ವೈಚಾರಿಕತೆಯ ಆಗರ ಕಡಕೋಳ ಮಡಿವಾಳಪ್ಪನವರ ಸಾಹಿತ್ಯ

By admin

ಇಂದು ನಾಡಿನದ್ಯಂತ ಚರ್ಚೆಯಗುತ್ತಿರುವ ಹಲವು ಮಹತ್ವದ ಅಂಶಗಳಲ್ಲಿ ಕಡಕೋಳಮಡಿವಾಳಪ್ಪನವರ ಬಹುಮುಖಿ ಕೊಡುಗೆಗಳು ಕೂಡಾ ಒಂದು. ಮಡಿವಾಳಪ್ಪನವರ ಸಾಹಿತ್ಯದ ಕುರಿತು ನಾಡಿನ ಹಲವು ಚಿಂತಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ನಾಡಿನ ಪ್ರಸಿದ್ದ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಾಹಿಸುತ್ತಿರುವ ಸಂಗೀತ ದಿಗ್ಗಜರುಗಳು ಮಡಿವಾಳಪ್ಪನವರ ಕುರಿತು ಮಾತುಗಳನ್ನಾಡಿದ್ದಾರೆ, ಮತ್ತು ಇವರ ಸಾಹಿತ್ಯದ ಕುರಿತು ಬೆರಗಾಗಿದ್ದಾರೆ. ಇವರ ಸಾಹಿತ್ಯದ ಶಕ್ತಿ ಅಂತಹದ್ದು, ಇವರ ಕಾವ್ಯದ ಪ್ರತಿಭಟನೆ ನೊಂದವರ, ತುಳಿತ್ತೋಳಗಾದವರ, ಅಸಹಾಯಕರನ್ನು ಪ್ರತಿನಿಧಿಸುತ್ತಿದ್ದದ್ದು ವಿಶೇಷವಾಗಿದೆ, ಧ್ವನಿಯಿಲ್ಲದವರ, ಧ್ವನಿಯಾಗಿ ಇವರ ಸಾಹಿತ್ಯ ಕೆಲಸ ಮಾಡಿದೆಯೆಂದರೆ ಅತಿಸಿಯೊಕ್ತಿಯಾಗುವದಿಲ್ಲ. ಮಡಿವಾಪ್ಪನವರ ಸಮಗ್ರ ಸಾಹಿತ್ಯಸಂಪೂರ್ಣವಾಗಿ ಸಮಾಜದ ಮುನ್ನೆಲೆಗೆ ಬರಬೇಕಾಗಿದೆ, ಇನ್ನು ಅಜ್ಞಾತವಾಗಿರುವ ಇವರ ಅರ್ಥಪೂರ್ಣ ಸಾಹಿತ್ಯ ಹುಡುಕಬೇಕಾಗಿದೆ. ಇವರು ರಚಿಸಿರುವ 1500ಕ್ಕೂ ಮಿಗಿಲಾದ ತತ್ವಪದಗಳಲ್ಲಿ ನಮಗೆ ಇದುವರೆಗೂ ಲಭ್ಯವಾಗಿದ್ದು ಕೇವಲ 350 ತತ್ವಪದಗಳು ಮಾತ್ರ. ಇನ್ನು ಉಳಿದ ತತ್ವಪದಗಳ ಕಡೆ ಗಮನ ಹರಿಸಬೇಕಿದೆ. ಮಡಿವಾಳಪ್ಪನವರ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿದಾಗ ಹಲವು ವಿಷಯಗಳು ತೀಳಿದುಬರಲು ಸಾಧ್ಯವಾಗುತ್ತದೆ. ಇವರ ಪ್ರತಿ ತತ್ವಪದಗಳನ್ನು ಗಮನಿಸಿದಾಗ, ಪ್ರತಿ ತತ್ವಪದಗಳಲ್ಲಿ ವೈಚಾರಿಕವಾದ ಅಂಶಗಳಿರುವದು ಸ್ಪಷ್ಟವಾಗುತ್ತದೆ. ಇವರ ಪ್ರತಿ ಸಾಹಿತ್ಯವೂ ವೈಚಾರಿಕ ಅನುಸಂಧಾನವನ್ನು ಒಳಗೊಂಡಿದೆ. ಮಡಿವಾಳಪ್ಪನವರು ಪ್ರತಿ ತತ್ವಪದವನ್ನು ಸಾಮಾಜಿಕ ಬದಲಾವಣೆಗೆ ಬಳಸಿಕೊಂಡದ್ದು ಸ್ಪಷ್ಟವಾಗುತ್ತದೆ. ಇವರ ಸಾಹಿತ್ಯವೂ ಸಮಾಜದಲ್ಲಿ ಜಾರಿಯಲಿದ್ದಅನೇಕ ಅರ್ಥವಿಲ್ಲದ ಆಚರಣೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದಾಗಿತ್ತು. ಮಡಿವಾಳಪ್ಪನವರು, ಯಾರ ಆಸೆ, ಆಕಾಂಕ್ಷೆಗಳಿಗೆ ಒಳಗಾಗದೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ನಿಷ್ಟುರ ಗುಣವುಳ್ಳವರಾಗಿದ್ದರು. ಪರಿಣಾಮವಾಗಿ ಇವರಿಂದ ಅದ್ಬುತವಾದ ಸಾಹಿತ್ಯ ಮೂಡಿಬರಲು ಸಾಧ್ಯವಾಯಿತು.ಇವರ ಕಾವ್ಯವು ಸಮಾಜದ ಜನರು ಆಗಿನ ಕಾಲಘಟ್ಟದದಲ್ಲಿ ಅನುಭವಿಸುತ್ತಿದ್ದ ನೋವಿನ ಪ್ರತೀಕವಾಗಿತ್ತು. ಇಂತಹ ಸಮಸ್ಯೆಗಳ ವಿರುದ್ಧ ಹೊರಾ ಡಲು, ಮತ್ತು ಅದರಿಂದ ಜನರನ್ನು ಮುಕ್ತಿಗೊಳಿಸಲು ತಮ್ಮ ಕಾವ್ಯವನ್ನು ಹರಿತಗೊಳಿಸಿ ಸಮಾಜಕ್ಕೆ ನೀಡುತ್ತಿದ್ದರು. ಹಾಗಾಗಿ ಹಲವು ಕೌತುಕಗಳನ್ನು ಒಳಗೊಂಡ ಇವರ ಸಾಹಿತ್ಯ ಇನ್ನು ಜನಪ್ರಿಯಗೊಳ್ಳಬೇಕಿದೆ, ಇವರ ಕಾವ್ಯವು ಕಲ್ಪನೆ. ವರ್ಣನೆಗೆ ಸೀಮಿತವಾಗದೆ ಸಮಕಾಲಿನ ಜ್ವಲಂತ ಸಮಸ್ಯೆಗಳಿಗೆ ಮಿಡಿದಿದೆ, ವೈಚಾರಿಕ ಅಂಶಗಳನ್ನೇ ಪ್ರಧಾನವಾಗಿ ಪರಿಗಣಿಸಿಸಿದ ಇವರ ಸಾಹಿತ್ಯ ಹಲವು ಬದಲಾವಣೆಗಳಿಗೆ ತೆರೆದುಕೊಂಡಿದ್ದು ಸುಳ್ಳಲ್ಲ. ಹಾಗಾಗಿ ಮಡಿವಾಳಪ್ಪನವರ ಕುರಿತಾದ ಸಾಹಿತ್ಯ ಇನ್ನು ಹೊರಬರಬೇಕಾಗಿದೆ. ಈ ದೆಸೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯಲಿ.

-ಡಾ. ಸಾಯಿಬಣ್ಣ ಮುಡಬೂಳ