ಸುಂದರಕಾಂಡ ರಾಮಾಯಣ ಭಾಗ-79

By admin


ಪುರುಷ ರಾಕ್ಷಸೇಶ್ವರ ಕೇಳಿ ಅಹಿತ ಮಾತು ಸೀತೆಯ,I
ಪ್ರೀಯದರ್ಶನಿ ಸೀತೆಗೆ ಹಿತವಾಗಿ ನುಡಿದ:II
“ಯಾವ್ಯಾವಾಗ ಪುರುಷ ಸ್ತ್ರೀಗೆ ಅಸಭ್ಯಮಾತುI
ಆಡುವನೋ, ನಿಯಂತ್ರಿತಳು ಆಗಾಗ ಅವಳು, II
ಯಾವ್ಯಾವಾಗ ಪುರುಷ ಸ್ತ್ರೀಗೆ ಪ್ರೀಯಮಾತುI
ಆಡುವನೋ, ತಿರಸ್ಕೃತನು ಆಗಾಗ ಅವನು, II
ನಿನಗಾಗಿ ಚಿಗರುವ ಬಯಕೆ ನಿಯಂತ್ರಿಸುತಿದೆ ನನ್ನ ಕ್ರೋಧ I
ಕೆಟ್ಟದಾಗಿ ಓಡುವ ಕುದುರೆ ನಿಯಂತ್ರಿಸಿದಂತೆ ಸಾರಥಿ,II
ಬಯಕೆ ಕೆಟ್ಟದ್ದು, ಮನುಷ್ಯ ಬಯಕೆ ಬಂಧಿತನು,I
ಚಿಗುರಿಸುವದು ಬಯಕೆ ಮನುಷ್ಯನಲಿ ಸಹಾನುಭೂತಿ, ಸ್ನೇಹ,II
ಓ ಚಲುವೆ,ನಿನ್ನ ವಧಿಸುತ್ತಿಲ್ಲ ನಾ ಈ ಕಾರಣಕ್ಕೆ,I
ರಾಮಾಸಕ್ತಳು ನೀ ಯೋಗ್ಯಳು ಹಿಂಸೆ, ವಧೆಗೆ, II
ಓ ಸೀತೆ, ನನ್ನ ನಿಂದಿಸಿದ ನಿನ್ನ ಭಾಷೆಗಾಗಿI
ಭಯಂಕರ ಮರಣದಂಡನೆಗೆ ಯೋಗ್ಯಳು ನೀ,II
ಓ ಸೀತೆ, ನೀಡುವೆ ನಿನಗೆ ಎರಡು ಮಾಸಗಳ ಗಡವುI
ಬಂದು ಸೇರು ನನ್ನ ಹಾಸಿಗೆ ಸ್ವಇಚ್ಚೆಯಿಂದ, II
ಸ್ವೀಕರಿಸದಿದ್ದರೆನ್ನ ನೀ ಪತಿಯೆಂದು ಮೇಲಿನೇರಡು ಮಾಸಗಳಲಿ, I
ಉಪಹಾರಕ್ಕಾಗಿ ನಿನ್ನ ವಧಿಸುವೆ ಪಾಕಶಾಲೆಯಲಿ”; II
ಸೀತೆಯನು ಗದ್ದರಿಸಿದ ಕ್ರೋಧಿತ ರಾವಣ ಕಂಡು I
ಕಣ್ಣೀರು ಸುರಿಸಿದರು ದೇವ ಗಂಧರ್ವ ಸ್ತ್ರೀಯರು, II
ಸಂತೈಯಿಸಿದರು ಬೆದರಿದ ಸೀತೆಯನು ಕೆಲವರು ತುಟಿಗಳ, I
ಕೆಲವರು ಮುಖ ಹಾವಭಾವ, ಕಣ್ಣು ಸನ್ನೆಗಳಿಂದ,II
ತಿಳಿದು ಅವರ ಸಮಾದಾನ ಸನ್ನೆ ಸದ್ಗುಣಿ ಸೀತೆI
ತನ್ನ ವ ರಾವಣನ ಹಿತಕ್ಕಾಗಿ ನುಡಿದಳು: II
“ಈ ದುಷ್ಕೃತ್ಯದಿಂದ ಯಾರು ನಿನ್ನ ತಡೆಯುವರೋI
ಖಂಡಿತ, ಅವರೆ ನಿನ್ನ ಹಿತೈಸಿ, ತಿಳಿದುಕೋ, II
ರಾಮನ ಪತ್ನಿ ನನಗೆ ನೀನಾಡಿದ ಪಾಪದ I
ಮಾತುಗಳ ಪ್ರಾಯಶ್ಚಿತ ನೀ ಮಾಡಿಕೊಳ್ಳುವಿ; II
ತುಚ್ಚವಾಗಿ ಮಾತಾಡಿದ ನಿನಗೆI
ಗೊತ್ತಿಲ್ಲ ರಾಮನ ಬಗ್ಗೆ ಹೆಚ್ಚು , II
ಓ ದುಷ್ಟನೇ, ಯಾವ ಕಾರಣಕ್ಕೆI
ದಿಟ್ಟಿಸುತ್ತಿವೆ ಎನ್ನ ನಿನ್ನ ಕೋಪಿಷ್ಟ,ಠಕ್ಕ ಕಣ್ಣುಗಳು? II
ಸದ್ಗುಣಿ ರಾಮನ ಪತ್ನಿ, ದಶರಥನ ಸೊಸೆ ನನಗೆI
ಮಾತನಾಡಲು ಹೀಗೆ ನಿನ್ನ ನಾಲಿಗೆ ಬೀಳಲಿಲ್ಲವೇ? II
ಓ ದಶಗ್ರೀವ, ನಿಸ್ಸಂದೇಹ, ರಾಮನ ಕೋಪಕೆ ಭಸ್ಮನಾಗುವಿ ನೀI
ಭಸ್ಮಿಸಲಾರೆ ನಾ ನಿನ್ನ ಎನ್ನ ತೇಜದಿ,II
ನಿಸ್ಸಂದೇಹ,ಅಪಹರಿಸಲು ನನ್ನ ಅಸಾಧ್ಯ ನಿನಗೆ, I
ನಿನ್ನ ಅಂತ್ಯಕ್ಕಾಗಿ ಈ ಘಟನೆ ನಡೆದಿದೆ; II
ನಿನ್ನ ನಾಶಕ್ಕಾಗಿ ನಿನ್ನ ಪಾಪ-ಕೃತ್ಯಗಳುI
ನಿನ್ನಿಂದ ಮಾಡಿಸಿವೆ ನನ್ನ ಅಪಹರಣ ಕುಕೃತ್ಯ”, II
ಕೇಳಿ ಕಠೋರುಕ್ತಿಗಳ ಸೀತೆಯಿಂದ ಹಿಂದಿರುಗಿI
ಸೀತೆ ನೋಡಿದ ರಾಮಣ ಕ್ರೂರ ದೃಷ್ಠಿಯಿಂದ;II
ಮಹಾಕಾಯ, ಉದ್ದ ಕೊರಳ, ಅಜಾನುಬಾಹುI
ಆಭರಣ ಹೂಮಾಲೆಗಳ ಭೂಷಿತ ರಾವಣ, II
ಹಾವಿನಂತೆ ದಿಟ್ಟಿಸುತ ಸೀತೆಯನುI
ಉರಿಗಣ್ಣ ರಾವನ ಸೀತೆಗೆ ನುಡಿದ:II
“ ಓ ದರಿದ್ರ ರಾಮನ ಭಕ್ತೆ, ನಸುಕನ್ನು ಸೂರ್ಯI
ನಾಶಪಡಿಸಿದಂತೆ, ನಾಶ ಪಡಿಸುವೆ ನಿನ್ನ”, II
ಶತ್ರುಗಳನ್ನು ಗೋಳಾಡಿಸಿದ ರಾವಣ ಸೀತೆಗೆ ನುಡಿಯುತ I
ಆಜ್ಞಾಪಿಸಿದ ರಾಕ್ಷಸಿಯರಿಗೆ, “ರಾಕ್ಷಸಿಯರೇ, ಎಸಗಿ II
ನಿಮ್ಮ ಸಾಧನಗಳಿಂದ ಸ್ವಯಂ ಅರ್ಪಿಸುವಂತೆ I
ಸೀತೆಯನು ಪಳಗಿಸಿ, ಹಿತದಿಂದಲೋ ಅಹಿತದಿಂದಲೋ,II
ಮುದ್ದು ಮಾತಗಳಿಂದಲೋ, ಕಾಣಿಕೆಯಿಂದಲೋ,I
ಶಿಕ್ಷೆಯಿಂದಲೋ, ಪಳಗಿಸಿ ಸೀತೆಯನ”, II
ಕೇಳಿ ರಾವಣನ ಆಜ್ಞೆ, ರಾಕ್ಷಸಿ ಧನ್ಯಮಾಲಿನಿI
ಬಂದು ರಾವಣ ಬಳಿ ಅಪ್ಪಿಕೊಂಡು, ನುಡಿದಳು: II
ಓ ರಾಕ್ಷಸ ರಾಜನೇ, ನನ್ನೊಂದಿಗೆ ಸರಸವಾಡುI
ಬೆನ್ನು ಬಿದ್ದಿರುವೇಕೇ ಈ ಕ್ರೂರ, ಕಳೇಹಿನ ಸೀತೆಯ?II
ಓ ರಾಜನೇ, ನಿನ್ನ ಸಿರಿ ಸಂಪತ್ತು ಐಶ್ವರ್ಯI
ಭೋಗಿಸುವ ದೈವ ಸೀತೆಗಿಲ್ಲ, ಖಂಡಿತ, II
ಕಾಮ-ಬಯಕೆಯಿಲ್ಲದ ದೇಹವನು ಬಯಕೆಯ ದೇಹದI
ಸಂಭೋಗದಿ ನೋವು ಸಿಗುವದು, ಸುಖ ಅಲ್ಲಾ; II
ಸ್ವ ಇಚ್ಚಿಸಿದ ಸ್ತ್ರೀಯಿಂದ ಸಿಗುವದುI
ಪ್ರೇಮ, ಕಾಮ ಸುಖ, ನಿಸ್ಸಂದೇಹ”,II
ಕೇಳಿ ರಾಕ್ಷಸಿಯ ಕಾಮ-ಬಯಕೆ ನುಡಿI
ನಡೆದ ರಾವಣ ಹಿಂದಿರುಗಿ ನೋಡುತ, II
ಭೂಮಿ ನಡುಗುತಿತ್ತು ರಾವಣನ ಹೆಜ್ಜೆಗಳಿಗೆ,I
ಅಂತಪುರ ಪ್ರವೇಶಿಸಿದ ಕಾಮ-ಜ್ವಾಲೆ ಸೂರ್ಯನಂತೆ, II
ದೇವ ನಾಗ ಗಂಧರ್ವ ಸ್ತ್ರೀಯರುI
ರಾವಣ ಜತೆ ಸೇರಿದರು ಅಂತಪುರ. II
ಸುಂದರ ಕಾಂಡ

ಸೀತೆ ಮತ್ತು ರಾವಣರ ಸಂವಾದ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಸ್ತ್ರೀಸಂವೇದನೆ, ವ್ಯವಹಾರ, ಮನಷ್ಯನ ಬಯಕೆ, ಮಾತಿನ ಚಕಮಕಿ, ಭೋಗಸುಖ ತತ್ವ ಇತ್ಯಾದಿ ಕರಿತು ವಿವರಿಸಿರುವರು, ಅದರಲ್ಲಿ ಮುಖ್ಯಾಂಶಗಳು ಇಂತಿವೆ: (1) ಸ್ತ್ರೀ-ಸ್ವಭಾವದ ತಪ್ಪು ಗ್ರಹಿಕೆ: ಸೀತೆಯ ಅಹಿತ ಮಾತುಗಳನ್ನು ಕೇಳಿದ ರಾವಣನು ಸ್ತ್ರೀಯ ಸ್ವಭಾವದ ಬಗ್ಗೆ ತನ್ನ ಗ್ರಹಿಕೆಯನ್ನು ಹೀಗೆ ವ್ಯಕ್ತ ಪಡಿಸಿದನು “ ಪುರುಷ ಯಾವ್ಯಾವಾಗ ಸ್ತ್ರೀಗೆ ಅಸಭ್ಯಭಾಷೆ ಆಡುವನೋ, ಆಗಾಗ ಅವಳು ನಿಯಂತ್ರಿತಳು, ಯಾವ್ಯಾವಾಗ ಪುರುಷ ಪ್ರೀಯಭಾಷೆ ಆಡುವನೋ, ಆಗಾಗ ಅವನು ಅವಳಿಂದ ತಿರಸ್ಕೃತನು” ಅರ್ಥಾತ್ ಸುರು ಸ್ತ್ರೀ ಯನ್ನು ಒಲಿಸಿಕೊಳ್ಳಲು ಅವಳನ್ನು ಕೆಟ್ಟ ಮಾತುಗಳಿಂದ ಹೆದರಿಸಬೇಕು, ಹೀಗೆ ತ್ರೇತಾಯುಗದಲಿ ಸ್ತ್ರೀ-ಸ್ವಭಾವ ಕುರಿತು ಇದ್ದ ಈ ತಪ್ಪು ಗ್ರಹಿಕೆಯನ್ನು ರಾವಣನ ಮೂಲಕ ಆದಿಕವಿ ವ್ಯಕ್ತಪಡಿಸಿರುವರು, ಇಂತಹ ತಪ್ಪು ಗ್ರಹಿಕೆಯಿಂದ ಸ್ತ್ರೀ ಮೇಲೆ ದೌರ್ಜನ್ಯ ಹೆಚ್ಚುತ ಬಂದಿದೆ. (2) ಬಯಕೆ ಮನುಷ್ಯನನ್ನು ದುರ್ಬಲಗೊಳಿಸುವದು: ಸೀತೆಯಲ್ಲಿ ಮೂಡಿದ ರಾವಣನ ಸ್ನೇಹ, ಪ್ರೇಮ ಕಾಮ ಬಯಕೆಯು ಅವನನ್ನು ಸೀತೆ ಎದಿರು ದುರ್ಬಲಗೊಳಿಸಿತು, ಅದನ್ನು ರಾವಣನು ಹೀಗೆ ವ್ಯಕ್ತ ಪಡಿಸಿದನು “ಓ ಸೀತೆ, ನನ್ನ ಕ್ರೋಧವನ್ನು ನಿನ್ನ ವಿಷಯದಲಿ ಚಿಗರುವ ನನ್ನ ಬಯಕೆಯು ನಿಯಂತ್ರಿಸುತಿದೆ ಉತ್ತಮ ಸಾರಥಿ ಕೆಟ್ಟದಾರಿಯಲಿ ಓಡುವ ಕುದುರೆ ನಿಯಂತ್ರಿಸಿದಂತೆ; ಮನುಷ್ಯನ ಬಯಕೆ ಕೆಟ್ಟದ್ದು, ಮನುಷ್ಯ ಬಯಕೆಯಿಂದ ಬಂಧಿತನು, ಬಯಕೆಯು ಮನುಷ್ಯನಲಿ ಸಹಾನುಭೂತಿ, ಸ್ನೇಹ ಚಿಗುರಿಸುವದು; ಓ ಚಲುವೆ, ನಿನ್ನಲ್ಲಿ ಮೂಡಿದ ನನ್ನ ಸ್ನೇಹ ಸಹಾನುಭೂತಿ ಕಾರಣಕ್ಕಾಗಿ ನಾನು ನಿನ್ನ ವಧಿಸುತ್ತಿಲ್ಲ”.ಹೀಗೆ ಅದರ ಮುಖೇನ ಆದಿಕವಿ ಬಯಕೆ ಕುರಿತು ಪರಿಭಾಷೆ ನೀಡಿರುವ, (3) ಶತ್ರು ಗುಂಪಿನವರು ಶಿಕ್ಷೆಗೆ ಯೋಗ್ಯ: ರಾಮನಿಂದ ಅವಮಾನಿತಳಾದ ಸಹೋದರಿ ಸೇಡು, ಖರ ಮತ್ತು ದುಷಾಣರ ಹತ್ಯೆ, ಜನಸ್ಥಾನ ಕಳಕೊಂಡ ಸಿಟ್ಟು, ಅವು ಸಹಜವಾಗಿ ರಾವಣನಲ್ಲಿ ರಾಮನ ವಿರುದ್ಧ ಸೇಡಿ ಹೊಗೆಯಾಗಿ ಆಡುತಿದ್ದವು ಕಾರಣ ಅವನಿಗೆ ರಾಮನ ಗುಂಪಿನವರು ವೈರಿಗಳಂತೆ ಕಾಣುತಿದ್ದರು, ಆದಕಾರಣ ರಾವಣನು ಸೀತೆಗೆ ಹೀಗೆ ನುಡಿದನು “ರಾಮಾಸಕ್ತಳು ನೀನು, ಹಿಂಸೆ ಮತ್ತು ವಧೆಗೆ ಯೋಗ್ಯಳು; ಓ ಸೀತೆ, ನನ್ನನ್ನು ನಿಂದಿಸಿದ ನಿನ್ನ ಭಾಷೆಗಾಗಿ ನೀನು ಭಯಂಕರ ಮರಣದಂಡನೆಗೆ ಯೋಗ್ಯಳು”. (4) ಸೀತಾ ಸ್ವ ಸಮರ್ಪನೆ,ರಾವಣನ ಇಚ್ಚೆ: ಹಲವಾರು ಸ್ತ್ರೀಯರನ್ನು ಬಲತ್ಕರಿಸಿದ ಹಿನ್ನೆಲೆಯುಳ್ಳ ರಾವಣ ಸೀತೆಯಿಂದ ಸ್ವಯಂ ಸಮರ್ಪಣೆಗೆ ಹಾತೋರೆದು ಹೀಗೆ ನುಡಿದನು “ ಓ ಸೀತೆ, ನೀಡುವೆ ನಿನಗೆ ಎರಡು ಮಾಸಗಳ ಗಡವು ನೀನಾಗಿಯೇ ಸ್ವಯಿಚ್ಚೆಯಿಂದ ನನ್ನ ಹಾಸಿಗೆ ಬಂದು ಸೇರು, ಈ ಎರಡು ಮಾಸಗಳಲ್ಲಿ ನೀನು ನನ್ನನ್ನು ನಿನ್ನ ಪತಿಯೆಂದು ಸ್ವೀಕರಿಸದಿದ್ದರೆ ನಾನು ನನ್ನ ಉಪಹಾರಕ್ಕಾಗಿ ಪಾಕಶಾಲೆಯಲಿ ನಿನ್ನ ವಧಿಸುವೆ, … ಓ ದರಿದ್ರ ರಾಮನ ಭಕ್ತೆ, ನಸುಕನ್ನು ಸೂರ್ಯ ನಾಶಪಡಿಸಿದಂತೆ ನಾನು ನಿನ್ನ ನಾಶ ಪಡಿಸುವೆ ಕ್ಷಣಾರ್ಧದಲ್ಲಿ” ಎನ್ನುತ ರಾವಣನು ಆಜ್ಞಾಪಿಸಿದ ರಾಕ್ಷಸಿಯರಿಗೆ “ರಾಕ್ಷಸಿಯರೇ, ನಿಮ್ಮ ಸಾಧನಗಳಿಂದ ಬಲಪ್ರಯೋಗಿಸಿ ನನಗೆ ಸ್ವಯಂ ಅರ್ಪಿಸುವಂತೆ ಸೀತೆಯನು ಪಳಗಿಸಿರಿ; ಹಿತದಿಂದಲೋ, ಅಹಿತದಿಂದಲೋ, ಮುದ್ದು ಮಾತಗಳಿಂದಳೋ, ಕಾಣಿಕೆಯಿಂದಲೋ, ಶಿಕ್ಷೆಯಿಂದಲೋ, ಸೀತೆಯನ್ನು ಪಳಗಿಸಿ”. ಯಾವುದೇ ಮಾರ್ಗದಿಂದ ಸೀತೆಯನ್ನು ಸ್ವಯಂ ಸಮರ್ಪಣೆಗೆ ಸಿದ್ಧಗೊಳಿಸಲು ರಾವಣ ಮುಂದಾದ. ಇದು ರಾವಣನಲ್ಲಿ ಸೀತೆ ಮೇಲಿದ್ದ ಪ್ರೇಮವನ್ನು ಸೂಚಿಸುವದು.ಈ ಸಂದರ್ಭದಲ್ಲಿ ರಾವಣನ್ನು ನರಭಕ್ಷಕ ಎಂಬ ವಿಷಯ ಅವನ ಮಾತಿನಿಂದ ತಿಳಿದು ಬರುವದು, ನರಬಲಿ, ನರಭಕ್ಷ ಅಂದಿನ ಆಚರಣೆಗಳು ಆಗಿದ್ದು ಸ್ಪಷ್ಟವಾಗಿ ತಿಳಿದು ಬರುವದು, (5) ಸ್ತ್ರೀಸಂವೇದನೆ: ಸೀತೆಯನು ಗದ್ದರಿಸಿದ ಕ್ರೋಧಿತ ರಾವಣನನ್ನು ಕಂಡು ದೇವ ಗಂಧರ್ವ ಸ್ತ್ರೀಯರು( ರಾವಣನ ಪತ್ನಿಯರು) ಕಣ್ಣೀರು ಸುರಿಸಿದರು ಮತ್ತು ರಾವಣನಿಗೆ ಬೆದರಿದ ಸೀತೆಯನು ಸಂತೈಯಿಸಿದರು, ಇದು ತಮ್ಮಂತೆ ಸೀತೆಯ ಮೇಲಿನ ದೌರ್ಜನ್ಯ ಕಂಡು ಮರುಗಿದ ರಾವಣ-ಪೀಡಿತ ರಾಣಿಯರ ಮನಸ್ಥಿತಿಯನ್ನು ಪ್ರತಿನಿಧಿಸುವದು. (6) ಪಾಪ-ಕೃತ್ಯಗಳು, ನಾಶಕ್ಕೆ ಕಾರಣ: ತನ್ನ ಮೇಲೆ ಎಸಗುವ ದುಷ್ಕೃತ್ಯ ವಿರುದ್ಧ ಸೀತೆ ರಾವಣನಿಗೆ ಎಚ್ಚರಿಸುವ ಮಾತುಗಳನ್ನು ಹೀಗೆ ಆಡುವಳು “ಈ ದುಷ್ಕೃತ್ಯದಿಂದ ಯಾರು ನಿನ್ನ ತಡೆವರೋ ಖಂಡಿತ, ಅವರೆ ನಿನ್ನ ಹಿತೈಸಿಯೆಂದು ತಿಳಿದುಕೋ, ರಾಮನ ಪತ್ನಿ ನನಗೆ ನೀನಾಡಿದ ಪಾಪದ ಮಾತುಗಳ ಪ್ರಾಯಶ್ಚಿತ ನೀನು ಮಾಡಿಕೊಳ್ಳುವಿ; ತುಚ್ಚವಾಗಿ ಮಾತಾಡಿದ ನಿನಗೆ ರಾಮನ ಬಗ್ಗೆ ಹೆಚ್ಚು ಗೊತ್ತಿಲ್ಲ,.. ಓ ದುಷ್ಟನೇ, ಯಾವ ಕಾರಣಕ್ಕೆ ನಿನ್ನ ಕೋಪಿಷ್ಟ, ಠಕ್ಕ ಕಣ್ಣುಗಳು ನನ್ನನ್ನು ದಿಟ್ಟಿಸುತ್ತಿವೆ? ಸದ್ಗುಣಿ ರಾಮನ ಪತ್ನಿ, ದಶರಥನ ಸೊಸೆ ನನಗೆ ನೀನು ಹೀಗೆ ಮಾತನಾಡಲು ನಿನ್ನ ನಾಲಿಗೆ ಕಡಿದು ಬೀಳಲಿಲ್ಲವೇ? ಓ ದಶಗ್ರೀವ, ನಿಸ್ಸಂದೇಹ, ನೀನು ರಾಮನ ಕೋಪಕೆ ಭಸ್ಮನಾಗುವಿ. ನನ್ನ ತೇಜದಿಂದ (ಶಾಪದಿಂದ) ನಿನ್ನನು ನಾನು ಭಸ್ಮಿಸಲಾರೆ, … ನಿಸ್ಸಂದೇಹ, ನಿನಗೆ ನನ್ನ ಅಸಾಧ್ಯ ಅಪಹರಿಸಲು, ಈ ಅಪಹರಣ ಘಟನೆ ಕೆವಲ ನಿನ್ನ ಅಂತ್ಯಕ್ಕಾಗಿ ನಡೆದಿದೆ; ನಿನ್ನ ನಾಶಕ್ಕಾಗಿ ನಿನ್ನ ಪಾಪ-ಕೃತ್ಯಗಳು ನಿನ್ನಿಂದ ಮಾಡಿಸಿವೆ ನನ್ನ ಅಪಹರಣ ಕುಕೃತ್ಯವನು”. ರಾವಣನ ಕುಕೃತ್ಯಗಳೇ ಅವನ ನಾಶಕ್ಕೆ ಕಾರಣವಾದವೆಂಬ ಸತ್ಯವನ್ನು ಆದಿಕವಿ ಸೂಚ್ಯವಾಗಿ ತಿಳಿಸಿರುವರು. (7) ಕಾಮತೃಪ್ತಿಗೆ ದೇಹದ ಬಯಕೆ ಮುಖ್ಯ: ಗಂಡಾಗಲಿ, ಹೆಣ್ಣಾಗಲಿ, ಅವರಲ್ಲಿ ಲೈಂಗಿಕ ತೃಷೆ ಕಂಡಾಗ ಪರಸ್ಪರರ ದೇಹದ ಬಯಕೆಯು ಇದ್ದಾಗ ಮಾತ್ರ ಅವರಿಗೆ ಸಮಾಗಮದಿಂದ ಸುಖ ತೃಪ್ತಿ ಸಿಗುವದು, ಇಲ್ಲವಾದಲ್ಲಿ ಅದು ದೈಹಿಕ, ಮಾನಸಿಕ ಹಿಂಸೆ ನೀಡುವ ಬಲತ್ಕಾರವಾಗುವದು; ಆದಿಕವಿ ವಾಲ್ಮೀಕಿಯು ಈ ಲೈಂಗಿಕ ತತ್ವ ಚಿಂತೆಯನ್ನು ಧನ್ಯಮಾಲಿನಿ ಹೆಸರಿನ ರಾಕ್ಷಸಿಯು ರಾವಣನ ಬಳಿ ಬಂದು ಅವನ್ನು ಅಪ್ಪಿಕೊಂಡು, ನುಡಿದ “ಓ ರಾಕ್ಷಸ ರಾಜನೇ, ನನ್ನೊಂದಿಗೆ ಸರಸವಾಡು, ನೀನು ಬೆನ್ನು ಬಿದ್ದಿರುವೇಕೇ ಈ ಕ್ರೂರ, ಕಳೇಹಿನ ಸೀತೆಯ? ಓ ರಾಜನೇ, ಖಂಡಿತವಾಗಿಯೂ ನಿನ್ನ ಸಿರಿ ಸಂಪತ್ತು ಐಶ್ವರ್ಯ ಭೋಗಿಸುವ ದೈವ ಸೀತೆಗಿಲ್ಲ; ಕಾಮ-ಬಯಕೆಯಿಲ್ಲದ ದೇಹವನು ಬಯಕೆಯ ದೇಹವು ಸಂಭೋಗಿಸಿದಾಗ ಕೆವಲ ನೋವು ಸಿಗುವದು, ಸುಖ ಅಲ್ಲಾ; ನಿಸ್ಸಂದೇಹ, ಸ್ವಇಚ್ಚಿಸಿದ ಸ್ತ್ರೀಯಿಂದ ಮಾತ್ರ ಪ್ರೇಮ, ಕಾಮ ಸುಖ ಸಿಗುವದು” ಮಾತುಗಳಿಂದ ಸ್ಪಷ್ಟಪಡಿಸಿರುವರು. ಅಸಮ್ಮತಿ ಲೈಂಗಿಕ ಕ್ರಿಯೆ ಅಪರಾಧ ಎಂಬ ತತ್ವ ವನ್ನು ಆದಿಕವಿ ಮಂಡಿಸಿರುವ, ಆ ತತ್ವವನ್ನು ಭಾರತದ ದಂಡ ಸಂಹಿತೆ ಯಲ್ಲಿ ಅಳವಡಿಸಲಾಗಿದೆ, 1860ರಲ್ಲಿ ಬ್ರಿಟಿಷ್ ಸರಕಾರವು ಭಾರತದ ದಂಡ ಸಂಹಿತೆ ರಚಿಸುವಾಗ ಮಹಾಕಾವ್ಯ ರಾಮಾಯಣ ಮತು ಕೌಟಿಲ್ಯನ ಅರ್ಥಶಾಸ್ತ್ರ ಮಹಾ ಗ್ರಂಥಗಳ ಮೂಲಕ ಆದಿ ನ್ಯಾಯ ಶಾಸ್ತ್ರಜ್ಞ ವಾಲ್ಮೀಕಿ ದಂಡನೀತಿ ಶಾಸ್ತ್ರವನ್ನು ಅಳವಡಿಸಿಕೊಂಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ