
ಯುವ ಲೇಖಕಿ-ರಮಾ ದೊಡ್ಡಮನಿ ಕಲಬುರಗಿ
ನಿನ್ನ ಕಾಣ ಬಯಸುವರಿಗೆ
ಪುಸ್ತಕವೆ ಕನ್ನಡಿಯಾಯಿತು
ನಿನ್ನ ನೋಡದೆ ನಿನ್ನ ಜೊತೆ ಕಳೆಯದೆ
ನೀನು ಅರಿವಾಗುವುದಾದರೂ ಹೇಗೆ? ನೀ ಬಿತ್ತಿದ ಬೆಳೆಯ ಫಲವನ್ನುಣ್ಣುವವರಿಗೆ ನಿನ್ನ ಪರಿಚವಿಲ್ಲ
ಕತ್ತಲ ಕೋಣೆಯೊಳಗೆ ಬೆಳಕಿನ ದೀಪ ಹಚ್ಚಿದವರಾರು ಎಂದು ತಿಳಿಯ ಬಯಸುವ ಮನಸ್ಥಿತಿಯು ಇಲ್ಲದೆ ಹೋಯಿತು ಎಮಗೆ
ಪರಿಚಯವಿದ್ದರು ಇಲ್ಲದಂತೆ ನಟಿಸುವವರು ಇದ್ದಾರೆ ನಮ್ಮೊಳಗೆ
ಹತ್ತು ಹಲವಾರು ನೋವುಂಡು ಹೆತ್ತು ಹೊತ್ತು ಸಾಕಿದ ತಾಯಿ ಹರೆಯ ಕಾಲಕೆ ನೆನಪಾಗದೆ ಹೋದಳಂತೆ
ನಮ್ಮ ಬಾಳು ಬೆಳಗಲು ತನ್ನ ಮೈ ಸುಟ್ಟಿಕೊಂಡ ಮೇಣದಂತೆ
ಕನಿಷ್ಟ ಪಕ್ಷ ನಿನ್ನಂತಿರುವ ಹೆಣ್ಣು ಸಿಕಾಮಣಿಗಳು ನೆನೆಯಲಾರರು ನಿನ್ನನ್ನೊಮ್ಮೆ
ಹೆಣ್ಣು ಜೀವಿಗಳ ಬಾಳುದ್ದಾರ ಮಾಡಲು ತನ್ನ ಮೈ ಮೇಲೆ ಅವಮಾನ ಅಪಮಾನಗಳ ಬರೆ ಹಾಕಿಕೊಂಡು
ಹೆಣ್ತನದ ಉದ್ಧಾರಕ್ಕೆ ಮೈಲುಗಲ್ಲಾದೆ
ಊಹಿಸಲಾಗದ ಕಟ್ಟುಪಾಡುಗಳು ಬಿಡಿಸಲಾಗದ ಬಂಧನ ಅಳಿಸಿಲಾಗದ ಅವಹೇಳನಗಳ ಕಾಲದಲ್ಲಿ ಸಮಾಜದ ಬೆದರಿಕೆಗೆ ವಿರುದ್ಧವಾಗಿ ದಿಟ್ಟತನದಿಂದ ಕಟ್ಟಿಯಾಗಿ ಮುಂದಿಟ್ಟ ಹೆಜ್ಜೆಯ ಗುರುತು
ಬಂದ ಅವಹೇಳನಕಾರಿ ಪದಗಳನ್ನ ಗಾಳಿ ಮಾತೆಂದು ತೂರಿಬಿಟ್ಟು ಪೆಟ್ಟು ನೋವುಗಳನ್ನುಂಡರೂ ಪಟ್ಟು ಹಿಡಿದು ಮುಂದೆ ಸಾಗಿದ ನಿಮ್ಮ ಛಲ ಎಮಗೆ ಅತಿ ದೊಡ್ಡ ಆದರ್ಶ
ಊಹಿಸಲಾರದ ಬಂಧನಗಳ ಸುಳಿಯೊಳಗೆ ದಿಟ್ಟತನದಿಂದ ಈಜಾಡಿ ದಡ ಸೇರಿದ ನಿಮ್ಮಂತೆ
ಕಟ್ಟುಪಾಡುಗಳು ಸಡಿಲವಾದರು ದಿಟ್ಟತನದ ಹೆಜ್ಜೆಗಳು ಕಾಣುತ್ತಿಲ್ಲ ಇಂದು
ಕಾರಣ ಹುಡುಕ ಹೊರಟರೆ ನಿನ್ನನ್ನು ಅರಿವಿಗೆ ತೆಗೆದುಕೊಳ್ಳದಿರುವುದು, ನಿನ್ನ ವಿಚಾರಗಳು ಸಮಾಜದೊಳಗೆ ಪಸರಿಸಬಾರದೆಂಬ ತುಣುಕು ವಾಸ್ತವದ ಸತ್ಯ ಅನಿಸುತ್ತಿದೆ..
ಮಳೆ ಗಾಳಿ ಚಳಿಗೆ ಮುದುರಿಕೊಂಡ ಪಕ್ಷಿಗಳಿಗೆ ಬೆಚ್ಚನೆ ಗೂಡು ಕಟ್ಟಿಕೊಟ್ಟೆ ಮಳೆಯಿಲ್ಲದ ಬರಡು ಭೂಮಿಯಂತೆ ಅಕ್ಷರದ ಅರಿವಿಲ್ಲದ ಅಜ್ಞಾನದಲ್ಲಿ ಬದುಕುತ್ತಿದ್ದವರಿಗೆ ಭರವಸೆಯ ಮಳೆಯಂತೆ ಅಕ್ಷರದ ಅರಿವು ಹರಿಸಿದ್ದೀರಿ
ಕುಟುಂಬ ಸಮಾಜವನ್ನ ಎದುರು ಹಾಕಿಕೊಂಡು
ಮನೆಯಿಂದ ಹೊರ ನಡೆದು ಸಮಾಜದ ನಿಂದನೆಗೆ ನಿಗ ಕೊಡದೆ ಕರುಣೆ ಪ್ರೀತಿ ಮಮತೆ ದಯೆಯನ್ನು ಎದೆಯ ಉಸಿರಾಗಿಸಿಕೊಂಡು ಸಾಧನೆಯ ಶಿಖರ ತಲುಪಿದ್ದೀರಿ
ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ಹೊರಹೊಮ್ಮಿದ್ದೀರಿ ನಿನ್ನಂತ ಶಿಕ್ಷಕಿಯರ ಅಗತ್ಯತೆ & ಅನಿವಾರ್ಯತೆ ತುಂಬ ಇದೆ ಇಂದು
ನಿನ್ನಂತಾಗುವ ಬಯಕೆ ನಮ್ಮೊಳಗೂ ಮೂಡಲಿ ಸಾವಿತ್ರಿಯಮ್ಮ..
-ರಮಾ ದೊಡ್ಡಮನಿ ಕಲಬುರಗಿ
