
ಕೇಳಿ ಭಯಾನಕ ರಾಕ್ಷಸರ ಅಹಿತ ಮಾತು ಭಯದ ಮಧ್ಯೆI
ಅಳುಕದೆ ದುಃಖದಿ ನುಡಿದಳು ತಡವರಿಸುತ: II
“ರಾಕ್ಷಸನ ಪತ್ನಿಯಾಗಲು ಯೋಗ್ಯಳಲ್ಲ ನರಸ್ತ್ರೀ, I
ನಿಮ್ಮ ಮಾತು ಕೇಳಲಾರೆ, ನಿಮ್ಮಿಚ್ಚೆಯಂತೆ ನನ್ನ ತಿಂದುಬಿಡಿ”; II
ರಾವಣನ ಹೆದರಿಕೆ, ರಾಕ್ಷಸಿಯರ ಮಧ್ಯೆI
ಕಾಣಲಿಲ್ಲ ಸೀತೆ ನೆಮ್ಮದಿ, ಶೋಕಪಿಡಿತ, II
ಹಿಂಡಿನಿಂದ ತಪ್ಪಿಸಿಕೊಂಡು ಅಲೆದಾಡುವ ಜಿಂಕೆ I
ತೋಳಗಳ ಮಧ್ಯೆ ಸಿಕ್ಕಂತೆ ಭಯಭೀತಳಾಗಿ ಕುಗ್ಗಿದಳು ಸೀತೆ; II
ದುಃಖದಿ ಕಂಗೆಟ್ಟ ಮನಸ್ಸಿನ ಸೀತೆ ಕಂಡು I
ವಿಶಾಲ ಹೂ-ಭರಿತ ಅಶೋಕವೃಕ್ಷ, ನೆನೆದಳು ರಾಮನ; II
ಸುರಿಯುವ ಕಣ್ಣೀರಲಿ ಎದೆ ತೊಳೆದುಕೊಂಡ ಸೀತೆI
ಮಗ್ನನಾದಳು ಚಿಂತೆಯಲಿ, ಅನಂತ ದುಃಖದಲಿ;II
ಬಿರುಗಾಳಿಗೆ ಬಿದ್ದ ಬಾಳೆಗಿಡದಂತೆI
ನಡುಗುತ ಕಳೆಗುಂದಿದಳು ರಾಕ್ಷಸಿಯರಿಗೆ ಅಂಜಿ ಸೀತೆ; II
ದುಃಖದಲಿ ನಡೆದಾಡುವ ಸೀತೆ ಕಂಡಳುI
ಬುಸುಗುಡುವ ಸರ್ಪದಂತೆ, ಅತ್ತಿತ್ತ,II
ದುಃಖದಲಿ ನೊಂದ ಸೀತೆ ನುಡಿದಳು:I
“ಓ ರಾಮಾ, ಓ ಲಕ್ಷ್ಮಣಾ, ಓ ಅತ್ತೆ ಕೌಶಲ್ಯ, ಓ ಸುಮಿತ್ರಾ, II
ರಾಮನಿಲ್ಲದೆ ಇಲ್ಲಿ ನಾ ಬದುಕಿರುವೆI
ರಾಕ್ಷಸಿಯರ ಉಪಟಳ, ಶೋಕದ ಹಿಂಸೆ ಮಧ್ಯೆ, II
‘ಅಕಾಲ ಮರಣ ಸ್ತ್ರೀಗೂ, ಪುರುಷನಿಗೂ ಕಠಿಣ’I
ಎಂಬ ಗಾದೆಯಂತೆ ನರಳುತ್ತಿಹೆನು ಮರಣ ಬಾರದೆ; II
ಬದುಕಿದ್ದು ನನ್ನ ಸ್ಥಿತಿ, ಅನಾಥ ಮಗುವಿನಂತೆ,I
ಸಮುದ್ರಮಧ್ಯೆ ಬಿರುಗಳಿಗೆ ಸಿಕ್ಕ ಹಡಗಿನಂತೆ; II
ರಾಮನ ಕಾಣದೆ, ರಾಕ್ಷಸಿಯರ ಹಿಂಸೆಗೆI
ಪ್ರವಾಹಕ್ಕೆ ಕೊಚ್ಚಿದ ನದಿದಡದಂತಾಗಿದೆ ನನ್ನ ದೆಶೆ; II
ಸಿಂಹ ನಡುಗೆಯ, ಹಿತ ಭಾಷೆಯ, ಸದ್ಮಾರ್ಗಿ ರಾಮನನುI
ಕಾಣುವ ಭಾಗ್ಯವಿದೇಯೇ ನನ್ನ ಕಮಲಾಕ್ಷಿಗಳಿಗೆ?II
ಸುವಾತ್ಮ ರಾಮನಿಲ್ಲದೆ ಹಿಂಸೆಯಾಗುತಿದೆ ನನಗೆI
ವಿಷ ಸೇವನೆಯ ಯಾತನೆಯಂತೆ; II
ಪೂರ್ವ ಜನ್ಮದ ಪಾಪದ ಫಲವೇI
ಈ ಯಾತನೆ, ದುಃಖ, ವಿರಹ-ವೇದನೆ? II
ದುಃಖಗಳೊಂದಿಗೆ ಜೀವ ತ್ಯಜಿಸಬೇಕೆಂಬ ಆಸೆI
ರಾಕ್ಷಸಿಯರ ಕಾವಲ ಮಧ್ಯೆ ಈಡೆರಿಯುತ್ತಿಲ್ಲಾ ಆಸೆ; II
ಧಿಕ್ಕಾರವಿದೆ ನರಸ್ಥಿತಿಗೆ, ಧಿಕ್ಕಾರವಿದೆ ಸೇರೆವಾಸಕ್ಕೆI
ಸಾಧ್ಯವಾಗಿತ್ತಿಲೇಕೇ ಎನಗೆ ಆತ್ಮಹತ್ಯೆಗೆ? II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ದುಃಖಿತ ಹೆದರಿದ ಖಿನ್ನತೆಗೊಳಗಾದ ದುಸ್ಥಿತಿಯಲ್ಲಿಯ ಸೀತೆಯ ಮನಸ್ಸಿನ ಚಿತ್ರ ಮತ್ತು ಅವಳ ಪ್ರತ್ಯುತ್ತರಗಳನ್ನು ವಿವರಿಸಿದ ಅಂಶಗಳು ಇಂತಿವೆ: (1)ದೃಢಸಂಕಲ್ಪದ ಸ್ತ್ರೀ ಮನಸ್ಸು: ಸ್ತ್ರೀಯ ಮನಸ್ಸಿನ ಸಂಕಲ್ಪ ದೃಢವಾಗಿರುತ್ತದೆ ಎಂಬುದಕ್ಕೆ ಸೀತೆಯು ಭಯದ ಮಧ್ಯೆಯೂ ಅಳುಕದೆ ದುಃಖದಿಂದ ತಡವರಿಸುತ ರಾಕ್ಷಸಿಯರಿಗೆ “ನರಸ್ತ್ರೀ ರಾಕ್ಷಸನ ಪತ್ನಿಯಾಗಲು ಯೋಗ್ಯಳಲ್ಲ, ನಾನು ನಿಮ್ಮ ಮಾತು ಕೇಳಲಾರೆ, ನಿಮ್ಮಿಚ್ಚೆಯಂತೆ ನನ್ನನ್ನು ನೀವು ತಿಂದುಬಿಡಿ” ಎಂದು ಕೊಟ್ಟ ಉತ್ತರವೇ ಉತ್ತಮ ನಿದರ್ಶನ. (2) ಪರವಶ ಸ್ತ್ರೀಯ ಅಸಹಾಕ ಸ್ಥಿತಿ: ಬಲವಂತದಿಂದ ಪರಪುರುಷರ ವಶಕ್ಕೆ ಸಿಕ್ಕ ಸ್ತ್ರೀಯ ಚಿಂತಾಜನಕ ಸ್ಥಿತಿಯನ್ನು ಸೀತೆಯ ಮೂಲಕ ಆದಿಕವಿ ಹೀಗೆ ವಿವರಿಸಿರುವರು “ರಾವಣನ ಹೆದರಿಕೆ, ರಾಕ್ಷಸಿಯರ ಬೆದರಿಕೆ ಮಧ್ಯೆ ಸೀತೆಯು ಹಿಂಡಿನಿಂದ ತಪ್ಪಿಸಿಕೊಂಡು ಅರಣ್ಯದಲಿ ಅಲೆದಾಡುವ ಜಿಂಕೆಯು ತೋಳಗಳ ಮಧ್ಯೆ ಸಿಕ್ಕಂತೆ ಭಯಭೀತಲಾಗಿ ಕುಗ್ಗಿದಳು, , ಶೋಕಪಿಡಿತ ಸೀತೆ ನೆಮ್ಮದಿ ಕಾಣಲಿಲ್ಲ; ಇಲ್ಲಿ ಸೀತೆಯ ಬದುಕಿನ ಸ್ಥಿತಿಯು ಅನಾಥ ಮಗುವಿನಂತೆ, ಸಮುದ್ರಮಧ್ಯೆ ಬಿರುಗಳಿಗೆ ಸಿಕ್ಕ ಹಡಗಿನಂತೆ ಹಾಗು ರಾಮನ ಕಾಣದೆ ಸೀತೆ ದೆಶೆ ರಾಕ್ಷಸಿಯರ ಹಿಂಸೆಗೆ ಪ್ರವಾಹಕ್ಕೆ ಕೊಚ್ಚಿದ ನದಿದಡದಂತಾಗಿದೆ; ರಾಕ್ಷಸಿಯರಿಗೆ ಅಂಜಿ ಸೀತೆಯು ಬಿರುಗಾಳಿಗೆ ಬಿದ್ದ ಬಾಳೆಗಿಡದಂತೆ ನಡುಗುತ ಕಳೆಗುಂದಿದಳು ಆದರೆ ದುಃಖದಲಿ ಅತ್ತಿತ್ತ ನಡೆದಾಡುವ ಸೀತೆಯು ಹನುಮಾನನಿಗೆ ಬುಸುಗುಡುವ ಸರ್ಪದಂತೆ ಕಂಡಳು”.ಇಲ್ಲಿ ಕೋಪವಿದೆ, ತಾಪವೂ ಇದೆ.ಸೂಕ್ತ ಅಲಂಕಾರಗಳ ಬಳಿಕೆ ಇದೆ; (3) ‘ಅಕಾಲ ಮರಣ ಸ್ತ್ರೀಗೂ, ಪುರುಷನಿಗೂ ಕಠಿಣ’: ಆದಿಕವಿ ವಾಲ್ಮೀಕಿಯು ಸೂಕ್ತ ನಾಣ್ನುಡಿ ಬಳಕೆ ಮೂಲಕ ವಿಷಯ ಮನವರಿಕೆ ಮಾಡಿಕೊಡುವ ಕಾವ್ಯ ಕಲೆ ಅದ್ಭುತ, ದುಃಖದಲಿ ನೊಂದ ಸೀತೆಯು ರೋಧಿಸುವಾಗ “ ಓ ರಾಮಾ, ಓ ಲಕ್ಷ್ಮಣಾ, ಓ ಅತ್ತೆ ಕೌಶಲ್ಯ, ಓ ಸುಮಿತ್ರಾ, ರಾಮನಿಲ್ಲದೆ ನಾನು ಇಲ್ಲಿ ರಾಕ್ಷಸಿಯರ ಉಪಟಳ, ಶೋಕದ ಹಿಂಸೆ ಮಧ್ಯೆ ಬದುಕಿರುವೆ; ‘ಅಕಾಲ ಮರಣ ಸ್ತ್ರೀಗೂ, ಪುರುಷನಿಗೂ ಕಠಿಣ’ ಎಂಬ ಗಾದೆಯಂತೆ ನನಗೆ ಮರಣ ಬಾರದೆ ನರಳುತ್ತಿರುವೆ” ಎಂದು ನಾಣ್ನುಡಿಯ ಪ್ರಯೋಗ ಮಾಡಿದ್ದು ಇದೆ.ಸೀತೆಯು ಅಕಾಲ ಮರಣ ಅಸಾಧ್ಯ ಕಾರಣದಿಂದಾಗಿ ಒಂದು ಕ್ಷಣ ಆತ್ಮಹತ್ಯೆ ಬಗ್ಗೆ ಯೋಚಿಸುವಳು,ಅದು ಸ್ತ್ರೀ ಮನಸ್ಸಿನ ಸ್ಥಿತಿ ತೊರಿಸುವದು, ಸ್ತ್ರೀ ಯಲ್ಲಿ ಆತ್ಮಹತ್ಯೆ ಪ್ರಕರಣ ಜಾಸ್ತಿ ಇರಲು ಇಂತಹ ಮನಸ್ಥಿತಿ ಕಾರಣ;(4) ಪೂರ್ವಜನ್ಮದ ಫಲ: ‘ವರ್ತಮಾನ ಜನ್ಮದಲ್ಲಿಯ ಸುಖ, ದುಃಖಗಳು ಪೂರ್ವಜನ್ಮದ ಕರ್ಮದ ಫಲಗಳು’ ಎಂಬ ನಂಬುಗೆಯ ‘ಕರ್ಮಪ್ರತಿಫಲ ಸಿದ್ಧಾಂತ’ದ ಪ್ರಸ್ತಾವಣೆಯನ್ನು ಆದಿಕವಿ ವಾಲ್ಮೀಕಿಯು ಈ ಪ್ರಸಂಗದಲ್ಲಿ ನೀಡಿದ್ದು ಸೀತೆಯ “ನನಗೆ ಸುವಾತ್ಮ ರಾಮನಿಲ್ಲದೆ ಹಿಂಸೆಯಾಗುತಿದೆ ವಿಷ ಸೇವನೆಯ ಯಾತನೆಯಂತೆ; ಈ ಯಾತನೆ, ದುಃಖ, ವಿರಹ-ವೇದನೆ ಪೂರ್ವ ಜನ್ಮದ ಪಾಪದ ಫಲವೇ? ದುಃಖಗಳೊಂದಿಗೆ ಜೀವ ತ್ಯಜಿಸಬೇಕೆಂಬ ನನಗೆ ಆಸೆ ಆದರೆ ರಾಕ್ಷಸಿಯರ ಕಾವಲ ಮಧ್ಯೆ ಅದು ಸಾಧ್ಯವಾಗುತ್ತಿಲ್ಲ; ನನ್ನ ಈ ನರಸ್ಥಿತಿಗೆ ಧಿಕ್ಕಾರ, ಸೇರೆವಾಸಕ್ಕೆ ಧಿಕ್ಕಾರ; ನನಗೆ ಸಾಧ್ಯವಾಗಿತ್ತಿಲೇಕೇ ಆತ್ಮಹತ್ಯೆಗೆ?” ಈ ಮಾತುಗಳಲ್ಲಿ ಸ್ತ್ರೀಯ ಸಾಮಾಜಿಕ ಮನಸ್ಥಿತಿ ಸ್ಪಷ್ಟಪಡಿಸಿರುವರು.
.ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
