ರಾಮನಿಂದ ಪುರುರವಸನ ಜನ್ಮ ಕಥೆ ಕೇಳುತ

By admin


ರಾಮನಿಂದ ಪುರುರವಸನ ಜನ್ಮ ಕಥೆ ಕೇಳುತ I
ಭರತ ಲಕ್ಷ್ಮಣರು ರಾಮನಿಗೆ ಲಾಲಿಸಿದರು: II
“ಓ ಭೂಪತಿಯೇ, ಬುಧನೊಂದಿಗೆ ಒಂದು ಸಂವತ್ಸರ ಕಳೆದ I
ಇಲ ಮುಂದೆ ಏನು ಮಾಡಿದಳು?” II
ಕೇಳಿ ತಮ್ಮಂದಿರರ ಪ್ರಶ್ನೆ ರಾಮ ಮುಂದುವರೆಸಿದ ಕಥೆ: I
“ಶ್ರೇಷ್ಠ ಧೀಮಂತ ಬುಧ ಸೇರಿಸಿದ ತನ್ನ ಸ್ನೇಹಿತ ಮುನಿಗಳನ್ನು:II
ಸಂವರ್ತ, ಭೃಗುಪುತ್ರ ಚ್ಯವನ, ಅರಿಸ್ತನೆಮಿ, ಪ್ರಮೋದನ, I
ಮೊದಕರ ವ ದುರ್ವಾಸ ಮುನಿಗಳು ಸೇರಿದರು; II
ಬುಧ ನುಡಿದ ಮುನಿಗಳಿಗೆ:ʻಕರ್ದಮಪುತ್ರ ಇಲನಿಗೆ ಏನಾಯಿತು ತಿಳಿಯಿರಿ, I
ಅವನ ಸುಖ ಪುನಃ ಸ್ಥಾಪಿಸಬೇಕಿದೆʼ. II
ಮುನಿಗಳು ಚರ್ಚಿಸವವೇಳೆ ಬಂದ ಕರ್ದಮ ಅಲ್ಲಿಗೆ I
ಪೌಲಸ್ತ್ಯ, ಕ್ರತು, ವಶತ್ಕರ ವ ಓಂಕಾರಾ ಮುನಿಗಳೊಂದಿಗೆ;II
ಸ್ವಾಗತಿಸಿದರು ಮುನಿಗಳು ಕರ್ದಮ ವ ಅವನ ಸಂಗಡಿಗ ಋಷಿಗಳನ್ನು, I
ತಿಳಿದ ಪುತ್ರನ ಸ್ಥಿತಿ ನುಡಿದ ಕರ್ಮದ:II
ʻಓ ಮುನಿಗಳೇ, ನನ್ನ ಪುತ್ರನ ಕುರಿತು ನಿಮ್ಮೊಂದಿಗೆ ಚರ್ಚಿಸಬೇಕಿದೆ, I
ಮಹಾದೇವನ ಹೊರತು ಪರಿಹಾರವಿಲ್ಲII
ನನ್ನ ಪುತ್ರನಿಗೆ; ರುದ್ರನಿಗೆ ಪ್ರೀಯ ಅಶ್ವಮೇಧಯಜ್ಞ, I
ಏರ್ಪಡಿಸೋಣ ಎನ್ನ ಮಗ ಇಲನ ಪರಿಹಾರಕ್ಕಾಗಿ;II
ಕರ್ಮದನ ಕೋರಿಕೆ ಕೇಳಿ ಪ್ರಸನ್ನರಾದರು ಮುನಿಗಳು, I
ರಾಜರ್ಷಿ ಸಂವತ್ರನ ಶಿಷ್ಯ ಮರುತ್ತ ಬಂದು ಯಜ್ಞ ಏರ್ಪಡಿಸಲು;II
ಮರತ್ತ ಏರ್ಡಿಸಿದ ಅಶ್ವಮೇಧಯಜ್ಞ ಬುಧನ ಆಶ್ರಮ ಬಳಿ ಯಜ್ಞ ಪೂರ್ಣವಾಯಿತು, I
ಪ್ರಸನ್ನರಾದರು ಶಿವ ಪಾರ್ವತಿ;II
ಇಲನ ಸಮ್ಮುಖದಲಿ ಶಿವ ಪಾರ್ವತಿ ನುಡಿದರು ಮುನಿಗಳಿಗೆ: I
ʻನಿಮ್ಮ ಅಶ್ವಮೇಧಯಜ್ಞ ಮೆಚ್ಚಿದೆ, ಓ ಬ್ರಾಹ್ಮಣರೇ, II
ಏನು ವರ ಕೊಡಲಿ ಈ ಬಹ್ಲಿಕ ರಾಜ ಇಲನಿಗೆʼ. I
ಶಿವ ಪಾರ್ವತಿ ನುಡಿ ಕೇಳಿ ಮುನಿಗಳು ಸಂತೋಷದಿ ಬೇಡಿಕೊಂಡರು: II
ʻನೀಡು ಇಲನಿಗೆ ಪುರುಷತ್ವ, ಅವನ ಮೊದಲಿನ ರೂಪʼ. I
ಇಲನಿಗೆ ಮೂಲರೂಪ ನೀಡಿ ಅದೃಶ್ಯರಾದರು ಶಿವ ಪಾರ್ವತಿ; II
ಮರುಸ್ಥಾಪಣೆಯಾಯಿತು ಪ್ರತಿಶ್ಥಾನ ರಾಜ್ಯ ಕೇಂದ್ರ ವಲಯದಲಿ, I
ಇಲಪುತ್ರ ಶಶಬಿಂದು ವಾಸವಾದ ಬಹ್ಲಿಯಲಿ; II
ಪ್ರತಿಶ್ಥಾನನಗರದಲ್ಲಿದ್ದು ರಾಜ್ಯವಾಳಿದ ರಾಜಾ ಇಲ, I
ಕೆಲಕಾಲದ ನಂತರ ಇಲ ಬ್ರಹ್ಮಲೋಕ ಸೇರಿದ, II
ಇಲನ ತರುವಾಯ ಅವನ ಪುತ್ರ ಪುರುರವಸ I
ಪ್ರತಿಶ್ಥಾನ ನಗರದ ರಾಜನಾದ, ಯಶಸ್ವಿಯಾಗಿ ಆಳಿದ; II
ಸ್ತ್ರೀಯಾದ ಇಲ ಪುನಃ ಪುರುಷನಾಗಲು ಅಶ್ವಮೇಧಯಜ್ಞದ ಪ್ರಭಾವ, I
ಅಸಾಧ್ಯ ಸಾಧ್ಯವಾಗುವದು”.II
ಉತ್ತರಕಾಂಡ

ರಾಮನು ಲಕ್ಷ್ಮಣ ಮತ್ತು ಭರತನಿಗೆ ಇಲನ ಕಥೆಯನ್ನು ಮುಂದುವರೆಸಿ ಇಲನ ತಂದೆ ಕರ್ದಮನು ಬ್ರಾಹ್ಮಣ ಋಷಿಗಳಲ್ಲಿ ಅಶ್ವಮೇಧ ಯಜ್ಞದಿಂದ ಶಿವ ಪಾರ್ವತಿಯರನ್ನು ಒಲಸಿ ತನ್ನ ಮಗ ಇಲನಿಗೆ ಪುನಃ ಅವನ ಹಿಂದನ ಮೂಲ ರೂಪ ಬರುವಂತೆ ಕೋರಿ, ಯಶಸ್ವಿಯಾಗಿ ಇಲನಿಗೆ ಪ್ರತಿಶ್ಥಾನನಗರ ಸ್ಥಾಪಿಸಿ ರಾಜ್ಯ ನೀಡಿದ ಮತ್ತು ಅವನ ತರುವಾಯ ಅವನ ಪುತ್ರ ಪುರುರವಸ ರಾಜನಾದ ಕಥೆ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಶ್ವಮೇಧಯಜ್ಞದ ಮಹತ್ವ ತಿಳಿಸುವದೇ ಈ ಕಥೆ ಉದ್ಧೇಶ ಎಂಬದನ್ನು ಕವಿಗಳು ಹೀಗೆ ವ್ಯಕ್ತ ಪಡಿಸಿರುವರು: ರಾಮನಿಂದ ಪುರುರವಸನ ಜನ್ಮ ಕಥೆ ಕೇಳುತ ಭರತ ಮತ್ತು ಲಕ್ಷ್ಮಣರು ರಾಮನಿಗೆ ಲಾಲಿಸಿದರು “ಓ ಭೂಪತಿಯೇ, ಬುಧನೊಂದಿಗೆ ಒಂದು ಸಂವತ್ಸರ ಕಳೆದ ಇಲಳು ಮುಂದೆ ಏನು ಮಾಡಿದಳು?” ಕೇಳಿ ತಮ್ಮಂದಿರರ ಪ್ರಶ್ನೆ ರಾಮನು ಕಥೆಯನ್ನು ಮುಂದುವರೆಸಿದ “ಶ್ರೇಷ್ಠ ಧೀಮಂತ ಬುಧ ತನ್ನ ಸ್ನೇಹಿತ ಮುನಿಗಳ ಬಳಿ ಬಂದನು; ಸಂವರ್ತ,ಭೃಗುಪುತ್ರ ಚ್ಯವನ,ಅರಿಸ್ತನೆಮಿ, ಪ್ರಮೋದನ, ಮೊದಕರ ಮತ್ತು ದುರ್ವಾಸ ಮುನಿಗಳು ಸೇರಿದ್ದರು, ಅಲ್ಲಿ ಬುಧನು ಮುನಿಗಳಿಗೆ ನುಡಿದನು ʻ ಕರ್ದಮಪುತ್ರ ಅಜಾನುಬಾಹು ಇಲನಿಗೆ ಏನಾಯಿತು ತಿಳಿಯಿರಿ, ಅವನ ಸುಖ ಪುನಃ ಸ್ಥಾಪಿಸಬೇಕಿದೆʼ. ಮುನಿಗಳು ಚರ್ಚಿಸವವೇಳೆ ಪ್ರಜಾಪತಿ ಕರ್ದಮನು ಪೌಲಸ್ತ್ಯ, ಕ್ರತು, ವಶತ್ಕರ ಮತ್ತು ಓಂಕಾರಾ ಮುನಿಗಳೊಂದಿಗೆ ಅಲ್ಲಿಗೆ ಬಂದನು; ಮುನಿಗಳು ಕರ್ದಮ ಮತ್ತು ಅವನ ಸಂಗಡಿಗ ಋಷಿಗಳನ್ನು ಸ್ವಾಗತಿಸಿದರು, ಪುತ್ರನ ಸ್ಥಿತಿ ತಿಳಿದ ಕರ್ಮದನು ಮುನಿಗಳಲ್ಲಿ ಕೋರಿದನು ʻ ಓ ಮುನಿಗಳೇ, ನಾನು ನಿಮ್ಮೊಂದಿಗೆ ನನ್ನ ಪುತ್ರನ ಕುರಿತು ಮಾತನಾಡಬೇಕಿದೆ, ನನ್ನ ಪುತ್ರನಿಗೆ ಮಹಾದೇವನ ಹೊರತು ಪರಿಹಾರವಿಲ್ಲ; ಅಶ್ವಮೇಧಯಜ್ಞ ರುದ್ರನಿಗೆ ಪ್ರೀಯವಾದದು, ನನ್ನ ಮಗ ಇಲನ ಪರಿಹಾರಕ್ಕಾಗಿ ಅಶ್ವಮೇಧಯಜ್ಞ ಏರ್ಪಡಿಸೋಣ.ʼ ಕರ್ಮದನ ಕೋರಿಕೆ ಕೇಳಿ ಮುನಿಗಳು ಪ್ರಸನ್ನರಾದರು, ರಾಜರ್ಷಿ ಸಂವತ್ರನ ಶಿಷ್ಯ ಮರುತ್ತ ಬಂದು ಅಶ್ವಮೇಧಯಜ್ಞವನ್ನು ಬುಧನ ಆಶ್ರಮದ ಬಳಿ ಏರ್ಪಡಿಸಿದನು; ಯಜ್ಞವು ಪೂರ್ಣವಾಯಿತು, ಶಿವ ಪಾರ್ವತಿ ಪ್ರಸನ್ನರಾದರು; ಇಲನ ಸಮ್ಮುಖದಲಿ ಶಿವ ಪಾರ್ವತಿ ಮುನಿಗಳಿಗೆ ನುಡಿದರು ʻ ಓ ಬ್ರಾಹ್ಮಣರೇ, ನಿಮ್ಮ ಅಶ್ವಮೇಧಯಜ್ಞ ಮೆಚ್ಚಿದೆವು, ಈ ಬಹ್ಲಿಕ ರಾಜ ಇಲನಿಗೆ ಏನು ವರ ಕೊಡಲಿ ʼ. ಶಿವ ಪಾರ್ವತಿ ಮಾತುಗಳನ್ನು ಕೇಳಿ ಮುನಿಗಳು ಸಂತೋಷದಿಂದ ಬೇಡಿಕೊಂಡರು ʻ ನೀಡು ಇಲನಿಗೆ ಪುರುಷತ್ವ, ಅವನ ಮೊದಲಿನ ರೂಪʼ. ಇಲನಿಗೆ ಮೂಲರೂಪ ನೀಡಿ ಶಿವ ಪಾರ್ವತಿ ಅದೃಶ್ಯರಾದರು; ಇಲಪುತ್ರ ಶಶಬಿಂದು ವಾಸವಾದ ಬಹ್ಲಿಕದ ವಲಯದಲ್ಲಿ ಪ್ರತಿಶ್ಥಾನ ರಾಜ್ಯ ಕೇಂದ್ರವು ಮರುಸ್ಥಾಪಣೆಯಾಯಿತು; ರಾಜಾ ಇಲನು ಪ್ರತಿಶ್ಥಾನನಗರದಲ್ಲಿದ್ದು ರಾಜ್ಯವಾಳಿದನು, ಕೆಲಕಾಲದ ನಂತರ ಇಲ ಬ್ರಹ್ಮಲೋಕ ಸೇರಿದನು, ಇಲನ ತರುವಾಯ ಅವನ ಪುತ್ರ ಪುರುರವಸ ಪ್ರತಿಶ್ಥಾನ ನಗರದ ರಾಜನಾದನು ಹಾಗು ಯಶಸ್ವಿಯಾಗಿ ಆಳಿದನು; ಅಶ್ವಮೇಧಯಜ್ಞದ ಪ್ರಭಾವದಿಂದ ಸ್ತ್ರೀಯಾದ ಇಲ ಪುನಃ ಪುರುಷನಾಗದನು, ಅಸಾಧ್ಯ ಸಾಧ್ಯವಾಗುವದು”.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.