ರಾಕ್ಷಸರ ಲಂಕೆ ಹುಡುಕೊಂಡು ಬಂದೇಬರತಾರೆ ರಾಮ

By admin


ರಾಕ್ಷಸರ ಲಂಕೆ ಹುಡುಕೊಂಡು ಬಂದೇಬರತಾರೆ ರಾಮ ಲಕ್ಷ್ಮಣ, I
ಸಂಹರಿಸುತ ರಾಕ್ಷಸರನು; ಸ್ಮಶಾನವಾಗುವದು II
ಶೀಘ್ರವೆ ಲಂಕೆ, ಚಿತೆಗಳುರಿಯುವವು, I
ಹೊಗೆ ಮಡಗಟ್ಟುವದು, ರಣಹದ್ದುಗಳು ಜಮಾಯಿಸುವವು; II
ಎನ್ನ ಬಯಕೆ ಈಡೆರಿವುದು ಶೀಘ್ರ , ರಾಕ್ಷಸರ ನಾಶ,I
ಮಣ್ಣುಮುಕ್ಕುವುದು ಲಂಕೆ ವೈಭವಹೀನಳಾಗಿ; II
ನಾಶವಾಗುವನು ಪಾಪಿ ದುಷ್ಟ ರಾವಣ,I
ರೋಧಿಸುವಳು ಆಜೇಯಿ ಲಂಕೆ ವಿಧುವೆಯಾಗಿ; II
ಶೀಘ್ರದಲಿ ಲಂಕೆಯ ಮನೆ ಮನೆಗಳಲ್ಲಿ ಕೇಳಿಬರುವುದು I
ಹೆಂಡತಿ, ಮಕ್ಕಳ, ಸಂಬಂಧಿಕರ ರೋಧನ; II
ದುಷ್ಟ ರಾವಣ ಎನಗೆ ನೀಡಲಿ ಯಾವುದೇ ಗಡವು,I
ಮರಣ ದಂಡನೆ, ಆವೆಲ್ಲವೂ ನಿರರ್ಥಕ; II
ಅರಿಯದೇ ಯಾವುದೇ ರಾಕ್ಷಸಿ ಹೇಸಿ ಕೃತ್ಯ ಎಸಗಲಿ,I
ದುರ್ಗುಣ ಮಾಂಸಭಕ್ಷರು ತಿಳಿಯರು ಸದ್ಮಾರ್ಗ; II
ರಾಮನ ಚಿಂತೆಯ ದೇಹವನು ಸೇವಿಸಲಿ ರಾವಣ ಬೆಳಗಿನ ಉಪಹಾರವಾಗಿ,I
ರಕ್ತಾಕ್ಷಿ ರಾಮನಿಲ್ಲದೆ ಬದುಕೇನು; II
ವಿಷಕೊಟ್ಟರೆ ತಕ್ಷಣ ಯಾರಾದರೂ ಎನಗೆI
ಪಾದ ಸೇರುವೆ ಈ ಕ್ಷಣ ಯಮದೇವನ; II
ಶೂರ ರಾಮನು ಪರಲೋಕ ಸೇರಿದನೆI
ಸಹಿಸದೆ ಎನ್ನ ವಿರಹ ಶೋಕನು; II
ಕಾಣುವವರಲಿ ಬೆಳೆದ ಸ್ನೇಹ ಕಾಣದರಲ್ಲಿ ಬೆಳೆಯದು!I
ಕೃತಘ್ನನು ಸ್ನೇಹ ತೊರೆವನು, ಕೃತಘ್ನನಲ್ಲಾ ಎನ್ನ ರಾಮ; II
ಇಲ್ಲವೇ ಎನ್ನಲಿ ಸದ್ಗುಣಗಳು! ನಾನು ನತದೃಷ್ಟಳೇ!!I
ರಾಮನಿಲ್ಲದೇ ನಶಿಸುತ್ತಿಲ ನಾನೇಕೆ ? II
ಶೂರ ಶತ್ರುವಿನಾಶಿ ರಾಮನ ಕಳಕೊಂಡI
ನನ್ನಂತಹವಳಿಗೆ ಸಾವೇ ಗತಿ; II
ಕುತಂತ್ರದಿ ರಾವಣ ಹತ್ಯೆಗೈದನೇI
ರಾಮ ಲಕ್ಷ್ಮಣರನು ಅರಣ್ಯದಲಿ? II
ಇಲ್ಲವೇ, ರಾಮ ಲಕ್ಷ್ಮಣರು ಮರೆತು ಎನ್ನI
ವಾಸಿಸುತಿಹರೇ ಅರಣ್ಯದಲಿ ಗೆಡ್ಡೆ ಹಣ್ಣು ತಿನ್ನುತ; II
ಶೋಕದಿ ಸಾವು ಬರುತ್ತಿಲ್ಲ ಎನಗೆ, I
ಈ ಸ್ಥಿತಿ ವ ಸಮಯದಲಿ ಆತ್ಮಹತ್ಯೆಯೊಂದೆ ಗತಿ ಎನಗೆ; II
ಸುಖ ದುಃಖ ಭಾವನೆ ವಿಮುಕ್ತರು ಧನ್ಯರುI
ಪಾಪ, ಪುಣ್ಯ ಭ್ರಮೆಗಳಿಂದ ಮುಕ್ತರು; II
ಸುಖ, ದುಃಖ ವಿಮುಕ್ತ ಆತ್ಮಗಳುI
ಜಯ, ಭಯ ತೊರೆವ ಮಹಾತ್ಮರು;II
ರಾವಣ ಹೃತ, ರಾಮ ತೊರೆದ ಎನಗೆI
ದೇಹ ತ್ಯಾಗವೊಂದೇ ಗತಿ”.II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಸೀತೆಯ ಆಸೆ ನಿರಾಸೆಗಳ ರೋಧನೆಯ ಮಾತುಗಳ ಮಧ್ಯೆ ಆಧ್ಯಾತ್ಮ ಚಿಂತನೆಗಳನ್ನು ಹಂಚಿಕೊಂಡಿರುವರು:(1) ದುರ್ಗುಣಿಗಳಿಗೆ ಸದ್ಮಾರ್ಗ ತಿಳಿಯದು: ರಾಕ್ಷಸರ ದರ್ಗುಣಗಳನ್ನು ಕಂಡ ಸೀತೆ ಹೀಗೆ ನುಡಿದಳು “ರಾಮನ ಚಿಂತೆಯ ಈ ನನ್ನ ದೇಹವನು ರಾವಣ ಬೆಳಗಿನ ಉಪಹಾರವಾಗಿ ಸೇವಿಸಲಿ…. ರಾಮನ ಸಾಮರ್ಥ್ಯ ಅರಿಯದ ದುಷ್ಟ ರಾವಣ ನನಗೆ ನೀಡಲಿ ಯಾವುದೇ ಗಡವು, ಮರಣ ದಂಡನೆ, ಆವೆಲ್ಲವೂ ನಿರರ್ಥಕವಾಗುವವು; ಅರಿಯದೇ ಯಾವುದೇ ರಾಕ್ಷಸಿ ಹೇಸಿ ಕೃತ್ಯ ಎಸಗಲಿ, ದುರ್ಗುಣ ಮಾಂಸಭಕ್ಷರು ಸದ್ಮಾರ್ಗ ತಿಳಿಯರು.”(2) ಕಣ್ಮುಂದೆ ಇಲ್ಲದವರು ಮನಸ್ಸಿನಲ್ಲೂ ಇರರು: ಯಾವುದು ಸದಾ ಕಣ್ಮುಂದೆ ಇರುವದೋ ಅದು ಮಾತ್ರ ಮನಸ್ಸಿನಲ್ಲಿ ಉಳಿಯುವದು ತಾನು ರಾಮನ ಕಣ್ಣಿನಿಂದ ದೂರಾದ ಕಾರಣ ರಾಮನ ಮನಸ್ಸಿನಿಂದಲೂ ದೂರದೆ ಎಂಬ ಭಯದಲಿ ಸೀತೆ ಹೀಗೆ ರೋಧಿಸಿದಳು “ಕಾಣುವವರಲಿ ಬೆಳೆದ ಸ್ನೇಹ ಕಾಣದರಲ್ಲಿ ಬೆಳೆಯದು! ಕೃತಘ್ನನು ಸ್ನೇಹ ತೊರೆವನು, ಆದರೆ ಕೃತಘ್ನನಲ್ಲಾ ನನ್ನ ರಾಮ; ರಾಮನು ನನ್ನನ್ನು ನಿರ್ಲಕ್ಷಿಸಲು ಕಾರಣ ನನ್ನಲಿ ಸದ್ಗುಣಗಳು ಇಲ್ಲವೇ! ನಾನು ನತದೃಷ್ಟಳೇ!!”. (3) ಆತ್ಮವಿಮೋಚನೆ: ಆದಿಕವಿ ವಾಲ್ಮೀಕಿಯು ಸೀತೆ ಮೂಲಕ ಆತ್ಮವಿಮೋಚನೆ ಚಿಂತನೆಯನ್ನು ಹೀಗೆ ತಿಳಿಸಿರುವರು “ಸುಖ ದುಃಖ ಭಾವನೆಗಳ ವಿಮುಕ್ತರು(ತೊರೆದವರು) ಧನ್ಯರು, ಅವರು ಪಾಪ, ಪುಣ್ಯ ಭ್ರಮೆಗಳಿಂದ ಮುಕ್ತರು; ಸುಖ, ದುಃಖಗಳಿಂದ ವಿಮುಕ್ತ ಆತ್ಮಗಳು ಜಯ, ಭಯ ತೊರೆದ ಮಹಾತ್ಮರು”.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ