
ಮನಸಿನ ದುಗುಡದಲಿ ರಾತ್ರಿ ಕಳೆದ ಲಕ್ಷ್ಮಣI
ಬೆಳಗಿನ ಜಾವದಲ್ಲಿ ಸುಮಂತ್ರನಿಗೆ ನುಡಿದ: II
“ ಓ ಸಾರಥಿ, ಸಿದ್ದಗೊಳಿಸು ವೇಗದ ಕುದುರೆ ರಥ,I
ಆರಾಮದಾಸನ ಅಳವಡಿಸು ಸೀತೆಗೆ ಪಯಣಿಸಲು, II
ರಾಜಾಜ್ಞೆಯಂತೆ ತಪಸ್ವಿಗಳ ನಾಡಿಗೆ ಹೋಗಬೇಕಿದೆI
ಎನ್ನ ನೇತೃತ್ವದಲಿ, ತಕ್ಷಣ ತೆಗೆದುಕೊಂಡು ಬಾ ರಥ”. II
“ಹಾಗೆ ಆಗಲಿ” ಎನ್ನುತ ಸುಮಂತ್ರ ತಕ್ಷಣ ಹೋಗಿI
ರಥ ತಂದು ಲಕ್ಷ್ಮಣನಿಗೆ ಸುಮಂತ್ರ ನುಡಿದ: II
“ ಓ ಸ್ವಾಮಿ, ರಥ ಸಿದ್ದವಿದೆ, ಮತ್ತೇನು ಮಾಡಲಿ!”I
ಕೇಳಿ ಸುಮಂತ್ರನ ನುಡಿ ಲಕ್ಷಣ ಪ್ರವೇಶಿಸಿದ ಅರಮನೆ, II
ಸೀತೆ ಬಳಿ ಬಂದು ಲಕ್ಷ್ಮಣ ಕೈಮುಗಿದು ನುಡಿದ:I
“ನೀವು ರಾಜ ಬಳಿ ವ್ಯಕ್ತ ಪಡಿಸಿದ ಇಚ್ಚೆಯಂತೆ ಸಿದ್ದವಾಗಿದೆ ರಥ,II
ನಿಮ್ಮ ಇಚ್ಚೆಯಂತೆ ಹೊರಡೋಣ ಗಂಗಾತೀರದ ತಪಸ್ವಿಗಳ ನಾಡಿನತ್ತI,
ತ್ವರೆ ಮಾಡು, ಓ ವೈದೇಹಿ”. ಕೇಳಿ ಲಕ್ಷ್ಮಣನ II
ಕೋರಿಕೆ ಸಂತೋಷ ಪಟ್ಟಳು ಸೀತೆ, I
ಆಭರಣಗಳನ್ನು ಧರಿಸಿ ಪಯಣಕ್ಕೆ ಸಿದ್ಧಳಾಗಿ ನುಡಿದಳು ಲಕ್ಷ್ಮಣನಿಗೆ: II
“ ಕೊಡುವೆ ಈ ಆಭರಣಗಳನ್ನು ಮುನಿಗಳ ಮಡದಿಗಳಿಗೆ”. I
“ ಒಳ್ಳೆ ಕಾರ್ಯ” ಎನ್ನುತ ಲಕ್ಷ್ಮಣ ಸೀತೆಯನು ಕೂಡ್ರಿಕೊಂಡುII
ಓಡಿಸಿದ ರಥ; ಉತ್ಸಾಹದಲಿ ಸೀತೆ ನುಡಿದಳು ಲಕ್ಷ್ಮಣನಿಗೆ:I
” ಓ ರಘುಕುಲಜನೆ, ಅಪಶಕುನಗಳನ್ನು ಕಾಣುತಿರುವೆ, II
ಹಾರಿತಿವೆ ಎಡಗಣ್ಣು ಎಡಾಂಗಗಳು, ಎನ್ನ ಉತ್ಸಾಹ ಉಕ್ಕುತಿದೆ, I
ಆದರೆ ಆವರಿಸಿದೆ ಮನದಲಿ ದುಗುಡ,ಓ ವಿಶಾಲಾಕ್ಷನೆ, II
ನಿನ್ನ ಅಣ್ಣನಿಗೆ ಇದು ಹರುಷ ತಂದಿದೆಯೆ? I
ನನ್ನ ಎಲ್ಲ ಅತ್ತೆಯರು ಸುಖವಾಗಿರಲಿ, ನಗರ ಪ್ರಜೆಗಳೆಲ್ಲ ಸುಖವಾಗಿರಲಿ.”II
ಹೀಗೆ ಸೀತೆ ಕಣ್ಣು ಮುಚ್ಚಿ ಪ್ರಾರ್ಥಿಸುವಾಗ, I
ದುಃಖದಲಿ ಲಕ್ಷ್ಮಣ ತಲೆ ಕೆಳಗೆ ಮಾಡಿ, “ ನೀನು ಸುಖವಾಗಿರು” ಎಂದನು;II
ಗೋಮತಿನದಿ ತಲುಪಿದರು, ವಿಶ್ರಾಮಿಸಿದರು ಮುನಿ ಆಶ್ರಮದಲಿ, I
ಮಾರನೆದಿನ ಮುಂಜಾವಿನಲಿ ನುಡಿದII
ಲಕ್ಷ್ಮಣ ಸಾರಥಿಗೆ: “ರಥದ ವೇಗವನ್ನು ಹೆಚ್ಚಿಸು, I
ಇಂದು ನಾನು ಗಂಗಾನದಿ ಜಲವನ್ನು ತಲೆಯಮೇಲೆ ಧರಿಸುವೆ, II
ತ್ರಾಂಬಕ ನಂತೆ.” ಕೇಳಿ ಆದೇಶ, ಸಾರಥಿ ನುಡಿದ ಸೀತೆಗೆ ಕೈಮುಗಿದು:I
“ ಗಟ್ಟಿಯಾಗಿ ಕುಳಿತುಕೊಳ್ಳಿ, ಓಡಿಸುವೆ II
ಮನದ ವೇಗದಲಿ ರಥ”. ಹೆಚ್ಚಿತು ರಥದ ವೇಗ, I
ನೋಡುತಿದ್ದಂತೆ ತಲುಪಿತು ರಥ ಮಧ್ಯಾಹ್ನವೇಳೆ ಗಂಗಾನದಿ ದಡ: II
ಲಕ್ಷ್ಮಣ ಗಂಗಾನದಿ ಜಲ ಹಾಕಿಕೊಂಡುI
ತಲೆ ಮೇಲೆ ಆರಂಭಿಸಿದ ಬಿಕ್ಕಿ ಬಿಕ್ಕಿ ಅಳಲು; II
ಲಕ್ಷ್ಮಣನ ದುಃಖಸ್ಥಿತಿ ಕಂಡು ಸೀತೆ ನುಡಿದಳು:I
“ಯಾಕೆ ಅಳುತ್ತಿರುವಿ? ಸೇರಿದ್ದೇವೆ ನಾವು ಜಾಹ್ನವಿದಡ,II
ಇದು ಎನ್ನ ಬಹುದಿನದ ಬಯಕೆಯಾಗಿತ್ತು, I
ಆ ಕ್ಷಣ ಬಂದಿದೆ, ನೀಡುತ್ತಿದೆ ಎನಗೆ ಸಂತೋಷ;II
ನೀನೇಕೆ ದುಃಖಿಸುತ್ತಿರುವಿ? ಓ ಮನುಷ್ಯ ವೃಷಭನೆ,I
ಎರಡು ದಿನಗಳಿಂದ ರಾಮನ ಕಾಣದ ದುಃಖವೇ? II
ಯಾವಾಗಲು ಅಣ್ಣನ ಸೇವೆಯಲ್ಲಿರುವವ ನೀ,I
ಜೀವಗಿಂತ ಹೆಚ್ಚು ಪ್ರೀಯನು ರಾಮ ಎನಗೆ, II
ಆದರೂ ಎನಗೆ ದುಃಖವಿಲ್ಲ, ಓ ಲಕ್ಷ್ಮಣಾ!I
ವರ್ತಿಸಬೇಡಾ ಚಿಕ್ಕ ಮಗುವಿನಂತೆ , ||
ದಾಟೋಣ ಮೊದಲು ಗಂಗಾನದಿ, I
ಭೇಟಿಯಾಗಿ ಮುನಿಗಳಿಗೆ, ಆಭರಣ ಹಂಚೋಣ ಅವರ ಮಡದಿಗಳಿಗೆ;II
ಅವರಿಗೆ ಗೌರವ ಸಲ್ಲಿಸಿ, ಒಂದು ದಿನI
ಅವರಾಶ್ರಮದಲ್ಲಿ ತಂಗಿ, ಮರಳೋಣ ಅಯೋಧ್ಯೆಗೆ: II
ಚಟಪಡಿಸುತ್ತಿವೆ ಎನ್ನ ಕಣ್ಣುಗಳು ನೋಡಲುI
ನರಶ್ರೇಷ್ಠ ಸಿಂಹದೇದೆಯ ರಾಮನ”. II
ಕೇಳುತ ಸೀತೆಯ ನುಡಿಗಳನ್ನು, ಕಣ್ಣಿರುI
ಒರಸಿಕೊಂಡು ಲಕ್ಷ್ಮಣ ಕೈಮುಗಿದು ನುಡಿದ ಸೀತೆಗೆ:II
“ ದೋಣಿ ಸಿದ್ದವಿದೆ” ಸೀತೆಯನ್ನು ಕುಳಿಸಿಕೊಂಡುI
ದೋಣಿಯಲಿ ದಾಟಿದ ಗಂಗಾನದಿ. II
ಉತ್ತರಕಾಂಡ
ಆದಿಕವಿ ವಾಲ್ಮೀಕಿಯು ಲಕ್ಷಣನು ರಾಮನ ಆದೇಶದಂತೆ ರಥದಲ್ಲಿ ಸೀತೆಯನ್ನು ಕೂಡ್ರಿಸಿಕೊಂಡು ಗೋಮತಿ ಮತ್ತು ಗಂಗಾನದಿಗಳನ್ನು ದಾಟಿ ಋಷಿ ಮುನಿಗಳ ಪ್ರದೇಶದತ್ತ ಕರೆದುಕೊಂಡು ಬರುವ, ಈ ಮಧ್ಯೆ ಲಕ್ಷಣನು ದುಃಖ ನೆನಪಿಸಿಕೊಂಡು ಅಳುವ ಮತ್ತು ಸೀತೆ ಅವನನ್ನು ಸಂತೈಸುವ ಪ್ರಸಂಗಗಳನ್ನು ವಿವರಿಸಿರುವರು, ಅದಲ್ಲದೇ ಆದಿಕವಿಯು (1) ಸೀತೆ ಬಯಕೆಯಂತೆ ಅರಣ್ಯದತ್ತ ಪಯಣ (2) ಲಕ್ಷ್ಮಣನ ಪ್ರಲಾಪ, (3) ಸೀತೆಯಿಂದ ಸಾಂತ್ವನ ಮತ್ತು (4) ಸೀತೆಯ ದಾನ ಸ್ವಭಾವ, ಹೀಗೆ ಕೆಲವು ಮಹತ್ವದ ಅಂಶಗಳನ್ನು ತಿಳಿಸಿರುವರು: ಮನಸಿನ ದುಗುಡದಲಿ ಲಕ್ಷ್ಮಣನು ರಾತ್ರಿ ಕಳೆದನು, ಬೆಳಗಿನ ಜಾವದಲ್ಲಿ ಎದ್ದು ಲಕ್ಷ್ಮಣನು ಸುಮಂತ್ರನಿಗೆ ಆದೇಶಿಸಿದನು “ ಓ ಸಾರಥಿ, ವೇಗದ ಕುದುರೆಯ ರಥವನ್ನು ಸಿದ್ದಗೊಳಿಸು, ಅದರಲ್ಲಿ ಸೀತೆಗೆ ಪಯಣಿಸಲು ಆರಾಮದಾಸನ ಅಳವಡಿಸು, ನನ್ನ ನೇತೃತ್ವದಲಿ ರಾಜಾಜ್ಞೆಯಂತೆ ತಪಸ್ವಿಗಳ ನಾಡಿಗೆ ಹೋಗಬೇಕಿದೆ, ನೀನು ತಕ್ಷಣ ರಥವನ್ನು ತೆಗೆದುಕೊಂಡು ಬಾ”. ಲಕ್ಷ್ಮಣನ ಆದೇಶ ಕೇಳಿ “ಹಾಗೆ ಆಗಲಿ” ಎನ್ನುತ ಸುಮಂತ್ರನು ತಕ್ಷಣ ಹೋಗಿ ರಥವನ್ನು ತಂದನು ಹಾಗು ಲಕ್ಷ್ಮಣನಿಗೆ ಕೋರಿದನು “ ಓ ಸ್ವಾಮಿ, ರಥವು ಸಿದ್ದವಿದೆ, ಮತ್ತೇನು ಮಾಡಲಿ!” ಸುಮಂತ್ರನು ರಥವನ್ನು ತಂದ ವಿಷಯಾವನಿಂದ ತಿಳಿದು ಲಕ್ಷ್ಮಣನು ಅರಮನೆಯನ್ನು ಪ್ರವೇಶಿಸಿದನು ಹಾಗು ಸೀತೆಯ ಬಳಿ ಬಂದು ಲಕ್ಷ್ಮಣ ಕೈಮುಗಿದು ಅವಳಗೆ ಅರುಹಿದನು “, ಓ ವೈದೇಹಿ ಮಾತೆ, ನೀವು ರಾಜಾ ರಾಮನ ಬಳಿ ವ್ಯಕ್ತ ಪಡಿಸಿದ ನಿಮ್ಮ ಇಚ್ಚೆಯಂತೆ ರಥವು ಪಯಣಕ್ಕೆಸಿದ್ದವಾಗಿದೆ; ನಿಮ್ಮ ಇಚ್ಚೆಯಂತೆ ಗಂಗಾತೀರದ ತಪಸ್ವಿಗಳ ನಾಡಿನತ್ತ ಹೊರಡೋಣ, ತ್ವರೆ ಮಾಡು”. ಲಕ್ಷ್ಮಣನ ಕೋರಿಕೆಯ ಮಾತುಗಳನ್ನು ಕೇಳಿ ಸೀತೆಯು ಸಂತೋಷ ಪಟ್ಟಳು, ಆಭರಣಗಳ್ನ್ನು ಧರಿಸಿ ಸೀತೆಯು ಪಯಣಕ್ಕೆ ಸಿದ್ಧಳಾಗಿ “ಈ ಆಭರಣಗಳನ್ನು ಮುನಿಗಳ ಮಡದಿಗಳಿಗೆ ಕೊಡುವೆ” ಎಂದು ಲಕ್ಷ್ಮಣನಿಗೆ ತಿಳಿಸಿದಳು. “ ಒಳ್ಳೆ ಕಾರ್ಯ” ಎನ್ನುತ ಲಕ್ಷ್ಮಣ ಸೀತೆಯನು ರಥದಲ್ಲಿ ಕೂಡ್ರಿಕೊಂಡು ರಥವನ್ನು ಓಡಿಸಿದನು; ಪಯಣದ ಉತ್ಸಾಹದಲಿ ಸೀತೆಯು ಲಕ್ಷ್ಮಣನಿಗೆ ಅರುಹಿದಳು” ಓ ರಘುಕುಲಜನೆ, ನನಗೆ ಅಪಶಕುನಗಳನ್ನು ಕಾಣುತಿರುವೆ, ಎಡಗಣ್ಣು ಎಡಾಂಗಗಳು ಹಾರುತಿವೆ(ಮಿಡಿಯುತ್ತಿವೆ), ನನ್ನ ಉತ್ಸಾಹ ಉಕ್ಕುತಿದೆ, ಆದರೆ ಮನದಲಿ ಏನೋ ದುಃಖ ಆವರಿಸಿದೆ, ಓ ವಿಶಾಲಾಕ್ಷನೆ, ನಿನ್ನ ಅಣ್ಣನಿಗೆ ಇದು ಹರುಷ ತಂದಿದೆಯೆ? ನನ್ನ ಎಲ್ಲ ಅತ್ತೆಯರು ಸುಖವಾಗಿರಲಿ, ನಗರ ಪ್ರಜೆಗಳೆಲ್ಲ ಸುಖವಾಗಿರಲಿ”, ಹೀಗೆ ಸೀತೆಯು ಕಣ್ಣು ಮುಚ್ಚಿ ಪ್ರಾರ್ಥಿಸುತಿದ್ದಳು; ಸೀತೆಯ ಮಾತುಗಳನ್ನು ಕೇಳುತ ಲಕ್ಷ್ಮಣನು ದುಃಖದಲಿ ತನ್ನ ತಲೆ ಕೆಳಗೆ ಮಾಡಿ, “ ನೀನು ಸುಖವಾಗಿರು” ಎಂದನು ರಥದಲ್ಲಿ ಲಕ್ಷ್ಮಣ ಮತ್ತು ಸೀತೆ ಗೋಮತಿ ನದಿ ತಲುಪಿದರು, ಆ ರಾತ್ರಿ ಮುನಿ ಆಶ್ರಮದಲಿ ವಿಶ್ರಾಮಿಸಿದರು, ಮಾರನೆದಿನ ಮುಂಜಾವಿನಲಿ ಲಕ್ಷ್ಮಣನು ಸಾರಥಿಗೆ ಕೋರುವು “ರಥದ ವೇಗವನ್ನು ಹೆಚ್ಚಿಸು, ಇಂದು ನಾನು ಗಂಗಾನದಿ ಜಲವನ್ನು ತ್ರಾಂಬಕ(ಶಿವ)ನಂತೆ ತಲೆಯ ಮೇಲೆ ಧರಿಸುವೆ.” ಲಕ್ಷ್ಮಣನ ಆದೇಶ ಕೇಳಿ ಸಾರಥಿಯು ಸೀತೆಗೆ ಕೈಮುಗಿದು ಅವಳನ್ನು ಕೇಳಿಕೊಂಡನು “ ಗಟ್ಟಿಯಾಗಿ ಕುಳಿತುಕೊಳ್ಳಿ, ರಥವನ್ನು ಮನದ ವೇಗದಲಿ ಓಡಿಸುವೆ”. ರಥದ ವೇಗ ಹೆಚ್ಚಿತು, ನೋಡು ನೋಡಿತಿದ್ದಂತೆ ರಥವು ಮಧ್ಯಾಹ್ನವೇಳೆ ಗಂಗಾನದಿ ದಡವನ್ನು ತಲುಪಿತು. ಲಕ್ಷ್ಮಣನು ಕೆಳಗಿಳಿದು ಗಂಗಾನದಿ ಜಲವನ್ನು ತನ್ನ ತಲೆ ಮೇಲೆ ಹಾಕಿಕೊಂಡು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದನು; ಲಕ್ಷ್ಮಣನ ದುಃಖಸ್ಥಿತಿ ಕಂಡು ಸೀತೆಯು ಅವನನ್ನು ಲಾಳಿಸಿದಳು “ ಯಾಕೆ ಅಳುತ್ತಿರುವಿ? ನಾವು ಜಾಹ್ನವಿ ನದಿದಡ ಸೇರಿದ್ದೇವೆ, ಇದು ನನ್ನ ಬಹುದಿನದ ಬಯಕೆಯಾಗಿತ್ತು, ಈಗ ಆ ಕ್ಷಣ ಬಂದಿದೆ, ಅದು ನನಗೆ ಸಂತೋಷ ನೀಡುತ್ತಿದೆ, ಅದರೆ ನೀನೇಕೆ ದುಃಖಿಸುತ್ತಿರುವಿ? ಇದು ನೀನು ಎರಡು ದಿನಗಳಿಂದ ರಾಮನ ಕಾಣದ ದುಃಖವೇ? ನೀನು ಯಾವಾಗಲು ಅಣ್ಣನ ಸೇವೆಯಲ್ಲಿರುವವ, ನನಗೂ ರಾಮನು ಜೀವಗಿಂತ ಹೆಚ್ಚು ಪ್ರೀಯನು, ಆದರೂ ನನಗೆ ದುಃಖವಿಲ್ಲ, ಓ ಲಕ್ಷ್ಮಣಾ! ನೀನು ಚಿಕ್ಕ ಮಗುವಿನಂತೆ ವರ್ತಿಸಬೇಡಾ, ಮೊದಲು ಗಂಗಾನದಿಯನ್ನು ದಾಟೋಣ, ಮುನಿಗಳಿಗೆ ಭೇಟಿಯಾಗಿ ನಾನು ತಂದ ಆಭರಣಗಳನ್ನು ಅವರ ಮಡದಿಗಳಿಗೆ ಹಂಚೋಣ; ಅವರಿಗೆ ಗೌರವ ಸಲ್ಲಿಸಿ, ಒಂದು ದಿನ ಅವರಾಶ್ರಮದಲ್ಲಿ ತಂಗಿ ಅಯೋಧ್ಯೆಗೆ ಮರಳೋಣ ನನ್ನ ಕಣ್ಣುಗಳು ನರಶ್ರೇಷ್ಠ ಸಿಂಹದೇದೆಯ ರಾಮನನ್ನು ನೋಡಲು ಚಟಪಡಿಸುತ್ತಿವೆ”. ಸೀತೆಯ ಸಾಂತ್ವನದ ಮಾತುಗಳನ್ನು ಕೇಳಿ ಕಣ್ಣಿರು ಒರಸಿಕೊಂಡು ಲಕ್ಷ್ಮಣ ಕೈಮುಗಿದು “ ದೋಣಿ ಸಿದ್ದವಿದೆ” ಎಂದು ಸೀತೆಗೆ ಅರುಹಿದನು.ದೋಣಿಯಲ್ಲಿ ಸೀತೆಯನ್ನು ಕುಳಿಸಿಕೊಂಡು ಗಂಗಾನದಿಯನ್ನು ದಾಟಿದರು. ಲಕ್ಷ್ಮಣನ ಮನಸ್ಥಿತಿ ಅದ್ಭುತ!
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
