲಂಕೆಯನ್ನು ಯಾರಿಂದಲೂ ಭೇಧಿಸಲು ಸಾಧ್ಯವಿಲ್ಲ, ತನ್ನನ್ನು ಸೋಲಿಸಿ ಸೀತೆಯನ್ನು ಬಿಡುಗಡೆಗೊಳಿಸಲು ರಾಮನಿಗೆ ಅಸಾಧ್ಯವೆಂಬ ಅನಿವಾರ್ಯ ಸ್ಥಿತಿ ಪ್ರಸಂಗ ನಿರ್ಮಿಸಿ ಸೀತೆಯನ್ನು ಪಡೆಯಲು ಮತ್ತೊಂದು ತಂತ್ರ ರಾವಣ ಹೀಗೆ ಬಳಿಸುವನು “ ರಾಮ, ಲಕ್ಷ್ಮಣರು ಜೀವಂತವರುವರೋ ಇಲ್ಲವೇ ಸತ್ತಿರುವರೋ ತಿಳಿಯದು, ಅವನು ಜೀವಂತವಿದ್ದರೂ, ಓ ಚಲುವೇ, ಸಂನ್ಯಾಸಿವೇಶದ ರಾಮನನ್ನು ನೆನಪಿಸಿಯೂ ನಿನಗೆ ಏನೂ ಪ್ರಯೋಜನೆಯಾಗದು” ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ಸೀತೆಗೆ ರಾವಣ ಪುಸಲಾಯಿಸುವನು. ಬೆದರಿಕೆಗೆ ಬಗ್ಗದ ಹೆಣ್ಣನ್ನು ಅವಳ ಅಂದದ ಹೊಗಳಿಕೆ, ಆಮಿಷಗಳೊಡ್ಡವ ಮತ್ತು ಸಮಾಧಾನದಿಂದ ಪುಸಲಾಯಿಸುವ ಮಾತುಗಳಿಂದ ಅವಳ ಮೆಚ್ಚುಗೆ ಪಡೆಯುವ ತಂತ್ರದ ಬಳಿಕೆ ರಾವಣ ಮಾಡಿದ್ದನು ಆದಿಕವಿ ವಿವರಿಸಿರುವರು.

ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ