
ಕೇಳಿ ಕಿಂಪುರುಷಿಯರ ಕಥೆ ಭರತ ಲಕ್ಷ್ಮಣ I
ರಾಮನಿಗೆ ನುಡಿದರು:” ಏನಿದು ವಿಷ್ಮಯ”. II
ರಾಮನು ಮುಂದುವರೆಸಿದ ಪ್ರಜಾಪತಿಪುತ್ರ ಇಲನ ಕಥೆ: I
“ ನಿರ್ಗಮಿಸಿದಾಗ ತನ್ನ ಬಳಿಯಿಂದ ಕಿನ್ನರಿಯರ ಪಡೆ,II
ಬುಧ ಕಂಡನು ಮಂದಸ್ಮಿತ ಸುಂದರಿ ಇಲಳನು, ನುಡಿದ: I
ʻಓ ಕರುಣಾಮಯಿ ಸುಂದರಿ, ನಾನು ಸೋಮಪುತ್ರ, II
ಮೆಚ್ಚುಗೆದಿ ಒಂದು ನೋಟ ಬೀರು ಎನ್ನ ಮೇಲೆ!ʼ I
ಕೇಳಿ ನಿರ್ಜನ ಪ್ರದೇಶದಲಿ ಬುಧ ಆಡಿದ ಮಾತು, II
ಉತ್ತರಿಸಿದಳು ಬುಧನಿಗೆ ಆ ಸುಂದರ ಸ್ತ್ರೀ: I
ʻ ಓ ಪ್ರೀಯ ಸೋಮಪುತ್ರನೇ, ನಾನಿದ್ದಲೇ ನನ್ನ ವಲಯ,II
ನಾನು ಸೇವಕಿ ನಿನ್ನ, ಹೇಗೆ ಮೆಚ್ಚಿಸಿಲಿ ನಿನ್ನ!ʼ I
ಇಲಳ ಮೆಚ್ಚುಗೆ ನುಡಿ ಕೇಳಿ ಅತಿ ಹರುಷಿತನಾದ ಬುಧ, II
ಅವಳೊಂದಿಗೆ ಲೀನನಾದ ಸಮಾಗಮದಲಿ; I
ಮಧುಮಾಸ ಕಳೆದ ಕ್ಷಣದಂತೆ ಸೋಮಪುತ್ರ ಇಲಳೊಂದಿಗೆ, II
ಕಾಮಲೀಲೆ ಮಂಚದಿ ಮೇಲೆದ್ದುಳು ಚಂದ್ರಮುಖಿ ಇಲನಾಗಿ I
ಕಂಡನು ಇಲ ನಿರಾಧರವಾಗಿ ನೀರಿನಲಿ ಕೈಗಳ ಮೇಲ್ಚಾಚಿII
ತಪಸ್ಸಿನಲಿದ್ದ ಬುಧನ, ಅವನಿಗೆ ಅರುಹಿದನು: I
ʻಓ ಸುಧೈವಿ, ಬಂದಿರುವೆ ನಾನು ಪ್ರವೇಶಿಸಲಸಾಧ್ಯ ಪರ್ವತ II
ವಲಯಕ್ಕೆ ಎನ್ನ ಸೇವಕರೊಂದಿಗೆ, ಕಾಣುತ್ತಿಲ್ಲ ಅವರ್ಯಾರು ಎನಗೆ; I
ಎಲ್ಲಿ ಹೋದರು?ʼ ಗತ ನೆನಪು ಕಳೆದುಕೊಂಡ II
ರಾಜರ್ಷಿ ಇಲನ ನುಡಿ ಕೇಳಿ ಬುಧನು I
ಭರವಸೆ ನೀಡುವ ಸ್ನೇಹಿತನಂತೆ ಉತ್ತರಿಸಿದ: ʻನೀ ಗಾಢನಿದ್ರೆಯಲ್ಲಿದ್ದಾಗ II
ಆಲಿಕಲ್ಲಿನ ಮಳೆ ಬಿರುಗಾಳಿಯಲಿ ಮುಳುಗಿ ಹೋದರು, I
ಪಡೆದೆ ನೀನು ಆಶ್ರಯ ಎನ್ನಆಶ್ರಮದಲಿ;II
ʻಕುತೂಹಲವನ್ನು ತೊರೆ, ಶಾಂತನಾಗು, ಓ ವೀರನೇ, I
ಗೆಡ್ಡೆ ಹಣ್ಣುಗಳ ಸೇವಿಸಿ ಇಲ್ಲಿಯೇ ವಾಸಿಸುʼ II
ಕೇಳಿ ಬುಧನ ಮಾತು ರಾಜಾ ಇಲ ನುಡಿದ: I
ʻಸೇವಕರು ಎನ್ನ ತೊರೆದರೂ ನಾನು ತೊರೆಯಲಾರೆ ಎನ್ನ ರಾಜ್ಯ, II
ಇನ್ನು ತಡಮಾಡಲಾರೆ, ಎನಗೆ ಹೋಗಲು ಅಪ್ಪಣಿಸು, ಓ ತಪಸ್ವಿ I
ಎನ್ನ ಹಿರಿಯ ಮಗನಿಗೆ ರಾಜಭಾರ ವಹಿಸಿ II
ಬಂದಿರುವೆ ಇಲ್ಲಿ; ಶಶಬಿಂದು ಎನ್ನ ಹಿರಿಯ ಮಗ, I
ನಾನು ತೊರೆಯಲಾರೆ ಎನ್ನ ಪತ್ನಿಯರನು ವ ಸೇವಕರನು, II
ನಿಂದಿಸಬೇಡ ಎನ್ನ, ಓ ತಪಸ್ವಿ; ಕೇಳಿ ಬುಧ ಇಳನ ನುಡಿ, I
ಹೇಳಿದವನಿಗೆ ಆಶ್ಚರ್ಯಕರ ಶಬ್ದಗಳಲ್ಲಿ: II
ʻಓ ಬಲಶಾಲಿ ಕರ್ದಮೇ, ದುಃಖಿಸಬೇಡಾ, ಇರು ಇಲ್ಲಿಯೆ; I
ಸಂವತ್ಸರದಂತ್ಯಕ್ಕೆ ನೀಡುವೆ ನಾ ನಿನಗೆ ವರವೊಂದುʼ. II
ಕೇಳಿ ಮೇಧಾವಿ ಬುಧನ ಉಪದೇಶ, I
ಅಲ್ಲಿಯೆ ಕಳೆದ ಇಲ ಸಂವತ್ಸರವೊಂದು; ಮಾರನೆ ಮಾಸ ಪುನಃ ಸ್ತ್ರೀಯಾದ II
ಕಳೆದ ಮಧುಮಂಚದಲಿ ಬುಧನೊಂದಿಗೆ ಆ ಮಾಸ ಇಲ; I
ಮುಂದಿನ ಮಾಸದಲಿ ಪುನಃ ಪುರುಷನಾದ II
ಹೀಗೆ ಕಳೆದವು ನವಮಾಸಗಳು, I
ಜನ್ಮ ಕೊಟ್ಟ ಇಲ ಪುತ್ರನಿಗೆ; II
ಬುಧನ ಹೋಲುವ ಪುತ್ರ ಮಗು ಪುರುರವನ್ನು I
ಅವನ ತಂದೆ ಬುಧನ ಕೈಯಿಗೆ ಕೊಟ್ಟ ಇಲ”. II
ಉತ್ತರಕಾಂಡ
ರಾಮನು ಲಕ್ಷ್ಮಣ ಮತ್ತು ಭರತನಿಗೆ ಇಲನ ಕಥೆಯನ್ನು ಮುಂದುವರೆಸಿ ಇಲನು ಬುಧನೊಂದಿಗೆ ಸ್ತ್ರೀ ಮತ್ತು ಪುರುಷನಾಗಿ ಒಂದು ವರ್ಷ ಕಾಲ ಕಳೆದು ಪುತ್ರನಿಗೆ ಜನ್ಮಕೊಟ್ಟು ಅದನು ಬುಧನ ಕೈಕೆ ಕೊಟ್ಟ, ಆ ಪುತ್ರನೇ ಪುರು ಎಂಬ ಕಥೆಯ ಪ್ರಸಂಗವನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು:
ರಾಮನಿಂದ ಕಿಂಪುರುಷಿಯರ ಕಥೆ ಕೇಳಿ ಭರತ ಮತ್ತು ಲಕ್ಷ್ಮಣರು ರಾಮನಿಗೆ” ಏನಿದು ವಿಷ್ಮಯ” ಎಂದು ಕೇಳಿದರು. ರಾಮನು ಪ್ರಜಾಪತಿಪುತ್ರ ಇಲನ ಕಥೆಯನ್ನು ಮುಂದುವರೆಸಿದ “ನಿರ್ಗಮಿಸಿದಾಗ ತನ್ನ ಬಳಿಯಿಂದ ಕಿನ್ನರಿಯರ ಪಡೆ ಬುಧನು ಮಂದಸ್ಮಿತ ಸುಂದರಿ ಇಲಳನು ಕಂಡು ಅವಳನ್ನು ಕೋರಿದನು ʻಓ ಕರುಣಾಮಯಿ ಸುಂದರಿ, ನಾನು ಸೋಮಪುತ್ರ, ನಿನ್ನ ಮೆಚ್ಚುಗೆಯ ಒಂದು ನೋಟ ನನ್ನ ಮೇಲೆ ಬೀರು!ʼ ನಿರ್ಜನ ಪ್ರದೇಶದಲಿ ಬುಧ ಆಡಿದ ಮಾತು ಕೇಳಿ ಆ ಸುಂದರ ಸ್ತ್ರೀ ಬುಧನಿಗೆ ಉತ್ತರಿಸಿದಳು ʻ ಓ ಪ್ರೀಯ ಸೋಮಪುತ್ರನೇ, ನಾನಿದ್ದಲೇ ನನ್ನ ವಲಯ, ನಾನು ಸೇವಕಿ ನಿನ್ನ, ಹೇಗೆ ಮೆಚ್ಚಿಸಿಲಿ ನಿನ್ನ!ʼ ಇಲಳ ಮೆಚ್ಚುಗೆ ಮಾತುಗಳನ್ನು ಕೇಳಿ ಬುಧನು ಅತಿ ಹರುಷಿತನಾದನು ಹಾಗು ಅವಳೊಂದಿಗೆ ಸಮಾಗಮದಲಿ ಲೀನನಾದನು; ಮಧುಮಾಸ (ಮಾಘಮಾಸ) ಕಳೆದ ಕ್ಷಣದಂತೆ ಸೋಮಪುತ್ರನು ಇಲಳೊಂದಿಗೆ ಆ ಮಾಸ ಕಳೆದನು, ಕಾಮಲೀಲೆ ಮಂಚದಿಂದ ಮೇಲೆದ್ದುಳು ಚಂದ್ರಮುಖಿ ಇಲನಾಗಿ, ನಿರಾಧರವಾಗಿ ನೀರಿನಲಿ ಕೈಗಳ ಮೇಲ್ಚಾಚಿ ತಪಸ್ಸಿನಲಿದ್ದ ಬುಧನ ಕಂಡನು ಹಾಗು , ಅವನಿಗೆ ಅರುಹಿದಳು ʻಓ ಸುಧೈವಿ, ನಾನು ಪ್ರವೇಶಿಸಲಸಾಧ್ಯ ಪರ್ವತ ವಲಯಕ್ಕೆ ನನ್ನ ಸೇವಕರೊಂದಿಗೆ ಬಂದಿರುವೆನು ಆದರೆ ಅವರ್ಯಾರು ನನಗೆ ಕಾಣುತ್ತಿಲ್ಲ, ಅವರು ಎಲ್ಲಿ ಹೋದರು?ʼ ಗತ ನೆನಪು ಕಳೆದುಕೊಂಡ ರಾಜರ್ಷಿ ಇಲನ ಮಾತುಗಳನ್ನು ಕೇಳಿ ಬುಧನು ಭರವಸೆ ನೀಡುವ ಸ್ನೇಹಿತನಂತೆ ಉತ್ತರಿಸಿದನು ʻ ಓ ವೀರನೇ, ನೀನು ಗಾಢನಿದ್ರೆಯಲ್ಲಿದ್ದಾಗ ಆಲಿಕಲ್ಲಿನ ಮಳೆ ಬಿರುಗಾಳಿಯಲಿ ಮುಳುಗಿ ಹೋದರು, ನೀನು ನನ್ನ ಆಶ್ರಮದಲಿ ಆಶ್ರಯ ಪಡೆದೆ, ʻಕುತೂಹಲವನ್ನು ತೊರೆ, ಶಾಂತನಾಗು, ಗೆಡ್ಡೆ ಹಣ್ಣುಗಳ ಸೇವಿಸಿ ಇಲ್ಲಿಯೇ ವಾಸಿಸುʼ ಬುಧನ ಮಾತು ಕೇಳಿ ರಾಜಾ ಇಲನು ನುಡಿದನು ʻ ಓ ತಪಸ್ವಿ, ಸೇವಕರು ನನ್ನ ತೊರೆದರೂ ನಾನು ನನ್ನ ರಾಜ್ಯ ತೊರೆಯಲಾರೆ, ಇನ್ನು ತಡಮಾಡಲಾರೆ, ನನಗೆ ಹೋಗಲು ಅಪ್ಪಣಿ ಕೊಡು, ನಾನು ನನ್ನ ಹಿರಿಯ ಮಗನಿಗೆ ರಾಜ್ಯಭಾರ ವಹಿಸಿ ಇಲ್ಲಿ ಬಂದಿರುವೆ; ಶಶಬಿಂದು ನನ್ನ ಹಿರಿಯ ಮಗನ ಹೆಸರು, ನಾನು ನನ್ನ ಪತ್ನಿಯರನು ಮತ್ತು ಸೇವಕರನು ತೊರೆಯಲಾರೆ, ನೀನು ನನ್ನ ನಿಂದಿಸಬೇಡಾ.” ಬುಧನು ಇಲನ ಮಾತುಗಳನ್ನು ಕೇಳಿ ಅವನಿಗೆ ಆಶ್ಚರ್ಯಕರ ಶಬ್ದಗಳಲ್ಲಿ ಹೇಳಿದನು ʻಓ ಬಲಶಾಲಿ ಕರ್ದಮೇಯ, ದುಃಖಿಸಬೇಡಾ, ಇರು ಇಲ್ಲಿಯೆ; ಸಂವತ್ಸರದಂತ್ಯಕ್ಕೆ (ವರ್ಷದಂತ್ಯಕ್ಕೆ) ನಾನು ನಿನಗೆ ವರವೊಂದು ನೀಡುವೆನು.ʼ ಮೇಧಾವಿ ಬುಧನ ಉಪದೇಶ ಕೇಳಿ ಇಲನು ಅಲ್ಲಿಯೆ ಒಂದು ಸಂವತ್ಸರ ಕಳೆದನು; ಮಾರನೆ ಮಾಸ ಇಲ ಪುನಃ ಸ್ತ್ರೀಯಾದನು, ಮಧುಮಂಚದಲಿ ಬುಧನೊಂದಿಗೆ ಆ ಮಾಸ ಕಳೆದನು; ಮುಂದಿನ ಮಾಸದಲಿ ಪುನಃ ಪುರುಷನಾದನು, ಹೀಗೆ ನವಮಾಸಗಳು ಕಳೆದವು, ಇಲನು ಪುತ್ರನಿಗೆ ಜನ್ಮ ಕೊಟ್ಟನು; ಬುಧನ ಹೋಲುವ ಆ ಪುತ್ರನೇ ಪುರು, ಇಲನು ಪುರುವನ್ನು ಬುಧನ ಕೈಯಿಗೆ ಕೊಟ್ಟನು.”
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
