ಕಡಕೋಳ ಮಡಿವಾಳಪ್ಪನವರ ಬಹುಮುಖಿ ಕೊಡುಗೆಗಳ ಬಹು ಆಯಾಮಗಳ ನೆಲೆಯಲ್ಲಿ ಗ್ರಹಿಸುವ ಅಗತ್ಯತೆ

By admin

ಕರುನಾಡಿನಲ್ಲಿ ಅನೇಕ ಶರಣರು, ಸಂತರು ಸುಫಿಗಳು, ಮಹಾತ್ಮರು ಜೀವಿಸಿ ಸಮಾಜವನ್ನು ಕಲ್ಯಾಣಗೊಳಿಸಿದ್ದಾರೆ. ಇಂತಹ ಮಹಾತ್ಮರ ಕೊಡುಗೆಗಳು ಕೇವಲ ಧಾರ್ಮಿಕ ನೆಲೆಗಟ್ಟಿನಿಂದ ನೋಡುವ ಕ್ರಮ ಸಮಾಜದಲ್ಲಿ ಇಂದು ಪ್ರಭಲವಾಗಿ ಬೆಳೆಯುತ್ತಿದೆ. ಈ ಮಹಾತ್ಮರ ಸಮಾಜಮುಖಿ ನಿಲುವು ಸಮಾಜವನ್ನು ಗಾಢವಾಗಿ ಆವರಿಸಿಕೊಳ್ಳುವಲ್ಲಿ ವ್ಯತ್ಯಯವಾಗುತ್ತಿದೆ. ಇಂತಹ ಅದ್ಭುತ ಸಾಧಕರಲ್ಲಿ ಗಟ್ಟಿಯಾಗಿ ಕೇಳಿಬರುವ ಹೆಸರು ಕಡಕೋಳ ಮಡಿವಾಳಪ್ಪನವರದು.ಮಡಿವಾಳಪ್ಪನವರ ಕೊಡುಗೆಗಳು ಇತ್ತೀಚಿಗೆ ಮುನ್ನಲೆಗೆ ಬರುತ್ತಿದ್ದು, ಇವುಗಳು ಅತಿಯಾದ ಧಾರ್ಮಿಕ ಪರಿಧಿಯೊಳಗೆ ಅಡಗಬಾರದು ಎನ್ನುವ ಚಿಂತಕರ ಅಭಿಪ್ರಾಯ ಗಮನಾರ್ಹವಾದದ್ದು. ಇವರ ಒಟ್ಟಾರೆ ಕೊಡುಗೆಗಳಿಗೆ ಬಹುವಾದ ಸಾಮಾಜಿಕ ವಿನ್ಯಾಸವನ್ನು ನೀಡಿ ಮರುನಿರೂಪಿಸಿ ಸಮಾಜದ ಪ್ರಗತಿಗೆ ಇವುಗಳನ್ನು ಬಳಸಿಕೊಳ್ಳಬೇಕಾಗಿದೆ. ಸಮಾಜದ ಅಭ್ಯದಯಕ್ಕಾಗಿ ತಮ್ಮ ಬದುಕನ್ನು ವಿನಿಯೋಗಿಸಿದ ಒಬ್ಬ ಸಾಮಾಜಿಕ ಸಂತರನ್ನಾಗಿ ಇಂದಿನ ತಲೆಮಾರು ಮಡಿವಾಳಪ್ಪನವರನ್ನು ಗ್ರಹಿಸಬೇಕಾಗಿದೆ.

ತತ್ವಪಾದಕಾರ, ವಚನಕಾರ, ಕವಿ, ಸಂಗೀತಗಾರನಾಗಬೇಕೆನ್ನುವ ಹಂಬಲದಿಂದ ಕಾವ್ಯ ರಚನೆಗಿಳಿಯಲಿಲ್ಲ. ಸಮಾಜದಲ್ಲಿ ತಾಂಡವವಾಡುತಿದ್ದ ಬಹುರೂಪಿ ಸಮಸ್ಯೆಗಳನ್ನು ಹೋಗಲಾಡಿಸುವ, ಸಮುದಾಯಗಳಲ್ಲಿ ವಿವೇಕದ ಪ್ರಜ್ಞೆಯನ್ನು ಬಿತ್ತುವ ಪ್ರಮುಖ ಕಾರ್ಯ ಸುಚಿಯೊಂದಿಗೆ ಈ ಕ್ಷೇತ್ರಕ್ಕೆ ದುಮುಕಿದವರು ಮಡಿವಾಳಪ್ಪನವರು.

ಸಮಾಜದಲ್ಲಿ ತಮ್ಮ ಕ್ಷ ಕಿರಣ ಕಣ್ಣೋಟದ ಮೂಲಕ ನೋಡಿದ ಸಮಸ್ಯೆ ಮತ್ತು ಸವಾಲುಗಳಿಗೆ ಮಿಡಿದ ಅವರ ಹೃದಯ ಅನೇಕ ಅರ್ಥಪೂರ್ಣ ಮತ್ತು ನಿರ್ಭಿಡೆಯ ತತ್ವಪದಗಳನ್ನು ಹೊರಹಾಕಿತು. ಬಹು ಬಗೆಯ ಅಂದಕಾರದಿಂದ ನರಳುತ್ತಿದ್ದ ಸಮಾಜವನ್ನು ತತ್ವಪದಗಳು ಎನ್ನುವ ಟಾನಿಕನ್ನು ನೀಡಿ ಜಾಗೃತಗೊಳಿಸುತಿದ್ದರು.ಅಂದಿನ ಪ್ರಭುತ್ವವನ್ನು ಲೆಕ್ಕಿಸದೆ ಇದ್ದದ್ದನ್ನು ಇದ್ದ ಹಾಗೆ ಅಭಿವ್ಯಕ್ತಿ ಪಡಿಸುತ್ತಿದ್ದ ನೇರವಂತಿಕೆಯ ಸತ್ಯವಂತಿಕೆಯ ಸಾಕಾರಮೂರ್ತಿಯಾಗಿದ್ದರು.

ಪ್ರಭುತ್ವದ ಓಲೈಕೆಗೆ ಹೋಗದೆ, ಸಮಾಜದ ಸುಧಾರಣೆಗಾಗಿ ಪ್ರಭುತ್ವವನ್ನು ಒತ್ತಾಯಿಸಿದ ಇವರ ತತ್ವಪದಗಳು ಸಮಾಜದಲ್ಲಿ ವೈಚಾರಿಕೆ ಫಲವಂತಿಕೆಯನ್ನು ಹುಟ್ಟು ಹಾಕಿದ್ದು ಸುಳ್ಳಲ್ಲ. ಸಮಾಜದ ಅಂದಕಾರ, ಅಸಮಾನತೆ, ಬೇಧಭಾವ, ಶ್ರೇಷ್ಠ ಕನಿಷ್ಠವೆಂಬ ಮನುಷ್ಯರೂಪಿತ ಭಾವನೆಗಳನ್ನು ವಿರೋಧಿಸಿ ಇವುಗಳಿಗೆ ದೈವಿ ಸ್ವರೂಪದ ಮುದ್ರೆ ಹಾಕಬಾರದು ಎನ್ನುವ ಬಲವಾದ ನಿಲುವನ್ನು ವ್ಯಕ್ತಪಡಿಸಿರುವದು ಅವರ ಚಿಂತನೆಗಳಿಂದ ಸಾಬೀತಾಗುತ್ತದೆ. ಹೀಗೆ ಸಮಾಜದ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದ ಒಬ್ಬ ಸಾಮಾಜಿಕ ಡಾಕ್ಟರ್ ಆಗಿ ಕಂಡು ಬರುವ ಮಡಿವಾಳಪ್ಪನವರನ್ನು ಇಂದಿನ ಆದುನಿಕ ಸಾಮಾಜಿಕ ಅವರನ್ನು ಸಾಮಾಜಿಕ ಐಕಾನ್ ಆಗಿ ಗುರುತಿಸಬೇಕಿದೆ. ಇವರ ಚಿಂತನೆಗಳು ಸಾಮಾಜಿಕ ಅಭಿವೃದ್ಧಿಯಲ್ಲಿ ಸಹಾಯಕವಾಗಿವೆ. ಮಡಿವಾಳಪ್ಪನವರ ಜನಪರ ನಿಲುವು ಸಮಾಜದ ಪರಿವರ್ತನೆಗೆ ಮತ್ತಷ್ಟು ಸಹಾಯಕವಾಗಲಿ.                                                               -ಡಾ. ಸಾಯಿಬಣ್ಣ ಮೂಡಬುಳ