ಸುಂದರಕಾಂಡ ರಾಮಾಯಣ ಭಾಗ-78

By admin


ಕೇಳಿ ರೌದ್ರ ರಾಕ್ಷಸನ ನುಡಿಗಳ, ಮಧ್ಯೆ ಹಿಡಿದು ಹುಲ್ಲು-ಕಡ್ಡಿ I
ಪತಿನಿಷ್ಠೆ ಸೀತೆ ಪ್ರತ್ಯುತ್ತರಿಸಿದಳು ದುಃಖದಿ ನಿಧಾನ: II
“ ಏಕಪತಿ ಪರಂಪರೆ ಶ್ರೇಷ್ಠ ಮನೆತನದವಳು ನಾ,I
ಎಸಗೆನು ಎಂದಿಗೂ ಈ ಕುಕೃತ್ಯವನು ನಾ, II
ಪರಪುರುಷನ ಪತ್ನಿ, ಪತಿನಿಷ್ಠಳು ನಾ,I
ಧರ್ಮನಿಷ್ಠಳು, ಸದ್ಮಾರ್ಗಸಹಚರಿ ನಾ, ಓ ರಾಕ್ಷಸನೇ, II
ರಕ್ಷಿಸಿಸು ಅನ್ಯಸ್ತ್ರೀಯನು, ರಕ್ಷಿಸಿದಂತೆ ನಿನ್ನ ಪತ್ನಿಯರನು,I
ಆದರ್ಶನಾಗು, ಸುಖ ಸ್ವ-ಪತ್ನಿಯರಲಿ ಕಾಣು, II
ಸ್ವ-ಪತ್ನಿಯಲಿ ಸುಖಕಾಣದವ ಚಪಲನು, ಚಂಚಲಿಂದ್ರಿಯವ,I
ಕೀಳು ಮನಸಿನವ ಪರಸ್ರ್ತೀ ಬಯಸುವ, ಇಲ್ಲವೇ II
ಒಳ್ಳೆ ಜನ ಇಲ್ಲಿ? ಅಥವಾ ಪಾಲಿಸುತ್ತಿಲ್ಲ ನೀ ಒಳ್ಳೆ ಜನರನ?I
ಪರಂಪರೆ ವಿರುದ್ಧ ನಿನ್ನ ನಡತೆಗೆ ಕಾರಣ ನಿನ್ನ ಮನ,II
ಒಯ್ಯುತ್ತಿಲ್ಲ ಸತ್ಯದತ್ತ ನಿನ್ನ ಮನI
ಅಧರ್ಮ ಎಸಗಿದ್ದಲಿ ನಾಶವಾದೀತು ರಾಕ್ಷಸಕುಲ, II
ಅನಿಯಂತ್ರಿತ ಮನಸ್ಸಿ ರಾಜನ ಅಧರ್ಮಮಾರ್ಗI
ಹಿಡಿದಲ್ಲಿ ನಾಶವಾಗುವದು ಅವನ ರಾಜ್ಯ ವ ಸಂಪತ್ತು, II
ಸರ್ವೋತ್ತಮಗಳ ಲಂಕಾನಗರಿ ನಾಶವದೀತುI
ಪಾಪದ ಕೃತ್ಯಗಳಿಂದ ನಿನ್ನ, II
ಓ ರಾವಣ, ಆನಂದಿಸುವವು ಸಕಲ ಜೀವಿಗಳುI
ಸ್ವ-ಕುಕೃತ್ಯಗಳಿಂದ ಅಲ್ಪಾಲೋಚಿ ಪಾಪಿಯ ನಾಶದಿ,II
‘ದುಷ್ಟರಾವಣ ತನ್ನ ನಾಶ ತಾನೇ ಅಮಂತ್ರಿಸಿಹನು’I
ಅಂದು ಕೊಳ್ಳುತಿಹರು ನಿನ್ನ ಪಾಪಕೃತ್ಯಗಳಿಂದ ಪೀಡಿತ ಜನರುII,
ಐಶ್ವರ್ಯ ಸಂಪತ್ತಿನ ಲೋಭಿ ನಾನಲ್ಲI
ಕಿರಣ ಬಿಟ್ಟಿರದಂತೆ ಸೂರ್ಯನ,ನಾ ರಾಮನ ಬಿಟ್ಟಿಲ್ಲ, II
ರಾಮನ ಬಾಹು ಎನಗೆ ತಲೆದಿಂಬವಿದ್ದಾಗ,I
ಬಯಸಲಿ ಪರರ ಬಾಹು ನಾನೇಕೇ? II
ಧಾರ್ಮಿಕ ವಚನಗಳಲಿ ಜ್ಞಾನ ವಿಭೂಣವಿದಂತೆI
ಯೋಗ್ಯಪತ್ನಿ ನಾ ನರಶ್ರೇಷ್ಠ ರಾಮನಿಗೆ,II
ಅರಣ್ಯದಲಿ ಹೆಣ್ಣಾನೆಯು ಗಂಡಾನೆ ಸೇರಿದಂತೆI
ಬಿಡು ರಾಮನ ಸೇರಲು ಎನಗೆ, II
ನರಶ್ರೇಷ್ಠ ರಾಮನನ್ನು ಸ್ನೇತನನ್ನಾಗಿ ಮಾಡಿಕೋ ನಿನ್ನ,I
ಭಯಾನಕ ಮೃತ್ಯುವಿನಿದ ಬದಕಿಸಿಕೊಳ್ಳಲು ನಿನ್ನ, II
ಆಶ್ರಯ ಬಯಸಿದವನಿಗೆ ರಕ್ಷಣೆ ನೀಡುವ ರಾಮನI
ಸ್ನೇಹ ಬಯಸಿದಲಿ ನೀ, ಪಡೆಯುವೆ ಜೀವದಾನ, II
ಕರುಣೆ ಬಯಸಿದವನಿಗೆ ರಕ್ಷಣೆ ನೀಡುವ ರಾಮನಿಗೆI
ಹಿಂದಿರುಗಿಸಿ ನನ್ನ,ಪಾತ್ರನಾಗು ಅವನ ಕೃಪೆಗೆ,II
ಹಿಂದಿರುಗಿಸಿ ನನ್ನ ರಾಮನಿಗೆ, ಓ ರಾವಣಾ ಸುದೈವಿಯಾಗು I
ಇಲ್ಲವೇ ನಾಶ ಹೊಂದುವಿ ಅನ್ಯಮಾರ್ಗದಿ,II
ವಜ್ರ-ಆಯುಧದಿ ಬದುಕಬಹುದು ನೀ,ಯಮನನಿಂದ ಬದುಕ ಬಹುದು ನೀ, I
ಆದರೆ ರಾಮನಿಂದ ನೀ ಬದುಕಲಸಾಧ್ಯ, II
ಸರ್ಪದಂತಹ ರಾಮ ಲಕ್ಷ್ಮಣರ ಚೂಪಾದ ಬಾಣಗಳುI
ನೆಲಕ್ಕುರುಳಿಸುವವು ನಿನ್ನ, ಲಂಕೆಯಲಿ ನಿನ್ನ, II
ಗಿಡಗದ ಪುಚ್ಚಗಳಿಂದ ಕಟ್ಟಿದ ಬಾಣಗಳುI
ಬೆನ್ನಟ್ಟಿ ವಧಿಸುವವು ಲಂಕಾ ತುಂಬ ರಾಕ್ಷಸರನು,II
ಸರ್ಪ ಎತ್ತಿದಂತೆ ಗರುಡ ನಿನ್ನ ಎತ್ತುವನು ರಾಮI
ನಿನ್ನಿಂದ ಕಿತ್ತುಕೊಂಡು ನನ್ನ, ಮರಳುವನು ರಾಮ,II
ಓ ರಾಕ್ಷಸನೇ, ಶವ-ಭೂಮಿಯಾಯಿತು ಜನಸ್ಥಾನ ರಾಕ್ಷಸರ ಸಂಹಾರದಿ, I
ನಿನ್ನ ಶಕ್ತಿಯನು ಕುಂದಿಸಿದೆ ಆ ಘಟನೆ, II
ಓ ನೀಚನೇ, ನನ್ನ ಅಪಹರಿಸಿರುವೆ ನೀI
ಇಲ್ಲದಾಗ ರಾಮ ಲಕ್ಷ್ಮಣರು ಆಶ್ರಮದಲಿ, II
ನಿನಗೆ ಅಸಾಧ್ಯ ಎದಿರು ನಿಲ್ಲಲು ರಾಮ ಲಕ್ಷ್ಮಣರ,I
ಓಡುವಿ ನಾಯಿಯಂತೆ ಹುಲಿ ವಾಸನೆ ಪಡೆದ, II
ನೀರು ಒಣಗಿಸಿದಂತೆ ಸೂರ್ಯ ನಿನ್ನ ಬದುಕು ಒಣಗಿಸುವರು,I
ನನ್ನ ಪತಿ ರಾಮ, ಸಹೋದರ ಲಕ್ಷ್ಮಣರು, II
ಸಿಡಿಲಿನಿಂದ ಮಹಾವೃಕ್ಷ ರಕ್ಷಿಸಲು ಹೇಗೆ ಅಸಾಧ್ಯವೋ,I
ನಿನ್ನ ರಕ್ಷಿಸಲು ಅಸಾಧ್ಯ ಕುಬೇರ ವರುಣನಿಂದಲೂ”. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಸೀತೆಯು ರಾವಣನಿಗೆ ನೀಡಿದ ದಿಟ್ಟೋತ್ತರ ಮತ್ತು ಸಲಹೆಗಳನ್ನು ಸೂಕ್ತ ಉಪಮಾಲಂಕಾರಗಳ ಮೂಲಕ ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು ಇಂತಿವೆ: (1) ಅನ್ಯಸ್ತ್ರೀ ರಕ್ಷಣೆ ರಾಜನ ಆದರ್ಶ: ಸೀತೆಯು ರಾವಣನಿಗೆ ಚಪಲನಾಗದೆ ಆದರ್ಶರಾಜನಾಗು ಎಂದು ಹೀಗೆ ಬುದ್ಧಿವಾದ ಮಾಡಿದಳು” ನಾನು ಪರಪುರುಷ ರಾಮನ ಪತ್ನಿ, ಪತಿನಿಷ್ಠಳು, ಧರ್ಮನಿಷ್ಠಳು, ಸದ್ಮಾರ್ಗಸಹಚರಿ; ಓ ರಾಕ್ಷಸನೇ, ನಿನ್ನ ಪತ್ನಿಯರನು ರಕ್ಷಿಸಿದಂತೆ ಅನ್ಯಸ್ತ್ರೀಯನು ರಕ್ಷಿಸಿಸು, ಇನ್ನೊಬ್ಬರಿಗೆ ಆದರ್ಶ ರಾಜನಾಗು, ನಿನ್ನ ಕಾಮ ಸುಖ ನಿನ್ನ ಸ್ವ-ಪತ್ನಿಯರಲಿ ಕಾಣು, ಸ್ವ-ಪತ್ನಿಯಲಿ ಸುಖಕಾಣದವನು ಚಪಲನು: ಚಂಚಲ-ಇಂದ್ರಿಯವ, ಕೀಳು ಮನಸಿನವ ಪರಸ್ರ್ತೀರ ಸುಖ ಬಯಸುವನು”. ವಿವಾಹಿತ ಪುರುಷ ಅಥವಾ ಮಹಿಳೆ ತಮ್ಮ ಇಂದ್ರಿಯ ಸುಖಗಳನ್ನು ತಮ್ಮ ಬಾಳ ಸಂಗಾತಿಯಲ್ಲಯೇ ಕಾಣುವುದು ವಿವಾಹಿತ ಧರ್ಮ ಎಂದು ಆದಿಕವಿ ಬೋಧಿಸಿರುವರು. (2) ಮನಸ್ಸಿನ ನಿಯಂತ್ರಣ ಮುಖ್ಯ: ಒಳ್ಳೆಯದು, ಕೆಟ್ಟದು, ಎಲ್ಲಕ್ಕೂ ಕಾರಣ ಮನುಷ್ಯನ ಮನಸ್ಸು ಎಂದ ಸತ್ಯದ ಅರಿವು ಸೀತೆಯು ರಾವಣನಿಗೆ ಮಾಡಲು ನುಡಿವಳು “ಒಳ್ಳೆ ಜನ ಲಂಕಾನಗರದಲ್ಲಿ ಇಲ್ಲವೇ? ಅಥವಾ ನೀನು ಒಳ್ಳೆ ಜನರನ ಸಲಹೆಗಳನ್ನು ಪಾಲಿಸುತ್ತಿಲ್ಲ, ಲೋಕ ಪರಂಪರೆ ವಿರುದ್ಧ ಈ ನಿನ್ನ ನಡತೆಗೆ ನಿನ್ನ ಮನಸ್ಸೇ ಕಾರಣ, ನಿನ್ನ ಮನ ನಿನ್ನನ್ನು ಸತ್ಯದತ್ತ ಒಯ್ಯುತ್ತಿಲ್ಲ: ನೀನು ಅಧರ್ಮ ಎಸಗಿದ್ದಲಿ ನಿನ್ನ ರಾಕ್ಷಸಕುಲ ನಾಶವಾದೀತು, ಎಚ್ಚರ; ಅನಿಯಂತ್ರಿತ ಮನಸ್ಸಿ ರಾಜನು ಅಧರ್ಮಮಾರ್ಗ ಹಿಡಿದಲ್ಲಿ ಅದು ಅವನ ರಾಜ್ಯ ಮತ್ತು ಸಂಪತ್ತುಗಳನ್ನು ನಾಶವಾಗುವದು, ನಿನ್ನ ಈ ಪಾಪದ ಕೃತ್ಯಗಳಿಂದ ಸರ್ವೋತ್ತಮಗಳ ಲಂಕಾನಗರಿ ನಾಶವದೀತು, ಎಚ್ಚರಾ”. ಮನುಷ್ಯನ ಉನ್ನತಿ ಮತ್ತು ಅವನತಿಗೆ ಅವನ ಮನಸ್ಸು ಕಾರಣ ಎಂಬ ಸತ್ಯ ತತ್ವ ವನ್ನು ಆದಿಕವಿ ವಾಲ್ಮೀಕಿ ಮಂಡಿಸಿರುವ, ಬೇಡರ ವೇದವ್ಯಾಸರು ತಮ್ಮ ಮಹಾಭಾರತ ಮಹಾಕಾವ್ಯದಲ್ಲಿ ಕೃಷ್ಣರ ಮೂಲಕ ಅರ್ಜುನನಿಗೆ ಮನುಷ್ಯನಿಗೆ ಅವನ ಮನಸ್ಸೆ ಮಿತ್ರ,ಅವನ ಮನಸ್ಸೆ ಶತ್ರು, ಮನಸ್ಸಿನಿಂದ ಉನ್ನತಿ,ಮನಸ್ಸಿನಿಂದ ಅವನತಿ ಎಂದು ವಾಲ್ಮೀಕಿ ಯ ಆಧ್ಯಾತ್ಮ ತತ್ವಗಳನ್ನು ಬೋಧಿಸಿರುವರು, (3) ದುಷ್ಟನು ತನ್ನ ನಾಶಕ್ಕೆ ತಾನೇ ಕಾರಣ: ಕುಕೃತ್ಯಗಳು ಮನುಷ್ಯನ್ನು ನಾಶದತ್ತ ಒಯ್ಯುವ ಅರಿವಿನ ಮಾತುಗಳನ್ನು ಸೀತೆ ರಾವಣನಿಗೆ ಹೀಗೆ ಎಚ್ಚರಿಸಿದಳು “ಸ್ವ-ಕುಕೃತ್ಯಗಳಿಂದ ಅಲ್ಪಾಲೋಚನೆಯ ಪಾಪಿಯ ನಾಶದಿಂದ ಸಕಲ ಜೀವಿಗಳು ಆನಂದಿಸುವವು, ನಿನ್ನ ಪಾಪಕೃತ್ಯಗಳಿಂದ ಪೀಡಿತ ಜನರು ದುಷ್ಟರಾವಣ ತನ್ನ ನಾಶ ತಾನೇ ಅಮಂತ್ರಿಸಿರುವನೆಂದು ಅಂದುಕೊಳ್ಳುತಿರುವರು”. (4) ಪತ್ನಿ ಪತಿಯ ಅವಿಭಾಜ್ಯ ಅಂಗ: ತಾನು ರಾಮನ ಅವಿಭಾಜ್ಯ ಅಂಗ ತನ್ನನ್ನು ಯಾವ ರೀತಿಯಿಂದಲೂ ರಾಮನಿಂದ ಬೇರ್ಪಡಿಸಲು ಅಸಾಧ್ಯವೆಂದು ಸೀತೆ ರಾವಣನಿಗೆ ಮನವರಿಕೆ ಹೀಗೆ ಮಾಡಿದಳು “ನಾನು ನಿನ್ನ ಐಶ್ವರ್ಯ ಸಂಪತ್ತಿನ ಲೋಭಿ ಅಲ್ಲ; ಕಿರಣವು ಸೂರ್ಯನನ್ನು ಬಿಟ್ಟಿರದಂತೆ ನಾನು ರಾಮನ ಬಿಟ್ಟಿರಲಾರೆ, ನನಗೆ ರಾಮನ ಬಾಹುವಿನ ತಲೆದಿಂಬವಿದ್ದಾಗ, ಬಯಸಲಿ ಪರರ ಬಾಹು ನಾನೇಕೇ? ಧಾರ್ಮಿಕ ವಚನಗಳಲಿ ಜ್ಞಾನ ವಿಭೂಣವಿದಂತೆ ನಾನು ನರಶ್ರೇಷ್ಠ ರಾಮನಿಗೆ ಯೋಗ್ಯಪತ್ನಿ; ನನ್ನನು ಬಿಡುಗಡೆ ಮಾಡು ಅರಣ್ಯದಲಿ ಹೆಣ್ಣಾನೆಯು ಗಂಡಾನೆ ಸೇರಿದಂತೆ ನಾನು ರಾಮನನ್ನು ಸೇರಲು”. (5) ಆಶ್ರಯ ಬಯಸಿದವರಿಗೆ ರಕ್ಷಣೆ: ತಪ್ಪೋಪಿಕೊಂಡು ಆಶ್ರಯ ಕೇಳಿದವರಿಗೆ ರಕ್ಷಣೆಕೊಡುವ ಪರಂಪರೆಯ ಪಾಲಕ ರಾಮನೊಂದಿಗೆ ಸ್ನೇಹ ಮಾಡಿಕೊಳ್ಳಲು ಸೀತೆಯು ರಾವಣನಿಗೆ ಸಂಭವಿಸಬಹುದಾದ ಅಹಿತಕರ ಘಟನೆಗಳಿಂದ ರಕ್ಷಿಸಿ ಕೊಳ್ಳಲು ಹೀಗೆ ಸಲಹೆ ನೀಡುವಳು “ನೀನು ನರಶ್ರೇಷ್ಠ ರಾಮನನ್ನು ನಿನ್ನ ಸ್ನೇತನನ್ನಾಗಿ ಮಾಡಿಕೋ ಮತ್ತು ಸಂಭವಿಸಬಹುದಾದ ಭಯಾನಕ ಮೃತ್ಯುವಿನನಿಂದ ನಿನ್ನನ್ನು ಬದಕಿಸಿಕೊಳ್ಳಲು; ನೀನು ರಾಮನ ಸ್ನೇಹ ಬಯಸಿದಲಿ ಅವನು ತನ್ನ ಆಶ್ರಯ ಬಯಸಿದವನಿಗೆ ರಕ್ಷಣೆ ನೀಡುವನು, ನೀನು ಜೀವದಾನ ಪಡೆಯುವೆ: ಕರುಣೆ ಬಯಸಿದವನಿಗೆ ರಾಮನು ರಕ್ಷಣೆ ನೀಡುವನು ಅವನಿಗೆ ನನ್ನನ್ನು ಹಿಂದಿರುಗಿಸಿ ಅವನ ಕೃಪೆಗೆ ಪಾತ್ರನಾಗು; ಓ ರಾವಣಾ, ಸುದೈವಿಯಾಗು ಇಲ್ಲವೇ ಅನ್ಯಮಾರ್ಗದಿಮದ ನಾಶ ಹೊಂದುವಿ”. (6) ತಪ್ಪನ್ನು ಮನವರಿಕೆ ಮಾಡಿಕೊಳ್ಳುವದು: ಮಾಡಿದ ತಪ್ಪು ಮತ್ತು ಅದರ ಭಯಂಕರ ಪರಿಣಾಮಗಳನ್ನು ಮನವರಿಕೆ ಮಾಡಿಕೊಂಡು ಸುಮಾರ್ಗ ಹಿಡಿಯಲು ಸೀತೆಯು ರಾವಣನಿಗೆ ಎಚ್ಚರಿಕೆ ಹೀಗೆ ನೀಡುವಳು “ಓ ನೀಚನೇ, ರಾಮ ಲಕ್ಷ್ಮಣರು ಆಶ್ರಮದಲಿ ಇಲ್ಲದಾಗ ನೀನು ನನ್ನನ್ನು ಅಪಹರಿಸಿರುವೆ, ನಿನಗೆ ರಾಮ ಲಕ್ಷ್ಮಣರ ಎದಿರು ನಿಲ್ಲಲು ಅಸಾಧ್ಯ; ಹುಲಿ ವಾಸನೆ ಪಡೆದ ನಾಯಿಯಂತೆ ನೀನು ಓಡುವಿ,… ಜನಸ್ಥಾನವು ರಾಮನಿಂದ ರಾಕ್ಷಸರ ಸಂಹಾರದಿಂದಾಗಿ ಅದು ಶವಗಳ ಭೂಮಿಯಾಯಿತು, ಜನಸ್ಥಾನದ ಘಟನೆಯು ನಿನ್ನ ಶಕ್ತಿಯನು ಕುಂದಿಸಿದೆ;… ನೀನು ವಜ್ರಆಯುಧ ಪ್ರಹಾದಿಂದ ಬದುಕಬಹುದು, ನೀನು ಯಮನನಿಂದ ಬದುಕಬಹುದು ಆದರೆ ರಾಮನಿಂದ ನೀನು ತಪ್ಪಿಕೊಂಡು ಬದುಕಲು ಸಾಧ್ಯವಿಲ್ಲ;… ಸಿಡಿಲಿನಿಂದ ಮಹಾವೃಕ್ಷ ರಕ್ಷಿಸಲು ಹೇಗೆ ಅಸಾಧ್ಯವೋ, ನಿನ್ನ ರಕ್ಷಿಸಲು ಕುಬೇರ ವರುಣನಿಂದಲೂ ಸಾಧ್ಯವಿಲ್ಲ, ನಿನ್ನ ಲಂಕೆಯಲಿಯೇ ಸರ್ಪದಂತಹ ರಾಮ ಲಕ್ಷ್ಮಣರ ಚೂಪಾದ ಬಾಣಗಳು ನಿನ್ನನ್ನು ನೆಲಕ್ಕುರುಳಿಸುವವು; ಗಿಡಗದ ಪುಚ್ಚಗಳಿಂದ ಕಟ್ಟಿದ ರಾಮ ಲಕ್ಷ್ಮಣರ ಬಾಣಗಳು ರಾಕ್ಷಸರನು ಲಂಕಾ ತುಂಬ ಬೆನ್ನಟ್ಟಿ ವಧಿಸುವವು; ಸರ್ಪವನ್ನು ಎತ್ತಿಕೊಂಡಂತೆ ಗರುಡ ನಿನ್ನನ್ನು ಎತ್ತುವನು ರಾಮನ ಹಾಗು ನಿನ್ನಿಂದ ನನ್ನನ್ನು ಕಿತ್ತುಕೊಂಡು/ಬಿಡುಗಡೆಗೊಳಿಸಿಕೊಂಡು ಅಯೋಧ್ಯಗೆ ಮರಳುವನು ರಾಮ”. ತಪ್ಪು/ಅಪರಾಧ ಮಾಡಿದವನು ತನ್ನ ತಪ್ಪಿನ ಬಗ್ಗೆ ಅರಿವು ಮಾಡಿಕೊಂಡು ಸದ್ಮಾರ್ಗ ಹಿಡಿಯುವದು ಲೇಸು ಎಂದು ಆದಿಚಿಂತಕ ವಾಲ್ಮೀಕಿಯು ಲೋಕ ತತ್ವವನ್ನು ಬೋಧಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ