
ದಿಟ್ಟಿಸುತ ಸೀತೆಯ ದೃಶ್ಯದತ್ತ ಲಕ್ಷ್ಮಣ I
ದುಃಖಿಸುತ ಸಾರಥಿ ಸುಮಂತ್ರನಿಗೆ ನುಡಿದ:II
“ ಸೀತೆ ವಿರಹ ದುಃಖವನು ರಾಮ ಹೇಗೆ ಸಹಿಸಬಲ್ಲ,I
ದೈವ ಬೇರ್ಪಡಿಸಿದೆ ಪುನಃ ಸೀತೆಯಿಂದ ರಾಮನ;II
ತಂದೆ ವಚನ ಪಾಲಿಸಲು ಕಳೆದ ರಾಮI
ಚತುರದಶ ಸಂವತ್ಸರಗಳನು ದಂಡಕಾರಣ್ಯದಲಿ; II
ಜನರ ನಿಂದೆಗೆಗಾಗಿ ಸೀತೆ ತ್ಯಾಗಿಸಿದ ರಾಮನಿಗೆI
ವನವಾಸದ ದುಃಖಕ್ಕಿಂತ ಸೀತೆ ತೊರೆದ ದುಃಖ ಅಸಹನಿಯ; II
ಮೈಥಿಲಿ ಕುರಿತು ರಾಮ ಕೈಕೊಂಡ ನಿರ್ಣಯI
ಸರಿಯೆನಿಸುವದೇ, ಅಪಕೀರ್ತಿ ಕೃತ್ಯವಿದು, ಅಲ್ವೇ?”. II
ಕೇಳಿ ಲಕ್ಷ್ಮಣನ ಪ್ರಶ್ನೆ ಸುಮಂತ್ರ ಉತ್ತರಿಸಿದ: I
“ವ್ಯಥಿಸ ಬೇಡಾ ಸುಮಿತ್ರೇಯ, ಅದು ರಾಮನ ಹಣೆಬರಹ,II
ತುಂಬಿದೆ ರಾಮನ ಜೀವ ದುಃಖದಿ,I
ಪ್ರೀಯರಿಂದ ಬೇರ್ಪಡುವದು ಅವರ ಹಣೆಬರಹ; II
ದುರ್ವಾಸ ಮುನಿಗಳು ಹೇಳಿಹರು ರಾಮನI
ಭವಿಷ್ಯ ದಶರಥರಿಗೆ, ವಸಿಷ್ಠರಿಗೂ ಗೊತ್ತು”. II
ಹೀಗೆ ಸಂಭಾಷಣೆ ಮುಂದುವರೆಯಿತು, ರಾತ್ರಿಯಾಯಿತು,I
ಕಳೆದರು ರಾತ್ರಿ ವಿಶ್ರಾಮಿಸಿ ಕೇಶಿನಿನದಿ ದಡದಲಿ. II
ಉತ್ತರಕಾಂಡ
ಸೀತೆಯನ್ನು ಕಾಡಿನಲ್ಲಿ ಬಿಟ್ಟು ಲಕ್ಷಣನು ಸಾರಥಿಯೊಂದಿಗೆ ಅಯೋಧ್ಯೆಗೆ ಮರಳುವಾಗ ರಾಮನು ಪದೇ ಪದೇ ತನ್ನವರಿಂದ ಬೇರ್ಪಡುತ್ತಿರುವದು ಅವನ ಹಣೆಬರಹ ಮತ್ತು ದೈವದಾಟವೆಂದು ದುಃಖಿಸುತ್ತ ಸಂಭಾಷಣೆಯಲ್ಲಿ ತೊಡಗಿದ ಮತ್ತು ದಾರಿ ಮಧ್ಯೆ ಕೇಶಿನಿನದಿ ದಡದಲ್ಲಿ ರಾತ್ರಿ ಕಳೆದ ಪ್ರಸಂಗವನ್ನು ವಿವರಿಸಿರುವರು, ಇಲ್ಲಿ ದೈವ ಮತ್ತು ಹಣೆಬರಹಕ್ಕೆ ಒತ್ತು ಕೊಟ್ಟದನ್ನು ಆದಿಕವಿಯು ಹೀಗೆ ತಿಳಿಸಿರುವರು: ಇತ್ತ ಅಯೋಧ್ಯೆಯತ್ತ ಪಯಣಿಸುವ ಲಕ್ಷ್ಮಣ ದುಃಖಿಸುತ, ಸೀತೆಯ ದೃಶ್ಯದತ್ತ ದಿಟ್ಟಿಸುತ ಸಾರಥಿ ಸುಮಂತ್ರನಿಗೆ ಅರುಹಿದನು “ ದೈವವು ಪುನಃ ಸೀತೆಯಿಂದ ರಾಮನನ್ನು ಬೇರ್ಪಡಿಸಿದೆ ಸೀತೆ ವಿರಹ ದುಃಖವನು ರಾಮ ಹೇಗೆ ಸಹಿಸಬಲ್ಲ; ತಂದೆ ವಚನ ಪಾಲಿಸಲು ರಾಮನು ಚತುರದಶ ಸಂವತ್ಸರಗಳನು (ಹದಿನಾಲ್ಕು ವರ್ಷಗಳನ್ನು) ದಂಡಕಾರಣ್ಯದಲಿ ಕಳೆದನು; ಇಂದು ಜನರ ನಿಂದೆಗೆಗಾಗಿ ರಾಮನು ಸೀತೆಯನ್ನು ತ್ಯಾಗ ಮಾಡಿದನು, ರಾಮನಿಗೆ ವನವಾಸದ ದುಃಖಕ್ಕಿಂತ ಸೀತೆಯನ್ನು ತೊರೆದ ದುಃಖವು ಅಸಹನಿಯ; ಮೈಥಿಲಿಯನ್ನು ಕುರಿತು ರಾಮ ಕೈಕೊಂಡ ನಿರ್ಣಯ ಸರಿಯೆನಿಸುವದೇ, ಅಪಕೀರ್ತಿ ಕೃತ್ಯವಿದು, ಅಲ್ವೇ?”.ಲಕ್ಷ್ಮಣನ ಪ್ರಶ್ನೆ ಕೇಳಿ ಸುಮಂತ್ರ ಅವನಿಗೆ ಉತ್ತರಿಸಿದನು “ ದುಃಖಿಸ ಬೇಡಾ ಸುಮಿತ್ರೇಯ, ಅದು ರಾಮನ ಹಣೆಬರಹ, ರಾಮನ ಜೀವನವು ದುಃಖಗಳಿಂದ ತುಂಬಿದೆ, ಪ್ರೀಯರಿಂದ ಬೇರ್ಪಡುವದು ಅವರ ಹಣೆಬರಹವಾಗಿದೆ; ದುರ್ವಾಸ ಮುನಿಗಳು ರಾಮನ ಭವಿಷ್ಯವನ್ನು ದಶರಥರಿಗೆ ಹೇಳಿರುವರು, ಅದು ವಸಿಷ್ಠರಿಗೂ ಗೊತ್ತು”. ಹೀಗೆ ಸಂಭಾಷಣೆ ಮುಂದುವರೆಯಿತು, ದಾರಿ ಮಧ್ಯೆ ರಾತ್ರಿಯಾಯಿತು, ಕೇಶಿನಿನದಿ ದಡದಲಿ ವಿಶ್ರಾಮಿಸಿ ರಾತ್ರಿ ಕಳೆದರು.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
