ಸುಂದರಕಾಂಡ ರಾಮಾಯಣ ಭಾಗ-82

By admin


ಕೋಪದಿ ಕೊಡಲಿ ಹಿಡಿದ ರಾಕ್ಷಸಿ ನುಡಿದಳು: I
“ ಈ ಹೆಣ್ಣು ಅಯೋಗ್ಯಳು ರಾವಣನ ಪತ್ನಿಯಾಗಲು”II
ಅಳುತ್ತ ಸೀತೆ ಬಂದಳು ಶಿಂಶುಪ ವೃಕ್ಷ ಬಳಿ, I
ಬರುತಿದ್ದಂತೆ ಸೀತೆಗೆ ಮುತ್ತಿದರು ಶೋಕತಪ್ತ ಸೀತೆಯನ ರಾಕ್ಷಸಿಯರು, II
ಭಯಾನಕ ರೂಪದ ರಾಕ್ಷಸಿ ವಿನಿತಾ ಕೋಪದಿI
ಡೊಳ್ಳುಹೊಟ್ಟೆಯೊಂದಿಗೆ ಸೀತೆಗೆ ನುಡಿದಳು: II
“ ಓ ಸೀತೆ, ಸಾಕು ನಿನ್ನ ಪತಿನಿಷ್ಠೆ,I
ಯಾವುದೇ ಅತೀಯಾದಾಗ ಅದು ವಿಷವಾಗುವದು, II
ಓ ಸೀತೆ, ನಿನ್ನ ಮನುಜಧರ್ಮ ನಿರ್ವಹಿಸಿರುವಿ,I
ನಾ ಹೇಳಿದ ಕೇಳು ನಿನ್ನ ಸುದೈವಕ್ಕಾಗಿ,II
ಸುದ್ರೂಪಿ, ಆಕರ್ಷಕ, ಶೂರ ರಾವಣನI
ಪತಿಯೆಂದು ಸ್ವೀಕರಿಸು, ಸುದೈವಿಯಾಗು, II
ಬಿಡು ದುಃಖಿತ ಮನುಜ ರಾಮನನು,I
ಓ ಸೀತೆ, ಸ್ವೀಕರಿಸಿ ರಾವಣನ ಜಗತ್ತಿನೊಡತಿಯಾಗು; II
ಕೇಳದಿದ್ರೆ ನಮ್ಮ ಮಾತುಗಳ ನೀನುI
ತಕ್ಷಣ ತಿಂದು ಹಾಕುವೆವು ನಿನ್ನ”; II
ತೂಗುವ ಸ್ತನಗಳ ರಾಕ್ಷಸಿ ವಿಕಟಾI
ಕೋಪದಿ ಸೀತೆಗೆ ಬೆದರಿಕೆ ಶಬ್ದಗಳ ನುಡಿದಳು: II
“ಓ ದುಷ್ಟ ಮನದ ಸೀತೆ, ಕೇಳಿದೆವು ನಿನ್ನ ಅಹಿತ ನುಡಿ I
ಕರುಣೆ ಮೃದು ಸ್ವಭಾವದಿ, ಓ ಸೀತೆ, ಪಾಲಿಸುII
ನಮ್ಮ ಸಮಯೋಚಿತ ಮಾತು, I
ಬಿಡಿಸಲು ನಿನ್ನ ಯಾರಿಗೂ ಸಾಧ್ಯವಿಲ್ಲ, ರಾವಣನ ಅಂತಪುರದಿಂದ; II
ಓ ಸೀತೆ, ಬಿಡುಗಡೆ ಆಸೆ ತೊರೆ, ಕಣ್ಣೀರು ಸುರಿಸದಿರು,I
ಬಿಡು ವ್ಯರ್ಥದ ಶೋಕ, ನಡೆ ನಮ್ಮ ಮಾತಿನಂತೆ,II
ಓ ಸೀತೆ, ಪ್ರೀತಿ ಸುಖ ನಿನ್ನದಾಗಿಸಿಕೋ,I
ನಡೆ ರಾವಣನ ಇಚ್ಚೆಯಂತೆ, ಬಿಡು ನಿತ್ಯದ ಶೋಕ, II
ಚಿರವಲ್ಲ ಯೌವನ,ಇರುವರೆಗೆ ಆನಂದಿಸು, ಓ ಮಾದಕಾಕ್ಷಿ ಸೀತೆ,I
ಅರಣ್ಯ ವನ ವಿಹರಿಸಿ ರಾವಣನೊಂದಿಗೆ ಸುಖಪಡು; II
ಓ ಸೀತೆ, ಒಪ್ಪದಿದ್ರೆ ನನ್ನ ಮಾತುಗಳನುI
ಕಿತ್ತು ನಿನ್ನ ಹೃದಯ ನಾ ಭಕ್ಷಿಸುವೆ”; II
ರಾಕ್ಷಸಿ ಚಂಡೊದರಿ ಕುದಿಯುವ ಕೋಪದಿI
ಗದ್ದರಿಸಿದಳು ಸೀತೆಗೆ ನುಡಿದಳು: II
“ನೋಡಿ ಈ ಮೃಗನಯನಿ ಬೆದರಿದ ಮೃಗದಂತೆI
ಹೃತಳ ಬಗ್ಗೆ ಎನ್ನ ಮನದಲಿ ಚಿಗುರಿತು ಆಸೆ,II
ಅವಳ ಹೃದಯ, ಮಾಸಕಂಡ, ಸ್ತನ,I
ಯಕೃತ, ಬುರುಡೆ ಭಕ್ಷಿಸುವಾಸೆ”; II
ರಾಕ್ಷಸಿ ಪ್ರಗಸ ನುಡಿದಳು:” ತಡವೇಕೇ? I
ಕುತ್ತಗೆ ಹಿಂಡಿ ಈ ಕ್ರೂರಳ, ಸತ್ತಳೆಂದು ತಿಳಿಸಿ ರಾವಣನಿಗೆ, ಭಕ್ಷಿಸೋಣ”;II
ರಾಕ್ಷಸಿ ಅಜಮುಖಿ ನುಡಿದಳು” ಕೊಂದು ಈ ಸ್ತ್ರೀಯನI
ಸಮ ತುಂಡುಗಳಲ್ಲಿ ತುಂಡರಿಸೋಣ, II
ಜಗಳಾಡದೆ ಹಂಚಿಕೊಳ್ಳೋಣ ತುಂಡುಗಳನು,I
ವಿಭಿನ್ನ ಮದ್ಯ ವ ತಿಂಡಿಗಳನ್ನು ಬೇಗ ತನ್ನಿರಿ”;II
ರಾಕ್ಷಸಿ ಸುರ್ಪನಖಾ ನುಡಿದಳು: “ ಅಜಮುಖಿ ಹೇಳಿದ್ದೆ I
ನನ್ನ ಹಿರಿಯಾಸೆ, ಮದ್ಯ ಎಲ್ಲ ದುಃಖಳಿಗೆ ಮದ್ದು, II
ಬೇಗ ತನ್ನಿ, ಕುಡಿದು , ಈ ನರಮಾಂಸ ಭಕ್ಷಿಸಿ I
ನಿಕುಂಬಿಲಾ ಳ ಮುಂದೆ ಕುಣಿಯೋಣ”;II
ರಾಕ್ಷಸಿಯರ ಭಯಾನಕ ಶಬ್ದಗಳ ಕೇಳುತ,I
ದುಃಖಿಸುತ ಕಣ್ಣೀರು ಸುರಿಸದಳು ಸೀತೆ. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ಕುಪಿತ ರಾಕ್ಷಸಿಯರು ಸೀತೆಯನ್ನು ವಿಭಿನ್ನ ಮಾತುಗಳಿಂದ ಗದ್ದರಿಸುವ ಪರಿಗಳನ್ನು ವಿವರಿಸಿರುವರು, ಅವುಗಳಲ್ಲಿಯ ಮುಖ್ಯಾಂಶಗಳು:(1) ಯಾವುದೇ ಅತೀಯಾದಾಗ ಅದು ವಿಷವಾಗುವದು: ಸೀತೆಯ ಮನಸ್ಸಿನಿಂದ ಪತಿನಿಷ್ಠೆಯನ್ನು ತೆಗೆದು ಹಾಕಲು ಮತ್ತು ಅವಳು ಅನಿವಾರ್ಯವಾಗಿ ರಾವಣನನ್ನು ಮದುವೆಯಾಗುವಂತೆ ರಾಕ್ಷಸಿಯರು ಹೀಗೆ ನುಡಿದರು “ ಓ ಸೀತೆ, ಸಾಕು ನಿನ್ನ ಪತಿನಿಷ್ಠೆ, ಯಾವುದೇ ಅತೀಯಾದಾಗ ಅದು ವಿಷವಾಗುವದು, ನೀನು ನಿನ್ನ ಮನುಜಧರ್ಮ ನಿರ್ವಹಿಸಿರುವಿ, ನಿನ್ನ ಒಳಿತಿಗಾಗಿ ಇನ್ನು ನಾನು ಹೇಳಿದ್ದನ್ನು ಕೇಳು, ದುಃಖಿತ ಮನುಜ ರಾಮನನು ಬಿಟ್ಟು ಸುದ್ರೂಪಿ ಆಕರ್ಷಕ ಶೂರ ರಾವಣನನ್ನು ಪತಿಯೆಂದು ಸ್ವೀಕರಿಸಿ ನೀನು ಸುದೈವಿಯಾಗು, ಜಗತ್ತಿನೊಡತಿಯಾಗು”. ಅತೀ ಆದಾಗ ಅಮೃತವೂ ವಿಷ ಎಂಬ ನಾನ್ನುಡಿ ಹೀಗೆ ಬಳಕೆಗೆ ಬಂದಿದ್ದು ಸ್ಪಷ್ಟ ಆಗುವದು, (2) ಚಿರವಲ್ಲ ಯೌವನ, ಅದು ಇರುವರೆಗೆ ಆನಂದಿಸು: ರಾಮನಿಂದ ಸೀತೆಯನ್ನು ಬಿಡಿಸಿಕೊಳ್ಳಲು ಅಸಾಧ್ಯ ಸ್ಥಿತಿಯಲ್ಲಿ ಅವನ ಚಿಂತೆಯಲ್ಲಿಯೇ ಕೊರಗಿ ತನ್ನ ಯವ್ವನ ಹಾಳುಮಾಡಿಕೊಳ್ಳುವ ಬದಲು ರಾವಣನೊಂದಿಗೆ ಸುಖವಾಗಿರಲು ರಾಕ್ಷಸಿಯರು ಸೀತೆಗೆ ಹೀಗೆ ಬೋಧಿಸಿದರು “ಓ ದುಷ್ಟ ಮನದ ಸೀತೆ, ಕರುಣೆ ಮೃದು ಸ್ವಭಾವದಿಂದ ನಾವು ನಿನ್ನ ಅಹಿತಕರ ನುಡಿ ಕೇಳಿದೆವು, ರಾವಣನ ಅಂತಪುರದಿಂದ ನಿನ್ನನ್ನು ಬಿಡಿಸಿಕೊಂಡು ಹೋಗಲು ಯಾರಿಗೂ ಸಾಧ್ಯವಿಲ್ಲ, ಓ ಸೀತೆ, ನಮ್ಮ ಸಮಯೋಚಿತ ಮಾತುಗಳನ್ನು ಪಾಲಿಸು; ಓ ಸೀತೆ, ಇನ್ನು ಕಣ್ಣೀರು ಸುರಿಸಿ ಪ್ರಯೋಜನವಿಲ್ಲ, ನಿನ್ನ ಬಿಡುಗಡೆಯನ್ನು ಆಸೆ ಬಿಟ್ಟುಬಿಡು, ಓ ಮಾದಕ ಕಣ್ಣಿನ ಸೀತೆ, ಚಿರವಲ್ಲ ಯೌವನ, ಅದು ಇರುವರೆಗೆ ಆನಂದಿಸು, ಅರಣ್ಯ ವನ ವಿಹರಿಸಿ ರಾವಣನೊಂದಿಗೆ ಸುಖಪಡು” ಯವ್ವನ ಕ್ಷಣಿಕವೆಂಬ ಅರಿವನ್ನು ಆದಿಕವಿ ಈ ಪ್ರಸಂಗ ಮೂಲಕ ವ್ಯಕ್ತ ಪಡಿಸಿರುವರು,ಆದರೆ ಅದರ ದುರ್ಬಳಕೆ ಆಗಬಾರದು ಎಂಬ ಎಚ್ಚರಿಕೆ ನೀಡಿರುವ, (3) ನಿಕುಂಬಿಳಾ ರಾಕ್ಷಸರ ದೇವತೆ: ಸೀತೆಯು ತಮ್ಮ ಮಾತುಗಳನ್ನು ಒಪ್ಪದಿದ್ದರೆ ಅವಳನ್ನು ಕೊಂದು, ಸಮ ತುಂಡುಗಳಲ್ಲಿ ತುಂಡರಿ ಅವುಗಳನ್ನು ಜಗಳಾಡದೆ ಹಂಚಿಕೊಳ್ಳುವ ಹಾಗು ಅವಳ ಮಾಂಸ ತಿನ್ನಲು ಅದರೊಂದಿಗೆ ವಿಭಿನ್ನ ಮದ್ಯ ಮತ್ತು ತಿಂಡಿಗಳನ್ನು ಸೇವಿಸುವದಾಗಿ ಹೇಳುವ ಸಂದರ್ಭದಲ್ಲಿ ರಾಕ್ಷಸಿ ಸುರ್ಪನಖಾ ಹೀಗೆ ನುಡಿದಳು: “ ಅಜಮುಖಿ ಹೇಳಿದ್ದೆ ನನ್ನ ಹಿರಿಯಾಸೆಯು, ಮದ್ಯ ಎಲ್ಲ ದುಃಖಳಿಗೆ ಮದ್ದು, ಬೇಗ ತನ್ನಿ ಅದನ್ನು ಕುಡಿದು ಈ ನರಳ ಮಾಂಸ ಭಕ್ಷಿಸಿ ದೇವತೆ ನಿಕುಂಬಿಲಾಳ ಮುಂದೆ ಕುಣಿಯೋಣ”. ನಿಕುಂಬಳಾ ದೇವಿ ಆಫ್ರಿಕಾ ಖಂಡದ ಕೆಲವು ಬುಡಕಟ್ಟುಗಳ ಆಚರಣೆಯನ್ನು ಹೋಲುವದು, ಅದು ಒಂದು ವಿಚಾರದಲ್ಲಿ ಖಂಡಗಳ ವಿಚಲನ ಸಿದ್ಧಾಂತವನ್ನು ಪುಷ್ಟಿ ಕರಿಸುವದು. ಒಟ್ಟಿನಲ್ಲಿ ಸೀತೆಯ ಜಿದ್ದು, ರಾಕ್ಷಸಿಯರ ಒರಟುತನಗಳನ್ನು ಆದಿಕವಿ ಈ ಸಂದರ್ಭದಲ್ಲಿ ಪ್ರದರ್ಶಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ