ಸ್ತುತ್ಯಾರ್ಹ, ಸ್ತುತಿಸಲ್ಪಡುವ ಸೀತೆ, ರಾಮ ಭಾಗ-75

By admin


ಸ್ತುತ್ಯಾರ್ಹ, ಸ್ತುತಿಸಲ್ಪಡುವ ಸೀತೆ, ರಾಮ,I
ಗುಣಗಾನದಲಿ ಪುನಃ ಮಗ್ನನಾದ ಹರಿ ಪುಂಗವ II
ಕಂಡು ಸೀತೆ-ವ್ಯಥೆ ಸುರಿಸಿದ ಕಣ್ಣೀರುI
ಹನುಮ, ಬಿಕ್ಕಿ ಬಿಕ್ಕಿ ಅಳುತ ನುಡಿದ, II
“ಕಲಿಸಿದ ಗುರು ಮಾನ್ಯ, ಲಕ್ಷ್ಮಣ ಗುರು ಪ್ರೀಯ,I
ಸೀತೆ ದುಃಖಪೀಡಿತವಾದಾಗ ಕಾಲವೇ ಸ್ತಬ್ಧ, II
ತಿಳಿದು ರಾಮ ಲಕ್ಷ್ಮಣರ ಪ್ರಯತ್ನ ಸೀತೆ ಚಿಂತಿಸಳುI
ಮಳೆಗಾಲದಲಿ ಗಂಗಾನದಿ ಅಳುಕದಂತೆ, II
ಯೋಗ್ಯರು ಗುಣ ನಡತೆಯಲಿ ಪರಸ್ಪರ,I
ಸೀತೆ ರಾಮನಿಗೆ, ರಾಮ ಸೀತೆಗೆ; II
ಕಪ್ಪು ವಿಶಾಲಾಕ್ಷಿ ಸೀತೆಗಾಗಿ ರಾಮ ವಧಿಸಿದI
ಮಹಾಬಲಿ ವಾಲಿ, ರಾವಣ-ಸಮ ಕಬಂಧನ, II
ಮಹೇಂದ್ರ ಶಂಬರನ ವಧಿಸಿದಂತೆ ಸಬಲ ರಾಮ ವಧಿಸಿದI
ಅರಣ್ಯದಲಿ ಭಯಾನಕ ಭಯಂಕರ ವಿರಾಧನ, II
ಜ್ವಾಲೆನಾಲಿಗೆ ಸಮ ಬಾಣಗಳಿಂದ ರಾಮ ವಧಿಸಿದI
ಭಯಾನಕ ಹದಿನಾಲ್ಕುಸಹಸ್ರ ರಾಕ್ಷಸರನ, II
ಖರ,ತ್ರಿಶಿರ, ದೂಷಣ ಯುದ್ಧದಲಿ ಹತರಾದರುI
ರಾಮನ ಭಯಂಕರ ಬಾಣಗಳಿಂದ, II
ವಾಲಿಯಿಂದ ಹಿಂಪಡೆಯಲಸಾಧ್ಯ ಸಂಪತ್ತನುI
ಸುಗ್ರೀವ ಪಡೆದ ಸೀತೆ-ಕಾರಣಕ್ಕಾಗಿ,ಲೋಕ ಪೂಜಿತ, II
ನದಿ ಸಮುದ್ರಗಳ ದಾಟಿದೆ, ನಗರವನು ಜಾಲಾಡಿಸಿದೆI
ವಿಶಾಲಾಕ್ಷಿ ಸೀತೆಗಾಗಿ, ರಾಮನ ಸ್ನೇಹಕ್ಕಾಗಿ, II
ಒಂದುವೇಳೆ ರಾಮ, ಸೀತೆಗಾಗಿ, ಇಡೀ ಭೂಮಿ ಮಹಾಸಾಗರI
ಬುಡಮೇಲ ಮಾಡಿದರೂ, ಅದು ಸರಿ ಎನಗೆ, II
ಕಮಲದಂತೆ ಕೆಸರಿನಲಿ ಹುಟ್ಟಿದ ಸೀತೆ,I
ಅಜೇಯ ದಶರಥನ ಸೊಸೆ ಸೀತೆ, II
ಮಹಾಸದ್ಗುಣಿ ರಾಮನ ನಿಷ್ಠ-ಪತ್ನಿ ಸೀತೆI
ರಾಕ್ಷಸರ ವಶದಲಿ ನೊಂದಿಹಳು, ಇಗೋ,II
ಸ್ನೇಹಕ್ಕಾಗಿ ರಾಮನ ಸರ್ವಭೋಗ ಸುಖ ತೆಜಿಸಿI
ಅಪ್ಪಿಹಳು ನಿರ್ಜನ ವನದ ದುಃಖ ನೋವುಗಳನ್ನು, II
ಸುಖವಾಗಿಹಳು ವನದ ಗೆಡ್ಡೆ ಹಣ್ಣು ಸೇವಿಸಿ I
ಸೀತೆ, ಪತಿ ರಾಮನ ಸಾನಿಧ್ಯದಲಿ, II
ಕಳೆಯುತ್ತಿಹಳು ಸ್ವರ್ಣ ಉಡುಪಿನಲಿ ನಿತ್ಯ ಕಾಲI
ಸಹಿಸಿ ಎಲ್ಲ ದುಃಖಗಳನು, ಸೀತೆ ದುರ್ದೈವಿ, II
ಬಾಯಾರಿಕೆಯಿಂದ ನೀರು ಹುಡುಕಿದಂತೆ ರಾಮI
ಹುಡುಕುತಿಹನು ರಾವಣ-ಪೀಡಿತ ಸೀತೆಯನು, II
ಕಳಕೊಂಡ ರಾಜ್ಯ ಹಿಂಪಡೆದ ಸಂತೋಷದಂತೆ I
ಸೀತೆ-ಸುದ್ಧಿ ತಿಳಿದು ಸಂಭ್ರಮಿಸುವನು ರಾಮ, II
ಕಳಕೊಂಡು ಸುಖ ಸಂಬಂಧಿಗಳನ್ನು ಸೀತೆI
ರಾಮನ ಸೇರುವ ಬಯಕೆಯಿಂದ ವಂಚಿತೆ, II
ರಾಕ್ಷಸರು, ಹೂಗಳು,ಹಣ್ಣುಗಳು ಗಿಡ-ಬಳ್ಳಿಗಳು ಇದ್ದರೂ ಸುತ್ತ, I
ಪರಿವೆಯಿಲ್ಲದೇ ರಾಮ-ಧ್ಯಾನದಲಿ ಮಗ್ನಳು, II
ಪತ್ನಿಗೆ ಪತಿಯೇ ಶೃಂಗಾರದೊಡಿವೆI
ಆಭರಣಹೀನಳು ರಾಮನಿಲ್ಲದ ಸೀತೆ’II
ಸೀತೆ ದುಃಖದ ಸುಳಿಯಲ್ಲಿಯೂ I
ಖಿನ್ನತೆ ಸುಳಿಯದು ಬಳಿ ರಾಮನ, II
ನಿತ್ಯ ರಾಮ ಲಕ್ಷ್ಮಣರ ರಕ್ಷಣೆಯಲಿದ್ದ ಸೀತೆ, ಇಹಳುI
ಗಿಡದ ಬುಡದಲಿ ಇಂದು ರಾಕ್ಷಸಿಯರ ಸುಪರ್ಧಿಯಲ್ಲಿ, II
ಜತೆಗಾರನಿಲ್ಲದ ಚಕ್ರವಾಕನಂತೆ, ಹಿಮದಿ ಹತನಾದ ಕಮಲದಂತೆ,I
ಇಹಳು ಸೀತೆ ರಾಮನ ವಿರಹದ ಶೋಚನಿ ಸ್ಥಿತಿಯಲಿ, II
ಕರಗುವ ಹಿಮ ಚಂದ್ರನ ಕಾಂತಿ ಶೀತಿಲಿಸಿದಂತೆ ಹೂ ಸುರಿಸಿ I
ಸೀತೆ ಶೋಕ ಹೆಚ್ಚಿಸಿದವು ಬಾಗಿದ ಅಶೋಕ-ಕೊಂಬೆಗಳು, II
ನಿಸ್ಸಂದೇಹ, ಇವಳೇ ಸೀತೆ” ನುಡಿಯುತI
ನೋಡುತ ಕುಳಿತ ಗಿಡದಲಿ ವಾನರಶ್ರೇಷ್ಠ. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಹನುಮನ ವ್ಯಥೆ ಬಣ್ಣಿಸುವದರ ರೂಪದಲ್ಲಿ ತಮ್ಮ ಸಹಜ ವೀಕ್ಷಣೆಯ ಸೂಕ್ಷ್ಮತೀಸೂಕ್ಷ್ಮ ಅನುಭವಗಳನ್ನು ಅಲಂಕಾರಗಳ ಮೂಲಕ ಕಾವ್ಯದಲ್ಲಿ ಧಾರೆಯೆರೆದಿರುವರು: (1) ಹನುಮನ ಅಳಲು: ಅಶೋಕವನದಲ್ಲಿ ಸೀತೆಯ ವ್ಯಥೆ ಕಂಡ ಹನುಮನು ಬಿಕ್ಕಿ ಬಿಕ್ಕಿ ಅಳುತ ಕಣ್ಣೀರು ಸುರಿಸಿದನು ಹಾಗು “ಸೀತೆ ದುಃಖ ಪೀಡಿತವಾದಾಗ ಕಾಲವೇ ಸ್ತಬ್ಧವಾದಂತಿದೆ” ಎಂದು ಉಧ್ಗರಿಸಿದನು. (2) ಉಪಮಾಲಂಕಾರಗಳ ಸುರಿಮಳೆ: ಹೆಜ್ಜೆ ಹೆಜ್ಜೆಗೂ ಉಪಮಾಲಂಕಾಗಳ ಬಳಿಕೆ ಇದೆ ಉದಾಹರಣೆ: “ಮಳೆಗಾಲದಲಿ ಗಂಗಾನದಿ ಅಳುಕದಂತೆ ರಾಮ ಲಕ್ಷ್ಮಣರು ತನ್ನ ಹುಡುಕುವ ಪ್ರಯತ್ನ ತಿಳಿದು ಸೀತೆ ಚಿಂತಿಸಳು”. (3)ರಾಮನಿಂದ ಯಾವುದೇ ಪ್ರತಿಕಾರ ಧರ್ಮಸಮ್ಮತ: ಸೀತೆ ರಾಮನಿಗೆ, ರಾಮ ಸೀತೆಗೆ ಗುಣ ನಡತೆಯಲಿ ಪರಸ್ಪರು ಯೋಗ್ಯರು, ಸೀತೆ ರಕ್ಷಣೆಗಾಗಿ ರಾಮನು ವಿರಾಧ, ಖರ, ದೂಷಾಣ, ತ್ರಿಶಿರ, ಹದಿನಾಲ್ಕು ಸಾವಿರ ರಾಕ್ಷಸರನು ಸಂಹರಿಸಿದ್ದ ಧರ್ಮಸಮ್ಮತ— “ರಾಮನು ಸೀತೆಗಾಗಿ ಇಡೀ ಭೂಮಿ ಮತ್ತು ಮಹಾಸಾಗರಗಳನ್ನು ಬುಡಮೇಲ ಮಾಡಿದರೂ ಅದು ನನಗೆ ಸರಿ ಎಸಿಸುವದು”. (4) ಸೀತೆಯ ವ್ಯಕ್ತಿತ್ವ: ಕಮಲದಂತೆ ಸೀತೆಯು ಕೆಸರಿನಲಿ ಹುಟ್ಟಿದವಳು, ಅಜೇಯ ದಶರಥನ ಸೊಸೆ ಮತ್ತು ಮಹಾಸದ್ಗುಣಿ ರಾಮನ ನಿಷ್ಠ-ಪತ್ನಿ, ಅಂತಹವಳೂ ಇಂದು ರಾಕ್ಷಸರ ವಶದಲಿ ಹಿಂಸೆ ಪಡುತ್ತಿರುವದು ದೈವದಾಟ, ಅವಳು ಬದುಕಿನ್ನುದ್ದಕ್ಕೂ ದುರ್ದೈವಪೀಡಿತಳು ಎಂಬದು ಆದಿಕವಿಯ ನಿಲುವಾಗಿದೆ; ರಾಮನ ಸ್ನೇಹಕ್ಕಾಗಿ ಸೀತೆಯು ತನ್ನ ಸರ್ವಭೋಗ ಸುಖಗಳನ್ನು ತೆಜಿಸಿ ನಿರ್ಜನ ವನದ ದುಃಖ ನೋವುಗಳನ್ನು ಅಪ್ಪಿಕೊಂಡಿರುವಳು, ಸುಖ ಸಂಬಂಧಿಗಳನ್ನು ಕಳಕೊಂಡ ಸೀತೆಯು ರಾಮನ ಸೇರುವ ಬಯಕೆಯಿಂದ ವಂಚಿತಳಾಗಿದ್ದಳು; ರಾಕ್ಷಸರು, ಹೂಗಳು,ಹಣ್ಣುಗಳು ಗಿಡ-ಬಳ್ಳಿಗಳು ಇದ್ದರೂ ತನ್ನ ಸುತ್ತುಮುತ್ತ ಅವುಗಳ ಪರಿವೆಯಿಲ್ಲದೇ ಸೀತೆಯು ರಾಮ-ಧ್ಯಾನದಲಿ ಮಗ್ನಳಾಗಿದ್ದಳು; ಪತ್ನಿಗೆ ಪತಿಯೇ ಶೃಂಗಾರದೊಡಿವೆ, ರಾಮನಿಲ್ಲದ ಸೀತೆ ಆಭರಣಹೀನಳಾಗಿದ್ದಳು; ಕರಗುವ ಹಿಮ ಚಂದ್ರನ ಕಾಂತಿ ಶೀತಲಗೊಳಿಸಿದಂತೆ ಬಾಗಿದ ಅಶೋಕವೃಕ್ಷ ಕೊಂಬೆಗಳು ಸುರಿಸುವ ಹೂ-ಮಳೆ ಕಂಡು ಸೀತೆಯ ಶೋಕ ಹೆಚ್ಚಿತು; ಒಟ್ಟಿನಲ್ಲಿ ಸೀತೆಯು ಧರ್ಮನಿಷ್ಠಳು, ಪತಿನಿಷ್ಠಳು, ತ್ಯಾಗಿ ಮತ್ತು ಸಂನ್ಯಾಸಿ ಮನದ ದುರ್ದೈವಪೀಡಿತ ಮಹಿಳೆ. (5) ಅಟಲ ಸ್ವಭಾವದ ರಾಮ: ಸೀತೆಯ ದುಃಖದ ಸುಳಿಯಲ್ಲಿಯೂ ರಾಮ ಖಿನ್ನತೆಗೊಳಗಾಗಿರಲಿಲ್ಲ; ಬಾಯಾರಿಕೆಯಿಂದ ನೀರು ಹುಡುಕಿದಂತೆ ರಾಮನು ರಾವಣನ ಪೀಡಿನೆಗೊಳಗಾದ ಸೀತೆಯನು ಹುಡುಕುತಿರುವನು; ಒಂದು ವೇಳೆ ಸೀತೆ ಜೀವಂತವಿದ್ದ ಸುದ್ಧಿ ರಾಮನಿಗೆ ತಿಳಿದರೆ ಅವನು ಕಳಕೊಂಡ ರಾಜ್ಯ ಹಿಂಪಡೆದ ಸಂತೋಷದಂತೆ ಸಂಭ್ರಮಿಸುವನು ಆಚರಿಸುವನು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ