
ರಾವಣ ಅಂತಪುರ ಸೇರಿದಂತೆ ಸೀತೆಯತ್ತ ರಾಕ್ಷಸಿಯರು ಓಡಿ,I
ಕ್ರೋಧದಿ ಸೀತೆಗೆ ನುಡಿದಳು ಓರ್ವ ರಾಕ್ಷಸಿ: II
“ಓ ಸೀತೆ, ಪೌಲಸ್ತ್ಯಕುಲಜ, ದಶಗ್ರೀವ ಶ್ರೇಷ್ಠ ರಾವಣನ I
ಮಡದಿಯಾಗು, ಸಲ್ಲಿಸು ಮರ್ಯಾದೆ” II
ಕೆಂಗಣ್ಣು ರಾಕ್ಷಸಿ ಏಕಜಾತಾ ನುಡಿದಳುI
ಕೈಗಳಿಂದ ಹೊಟ್ಟೆ ಮುಚ್ಚಿಕೊಂಡ ಸೀತೆಗೆ: II
“ಆರು ಜನ ಪ್ರಜಾಪತಿಗಳಲ್ಲಿ, ಪೌಲಸ್ತ್ಯನು ನಾಲ್ಕನೇ ಬ್ರಹ್ಮಪುತ್ರ, I
ಪೌಲಸ್ತ್ಯಪುತ್ರ ವಿಶ್ರವ, ಓ ಸರ್ವಾಂಗ ಚಲುವೆ, II
ವಿಶ್ರವನ ಪುತ್ರ ಶತ್ರುಪೀಡಕ ರಾವಣ, ನೀI
ರಾವಣನಿಗೆ ಯೋಗ್ಯಳು, ಕೇಳು ನನ್ನ ಮಾತು”; II
ಬೆಕ್ಕಿನ ಕಣ್ಣಿನ ರಾಕ್ಷಸಿ ಹರಿಜಾತI
ನುಡಿದಳು ಸೀತೆಗೆ ಸಿಟ್ಟಿನಿಂದ:II
“ಮೂವತ್ತಮೂರು ದೇವತೆ, ದೇವ-ರಾಜರನುI
ಗೆದ್ದ ರಾವಣನಿಗೆ ನೀ ಯೋಗ್ಯ ಪತ್ನಿ”;II
ಕ್ರೋಧತಪ್ತ ರಾಕ್ಷಸಿ ಪ್ರಘಾಸI
ಬೆದರಿಸುತ್ತ ನುಡಿದಳು ಸೀತೆಗೆ: II
“ಯುದ್ಧದಲಿ ಬೆನ್ನು ತೋರಿಸದ, ಮಹಾಬಲಶಾಲಿI
ಶೌರ್ಯವುಳ್ಳ ರಾವಣನ ತಿಸ್ಕರಿಸುವೇಕೇ?II
ರಾವಣನ ಪ್ರೀಯ ಪತ್ನಿಯರಲಿI
ಸಿಗುವದು ನಿನಗೆ ಉನ್ನತಸ್ಥಾನ, ಸುದೈವ,II
ತೊರೆವನು ಸಹಸ್ರ ಸುಂದರ ಪತ್ನಿಯರ ಅಂತಪುರ ರಾವಣI
ನಿನಗಾಗಿ, ಲಭಿಸುವವು ಎಲ್ಲ ಅತ್ಯುತ್ತಮಗಳು ನಿನಗೆ “, II
ರಾಕ್ಷಸಿ ವಿಕಟಾ ನುಡಿದಳು:” ದೇವ,ಗಂಧರ್ವ,I
ನಾಗರನು ಗೆದ್ದ ರಾವಣ, ಸೋತಿಹನು ನಿನಗೆ, II
ಓ ಅದಮಳೇ, ಮಹಾತ್ಮ ರಾವಣನ I
ಮಡದಿಯಾಗಲು ನಿನಗೇನು ಆತಂಕ?” II
ರಾಕ್ಷಸಿ ದುರ್ಮುಖಿ ನುಡಿದಳು:” ಗಾಳಿ ಬೀಸುವದು,I
ಸೂರ್ಯ ಪ್ರಕಾಶ ಬೆಳಗುವನು ಆಜ್ಞೆಯಂತೆ ರಾವಣನ, II
ಓ ಬಾಣದಂತಹ ಹುಬ್ಬಿನವಳೇ, ನೀನೇಕೆI
ಮೆಚ್ಚುತ್ತಿಲ್ಲ ನಿರ್ಭಯದಿ ರಾವಣನ,II
ಹೆದರಿ ರಾವಣನಿಗೆ, ಹೂ-ಉದರಿಸುವವು ಗಿಡಬಳ್ಳಿ,I
ನೀರು ಸುರಿಸುವವು ಮೋಡ ಪರ್ವತಗಳು,II
ರಾಕ್ಷಸ ರಾಜ ಮಹಾಸಮ್ರಾಟ ರಾವಣನI
ಪತ್ನಿಯಾಗಲು ನೀ ಬಯಸುತ್ತಿಲ್ಲೇಕೇ? II
ಓ ಹಸ್ಮುಖಿ ಸೀತೆ, ರಾಜಕುಮಾರಿ, ತಿಳಿದುಕೋI
ಪ್ರೀತಿಯಿಂದ ತಿಳಿಸಿದ ಸತ್ಯ ಮಾತುಗಳನು”. II
ಸುಂದರ ಕಾಂಡ
ಈ ಸನ್ನಿವೇಶದಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯ ಮನವೋಲಿಸಲು ರಾಕ್ಷಸಿಯರು ಪ್ರೀತಿಯಿಂದ, ಕೋಪದಿಂದ ರಾಕ್ಷಸಿಯರು ಆಡಿದ ಮಾತುಗಳ ಮೂಲಕ ಒಂದೆಡೆ ರಾವಣನ ವ್ಯಕ್ತಿತ್ವ, ಪರಾಕ್ರಮಗಳ ಗುಣಗಾನ ಬಿತ್ತರಿಸಿದರೆ ಮತ್ತೊಂದೆಡೆ ಸೀತೆಯ ಅಚಲ ಸ್ವಭಾವದ ಭದ್ರಕೋಟೆಯನ್ನು ಪ್ರತಿನಿಧಿಸುವ ಅಂಶಗಳು ವಿವರಿಸಿರುವರು: (1) ರಾವಣನ ಪ್ರೇಮ ಪ್ರಸ್ತಾವನೆ: ಸೀತೆಯಲ್ಲಿ ಚಿಗುರಿದ ರಾವಣನ ಪ್ರೇಮಾಂಕುರ ಪ್ರಸ್ತಾವಣೆಯನ್ನು ಹೀಗೆ ಕೋರಿರುವರು “ನೀನು ಸುದೈವಿ, ರಾವಣನ ಪ್ರೀಯ ಪತ್ನಿಯರಲಿ ನಿನಗೆ ಉನ್ನತಸ್ಥಾನ ಸಿಗುವದು, ನಿನಗಾಗಿ ರಾವಣನು ಸಹಸ್ರ ಸುಂದರ ಪತ್ನಿಯರ ಅಂತಪುರವನ್ನು ತೊರೆವನು, ನಿನಗೆ ಎಲ್ಲ ಅತ್ಯುತ್ತಮ ಸೌಲಭ್ಯ, ಸೌಕರ್ಯಗಳು ಲಭಿಸುವವು,… ಈ ಮಧ್ಯೆ ರಾಕ್ಷಸಿ ವಿಕಟಾ ಸೀತೆಗೆ ರಾವಣನ ಮನಸ್ಸಿನ ಇಂಗಿತ ತಿಳಿಸುವಳು— ಮೂವತ್ತಮೂರು ದೇವತೆ ( ಇಂದಿನವರು 33ಕೋಟಿ ದೇವತೆಗಳು ಅಂತಾ ತಪ್ಪನ್ನು ಬಿತ್ತರಿಸುತ್ತಿರುವರು) ದೇವ,ಗಂಧರ್ವ, ನಾಗರನು ಗೆದ್ದ ರಾವಣನು ನಿನಗೆ ಸೋತಿರುವನು. (2) ರಾವಣನ ಮತ್ತು ಅವನ ವಂಶದ ಪ್ರಸ್ತಾವಣೆ: ರಾಕ್ಷಸಿಯರು ಸೀತೆಗೆ ರಾವಣನ ವಂಶದ ಬಗ್ಗೆ ಹಾಗು ಅವನ ಪರಾಕ್ರಮದ ಬಗ್ಗೆ ಹೀಗೆ ತಿಳಿಸುವರು “ ಆರು ಜನ ಪ್ರಜಾಪತಿಗಳಲ್ಲಿ, ಪೌಲಸ್ತ್ಯನು ಬ್ರಹ್ಮನ ನಾಲ್ಕನೇ ಪುತ್ರ, ಪೌಲಸ್ತ್ಯನ ಪುತ್ರ ವಿಶ್ರವ ಓ ಸರ್ವಾಂಗ ಚಲುವೆ ವಿಶಾಲಾಕ್ಷಿ, ವಿಶ್ರವನ ಪುತ್ರ ಶತ್ರುಪೀಡಕ ರಾವಣ, ಈ ನಿಟ್ಟಿನಲ್ಲಿ ನೀನು ರಾವಣನಿಗೆ ಯೋಗ್ಯಳು,… ರಾವಣನ ಆಜ್ಞೆಯಂತೆ ಗಾಳಿ ಬೀಸುವದು, ಸೂರ್ಯ ಪ್ರಕಾಶ ಬೆಳಗುವನು, ರಾವಣನಿಗೆ ಹೆದರಿ ಗಿಡಬಳ್ಳಿ ಹೂ-ಉದರಿಸುವವು, ಮೋಡ ಪರ್ವತಗಳು ನೀರು ಸುರಿಸುವವು,.. “ಮೂವತ್ತಮೂರು ದೇವತೆ, ದೇವ-ರಾಜರನು ಗೆದ್ದ ರಾವಣನಿಗೆ ನೀ ಯೋಗ್ಯ ಪತ್ನಿ”. ಹಿಂಜರಿಯದೇ ರಾವಣನನ್ನು ಸ್ವ-ಇಚ್ಚೆಯಿಂದ ಸ್ವೀಕರಿಸಲು ಸೀತೆಯ ಮನಸ್ಸಿನ ಮೇಲೆ ಒತ್ತಡ ಹೇರುವರು ರಾಕ್ಷಸಿಯರು. ರಾವಣನು ಸೀತೆಯ ಯವ್ವನಭರಿತ ಸೌಂದರ್ಯಕ್ಕೆ ಮರಳಾಗಿದ್ದರಿಂದ ಅವನಲ್ಲಿ ಅವಳ ಬಗ್ಗೆ ಪ್ರೇಮ ಹುಟ್ಟುವದು, ರಾವಣನ ಆ ಪ್ರೇಮವೇ ಸೀತೆಯನ್ನು ಅವನ ಬಲತ್ಕಾರದಿಂದ ರಕ್ಷಣೆ ನೀಡುವದು ಹಾಗು ಅವನ ನಾಶಕ್ಕೆ ಕಾರಣವಾದ ಸತ್ಯಾಂಶವು ಆದಿಚಿಂತಕ ವಾಲ್ಮೀಕಿ ಮುಖೇನ ಸ್ಪಷ್ಟವಾಗುವದು. ಅರಣ್ಯ ಕಾಂಡದಲ್ಲಿ 11 ಜನ ಪ್ರಜಾಪತಿಗಳೆಂದು ಹೆಸರಿಸಲಾಗಿದೆ, ಹೀಗೆ ಕೆಲವೊಂದು ವ್ಯತ್ಯಾಸ ಗಳ ಶ್ಲೋಕಗಳು ಕಂಡುಬರುತ್ತವೆ, ಅವು ನಂತರದ ಸೇರ್ಪಡೆ ಆದವು ಎಂಬದು ತಿಳಿದು ಬರುವದು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
