
ರಾಮನ ಪ್ರಶ್ನೆಗಳಿಗೆ ಉತ್ತರಿಸಲು ವಾಲ್ಮೀಕಿ ಮುನಿI
ಬಂದರು ರಾಮನ ಬಳಿ, ಶಿಷ್ಯರ ಸಮರ್ಥನೆಗೆ; II
ವಾಲ್ಮೀಕಿ ಮುನಿ ವಿನಮ್ರತೆದಿ ರಾಮನಿಗೆ ವಿವರಿಸಿದರು:I
“ಅವರು ಎನ್ನ ಶಿಷ್ಯರು, ಕುಶ ಲವ ಅವರ ಹೆಸರು, II
ಗಂಗಾನದಿ ದಡದ ಅರಣ್ಯದಲಿ ಅಸಹಾಯಕಳಾಗಿ ರೋಧಿಸುತಿದ್ದ I
ಲೋಕ ನಿಂದನೆ ಪೀಡಿತ ಗರ್ಭೀಣಿ ಸ್ತ್ರೀ ಮಕ್ಕಳಿವರು;II
ಎನ್ನ ಆಶ್ರಮದಲಿ ಜನ್ಮತಾಳಿ ಪ್ರಕೃತಿ ಮಡಿಲ್ಲಲ್ಲಿ ಬೆಳೆದ ಅವಳಿ ಮಕ್ಕಳು, I
ಎನ್ನ ಶಿಷ್ಯರಾಗಿ ಬೆಳೆದ ಲವ ಕುಶರು;II
ತಂದೆಯಿಂದ ತೊರೆದ ಅಸಹಾಯಕ ಸ್ತ್ರೀ ವ್ಯಥೆI
ಅರಿಯದ ಇವರು ಭೂದೇವಿಪುತ್ರಿ ಸೀತೆಯ ಮಕ್ಕಳು; II
ಎಂದಿಗೂ ಅಸತ್ಯ ನುಡಿಯದ ಪ್ರಚೇತಸನ ಹತ್ತನೇ ಪುತ್ರ ನಾನುI
ವಾಲ್ಮೀಕಿ, ದೀರ್ಘಸಂವತ್ಸರಗಳ ತಪಸ್ಸಿನ ಮೇಲೆ ಪ್ರಮಾಣ ಮಾಡುವೆII
ಸುಳ್ಳು ನುಡಿದರೆ ನಾನು, ನನ್ನ ತಪಸ್ಸಿಗೆ ಫಲಸಿಗದಿರಲಿI
ಲವ ಕುಶರು ನಿನ್ನ ಮಕ್ಕಳು, ಓ ಇಕ್ಷ್ವಾಕುಕುಲದ ರಾಮಾ.” II
ಕೇಳಿ ವಾಲ್ಮೀಕಿ ಮುನಿ ಕಠೋರ ಉಕ್ತಿಯನುI
ಸಿಡಿಲು ಬಡಿದಂತಾಯಿತು ರಾಮನಿಗೆ, II
ಅಯೋಧ್ಯೆ ಜನ ಕಣ್ಣೀರು ಕೋಡಿ ಹರಿಸಿದರು, ತಮ್ಮ ನಿಂದನೆI
ಮಾತುಗಳನ್ನು ನೆನಪಿಸಿ ಮಾಡಿಕೊಂಡರು ಪ್ರಾಯಶ್ಚಿತ; II
ರಾಜಮಾತೆಯರು, ಬಂಧು ಬಳಗ, ಸ್ನೇಹಿತರು ಋಷಿಮುನಿಗಳು,I
ಬ್ರಾಹ್ಮಣ ಪಂಡಿತರು ವ್ಯಥೆದಿ ನುಡಿದರು ರಾಮನಿಗೆ: II
“ ಸಾಕು ಪ್ರಭು ನಿನ್ನ ವ್ಯಥೆ, ಸೀತೆಯನ್ನು ಸೇರು”I
ಲವ ಕುಶರನ್ನು ಅಪ್ಪಿಕೊಂಡ ರಾಮ ನುಡಿದನು: II
“ ಸಾಕು ಎನಗೆ ಈ ರಾಜ್ಯ, ತೊರೆದು ಅದನ್ನು I
ಮಕ್ಕಳೊಂದಿಗೆ ಸೀತೆಯನ್ನು ಸೇರುವೆ, ವಾಸಿಸುವೆ ವನದಲಿ,II
ಪೂಜ್ಯ ವಾಲ್ಮೀಕಿ ಮುನಿಗಳೇ, ಕರೆದೊಯ್ಯಿರಿ ನನ್ನನು ಸೀತೆ ಬಳಿ, I
ವಾಸಿಸುವೆ ಅವರೊಂದಿಗೆ”. ರಾಮನ ಇಚ್ಚೆಯಂತೆ II
ತವಕದಿ ಅಯೋಧ್ಯಾವಾಸಿಗಳು ಮಾತೆಯರು I
ಬಂಧುಬಳಗ ಸಾಗಿದರು ವಾಲ್ಮೀಕಿ ಆಶ್ರಮದತ್ತ. II
ಉತ್ತರಕಾಂಡ
ದರ್ಬಾರದಲ್ಲಿ ರಾಮನಿಗೆ ಲವ ಕುಶರು ಸೀತೆಯ ಮಕ್ಕಳು, ಅಸಹಾಯಕ ಗರ್ಭೀಣಿ ಸೀತೆಗೆ ವಾಲ್ಮೀಕಿ ಮುನಿ ಆಶ್ರಯ ಕೊಟ್ಟ, ಆಶ್ರಮದಲ್ಲಿ ಲವ ಕುಶರ ಜನ್ಮ, ತಾನು ಸತ್ಯ ಹೇಳುತ್ತಿರುವ ಬಗ್ಗೆ ವಾಲ್ಮೀಕಿಯಿಂದ ಪ್ರಾಮಾಣ, ರಾಮನು ಮಕ್ಕಳನ್ನು ಅಪ್ಪಿಕೊಂಡ, ಸೀತೆಯೊಂದಿಗೆ ವನದಲ್ಲಿರುವ ರಾಮನ ಇಂಗಿತ, ಅಯೋಧ್ಯೆ ಜನರು ತಮ್ಮ ತಪ್ಪಿನ ಬಗ್ಗೆ ಪ್ರಾಯಶ್ಚಿತ ಮಾಡಿಕೊಂಡ, ಎಲ್ಲರೂ ಸೀತೆಯತ್ತ ನಡೆದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು
ವಿವರಿಸಿರುವರು, ಅದಲ್ಲದೇ (1) ವಾಲ್ಮೀಕಿಯ ಪ್ರಮಾಣ, (2) ಜನರ ಪ್ರಾಯಶ್ಚಿತ ಮತ್ತು (3) ರಾಮನ ವ್ಯಥೆ ಅಂಶಗಳನ್ನು ಕವಿ ಹೀಗೆ ತಿಳಿಪಡಿಸಿರುವರು: ರಾಮನ ಪ್ರಶ್ನೆಗಳಿಗೆ ಉತ್ತರಿಸಲು ವಾಲ್ಮೀಕಿ ಮುನಿಯು ಶಿಷ್ಯರ ಸಮರ್ಥನೆಗಾಗಿ ರಾಮನ ಬಳಿ ಬಂದರು ಹಾಗು ವಾಲ್ಮೀಕಿ ಮುನಿ ವಿನಮ್ರತೆಯಿಂದ ರಾಮನಿಗೆ ವಿವರಿಸಿದರು“ಅವರು ನನ್ನ ಶಿಷ್ಯರು, ಕುಶ ಲವ ಅವರ ಹೆಸರು, ಗಂಗಾನದಿ ದಡದ ಅರಣ್ಯದಲಿ ಅಸಹಾಯಕಳಾಗಿ ರೋಧಿಸುತಿದ್ದ ಲೋಕ ನಿಂದನೆ ಪೀಡಿತ ಆ ಗರ್ಭೀಣಿ ಸ್ತ್ರೀಯ ಮಕ್ಕಳಿವರು; ನನ್ನ ಆಶ್ರಮದಲಿ ಜನ್ಮತಾಳಿ ಪ್ರಕೃತಿ ಮಡಿಲ್ಲಲ್ಲಿ ಬೆಳೆದ ಅವಳಿ ಮಕ್ಕಳು, ನನ್ನ ಶಿಷ್ಯರಾಗಿ ಬೆಳೆದ ಲವ ಕುಶರು; ತಂದೆ ತೊರೆದ ಅಸಹಾಯಕ ಸ್ತ್ರೀ ವ್ಯಥೆಯನ್ನು ಅರಿಯದ ಇವರು ಭೂದೇವಿಪುತ್ರಿ ಸೀತೆಯ ಮಕ್ಕಳು; ಎಂದಿಗೂ ಅಸತ್ಯ ನುಡಿಯದ ಪ್ರಚೇತಸನ ಹತ್ತನೇ ಪುತ್ರ ನಾನು ವಾಲ್ಮೀಕಿ, ದೀರ್ಘಸಂವತ್ಸರಗಳ ತಪಸ್ಸಿನ ಮೇಲೆ ಪ್ರಮಾಣ ಮಾಡುವೆ, ನಾನು ಸುಳ್ಳು ನುಡಿದರೆ, ನನ್ನ ತಪಸ್ಸಿಗೆ ಫಲಸಿಗದಿರಲಿ, ಲವ ಕುಶರು ನಿನ್ನ ಮಕ್ಕಳು, ಓ ಇಕ್ಷ್ವಾಕುಕುಲದ ರಾಮಾ.” ವಾಲ್ಮೀಕಿ ಮುನಿಯು ಕಠೋರ ಉಕ್ತಿಯನು ಕೇಳಿದ ರಾಮನಿಗೆ ಸಿಡಿಲು ಬಡಿದಂತಾಯಿತು, ಅಯೋಧ್ಯೆ ಜನ ಕಣ್ಣೀರು ಕೋಡಿ ಹರಿಸಿದರು, ತಮ್ಮ ನಿಂದನೆ ಮಾತುಗಳನ್ನು ನೆನಪಿಸಿ ಪ್ರಾಯಶ್ಚಿತ ಮಾಡಿಕೊಂಡರು; ರಾಜಮಾತೆಯರು, ಬಂಧು ಬಳಗ, ಸ್ನೇಹಿತರು ಋಷಿಮುನಿಗಳು, ಬ್ರಾಹ್ಮಣ ಪಂಡಿತರು ವ್ಯಥೆಯಿಂದ ರಾಮನಿಗೆ ನುಡಿದರು “ಸಾಕು ಪ್ರಭು ನಿನ್ನ ವ್ಯಥೆ, ಸೀತೆಯನ್ನು ಸೇರು.” ಲವ ಕುಶರನ್ನು ಅಪ್ಪಿಕೊಂಡು ರಾಮನು ನುಡಿದನು “ ಸಾಕು ನನಗೆ ಈ ರಾಜ್ಯ, ಅದನ್ನು ತೊರೆದು ಮಕ್ಕಳೊಂದಿಗೆ ಸೀತೆಯನ್ನು ಸೇರುವೆ, ಅವಳೊಂದಿಗೆ ವನದಲಿ ವಾಸಿಸುವೆ, ಪೂಜ್ಯ ವಾಲ್ಮೀಕಿ ಮುನಿಗಳೇ, ನನ್ನನು ಸೀತೆ ಬಳಿ ಕರೆದೊಯ್ಯಿರಿ, ಅವರೊಂದಿಗೆ ವಾಸಿಸುವೆ.” ರಾಮನ ಬಯಕೆಯಂತೆ ತವಕದಿಂದ ಅಯೋಧ್ಯಾವಾಸಿಗಳು ಮಾತೆಯರು ಬಂಧುಬಳಗ ವಾಲ್ಮೀಕಿ ಆಶ್ರಮದತ್ತ ಸಾಗಿದರು.
-ಡಾ.ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
