
ಆ ರಾತ್ರಿ ಆಶ್ರಮದಲಿ ಶತ್ರುಘ್ನ ತಿಳಿಯಲುI
ಲವನನ ಸಾಮರ್ಥ್ಯ ಚ್ಯವನರನು ಪ್ರಶ್ನಿಸಿದನು: II
“ಓ ಮುನಿದೇವತಾ, ಲವನನ ಅಸ್ತ್ರದ ಸಾಮರ್ಥ್ಯವೆಷ್ಟು?I
ಯುದ್ದದಲಿ ಲವನ ಆ ಅಸ್ತ್ರದಿ ವಧಿಸಿದ ಯಾರನು?” II
ಕೇಳಿ ಶತ್ರುಘ್ನನ ಕುತೂಹಲದ ಮಾತು ನುಡಿದ ಚ್ಯವನ:I
“ ಓ ರಘುಪುತ್ರನೇ, ಅಸಂಖ್ಯಾತ ಲವನನ ದೌರ್ಜನ್ಯ! II
ಕೇಳು ಹೇಳುವೆ ಇಕ್ಷ್ವಾಕುವಂಶಜನ ಪರಾಕ್ರಮ, I
ಶೂರ ಯವನಶ್ವನಪುತ್ರ ಮಂಧತ ಆಳುತಿದ್ದ ಅಯೋಧ್ಯೆ; II
ಹೊಂದಿದ್ದ ಮಂಧತ ತ್ರಿಲೋಕಾಳುವ ಸಾಮರ್ಥ್ಯ, I
ಭೂಮಂಡಳ ಗೆದ್ದ ಮಂಧತ, ಹೊಂದಿದ ದೇವಲೋಕ ಗೆಲ್ಲುವ ಬಯಕೆ; II
ಮಂಧತನ ಯುದ್ಧ ತಯ್ಯಾರಿ ತಿಳಿದುI
ಚಿಂತಿತರಾದರು ಇಂದ್ರ ಮತ್ತು ದೇವತೆಗಳುII
ಪರಾಕ್ರಮಿ ಪಾಕನನ್ನು ಶಿಕ್ಷಿಸಿದ ದೇವತೆಗಳು ತಿಳಿದು ಮಂಧತನ ದುರಾಶೆ, I
ಇಂದ್ರ ಮಂಧತನಿಗೆ ನುಡಿದನು: II
“ ಓ ರಾಜನೇ, ಗೆದ್ದಿಲ್ಲ ಇನ್ನೂ ನೀ ಸಂಪೂರ್ಭ ಭೂ ಮಂಡಳ,I
ಕಾಣುತ್ತಿರುವೆ ಇಂದ್ರನ ಸಿಂಹಾಸನ ಗೆಲ್ಲುವ ಕನಸು.” II
ಕೇಳಿ ಇಂದ್ರನ ಮಾತು ಮಂಧತ ನುಡಿದ ಇಂದ್ರನಿಗೆ:I
“ಭೂಮಂಡಳದಲ್ಲಿ ನನ್ನ ಎದಿರಿಸುವವರು ಯಾರು?” II
ಕೇಳಿ ಮಂಧತನ ನುಡಿ ಇಂದ್ರ ನುಡಿದ:I
“ಮಧುಪುತ್ರ ಅರಣ್ಯವಾಸಿ ಅಜೇಯಿ ಲವನನಿಗೆ ತೋರಿಸು ನಿನ್ನ ಪರಾಕ್ರಮ.” II
ಕೇಳಿ ಇಂದ್ರನ ಮಾತು ನಾಚಿಕೆದಿ ತಗ್ಗಿಸಿ ತಲೆI
ಮಂಧತ ಮರಳಿದ ಭೂಮಂಡಳಕ್ಕೆ ನಮಸ್ಕರಿಸಿ ಇಂದ್ರನಿಗೆ.II
ತನ್ನ ಸೈನ್ಯದೊಂದಿಗೆ ಮಂಧತ ಮರಳಿದ ಭೂಮಿಗೆI
ಯುದ್ಧ ಮಾಡಲು ಮಧುಪುತ್ರ ಲವನನೊಂದಿಗೆ; II
ತನ್ನ ದೂತನ ಕಳಿಸಿ ಮಂಧತ ಆಹ್ವಾನಿಸಿದI
ಯುದ್ಧಕ್ಕೆ ಮಹಾ ಪರಾಕ್ರಮಿ ಲವನನನ್ನು; II
ದೂತ ಮಂಧತನ ಬಳಿ ಮುಟ್ಟುತಿದ್ದಂತೆI
ತಿಂದು ಹಾಕಿದರು ದೂತನ ಲವನನ ರಾಕ್ಷಸರು; II
ದೂತ ಬಾರದೇಯಿದ್ದಾಗ ಸಿಟ್ಟಿನಿಂದ ಮಂಧತI
ರಾಕ್ಷಸ ವ ಲವನನ ಮೇಲೆ ಬಾಣಗಳ ಮಳೆ ಸುರಿಸಿದ; II
ಲವನ ತನ್ನ ಅದ್ವಿತೀಯ ಅದ್ಭುತ ಭಲ್ಲೆಯನ್ನುI
ಪ್ರಯೋಗಿಸಿದ ವೈರಿಗಳ ಮೇಲೆ, ಮಂಧತನ್ಮೇಲೆ; II
ಭಲ್ಲೆ ವಧಿಸಿ ಮಂಧತನ, ಅವನ ಧನುರ್ಧಾರಿಗಳನ, I
ಇಡೀ ಸೈನ್ಯವನ್ನು,ಬೂದಿ ಮಾಡಿ ಮರಳಿತು ಲವನನ ಬಳಿ;II
ಹೀಗೆ ಮಂಧತ ವ ಅವನ ಸೇನೆ ನಾಶವಾಯಿತುI
ಲವನನ ಅದ್ಭುತ ಭಲ್ಲೆ ಪ್ರಯೋಗದಿ;II
ಓ ಶತ್ರುಘ್ನಾ, ಮುಂಜಾನೆ ನೀನು ಲವನನI
ವಧೆ ಮಾಡು, ಅವನು ಆ ಭಲ್ಲೆ ಧರಿಸುವಪೂರ್ವ;II
ತಿಳಿಸಿದೆ ನಿನಗೆ ಲವನನ ಸಾಮರ್ಥ್ಯ ಕಥೆ, ಲವನನI
ವಧಿಸಿ ಭೂ ಲೋಕವನ್ನು ಅವನಿಂದ ಮುಕ್ತಗೊಳಿಸು.”II
ಉತ್ತರಕಾಂಡ
ಚ್ಯವನ ಮುನಿಯು ಶತ್ರುಘ್ನನಿಗೆ ಲವನಾಸುರನು ಇಕ್ಷ್ವಾಕುಕುಲದ ಅಯೋಧ್ಯಾ ರಾಜ ಮಂಧತ ಮತ್ತು ಅವನ ಸೈನ್ಯವನ್ನು ತನ್ನ ಶಿವ-ಭಲ್ಲೆಯಿಂದ ನಾಶ ಪಡಿಸಿದ ಸಾಮರ್ಥ್ಯವನ್ನು ಹೇಳಿ ಲವನನ್ನು ಅವನು ಶಿವ-ಭಲ್ಲೆ ಧರಿಸುವ ಪೂರ್ವದಲ್ಲಿ ವಧಿಸಲು ಸೂಚಿಸಿದ ಪ್ರಸಂಗನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಆ ರಾತ್ರಿ ಆಶ್ರಮದಲ್ಲಿ ಶತ್ರುಘ್ನನು ಲವನಾಸುರನ ಸಾಮರ್ಥ್ಯವನ್ನು ತಿಳಿಯಲು ಚ್ಯವನ ಮುನಿಯನ್ನು ಪ್ರಶ್ನಿಸಿದನು “ಓ ಮುನಿದೇವತಾ, ಲವನನ ಅಸ್ತ್ರದ ಸಾಮರ್ಥ್ಯವೆಷ್ಟು? ಯುದ್ದದಲಿ ಲವನ ಆ ಅಸ್ತ್ರದಿಂದ ಯಾರನು ವಧಿಸಿದನು?” ಶತ್ರುಘ್ನನ ಕುತೂಹಲದ ಕೇಳಿ ಚ್ಯವನ ಮುನಿ ಅವನಿಗೆ ಉತ್ತರಿಸಿದನು “ ಓ ರಘುಪುತ್ರನೇ, ಲವನನ ದೌರ್ಜನ್ಯಗಳು ಅಸಂಖ್ಯಾತ! ಇಕ್ಷ್ವಾಕುವಂಶಜನ ಪರಾಕ್ರಮದ ಬಗ್ಗೆ ಹೇಳುವೆ ಕೇಳು: ಶೂರ ಯವನಶ್ವನಪುತ್ರ ಮಂಧತನು ಅಯೋಧ್ಯೆಯನ್ನು ಆಳುತಿದ್ದನು; ಮಂಧತನು ತ್ರಿಲೋಕವಾಳುವ ಸಾಮರ್ಥ್ಯವನ್ನು ಹೊಂದಿದ್ದನು, ಭೂಮಂಡಳ ಗೆದ್ದ ಮಂಧತನು ದೇವಲೋಕ ಗೆಲ್ಲುವ ಬಯಕೆ ಹೊಂದಿದ; ಮಂಧತನ ಯುದ್ಧ ತಯ್ಯಾರಿ ತಿಳಿದು ಇಂದ್ರ ಮತ್ತು ದೇವತೆಗಳು ಚಿಂತಿತರಾದರು; ಪರಾಕ್ರಮಿ ಪಾಕನನ್ನು ಶಿಕ್ಷಿಸಿದ ದೇವತೆಗಳು ಮಂಧತನ ದುರಾಶೆಯನ್ನು ತಿಳಿದರು ಇಂದ್ರನು ಮಂಧತನಿಗೆ ನುಡಿದನು “ಓ ರಾಜನೇ, ನೀನು ಇನ್ನೂ ಸಂಪೂರ್ಣ ಭೂ ಮಂಡಳ ಗೆದ್ದಿಲ್ಲ,ಆದರೆ ಇಂದ್ರನ ಸಿಂಹಾಸನ ಗೆಲ್ಲುವ ಕನಸು ಕಾಣುತ್ತಿರುವೆ.” ಇಂದ್ರನ ಮಾತು ಕೇಳಿ ಮಂಧತನು ಇಂದ್ರನಿಗೆ ಪ್ರಶ್ನಿಸಿದನು “ಭೂಮಂಡಳದಲ್ಲಿ ನನ್ನ ಎದಿರಿಸುವವರು ಯಾರು?” ಮಂಧತನ ಪ್ರಶ್ನೆಗೆ ಇಂದ್ರ ಉತ್ತರಿಸಿದನು “ಮಧುಪುತ್ರ ಅರಣ್ಯವಾಸಿ ಅಜೇಯಿ ಲವನನಿಗೆ ನಿನ್ನ ಪರಾಕ್ರಮವನ್ನು ತೋರಿಸು.” ಇಂದ್ರನ ಉತ್ತರ ಕೇಳಿ ಮಂಧತನು ನಾಚಿಕೆಯಿಂದ ತಲೆ ತಗ್ಗಿಸಿ, ಇಂದ್ರನಿಗೆ ನಮಸ್ಕರಿಸಿ ಭೂಮಂಡಳಕ್ಕೆ ಮರಳಿದನು. ಮಧುಪುತ್ರ ಲವನನೊಂದಿಗೆ ಯುದ್ಧ ಮಾಡಲು ತನ್ನ ಸೈನ್ಯದೊಂದಿಗೆ ಮಂಧತ ಭೂಮಿಗೆ ಮರಳಿದನು; ಮಂಧತನು ತನ್ನ ದೂತನ ಕಳಿಸಿ ಮಹಾ ಪರಾಕ್ರಮಿ ಲವನನನ್ನು ಯುದ್ಧಕ್ಕೆ ಆಹ್ವಾನಿಸಿದನು; ದೂತನು ಮರಳಿ ಮಂಧತನ ಬಳಿ ಮುಟ್ಟುತಿದಂತೆ ಲವನನ ರಾಕ್ಷಸರು ಅವನನ್ನು ತಿಂದು ಹಾಕಿದರು; ತನ್ನ ದೂತ ಮರಳಿ ಬಾರದೇಯಿದ್ದಾಗ ಸಿಟ್ಟಿನಿಂದ ಮಂಧತನು ರಾಕ್ಷಸ ಮತ್ತು ಲವನನ ಮೇಲೆ ಬಾಣಗಳ ಮಳೆ ಸುರಿಸಿದನು; ಅದಕ್ಕೆ ಪ್ರತಿಯಾಗಿ ಲವನನು ತನ್ನ ಅದ್ವಿತಿಯ ಅದ್ಭುತ ಭಲ್ಲೆಯನ್ನು ವೈರಿ ಸೈನ್ಯ ಮತ್ತು ಮಂಧತನ್ಮೇಲೆ ಪ್ರಯೋಗಿಸಿದನು; ಭಲ್ಲೆಯು ಮಂಧತನ ವಧಿಸಿ, ಅವನ ಧನುರ್ಧಾರಿಗಳ ಇಡೀ ಸೈನ್ಯವನ್ನು,ಬೂದಿ ಮಾಡಿ ಲವನನ ಬಳಿ ಮರಳಿತು; ಹೀಗೆ ಲವನನ ಅದ್ಭುತ ಭಲ್ಲೆ ಪ್ರಯೋಗದಿಂದ ಮಂಧತ ಮತ್ತು ಅವನ ಸೇನೆ ನಾಶವಾಯಿತು; ಓ ಶತ್ರುಘ್ನಾ, ಮುಂಜಾನೆ ನೀನು ಲವನನು ಆ ಭಲ್ಲೆ ಧರಿಸುವ ಪೂರ್ವದಲ್ಲಿ ಅವನನ್ನು ವಧೆ ಮಾಡು; ನಿನಗೆ ಲವನನ ಸಾಮರ್ಥ್ಯ ಕಥೆ ತಿಳಿಸಿದೆ, ನೀನು ಲವನನನ್ನು ವಧಿಸಿ ಈ ಭೂ ಲೋಕವನ್ನು ಅವನಿಂದ ಮುಕ್ತಗೊಳಿಸು.”
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
