
ಕಲಬುರ್ಗಿ: ಶಹಾಪುರದ ಸಹಾಯಕ ಖಜಾನೆ ಅಧಿಕಾರಿ ಹಾಗೂ ಸಂಶೋಧಕ ಡಾ.ಎಂ.ಎಸ್ ಸಿರವಾಳ ಅವರು ಕಲಬುರ್ಗಿ ಜಿಲ್ಲೆಯ ನೂತನ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಕಲ್ಯಾಣ ಚಾಲುಕ್ಯರ ಕಾಲದ ಕನ್ನಡ ಶಿಲಾಶಾಸನವನ್ನು ಶೋಧಿಸಿದ್ದು, ಅದರ ಆಳವಾದ ಅಧ್ಯಯನ ನಡೆಸಿದ ಸಂಶೋಧಕ ಡಾ. ಎಂ.ಎಸ್. ಸಿರವಾಳರವರು ಸಮಗ್ರವಾದ ವಿವರಗಳನ್ನು ಈ ರೀತಿಯಾಗಿ ನೀಡಿದ್ದಾರೆ.
ಶಾಸನ ಶೋಧ ಮಾಡಿದ ಸ್ಥಳ ನಿವೇಶನ : ಕಣಮೇಶ್ವರ ಗ್ರಾಮದಲ್ಲಿರುವ ಹನುಮಂತನ ಗುಡಿಯ ಮುಂದೆ ಈ ಶಿಲಾಶಾಸನವನ್ನು ಡಾ. ಸಿರವಾಳರು ಪತ್ತೆ ಮಾಡಿದ್ದಾರೆ.
ಶಾಸನದ ಸ್ವರೂಪ : ಎರಡುವರೆ ಅಡಿ ಎತ್ತರ ಎರಡು ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪವಾದ ಸ್ಥಳೀಯವಾಗಿ ಲಭಿಸುವ ಕಪ್ಪು ಗ್ರಾನೈಟ್ ಕಲ್ಲಿನ ಮೇಲೆ ಈ ಶಿಲಾಶಾಸನವನ್ನು ಕೊರೆಯಲಾಗಿದೆ.
ಶಾಸನದ ಲಿಪಿ : “ವಿಶ್ವದ ಲಿಪಿಗಳ ರಾಣಿ” ಎಂದೆನಿಸಿರುವ ಕನ್ನಡ ಲಿಪಿಯಲ್ಲಿ ಈ ಶಾಸನವನ್ನು 10 ಸಾಲುಗಳಲ್ಲಿ ಎರಡಿಂಚು ಗಾತ್ರದ ಅಕ್ಷರಗಳಲ್ಲಿ ಕೆತ್ತಲಾಗಿದೆ ಎಂದು ಸಂಶೋಧಕ ಡಾ. ಸಿರವಾಳ ಅವರು ತಿಳಿಸಿದ್ದಾರೆ.
ಶಾಸನದ ಭಾಷೆ : ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದೆನಿಸಿರುವ 11ನೇ ಶತಮಾನದ ಹಳಗನ್ನಡ ಭಾಷೆಯಲ್ಲಿ ಈ ಶಿಲಾಶಾಸನವನ್ನು ರಚಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಶಾಸನದ ಕಾಲ : ಈ ಶಿಲಾ ಶಾಸನದ ಒಂದು – ಎರಡು ಮತ್ತು ಮೂರನೇ ಸಾಲುಗಳಲ್ಲಿ ದಾಖಲಿಸಿರುವ ತೇದಿಯ ಆಧಾರ ಹಾಗೂ ಅಲ್ಲಿ ಬಳಸಿರುವ ಹಳಗನ್ನಡ ಲಿಪಿ ಅಕ್ಷರಗಳ ಸ್ವರೂಪ ಮತ್ತು ಗಾತ್ರಗಳ ಆಧಾರದ ಮೇಲೆ ಈ ಶಿಲಾಶಾಸನ ಹಾಕಿಸಿದ ಕಾಲವನ್ನು ಕ್ರಿ.ಶ.1103ರ ಡಿಸೆಂಬರ ತಿಂಗಳ 28 ಎಂದು ಸಂಶೋಧಕ ಡಾ.ಎಂ.ಎಸ್. ಸಿರವಾಳ ಅವರು ನಿರ್ಣಯ ಮಾಡಿದ್ದಾರೆ.
ಶಾಸನದ ಪೂರ್ಣ ಪಠ್ಯ : ವಿಶ್ವದ ಪ್ರಮುಖ ಲಿಪಿಗಳ ಸಾಲಿನಲ್ಲಿ ಮಹತ್ವದ ಸ್ಥಾನ ಪಡೆದಿರುವ ಹಳಗನ್ನಡ ಲಿಪಿಯ ಹತ್ತು ಸಾಲುಗಳಲ್ಲಿ ಕೊರೆದಿರುವ ಈ ಶಿಲಾ ಶಾಸನವನ್ನು ಪ್ರಥಮ ಬಾರಿಗೆ ಓದಿರುವ ಸಂಶೋಧಕ ಡಾ.ಎಂ.ಎಸ್.ಸಿರವಾಳ ಅವರು ಆ ಶಾಸನದ ಹೊಸಗನ್ನಡ ಪಠ್ಯದ ಪೂರ್ಣ ಪಾಠವನ್ನು ಈ ಮುಂದಿನಂತೆ ನೀಡಿದ್ದಾರೆ.
ಶಾಸನದ ಪೂರ್ಣ ಪಾಠ
1. ಶ್ರೀ ನಮಸ್ತಂಗ ಚಿತ್ರಬನಾ ಸ
2. ಮವರ ಪುಷ್ಯ ಬಹೂಳ
3. ಸಪ್ಥಮಿ ಸೋಮವರ ದಲು
4. ಗಾಗರ ಜದಿ ಶೂರ ಹರನಾ
5. ರನೆಯ ಅಲ್ಲಪುರದ ಮುರು
6. ಚಾಗದ ಬಳ ಭುಜಬಳ ಸುತ
7. ವರು ಪ್ರಛೆ ಸೂರಿ ಚಂದ್ರಲು
8. ಗರು ಏ ವಿಣ ಮಬಧ ಸೀಯ ಬ
9. ರುಳಲೆ ಬದಾರ ಪುತ್ರಂ
10. ಪ ಸ
ಶಾಸನದ ಅರ್ಥ: ಕ್ರಿ. ಶ. ೧೧೦೩ರ ಡಿಸೆಂಬರ್ ತಿಂಗಳ 28ರಂದು ರಚಿಸಲಾಗಿರುವ 10 ಸಾಲುಗಳ ಈ ಶಿಲಾಶಾಸನವು ಮೊದಲ ಮೂರು ಸಾಲುಗಳಲ್ಲಿ ತೇದಿ( ಕಾಲ )ಯನ್ನು ಹೇಳಿದರೆ, ಉಳಿದ ಏಳು ಸಾಲುಗಳಲ್ಲಿ ಬಹುಷಃ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನನ್ನು ಯುದ್ಧದಲ್ಲಿ ಶೂರ, ಅಲ್ಲಪುರದ ಮೂರು ಚಾಗದ ಅಂದರೆ ಕೊಡುಗೈ ದಾನಿ ( ಕಾರಣ: ಆರನೇ ವಿಕ್ರಮಾದಿತ್ಯನು ನಿತ್ಯ ಭೂಮಿ ದಾನಲೋಲ ಆಗಿದ್ದನು ). ಬಳ ಭುಜನ ಬಳನ ಸುತ ಪ್ರಛೆ ಅಂದರೆ ಪಶ್ಚಿಮ ದಿಕ್ಕಿನ ಅಧಿಪತಿ ಅಂದರೆ ಭಾರತದ ಪಶ್ಚಿಮ ಭಾಗವಾದ ಗುಜರಾತಿನವರೆಗೂ ಚಾಲುಕ್ಯರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಸೂರ್ಯ ಚಂದ್ರರು ಇರುವ ತನಕ ಅವರ ಕೀರ್ತಿ ಇರುತ್ತದೆ ಎಂದು ರಾಜನನ್ನು ಸ್ತುತಿಸಿ ಬದಾರನ ಮಗನಾದ ಏವಿಣನ ಆಸೆಯಂತೆ ಈ ಸ್ತುತಿ ಶಾಸನವನ್ನು ಹಾಕಿಸಲಾಗಿದೆ ಎಂದು ಶಾಸನ ತಜ್ಞ ಡಾ. ಎಂ. ಎಸ್. ಸಿರವಾಳ ಅವರು ಈ ಶಿಲಾಶಾಸನವನ್ನು ಅರ್ಥೈಸಿದ್ದಾರೆ.

ಶಿಲಾಶಾಸನದ ಮಹತ್ವ : ನಮ್ಮ ಕನ್ನಡ ನಾಡಿನ ಪುರಾತನ ಸಂಸ್ಕೃತಿಯ ಹೆಮ್ಮೆಯ ಪ್ರತೀಕ ಎನಿಸಿರುವ ಈ ಶಿಲಾಶಾಸನವು ಹಲವಾರು ಮಹತ್ವವಾದ ಮಾಹಿತಿಗಳನ್ನು ಒಳಗೊಂಡಿರುವುದನ್ನು ಡಾ. ಎಂ. ಎಸ್. ಸಿರವಾಳ ಅವರು ಪತ್ತೆ ಹಚ್ಚಿದ್ದಾರೆ.
ರಾಜಕೀಯ ಮಹತ್ವ : ಕರ್ನಾಟಕದ ಇತರೆ ಶಾಸನಗಳಲ್ಲಿ ಆರನೇ ವಿಕ್ರಮಾದಿತ್ಯನ ಬಹುತೇಕ ಬಿರುದು ಬಾವಲಿಗಳು ಹೇಳುವಂತೆ ಈ ಶಾಸನದಲ್ಲಿಯೂ ಸಹ ಆತನನ್ನು ಸ್ತುತಿಸಲಾಗಿದೆ.
ಆಡಳಿತಾತ್ಮಕ ಮಹತ್ವ : ಐತಿಹಾಸಿಕ ಮಹತ್ವದ ಕಣಮೇಶ್ವರ ಗ್ರಾಮದ ಇತಿಹಾಸವನ್ನು ಸುಮಾರು ಒಂದು ಸಾವಿರ ವರ್ಷಗಳ ಹಿಂದಕ್ಕೆ ಈ ಶಾಸನವು ತೆಗೆದುಕೊಂಡು ಹೋಗುತ್ತದೆ.
ಕಾಲದ ಮಹತ್ವ : ಮೊದಲು ಮೂರು ಸಾಲುಗಳಲ್ಲಿ ಬರುವ ‘ಚಿತ್ರಬನಾ ಸಮಾವರ ಪುಷ್ಯ ಬಹೂಳ ಸಪ್ಥಮಿ ಸೋಮವರ ‘ ಎಂಬುದು ಖಚಿತವಾಗಿ ಕ್ರಿ.ಶ.1103 ರ ಡಿಸೆಂಬರ 28ರ ಸೋಮವಾರಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ ಅಂದಿನ ಜನ ಭಾರತೀಯ ಕಾಲಮಾನ ಪದ್ಧತಿಯನ್ನು ಪ್ರಮುಖವಾಗಿ ಬಳಸುವ ಮೂಲಕ ಇತಿಹಾಸ ದಾಖಲಿಸುವ ಮನೋಭಾವವನ್ನು ಹೊಂದಿದ್ದರು ಎಂಬುದಕ್ಕೆ ಈ ಶಾಸನ ಸಾಕ್ಷಿ ನೀಡುತ್ತದೆ ಎಂದು ಡಾ. ಎಂ. ಎಸ್. ಸಿರವಾಳ ಹೇಳಿದ್ದಾರೆ.

ಭಾಷಿಕ ಮಹತ್ವ: ಭಾಷಿಕವಾಗಿ ಈ ಶಾಸನವು ತಾತ್ಕಾಲೀನ ಕನ್ನಡ ಭಾಷೆ ಮತ್ತು ಲಿಪಿಗಳನ್ನು ಹಿಡಿದಿಟ್ಟಿದೆ ಅಂದು ಕನ್ನಡವೇ ಆಡಳಿತ ಭಾಷೆಯಾಗಿತ್ತು ಎಂಬುದು ಈ ಶಾಸನದಿಂದ ತಿಳಿಯುತ್ತದೆ.
ಶಾಸನದ ಮೇಲಿನ ಚಿತ್ರ ಸಂಕೇತಗಳು : ಈ ಶಾಸನದ ಮೇಲ್ಭಾಗದಲ್ಲಿ ಚಂದ್ರ ಮತ್ತು ಸೂರ್ಯರ ಹಾಗೂ ಕೆಳಭಾಗದಲ್ಲಿ ಆಕಳ ಮತ್ತು ಬಲ ಭಾಗದಲ್ಲಿ ಬಾಣದ ರೇಖಾ ಚಿತ್ರಗಳಿವೆ. ಸೂರ್ಯ ಚಂದ್ರರು ಈ ಶಾಸನ ಮತ್ತು ಶಾಸನದ ವಿಷಯವು ಸೂರ್ಯ ಚಂದ್ರರಿರುವ ತನಕ ಶಾಶ್ವತವಾಗಿ ಇರಬೇಕೆಂದು,ಆಕಳು ಶಾಸನ ರಕ್ಷಿಸಿದರೆ ಗೋವನ್ನು ರಕ್ಷಿಸಿದ ಪುಣ್ಯ ಲಭಿಸುತ್ತದೆ ಎಂದು ಬಾಣವು ಶಾಸನವನ್ನು ಕೆಡಿಸಿದರೆ ಶಿಕ್ಷೆ ಮತ್ತು ದಂಡನೆ ನೀಡುತ್ತದೆಂಬ ಅಂಶಗಳನ್ನು ಪ್ರತಿನಿಧಿಸುತ್ತವೆ ಎಂದು ಇತಿಹಾಸ ತಜ್ಞ ಡಾ.ಎಂ. ಎಸ್.ಸಿರವಾಳ ವಿಶ್ಲೇಷಿಸಿದ್ದಾರೆ.
ಸಾಧಾರಣ ಶಾಸನ ಕವಿ- ಲಿಪಿಕಾರ- ಕಂಡನೆಗಾರರು : ಈ ಶಾಸನವನ್ನು ರಚಿಸಿದ ಕವಿ,ಅದನ್ನು ಕಲ್ಲಿನ ಮೇಲೆ ಬರೆದ ಲಿಪಿಕಾರ ಮತ್ತು ಅದನ್ನು ಕೊರೆದ ಕಂಡಣೆಗಾರ ಈ ಮೂವರು ಸಾಧಾರಣ ಸಾಮರ್ಥ್ಯವುಳ್ಳವರಾಗಿದ್ದರಿಂದ ಶಾಸನದ ಸಾಹಿತ್ಯ, ಭಾಷೆ, ಅಕ್ಷರಗಳು, ಸಾಲುಗಳು ಮತ್ತು ಚಿತ್ರಗಳು ಸುಂದರ ಹಾಗೂ ಸ್ಪಷ್ಟವಾಗಿ ಮೂಡಿ ಬಂದಿಲ್ಲ. ಉದಾಹರಣೆಗೆ ನಮಸ್ತಂಗ (ನಮಸ್ತುಂಗ), ಸಮವರ(ಸಂವತ್ಸರ), ಬಹೂಳ( ಬಹುಳ), ಸಪ್ಥಮಿ (ಸಪ್ತಮಿ), ಮುರು( ಮೂರು ), ಸೋಮವರ ( ಸೋಮವಾರ ), ಅಂದು ಸಾಮಾನ್ಯವಾಗಿದ್ದ ರಳ -ಕುಳಗಳ ಬಳಕೆಯಿಲ್ಲ. ಅಲ್ಲದೆ ಬಳಸಿದ ಕಲ್ಲನ್ನು ಸಹ ನಯಗೊಳಿಸಿಲ್ಲ. ಹೀಗಾಗಿ ಇಲ್ಲಿನ ಬಹುತೇಕ ಅಂಶಗಳನ್ನು ಖ್ವಚಿತ್ತಾಗಿ ಹೇಳುವುದು ಕಷ್ಟಸಾಧ್ಯವೆಂದು ಈ ಶಾಸನ ಸಂಶೋಧಿಸಿದ ಡಾ.ಎಂ.ಎಸ್.ಸಿರವಾಳ ಶಾಸನದ ಮೌಲ್ಯಮಾಪನ ಮಾಡಿದ್ದಾರೆ.
ತ್ರುಟಿತಗೊಂಡಿರುವ ಶಿಲಾಶಾಸನ : ಪ್ರಸ್ತುತ ಸಂಶೋಧಿಸಿರುವ ಈ ಶಿಲಾಶಾಸನವನ್ನು ಇದರ ಮಹತ್ವವನ್ನರಿಯದ ಜನ ತ್ರುಟಿತಗೊಳಿಸಿದ್ದಾರೆ. ಧಾರ್ಮಿಕ ಭಾವನೆಯಿಂದ ಶಾಸನದ ಮೇಲೆ ಎಣ್ಣೆಯನ್ನು ಹಾಕಿದ್ದಾರೆ ಹೀಗಾಗಿ ಹಲವಾರು ಅಕ್ಷರಗಳು ಸವೆದು,ಹೂತು ಹೋಗಿ ಎಷ್ಟೋ ಐತಿಹಾಸಿಕ ಮಹತ್ವದ ಅಂಶಗಳು ಹಾಳಾಗಿವೆ ಎಂದು ಡಾ. ಎಂ.ಎಸ್.ಸಿರವಾಳ ವಿಷಾದ ವ್ಯಕ್ತಪಡಿಸಿದ್ದಾರೆ.
ಮೂರು ವೀರಗಲ್ಲುಗಳ ಶೋಧನೆ : ಇದೇ ಸಂದರ್ಭದಲ್ಲಿ ಕಣಮೇಶ್ವರದಲ್ಲಿ ಕ್ರಿ.ಶ.ಸುಮಾರು 10-11ನೇ ಶತಮಾನಕ್ಕೆ ಸೇರಿದ ಮೂರು ವೀರಗಲ್ಲುಗಳನ್ನು ಸಹ ಶೋಧನೆ ಮಾಡಿದ್ದಾರೆ. ಊರಿನ ಸ್ತ್ರೀಯರ ಮಾನಕ್ಕಾಗಿ ಗೋವುಗಳ ರಕ್ಷಣೆಗಾಗಿ ಅಥವಾ ಯಾವುದೋ ಯುದ್ಧದಲ್ಲಿ ಹೋರಾಡಿ ಮಡಿದು ವೀರ ಸ್ವರ್ಗಕ್ಕೆ ಸೇರಿದ ಹುತಾತ್ಮರ ನೆನಪಿಗಾಗಿ ಈ ವೀರಗಲ್ಲುಗಳನ್ನು ನೆಡಲಾಗಿದೆ ಎಂದು ಡಾ.ಎಂ.ಎಸ್.ಸಿರವಾಳ ಹೇಳಿದ್ದಾರೆ.
ಯಡ್ರಾಮಿ ಪರಿಸರದ ಸ್ಮಾರಕಗಳ ರಕ್ಷಣೆಗೆ ಡಾ. ಸಿರವಾಳ ಮನವಿ: ಐತಿಹಾಸಿಕ ಮಹತ್ವ ಈ ಶಾಸನವು ಅವಗಣನೆಗೆ ಒಳಗಾಗಿದೆ. ಅಲ್ಲದೇ ಯಡ್ರಾಮಿ ಪರಸರದಲ್ಲಿ ಮಹತ್ವದ ಕೋಟೆ-ಕೊತ್ತಲ-ದೇವಾಲಯ-ಬಾವಿ-ಸ್ಮಾರಕ-ಶಿಲಾಶಾಸನಗಳು ಅವಸಾನ ಅಂಚಿಗೆ ತಲುಪಿವೆ. ಅವು ಪೂರ್ತಿ ಬಿದ್ದುಹೋಗುವ ಮುನ್ನ ನಾಗರಿಕರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಗಮನ ಕೊಟ್ಟು ಸಂರಕ್ಷಿಸಿ, ಸಂಪ್ರಸಾರಣೆ ಮಾಡಬೇಕು ಹಾಗೂ ಈ ಭಾಗದಲ್ಲಿ ಎಲ್ಲಿಯಾದರೂ ಶಾಸನ-ಶಿಲ್ಪ-ಸ್ಮಾರಕಗಳು ಕಂಡುಬಂದರೆ ತಮ್ಮ ಮೋಬೈಲ ನಂಬರ –
9972157386ಗೆ ಸಂಪರ್ಕಿಸಲು ಸಂಶೋಧಕ ಡಾ.ಎಂ.ಎಸ್.ಸಿರವಾಳ ಮನವಿ ಮಾಡಿದ್ದಾರೆ.
ನೆನಕೆಗಳು:
ಈ ಮಹತ್ವಪೂರ್ಣ ಶಾಸನದ ಸಂಶೋಧನಾ ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಹೆಚ್.ಎಂ.ಪತ್ತಾರ, ಎಂ.ಎಸ್.ರೋಹಿಣಿ, ಸಂಗಣ್ಣ ಮುತ್ಕೋಡ್ಕರ್, ಹಬೀಬ ಮುಲ್ಲಾ, ಕೇಶಿರಾಜ ಕೊಂಡಗುಳಿ, ಬಸವರಾಜ ನಾಗಾವಿ, ನರಸಪ್ಪ ಚಟ್ಟರಕಿ, ಬೀರಪ್ಪ ಪೂಜಾರಿ, ಮಾನಪ್ಪ ನಂದಗಿರಿ, ಶರಣಬಸಪ್ಪ ಸಿರವಾಳ, ಭೀಮರಾಯ ಕುಸ್ತಿ, ಎಂ.ಎಸ್.ವೆಂಕಟಸಾಯಿ, ಶ್ರೀನಿವಾಸ, ಬಾಲಾಜಿ, ಮೋದಿನ ಪಟೇಲ ಅಣಬಿ, ಅಶೋಕ ಬಾಬರೆ, ಹೆಚ್.ಬಿ.ಪಾಟೀಲ್ ಮುಂತಾದವರನ್ನು ಡಾ.ಎಂ.ಎಸ್.ಸಿರವಾಳ ಅವರು ಸ್ಮರಿಸಿದ್ದಾರೆ.

ಶಹಾಪುರದ ಸಹಾಯಕ ಖಜಾನೆ ಅಧಿಕಾರಿ ಹಾಗೂ ಸಂಶೋಧಕ ಡಾ.ಎಂ.ಎಸ್ ಸಿರವಾಳ
