ಕ್ರೂರ ಸ್ವಭಾವದ, ಠಕ್ಕ ಮುಖದ ರಾಕ್ಷಸಿ ಭಾಗ-81

By admin


ಕ್ರೂರ ಸ್ವಭಾವದ, ಠಕ್ಕ ಮುಖದ ರಾಕ್ಷಸಿI
ಬಳಿ ಬಂದು ಸೀತೆಗೆ ನುಡಿದಳು ಅಹಿತ ಮಾತು: II
“ ಓ ಸೀತೆ, ಎಲ್ಲರೊಂದಿಗೆ ಅರಮನೆ ಹಾಸಿಗೆ ಮೇಲೆI
ಸುಖ ಪಡಲು ಇಚ್ಚಿಸುತ್ತಿಲ್ಲ ನೀನೇಕೇ?II
ಪತಿನಿಷ್ಠೆ ಅತೀಯಾಗಿಹದು ಮಾನವರಲಿ,I
ಮರೆತು ಬಿಡು ರಾಮನ, ಇಲ್ಲವೇ ನೀ ಬದುಕಲಾರಿಲ್ಲಿ, II
ನಿನ್ನೀಚ್ಚೆಯಂತೆ ಸಹಕರಿಸು ರಾವಣನಿಗೆ,I
ಪತ್ನಿಯಾಗಿ ಅನುಭವಿಸು ಅವನ ಸಿರಿ ಸಂಪತ್ತನು,II
ಗಡಿಪಾರಾದ,ಎಲ್ಲ ಕಳಕೊಂಡ ಮಾನವ ರಾಮನI
ಬಯಕೆ ಬಿಡು, ಓ ಅನಿಂದನೀಯ ಚಲುವೆ”, II
ನುಡಿದಳು ಸೀತೆ ಕೇಳಿ ರಾಕ್ಷಸಿಯರ ಬಿರ್ನಡಿI
ಕಣ್ಣೀರು ತುಂಬಿದ ಕಮಲಾಕ್ಷಿಗಳಲಿ,II
ಜತೆಯಾಗಿ ನೀವೆಲ್ಲ ಮಾತಾಡಿ ದ್ವೇಷದ ಶಬ್ದಗಳ ಸಾಧ್ಯವಿದಷ್ಟು, I
ತೋರಿಸೀತು ನಿಮ್ಮ ಮನ ನಿರ್ಮಲವೇ? II
ಮನುಜಳು ಪತ್ನಿಯಾಗಳು ರಾಕ್ಷಸನ,I
ಕೇಳೆನು ನಿಮ್ಮ ಮಾತು, ತಿಂದುಹಾಕಿ ಎಲ್ಲರೂ ನನ್ನ, II
ಹೀನಸ್ಥಿತಿಯಲ್ಲಿದ್ದರೂ ರಾಮ, ನನ್ನ ಗಂಡ, I
ಅವನೊಂದಿಗಿರುವೆ ಇದ್ದಂತೆ ಸುವರ್ಚಲ ಸೂರ್ಯನೊಂದಿಗೆ, II
ಇದ್ದಂತೆ ಸುದೈವಿ ಸಚಿ ಇಂದ್ರನೊಂದಿಗೆ, I
ಆರುಂದತಿ ವಸಿಷ್ಠರೊಂದಿಗೆ, ರೋಹಿನಿ ಚಂದ್ರನೊಂದಿಗೆ, II
ಲೋಪಮುದ್ರಾ ಅಗಸ್ತ್ಯರೊಂದಿಗೆ, ಸುಕನ್ಯಾ I
ಚ್ಯವನನೊಂದಿಗೆ, ಸಾವಿತ್ರಿ ಸತ್ಯವಾನೊಂದಿಗೆ, II
ಶ್ರೀಮತಿ ಕಪಿಲರೊಂದಿಗೆ, ಮದಯಂತಿ ಸೌದಸನೊಂದಿಗೆ, I
ಕೇಶಿನಿ ಸಗರನೊಂದಿಗೆ, II
ಭೀಮಪುತ್ರಿ ದಮಯಂತಿ ನಳನೊಂದಿಗೆ,I
ಇರುವೆ ನಾ ಇಕ್ಷ್ವಾಕುಕುಲಜ ರಾಮನೊಂದಿಗೆ; II
ಕೇಳಿ ಸೀತೆ ನುಡಿಗಳ ಕುಪಿತರಾದರು ರಾಕ್ಷಸಿಯರು,I
ಬೆದಿರುಸುತ ಸೀತೆಗೆ ಅಹಿತ ಶಬ್ದಗಳಿಂದ ನಿಂದಿಸಿದರು II
ಸೀತೆಯನು ಬೆದರಿಸುವ ರಾಕ್ಷಸಿಯರ ಶಬ್ದಗಳI
ಕೇಳುತ, ಶಿಂಶುಪವೃಕ್ಷದಲಿ ಕುಳಿತಿದ್ದ ಹನುಮ ನಿಶಬ್ದ, II
ವಿಕಾರದೇಹದ ರಾಕ್ಷಸರ ಬೆದರಿಕೆ ಶಬ್ದಗಳಿಗಂಜಿI
ಕಂಪಿಸುತಿದ್ದಳು ಸೀತೆ ಎಲ್ಲ ದಿಸೆಯಲ್ಲಿ,II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ರಾಕ್ಷಸಿಯರು ಸೀತೆಯನ್ನು ವಿಭನ್ನ ಮಾತುಗಳಿಂದ ಗದ್ದರಿಸುವ ಪರಿಗಳನ್ನು ವಿವರಿಸಿರುವರು, ಅವುಗಳಲ್ಲಿಯ ಮುಖ್ಯಾಂಶಗಳು: (1)ಸೀತೆಯ ಅಚಲ ಪತಿನಿಷ್ಠೆ ಸ್ವಭಾವ: ಸೀತೆ ಅಚಲ ಸ್ವಭಾವ ಕಂಡು ಕ್ರೂರ ಸ್ವಭಾವದ, ಠಕ್ಕ ಮುಖದ ರಾಕ್ಷಸಿ ಸೀತೆಯ ಬಳಿ ಬಂದು ಅವಳಿಗೆ ಅಹಿತಕರ ಮಾತುಗಳನ್ನು ಆಡುವಳು,ಅತೀಯಾದ ಪತಿನಿಷ್ಠೆ ಬದುಕಿಗೆ ಮಾರಕ ಎಂದು ಮಾತಿನಿಂದ ತಿವಿಯುವರು, ಸೀತೆಯಲ್ಲಿ ರಾಮನ ಬಗ್ಗೆ ಇದ್ದ ಪತಿನಿಷ್ಠೆಯನ್ನು ಕಂಡು ರಾಕ್ಷಸಿಯರು ಹೀಗೆ ನುಡಿದರು “ ಓ ಸೀತೆ, ರಾಮನ ಪತಿನಿಷ್ಠೆ ನಿನ್ನನ್ನು ರಾವಣನ ಎಲ್ಲ ರಾಣಿಯರೊಂದಿಗೆ ಅವನ ಅರಮನೆ ಹಾಸಿಗೆ ಮೇಲೆ ಸುಖ ಪಡಲು ಬಿಟ್ಟಕೊಡುತ್ತಿಲ್ಲ, ಮಾನವರಲಿ ಪತಿನಿಷ್ಠೆಯು ಅತೀಯಾಗಿದೆ, ಇಲ್ಲಿ ಬದುಕಬೇಕಾದರೆ ನೀನು ರಾಮನನ್ನು ಮರೆತು ರಾವಣನ್ನು ಪತಿಯೆಂದು ಸ್ವೀಕರಿಸಬೇಕು”. (2) ಅಂತರಕುಲ ವಿವಾಹ ಅಸಾಧ್ಯ: ಮೊದಲನೇ ಪತಿ ಬಿಟ್ಟು ಎರಡನೇ ಪತಿಯೊಂದಿಗೆ ಅಂತರಕುಲ ವಿವಾಹ ತನ್ನಿಂದ ಅಸಾಧ್ಯವೆಂದು ಸೀತೆ ತನ್ನ ಪತಿನಿಷ್ಠೆ ಮಾತುಗಳನ್ನು ಹೀಗೆ ಆಡಿದಳು “ನಾನು ಮಾನವಕುಲದವಳು ರಾಕ್ಷಸಕುಲದವನ ಪತ್ನಿಯಾಗಳು ಸಾಧ್ಯವಿಲ್ಲ, ನಾನು ನಿಮ್ಮ ಮಾತು ಪಾಲಿಸುವದಿಲ್ಲ, ನೀವು ಎಲ್ಲರೂ ನನ್ನನ್ನು ತಿಂದುಹಾಕಿದರೂ ಬೇಸರವಿಲ್ಲ, ನಾನು ಎಂತಹ ಹೀನಸ್ಥಿತಿಯಲ್ಲಿದ್ದರೂ ರಾಮನೇ ನನ್ನ ಗಂಡ, ನನಗೆ ಯಜಮಾನ”. ಹಾಗು ಪತಿವ್ರತೆಯರ ಉದಾಹರಣೆಗಳನ್ನು ನೀಡುವಳು,(3)ರಾಕ್ಷಸರ ನಿಂದನೆಗೆ ಕಂಪಿಸಿದ ಸೀತೆ: ಸೀತೆಯ ಅಟಲ ನುಡಿಗಳನ್ನು ಕೇಳಿ ಕುಪಿತರಾದರು ರಾಕ್ಷಸಿಯರು ಬೆದರಿಸುತ್ತ ಸೀತೆಗೆ ಅಹಿತ ಶಬ್ದಗಳಿಂದ ನಿಂದಿಸಿದರು, ಸೀತೆಯನು ಬೆದರಿಸುವ ರಾಕ್ಷಸಿಯರ ಶಬ್ದಗಳನ್ನು ಕೇಳುತ ಶಿಂಶುಪವೃಕ್ಷದಲಿ ಕುಳಿತಿದ್ದ ಹನುಮನು ನಿಶಬ್ದನಾದನು; ವಿಕಾರದೇಹದ ರಾಕ್ಷಸರ ಬೆದರಿಕೆ ಶಬ್ದಗಳಿಗಂಜಿ ಎಲ್ಲ ರೀತಿಯಲ್ಲಿ ಸೀತೆ ಕಂಪಿಸುತಿದ್ದಳು. ಸೀತೆಯ ಮೂಲಕ ಆದಿಸ್ತ್ರೀಸಂವೇದಕ ವಾಲ್ಮೀಕಿಯು ಭರತಖಂಡದ ವಿವಾಹಿತ ಸ್ತ್ರೀಯ ಅಚಲ ಸ್ವಭಾವವನ್ನು ಈ ಮುಖೇನ ವ್ಯಕ್ತ ಪಡಿಸಿರುವರು, ಅದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾದ ವೈವಾಹಿಕ ಜೀವನ ಶೈಲಿ ಮತ್ತು ಕುಟುಂಬ ಪದ್ಧತಿಯನ್ನು ಜಗಕ್ಕೆ ಕೊಡುಗೆಯಾಗಿ ನೀಡಿದೆ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ