ವಿಲೋಮಸ್ಥಿತಿಯ ತಪಸ್ವಿ ಉತ್ತರಿಸಿದ ರಾಮನಿಗೆ

By admin


ವಿಲೋಮಸ್ಥಿತಿಯ ತಪಸ್ವಿ ಉತ್ತರಿಸಿದ ರಾಮನಿಗೆ:I
“ಓ ರಾಮಾ, ನಾನು ಶೂಧ್ರ ದಂಪತಿಗಳ ಪುತ್ರ, ಶಂಭೂಕ ನಾನು II
ದೇಹವನ್ನು ದೈವಕ್ಕೆ ಅರ್ಪಿಸಲು ಮಾಡುತ್ತಿರುವೆI
ವಿಲೋಮ ಕಠೋರ ತಪಸ್ಸು ಬಹು ಕಾಲದಿ; II
ಓ ರಾಮಾ ನಾನು ಅಸತ್ಯ ನುಡಿಯುವದಿಲ್ಲ ನಿನಗೆ,I
ಎನಗೆ ಆತ್ಮವಿಮೋಚನೆ ಸಾಧಿಸಬೇಕಾಗಿದೆ; II
ಓ ರಾಮಾ,ನಿನ್ನ ದರ್ಶನ ಎನ್ನ ಭಾಗ್ಯ,I
ಕೇಳಿರುವೆ ನಿನ್ನ ವೈರಾಗ್ಯವಿಮೋಚನೆ ಕಥೆ,II
ಕೇಳಿರುವೆ ನಿನ್ನ ವನವಾಸಗಾಥೆ, ನಿನ್ನಿಂದI
ಉದ್ಧಾರವಾದರು ಅಹಿಲ್ಯ, ವಿರಾಧ, ಕಬಂಧ, ಶಬರಿ;II
ಕೇಳಿರುವೆ ವಾಲ್ಮೀಕಿ ಮುನಿಯಿಂದ ನಿನ್ನ ಧರ್ಮನಿಷ್ಠೆ,I
ವಚನ ನಿಷ್ಠೆ, ನ್ಯಾಯ ನೀತಿ, ಸಮೃದ್ಧ ರಾಮರಾಜ್ಯ ಗಾಥೆ;II
ಶೂಧ್ರ ಶ್ರವಣ ಕುಮಾರನ ಹತ್ಯೆಯ ಪಾಪಪೀಡಿತI
ದಶರಥನ ವ್ಯಥೆಗಾಥೆದಿ ಹಿಂಜರಿಯಬೇಡಾ; II
ಶೂಧ್ರ, ಬ್ರಾಹ್ಮಣ ವ ಸ್ತ್ರೀ ಹತ್ಯೆ ಮಹಾಪಾಪ I
ಎಂದೆನಿಸಿದರೂ ಆತ್ಮೋಧಾರಕ್ಕೆ ಅನಿವಾರ್ಯ;II
ಅಬ್ರಾಹ್ಮಣ ಸ್ತೃೀ ಶಬರಿ ನಿನ್ನಿಂದI
ಚಿತೆ ಸೇರಿ ಉದ್ದಾರವಾಗಲಿಲ್ಲವೇ?;II
ಅವಳಂತೆ ನನಗೂ ನನ್ನ ಶರೀರದಿಂದI
ಮುಕ್ತಿ ದಯಪಾಲಿಸು, ಎನ್ನ ಉದ್ಧಾರಿಸು, ಓ ರಾಮಾ”.II
ರಾಮನ ಬಳಿ ಬಂದ ಬ್ರಾಹ್ಮಣ ಮುನಿಗಳುI
ಬೆರಗಾದರು, ಹೌಹಾರಿ ನೋಡಿದರು ಶಂಭೂಕನ;II
“ಸುಧೈವಿ ನೀನು ಶಂಭೂಕ, ಬಯಸಿರುವಿI
ರಾಮನ ಆಗಮನ, ರಾಮನಿಂದ ಮೋಕ್ಷ”II
ಎಂದು ಉಧ್ಗರಿಸಿದರು ಬ್ರಾಹ್ಮಣ ಮನಿಗಳು;I
ಶಂಭೂಕ ರಾಮನಲ್ಲಿ ಕಳಕಳಿಯಿಂದ ಅರುಹಿದ: II
“ಬಂದಿರುವಿ ನೀ ಹುಡುಕುತ, ಬ್ರಾಹ್ಮಣI
ಬಾಲಕನ ಅಕಾಲಿಕ ಮರಣದ ಕಾರಣ;II
ತಪಸ್ವಿಗಳಿಗೆ ವರ್ಣಭೇಧವಿಲ್ಲ, ಕುಲಭೇಧವಿಲ್ಲI
ಜನ್ಮಭೇಧವಿಲ್ಲ ಬಲ್ಲೆ ನೀ ಆಧ್ಯಾತ್ಮ ತಿರುಳು; II
ಜನನ ಮರಣ ಜೀವಿನ ಎಲ್ಲವೂI
ದೈವದಿಚ್ಚೆ ಬಲ್ಲೇ ನೀ ದೈವದ ಮರ್ಮ; II
ದೈವದಿಚ್ಚೆಯೆಂದೇ ತಂದೆ ವಚನ ಪಾಲಿಸಿದಿI
ಪತ್ನಿಯಿಂದ ಪದೇ ಪದೇ ವಿರಹ ಪಡದಿ; II
ಎಲ್ಲ ಬಲ್ಲ ಸಾಕ್ಷಾತ ನಾರಾಯಣ ಅವತಾರ ನೀ, I
ಮೃಗ ಕಸ್ತೂರಿ ಹುಡುಕಿದಂತೆ ಮರಣ ಕಾರಣ ಹುಡುಕಲು ಸಾಧ್ಯವೇ?II
ಆತ್ಮ ಆದಿ, ಅದಕ್ಕೆ ಜನನ ಮರಣ ಇಲ್ಲI
ನೀಡುವೆ ಜೀವ ಬ್ರಾಹ್ಮಣ ಬಾಲಕನಿಗೆ ಎನ್ನ ತಪಬಲದಿ; II
ಎನ್ನ ಇಚ್ಚೆಯಂತೆ ಕತ್ತರಿಸು ಎನ್ನ ಶಿರ ನಿನ್ನ ಖಡ್ಗದಿI
ಉದ್ಧರಿಸು ಎನ್ನ, ಓ ಕೃಪಾಮಯಿ ರಾಮಾ” II
ಕೇಳಿ ಶಂಭೂಕನ ಕೋರಿಕೆ ರಾಮI
ಕತ್ತರಿಸಿದ ಶಂಭೂಕನ ಶಿರ ದೈವನಂಬಿ; II
ಇತ್ತ ಶಂಭೂಕನ ಶಿರ ದೇಹ ಬಿತ್ತು ನೆಲಕ್ಕೆI
ಅತ್ತ ಜೀವಿತನಾಗಿ ಎದ್ದ ಮೃತ ಬ್ರಾಹ್ಮನ ಬಾಲಕ; II
ದೈವಲೀಲೆಯಂತೆ ರಾಮ ಕೊಟ್ಟI
ವಚನ ಪಾಲಿಸಿದ, ಉದ್ಧರಿಸಿದ ಶಂಭೂಕನ; II
ಕಂಡು ಬ್ರಾಹ್ಮಣ ದೇವತೆಗಳು ಬೆರಗಾದರುI
ಶಂಭೂಕನ ಉಪದೇಶದಿ ಎಲ್ಲರೂ ಪುನೀತರಾದರು; II
ಸರೋವರದಡದಿ ಕುಂಭಯೋನಿ ಆಶ್ರಮದತ್ತI
ಪಯಣಿಸಿದರು ಎಲ್ಲರೂ ಪುಷ್ಪಕವಿಮಾನದಲಿ.II
ಉತ್ತರಕಾಂಡ

ತಪಸ್ವಿ ಶಂಭೂಕನು ತನ್ನ ವಿಮೋಚನೆಗಾಗಿ ರಾಮನಿಗೆ ಶೂಧ್ರ, ಬ್ರಾಹ್ಮಣ ಮತ್ತು ಸ್ತ್ರೀ ಹತ್ಯೆ ಮಹಾಪಾಪ ಕ್ಲಿಷ್ಟತೆಯಿಂದ ಹೊರ ಬಂದು ತನ್ನನ್ನು ವಧಿಸುವ ಮೂಲಕ ಉದ್ಧರಿಸಲು ಕೋರಿದ, ರಾಮನು ಶಂಭೂಕನನ್ನ ಉದ್ಧರಿಸಿದ ಮತ್ತು ಬ್ರಾಹ್ಮಣ ಬಾಲಕ ಶಂಭೂಕನ ತಪಸ್ಸಿನ ಬಲದಿಂದ ಜೀವಿತವಾದ ಪ್ರಸಂಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಲ್ಲದೇ ಶಂಭೂಕನ ಪ್ರಸಂಗದಲ್ಲಿ ಮೂಡಿ ಬರುವ ಪ್ರಮುಖ್ಯ ಅಂಶಗಳು (1) ರಾಮನಿಂದ ಉದ್ಧಾರ, (2) ಶೂಧ್ರ, ಬ್ರಾಹ್ಮಣ ಮತ್ತು ಸ್ತ್ರೀ ಹತ್ಯೆ ಮಹಾಪಾಪ ತತ್ವ (3) ತಪಸ್ವಿಗಳಿಗೆ ವರ್ಣಭೇಧವಿಲ್ಲ ಮತ್ತು (4) ತಪಸ್ವಿಯ ತ್ಯಾಗ ಭಾವ: ರಾಮನ ಜಿಜ್ಞಾಸೆಯ ಪ್ರಶ್ನೆಗಳನ್ನು ತಿಳಿದ ವಿಲೋಮಸ್ಥಿತಿಯಲಿದ್ದ ತಪಸ್ವಿಯು ರಾಮನಿಗೆ ಉತ್ತರಿಸಿದನು “ಓ ರಾಮಾ, ನಾನು ಶೂಧ್ರ ದಂಪತಿಗಳ ಪುತ್ರ ನನ್ನ ಹೆಸರು ಶಂಬೂಕ, ನಾನು ದೇಹವನ್ನು ದೈವಕ್ಕೆ ಅರ್ಪಿಸಲು ಬಹು ಕಾಲದಿಂದ ವಿಲೋಮ ಕಠೋರ ತಪಸ್ಸು ಮಾಡುತ್ತಿರುವೆನು; ನಾನು ನಿನಗೆ ಅಸತ್ಯ ನುಡಿಯುವದಿಲ್ಲ, ನನಗೆ ಆತ್ಮವಿಮೋಚನೆ ಸಾಧಿಸಬೇಕಾಗಿದೆ; ಸುದೈವದಿಂದ ನಾನು ನಿನ್ನ ದರ್ಶನ ಭಾಗ್ಯ ಪಡೆದೆನು, ನಾನು ನಿನ್ನ ವೈರಾಗ್ಯವಿಮೋಚನೆ ಕಥೆ, ನಿನ್ನ ವನವಾಸಗಾಥೆ ಕೇಳಿರುವೆನು, ನಿನ್ನಿಂದ ಅಹಿಲ್ಯ, ವಿರಾಧ, ಕಬಂಧ, ಶಬರಿ ಉದ್ಧಾರವಾದರು; ನಾನು ವಾಲ್ಮೀಕಿ ಮುನಿಯಿಂದ ನಿನ್ನ ಧರ್ಮನಿಷ್ಠೆ, ವಚನ ನಿಷ್ಠೆ, ನ್ಯಾಯ ನೀತಿ, ಸಮೃದ್ಧ ರಾಮರಾಜ್ಯ ಗಾಥೆ ಕೇಳಿರುವೆನು; ಶೂಧ್ರ ಶ್ರವಣ ಕುಮಾರನ ಹತ್ಯೆಯ ಪಾಪಪೀಡಿತ ದಶರಥನ ವ್ಯಥೆಗಾಥೆಯಿಂದ ಹಿಂಜರಿಯಬೇಡಾ; ಶೂಧ್ರ, ಬ್ರಾಹ್ಮಣ ಮತ್ತು ಸ್ತ್ರೀ ಹತ್ಯೆ ಮಹಾಪಾಪ ಎಂದೆನಿಸಿದರೂ, ಆತ್ಮೋದ್ಧಾರಕ್ಕೆ ಅವು ಅನಿವಾರ್ಯ; ವ್ಯಾಧ ಸ್ತೃೀ ಶಬರಿ ನಿನ್ನಿಂದ ಚಿತೆ ಸೇರಿ ಉದ್ದಾರವಾಗಲಿಲ್ಲವೇ? ಅವಳಂತೆ ನನಗೂ ನನ್ನ ಶರೀರದಿಂದ ಮುಕ್ತಿ ದಯಪಾಲಿಸು, ನನ್ನ ಉದ್ಧಾರಿಸು, ಓ ರಾಮಾ”. ರಾಮನ ಬಳಿ ಬಂದ ಬ್ರಾಹ್ಮಣ ಮುನಿಗಳು ಶಂಬೂಕ ಮುನಿಯ ಕೋರಿಕೆ ಕೇಳಿ ಬೆರಗಾದರು, ಶಂಭೂಕನನ್ನು ಹೌಹಾರಿ ನೋಡಿದರು; “ಸುಧೈವಿ ನೀನು ಶಂಭೂಕ, ಬಯಸಿರುವಿ ರಾಮನ ಆಗಮನ, ರಾಮನಿಂದ ಮೋಕ್ಷ” ಎಂದು ಬ್ರಾಹ್ಮಣ ಮನಿಗಳು ಉಧ್ಗರಿಸಿದರು; ಶಂಭೂಕನು ರಾಮನಲ್ಲಿ ಕಳಕಳಿಯಿಂದ ಅರುಹಿದನು “ನೀನು ಬ್ರಾಹ್ಮಣ ಬಾಲಕನ ಅಕಾಲಿಕ ಮರಣದ ಕಾರಣ ಹುಡುಕುತ ಬಂದಿರುವಿ; ತಪಸ್ವಿಗಳಿಗೆ ವರ್ಣಭೇಧವಿಲ್ಲ, ಕುಲಭೇಧವಿಲ್ಲ, ಜನ್ಮಭೇಧವಿಲ್ಲ, ನೀನು ಆಧ್ಯಾತ್ಮ ತಿರುಳು ಬಲ್ಲವನು; ನೀನು ಬಲ್ಲೆ ಜನನ ಮರಣ ಜೀವಿನ ಎಲ್ಲವೂ ದೈವದಿಚ್ಚೆ, ದೈವದ ಮರ್ಮವೆಂದು; ದೈವದಿಚ್ಚೆಯೆಂದೇ ನೀನು ನಿನ್ನ ತಂದೆಯ ವಚನ ಪಾಲಿಸಿದಿ, ಪತ್ನಿಯಿಂದ ಪದೇ ಪದೇ ವಿರಹ ಪಡದಿ; ನೀನು ಎಲ್ಲ ಬಲ್ಲ ಸಾಕ್ಷಾತ ನಾರಾಯಣ ಅವತಾರ, ಮೃಗವು ಕಸ್ತೂರಿ ಹುಡುಕಿದಂತೆ ಮರಣ ಕಾರಣ ಹುಡುಕಲು ಸಾಧ್ಯವೇ? ಆತ್ಮವು ಆದಿ, ಅದಕ್ಕೆ ಜನನ ಮರಣ ಇಲ್ಲ, ನನ್ನ ತಪಬಲದಿಂದ ಬ್ರಾಹ್ಮಣ ಬಾಲಕನಿಗೆ ಜೀವ ನೀಡುವೆ; ನನ್ನ ಇಚ್ಚೆಯಂತೆ ಕತ್ತರಿಸು ನನ್ನ ಶಿರವನ್ನು ನಿನ್ನ ಖಡ್ಗದಿಂದ, ನನ್ನ ಉದ್ಧರಿಸು, ಓ ಕೃಪಾಮಯಿ ರಾಮಾ” ಶಂಭೂಕನ ಕೋರಿಕೆಯನ್ನು ಕೇಳಿ ರಾಮನು ದೈವನಂಬಿ
ಶಂಭೂಕನ ಶಿರ ಕತ್ತರಿಸಿದನು; ಇತ್ತ ಶಂಭೂಕನ ಶಿರವು ದೇಹದಿಂದ ಬೇರ್ಪಟ್ಟು ನೆಲಕ್ಕೆ ಬಿತ್ತು, ಅತ್ತ ಮೃತ ಬ್ರಾಹ್ಮಣ ಬಾಲಕನು ಜೀವಿತನಾಗಿ ಎದ್ದನು; ದೈವಲೀಲೆಯಂತೆ ರಾಮನು ಕೊಟ್ಟ ವಚನ ಪಾಲಿಸಿದನು, ಶಂಭೂಕನನ್ನು ಉದ್ಧರಿಸಿದನು; ಶಂಭೂಕನ ತ್ಯಾಗ ಕಂಡು ಬ್ರಾಹ್ಮಣ ದೇವತೆಗಳು ಬೆರಗಾದರು, ಶಂಭೂಕನ ಉಪದೇಶದಿಂದ ಅವರೆಲ್ಲರೂ ಪುನೀತರಾದರು; ಎಲ್ಲರೂ ಪುಷ್ಪಕವಿಮಾನದಲಿ ಆ ಸರೋವರದಡದಿಂದ ಕುಂಭಯೋನಿ (ಅಗಸ್ತ್ಯ ಮುನಿ) ಆಶ್ರಮದತ್ತ ಪಯಣಿಸಿದರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.