
ಆಧುನಿಕೋತ್ತರ ಕಾಲಘಟ್ಟದ ಇಂತಹ ದಿನಮಾನಗಳಲ್ಲಿ ಮೌಲ್ಯಧಾರಿತ ಜೀವನವನ್ನು ರೂಪಿಸಿಕೊಳ್ಳುವದು ಸವಾಲಿನ ಕೆಲಸವಾಗಿದೆ. ಬದುಕಿನಲ್ಲಿ ದುತ್ತೆಂದು ಬಂದೆರಗುವ ಅನಿರೀಕ್ಷಿತ ಒತ್ತಡ ಮತ್ತು ಸಮಸ್ಯೆಗಳ ಮಧ್ಯೆ ಮೌಲಿಕವಾದ ಜೀವನವನ್ನು ಅರ್ಥಪೂರ್ಣವಾಗಿಸುವಲ್ಲಿ ಸಮಕಾಲಿನ ಸಮಾಜ ಖಂಡಿತಾ ಸೋಲುತ್ತದೆ.ಬದುಕೆನ್ನುವದು ಜೀವನವನ್ನು ದುಡುವದಲ್ಲ, ಆದರಣಿಯವಾದ ಬಹುಬಗೆಯ ಪರಿಕಲ್ಪನೆಗಳನ್ನು ಅಂತರ್ಗತವಾಗಿಸಿಕೊಂಡು ಸಮಾಜಕ್ಕೆ ಮುಖಾಮುಖಿಯಾಗುವ ಜೀವನ ಶೈಲಿಯಾಗಿದೆ. ಜೀವನದ ಬಹುದೂರದವರೆಗೂ ಮೌಲ್ಯಗಳನ್ನು ಉಳಿಸಿ ಸಂರಕ್ಷಿಸಿಕೊಳ್ಳುವ ಮನೋದೃಢತೆ ಅತ್ಯಂತ ಅಗತ್ಯವಾಗಿದೆ. ಇದು ಬಹು ಸಂಧರ್ಭಗಳಲ್ಲಿ ಕಾಯ್ದುಕೊಳ್ಳುವದು ತ್ರಾಸದಾಯಕವಾಗುತ್ತದೆ. ಇಂತಹ ಭಿನ್ನ ಪರಿಸರವನ್ನು ಭೇದಿಸುವ ವಿವೇಚನಾ ಶಕ್ತಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳಿಗಿದೆ. ಮಡಿವಾಳಪ್ಪನವರ ಸಮಗ್ರ ಸಾಹಿತ್ಯವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಅತಿಯಾಗಿ ಪರಿಭಾವಿಸದೆ ಸಾಮಾಜಿಕ ಕಲ್ಯಾಣದ ದೃಷ್ಟಿಯಿಂದ ನೋಡಬೇಕಾದ ಜರೂರು ಇದೆ. ತತ್ವಪದಗಳಿಗೆ ಜನಮನದ ಭಾಷೆಯನ್ನು ಅತ್ಯಂತ ಪರಿಣಾಮಕಾರಿ ಅಳವಡಿಸಿದವರು ಮಡಿವಾಳಪ್ಪನವರು. ಇವರ ಅನೇಕ ತತ್ವಪದಗಳು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಿಸುವಲ್ಲಿ ಒತ್ತಾಸೆಯಾಗಿವೆ. ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ಮನಸ್ಸಿನ ನಿಯಂತ್ರಣ ಮತ್ತು ಅರ್ಥಪೂರ್ಣ ಕಾರ್ಯಗಳು ಬಹುಮುಖ್ಯವೆನ್ನುವ ಮಡಿವಾಳಪ್ಪನವರ ಬಹುಮುಖಿ ಚಿಂತನೆ ಸಮಾಜಮುಖಿ ನಿಲುವಾಗಿದೆ. ಅಂಕುಡೊಂಕಿನಿಂದ ಕೂಡಿದ ಸಮಾಜದಲ್ಲಿ ಮನುಷ್ಯ ಹೇಗೆ ಸುರಕ್ಷಿತವಾಗಿ ಸಮಸ್ಯೆಗಳು ಎನ್ನುವ ಮಹಾಸಾಗರವನ್ನು ದಾಟಬೇಕೆನ್ನುವ ಮಾರ್ಮಿಕವಾದ ಜೀವನ ಸಂದೇಶಗಳನ್ನು ನೀಡಿದ್ದಾರೆ.ಮಡಿವಾಳಪ್ಪನವರ ಸಾಹಿತ್ಯದ ಬಹುದೊಡ್ಡ ಬಲವೆಂದರೆ ಜೀವನ್ಮುಖಿ ನಿಲುವುಗಳ ಪ್ರತಿಪಾದನೆಯಾಗಿದೆ. ತಮ್ಮ ಸಾಹಿತ್ಯದ ಅಂತಿಮ ಲಾಭ ಸಮಾಜಕ್ಕೆ ದಕ್ಕಬೇಕೆನ್ನುವ ಅವರ ದೂರದೃಷ್ಟಿ ಅಭಿವೃದ್ಧಿಕೇಂದ್ರೀತ ಮನೋಧೋರಣೆಯನ್ನು ಹೊರಹಾಕುತ್ತದೆ. ಸಮಾಜದ ಸಹಜ ಭಾವನೆಗಳ ಮೂಲಕ ತತ್ವಪದವನ್ನು ಸೃಜಿಸಿ, ಅದಕ್ಕೆಅಂತಕರಣದ ಮಹಾಗುಣವನ್ನು ಸೇರಿಸಿ ವಿನ್ಯಾಸಗೊಳಿಸಿ ಸಮಾಜದತ್ತ ಚಲಿಸಲು ಬಿಟ್ಟ ಒಬ್ಬ ಸಹಜ ಸಾಮಾಜಿಕ ವ್ಯಕ್ತಿಯಾಗಿ ಮಡಿವಾಳಪ್ಪನವರು ಕಂಡುಬರುತ್ತಾರೆ.ಸಮಾಜದ ಸಮಸ್ಯೆಗಳ ಬೆಳವಣಿಗೆಗೆ ಅಜ್ಞಾನ, ಅಂಧಕಾರ,ವಿವೇಚನಾಶೀಲತೆಯ ಕೊರತೆಯ ಕಾರಣವೆಂದು ಅರಿತಿದ್ದ ಮಡಿವಾಳಪ್ಪನವರು ಜನಸಮುದಾಯಗಳಲ್ಲಿ ಆಳವಾಗಿ ಬೇರುರಿದ್ದ ಇಂತಹ ಸಮಸ್ಯೆಗಳನ್ನು ತಿಳುವಳಿಕೆ ಮತ್ತು ಅರಿವಿನ ಮೂಲಕ ಹೋಗಲಾಡಿಸಬಹುದೆoಬ ಅಭಿಪ್ರಾಯವನ್ನು ಹೊಂದಿದ್ದ ಮಡಿವಾಳಪ್ಪನವರು ಇವುಗಳ ನಿರ್ಮೂಲನೆಗಾಗಿ ಆಯ್ದುಕೊಂಡ ಮಾರ್ಗವೆ ತತ್ವಪದ ಸಾಹಿತ್ಯ ಕ್ಷೇತ್ರವಾಗಿದೆ. ಪ್ರತಿ ವ್ಯಕ್ತಿಯು ತನ್ನ ಜೀವನವನ್ನು ಸುಂದರಮಯವಾಗಿಸುವಲ್ಲಿ ಮೌಲ್ಯ, ತತ್ವ, ಉದಾತ್ತ ಚಿಂತನೆಗಳು ಬಹುಮುಖ್ಯವಾಗುತ್ತವೆ. ಈ ದೆಸೆಯಲ್ಲಿ ಇಂತಹ ಮಹಾಮೌಲ್ಯಗಳನ್ನು ವ್ಯಕ್ತಿಗಳಲ್ಲಿ ಚಿಗುರೋಡೆಸುವ ಬಹುಮುಖಿ ಕಾರ್ಯವನ್ನು ಮಡಿವಾಳಪ್ಪನವರು ತತ್ವಪದಗಳ ಮುಖೇನ ಮಾಡಿರುವದು ನಿಚ್ಚಳವಾಗುತ್ತದೆ. ಮಡಿವಾಳಪ್ಪನವರ ಚಿಂತನೆಗಳು ಸ್ವಸ್ಥ, ಸ್ವಚ್ಛ,ಏಣಿಶ್ರೇಣಿ ಮುಕ್ತ, ಸಮತಾ ಸಮಾಜದ ಸ್ಥಾಪನೆಗೆ ಸಹಕರಿಸುತ್ತವೆ. ಇಂತಹ ಬಹುಮುಖಿ ತಜ್ಞನ ಅರ್ಥಪೂರ್ಣ ಕೊಡುಗೆಗಳು ಸಮಾಜದ ಮುನ್ನಲೆಗೆ ಬಂದು ಸಮಾಜದ ಬೆಳವಣಿಗೆ ಸಹಕಾರಿಯಾಗಲಿ. ಲೇಖಕರು-ಡಾ. ಸಾಯಿಬಣ್ಣ ಮೂಡಬುಳ
