ಸಮಾಜಕ್ಕೆ ಶ್ರೀರಂಗಲಿಂಗೇಶ್ವರರ ಕೊಡುಗೆ ಅಪಾರ

By admin

ಶಹಾಪುರ: ಶ್ರೀ ಸದ್ಗುರು ರಂಗಲಿಂಗೇಶ್ವರರ ಪುಣ್ಯಾಶ್ರಮದಲ್ಲಿ ಸೋಮವಾರ ಕಾರ್ತಿಕ ಉತ್ಸವ ನಿಮಿತ್ತ 14ನೇ ವರ್ಷದ ಪ್ರಸಾದೋತ್ಸವ ನಿಮಿತ್ತ ತ್ರಿಶೂಲಪ್ಪ ಶರಣರು ರಚಿಸಿದ ತತ್ವಪದಗಳ ಸಿಡಿ ಬಿಡುಗಡೆ ಮಾಡಲಾಯಿತು.

ಸಂಶೋಧಕ, ಉಪನ್ಯಾಸಕ ಧರ್ಮಣ್ಣ ಬಡಿಗೇರ ಮಾತನಾಡಿ, ಈ ಭಾಗದಲ್ಲಿ ಕಡಕೋಳ ಮಡಿವಾಳಪ್ಪನವರು ತತ್ವಪದಕಾರರಲ್ಲಿ ಶ್ರೇಷ್ಠರಾಗಿ ಎಲ್ಲರ ಮನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಶ್ರೀರಂಗಲಿಂಗೇಶ್ವರರು ಸಹ 250ಕ್ಕೂ ಹೆಚ್ಚು ತತ್ವಪದಗಳನ್ನು ರಚಿಸಿದ್ದಾರೆ. ಈ ತತ್ವಪದಗಳು ಬದುಕಿನ ತಿರಳನ್ನು ತಿಳಿಸುವಂತಹ ಆಧ್ಯಾತ್ಮಿಕತೆ ಮೂಲಕ ದೇವರ ಸಾಮೀಪ್ಯವನ್ನು ಬಯಸುವಂತಹದ್ದು, ಅವುಗಳ ಅಧ್ಯಯನ ಮಾಡಿ ಬಿಡಿಸಿ ವಿವರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಈಗಾಗಲೇ ಶ್ರೀರಂಗಲಿಂಗೇಶ್ವರರ ರಚಿಸಿದ ಹಲವಾರು ಪದಗಳು ಭಕ್ತಾಧಿಗಳು ಆಲಿಸಿದ್ದೀರಿ. ಭಕ್ತರಿಗೆ ಅವುಗಳ ಗೂಡಾರ್ಥವನ್ನು ಬಿಡಿಸಿ ಹೇಳುವ ಕೆಲಸವಾಗಬೇಕಿದೆ. ಆಗ ರಂಗಲಿಂಗೇಶ್ವರರ ಶಕ್ತಿ ಎಂತಹದ್ದು, ಎಂಬುದು ಅರಿವಿಗೆ ಬರಲಿದೆ. ತತ್ವಪದ ನಾವೆಲ್ಲ ತಿಳಿದಂತೆ ಇರುವದಿಲ್ಲ ಅವಕ್ಕೆಲ್ಲ ಗೂಡಾರ್ಥವಿರುತ್ತದೆ. ಅದನ್ನು ಸುಲಭವಾಗಿ ಬಿಡಿಸುವದು ಕಷ್ಟಕರ ಕೆಲಸ ಮಹಾನ್ ಸಾಹಿತಿಗಳು, ವಿದ್ವಾಂಸರು ಓದಿ ಅಭ್ಯಸಿಸಿ ಅರ್ಥೈಸಬೇಕಿದೆ ಎಂದರು.
ಶ್ರೀಮಠದ ತ್ರಿಶೂಲ ಶರಣರು ಅಧ್ಯಕ್ಷತೆ ವಹಿಸಿದ್ದರು. ಹಣಮಂತ್ರಾಯ ಗೋಗಿ, ಮುಕ್ತಂಪಟೇಲ್, ಗಂಗಾರಾಮ, ಬಸುಗೌಡ, ರುದ್ರಯ್ಯ, ಗೋವಿಂದರಾಜ ಆಲ್ದಾಳ, ಶರಣಪ್ಪ ಹೊಸಮನಿ ಉಪಸ್ಥಿತರಿದ್ದರು. ಈರಪ್ಪ ಹವಲ್ದಾರ ನಿರೂಪಿಸಿ ವಂದಿಸಿದರು.

ಸಂಸ್ಕಾರ,ಸಂಸ್ಕೃತಿ ಉಳಿಸಿ ಬೆಳೆಸೋಣ
ಶ್ರೀರಂಗಲಿಂಗೇಶ್ವರರು ರಚಿಸಿದ ತತ್ವಪದಗಳ ಸಿಡಿಯನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಮನುಷ್ಯನಲ್ಲಿ ಆಧ್ಯಾತ್ಮಿಕ ಅನುಭವವಾಗಬೇಕಾದರೆ, ಒಳಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿಯ ಸಂಚಲನ ಮೂಡಬೇಕು. ಮನುಷ್ಯ ಆಧ್ಯಾತ್ಮಿಕದ ಸುಖದ ನೆಲೆಕಂಡುಕೊಂಡು ಭಗವಂತನಲ್ಲಿ ಲೀನವಾಗುವ ಭಾವ ಬೆಳೆಸಿಕೊಳ್ಳುತ್ತಾನೆ ಎಂದರು.