ಜೀವನ್ಮುಖಿ ಸಂದೇಶಗಳ ಸೆಲೆ ಮಡಿವಾಳಪ್ಪ

By admin

ಕನ್ನಡ ನಾಡು ಅನೇಕ ಮಹನೀಯರಿಗೆ ಸಾಧಕರಿಗೆ ಜನ್ಮವಿತ್ತಿದೆ. ಹಲವಾರು ಸಾಧನಾ ಜೀವಿಗಳು ತಮ್ಮ ಬಹುಮುಖಿ ಕೊಡುಗೆಗಳನ್ನು ಈ ನೆಲದಲ್ಲಿ ಬಿತ್ತಿ, ನಾಡನ್ನು ಕಲ್ಯಾಣಗೊಳಿಸಿದ್ದಾರೆ. ಕನ್ನಡ ನಾಡು ಭೌತಿಕ ಸಂಪನ್ಮೂಲಗಳಿಂದಷ್ಟೆ ಸಂಪದ್ಭರಿತವಾಗಿಲ್ಲ, ಬೌದ್ಧಿಕವಾಗಿಯೂ ಗಹನವಾಗಿ ಚಾಚಿಕೊಂಡು ಜ್ಞಾನದ ಖಣಿಯನ್ನು ಆರಂಭಿಸಿ ಜ್ಞಾನದ ದೀವಿಗೆಯನ್ನು ಹೊತ್ತಿಸಿ ಜಗತ್ತಿನ ಗಮನ ಸೆಳೆದು ಬಾಳಿ ಹೋದವರು ಹಲವರು. ಇಂತಹ ಅರಿವಿನ ಕ್ಷಿತಿಜಗಳ ಫಲವಾಗಿ ನಾಡು ಬೌದ್ಧಿಕ ಶ್ರೀಮಂತಿಕೆಯನ್ನು ಪಡೆದದ್ದು ಸುಳ್ಳಲ್ಲ. ಇಂತಹ ಅನೇಕ ಬೌದ್ಧಿಕ ಮೇರು ಪರ್ವತಗಳಲ್ಲಿ ಕಡಕೊಳ ಮಡಿವಾಳಪ್ಪನೆಂಬ ಅದ್ಭುತ ಮಹಾಪುರುಷರು ಕೂಡಾ ಒಬ್ಬರು. ಸಮಾಜದಲ್ಲಿ ಬಾಲ್ಯದಿಂದಲೂ ಅಗಣಿತವಾದ ನೋವು ಅವಮಾನಗಳನ್ನೆ ಮೈಗಂಟಿಸಿಕೊಂಡು, ಆ ನೋವುಗಳ ಪ್ರತ್ಯುತ್ತರವಾಗಿ ಸೃಜನ ಶೀಲ, ಜೀವನ್ಮುಖಿ ನಿಲುವುಗಳ ಸಾಹಿತ್ಯ ಸೃಜಿಸಿ ಸಮಾಜಕ್ಕೆ ಮುಖಾಮುಖಿಯಾದದ್ದು ನಾಡಿನ ಸಾಹಿತ್ಯ ಚರಿತ್ರೆಯಲ್ಲಿ ಒಂದು ಅಪರೂಪದ ಮೈಲಿಗಲ್ಲೆ ಎಂದು ಇಂದಿನ ಯುವತಲೆಮಾರು ಭಾವಿಸಬೇಕಿದೆ.ಸಾಹಿತ್ಯವನ್ನು ಕೇವಲ ಭಾವಭಿವ್ಯಕ್ತಿ ಕಕ್ಷೆಯಲ್ಲಿ ನೋಡದೆ ಸಮಾಜದ ತವಕ ತಲ್ಲಣ, ನೋವು, ಅಸಹಿಷ್ಣುತೆಗಳ ವಿರುದ್ಧ ಪ್ರಭಲ ಝೆoಕಾರದ ವಾದವಾಗಿ ಸಾಹಿತ್ಯವನ್ನು ಎದುರುಗೊಂಡು, ತುಡಿತ ಮಿಡಿತ ಸಹನೆಯನ್ನು ಸಮನ್ವಯವಾಗಿಸಿ ಹೊರಚಿಮ್ಮಿಸಿದ ಸಾಮಾಜಿಕ ಕಳಕಳಿಯ ಪ್ರತಿರೂಪ ಇವರ ಸಾಹಿತ್ಯವಾಗಿದೆಯೆಂದರೆ ಅತಿಷಿಯೋಕ್ತಿಯಾಗಲಿಕ್ಕಿಲ್ಲ. ಸಾಮಾಜಿಕ ದಾರ್ಶನಿಕರ, ಚಿಂತಕರ ಬಹು ಮಂಡನೆಗಳಲ್ಲಿ ಇವರ ಚಿಂತನೆಯ ಮುನ್ನೊಟಗಳು ಬಹುವಾಗಿ ಅಭಿವ್ಯಕ್ತವಾಗಿರುವದು, ಮಡಿವಾಳಪ್ಪನವರ ಹೊಂದಿದ್ದ ಬೌದ್ಧಿಕ ಉನ್ನತಿಯ ಪ್ರಭಾವ ಬಟಾಬಯಲುಗೊಳ್ಳುತ್ತದೆ.ಸಾಮಾಜಿಕ ಅಭ್ಯದಯದ ನೆಲೆಯಲ್ಲಿ ರಚನೆಗೊಂಡ ಇವರ ತತ್ವಪದಗಳು ಸಾಮಾಜಿಕ ವಿಕಾಸದ ಕುರಿತು ಧ್ವನಿಯೆತ್ತಿವೆ. ಸಾಹಿತ್ಯವು ಜೀವನ್ಮುಖಿ ನಿಲುವುಗಳೆಡೆಗೆ ಗಾಢವಾಗಿ ತೆರೆದುಕೊಳ್ಳಬೇಕು ಎನ್ನುವ ಹಂಬಲವನ್ನು ಇವರ ತತ್ವಪದಗಳು ಹೆರಳವಾಗಿ ಒಳಗೊಂಡಿರುವದು ಇವರ ಸಾಹಿತ್ಯದ ಹೆಗ್ಗಳಿಕೆಯಾಗಿದೆ.ಜನಸಮುದಾಯಗಳಲ್ಲಿ ಅನುಭಾವದ ಸೆಲೆಯನ್ನು ಉಕ್ಕಿಸಿ ನೈತಿಕ ಭಾವವನ್ನು ಎತ್ತರಿಸುವ ಮೌಲಿಕ ಕಾರ್ಯ ಇವರ ಸಮಗ್ರ ಸಾಹಿತ್ಯ ಮಾಡಿರುವದು ಅವರ ಚಿಂತನಾಶೀಲ ನಡೆಯೆ ಸಾಕ್ಷಿಯಾಗಿದೆ. ಬಹು ತರಹದಲ್ಲಿ ಸಮಾಜವನ್ನು ಶೋದಿಸಿ, ಸಮಾಜಮುಖಿಯಾಗಿ ತಮ್ಮ ನೇತ್ರವನ್ನು ಹೊರಳಿಸಿ ಕ್ಷಕಿರಣದ ಮೂಲಕ ಸಮಸ್ಯೆ ಸವಾಲುಗಳಿಗೆ ತಮ್ಮ ತತ್ವಪದಗಳ ಮುಖೇನ ಅರಿವಿನ ಸಿಂಚನವನ್ನು ಮೂಡಿಸಿದ್ದಾರೆ. ಸಾಹಿತ್ಯದ ಪರಿಕರಗಳಲ್ಲೆ ಮೌಲ್ಯ, ಆದರ್ಶ, ಉದಾತ್ತತೆಯ ಸದ್ಗುಣಗಳನ್ನು ತುಂಬಿ ಜನಮನಸ್ಸುಗಳ ಮಧ್ಯೆ ಹರಿಬಿಟ್ಟು ಅವರಲ್ಲಿ ಜೀವನ್ಮುಖಿ ಮುಖವಾಣಿಯನ್ನು ಜೀವಂತಗೊಳಿಸುತಿದ್ದದ್ದು ಅವರ ಬಹುಪಾಲು ತತ್ವಪದಗಳ ಮುಖಾಂತರ ಅನಾವರಣಗೊಳ್ಳುತ್ತದೆ. ಪ್ರಭುದ್ದ ಮನಸ್ಥಿತಿಯನ್ನು ಸಮಾಜದಲ್ಲಿ ಅತಿಯಾಗಿ ಉತ್ಪಾದಿಸುವಲ್ಲಿ ಇವರ ನಿಲುವುಗಳು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ.ಮಡಿವಾಳಪ್ಪನವರ ಸಾಹಿತ್ಯವನ್ನು ವಿಮರ್ಷಾತ್ಮಕ ನೆಲೆಯಿಂದ ಪರಿಶೀಲಿಸಿದಾಗ ಇವರ ಸಾಹಿತ್ಯವು ಅರಿವಿನ ಯಜ್ಞದ ಆಶಯ ಹೊಂದಿರುವದು ಬಹಿರಂಗಗೊಳ್ಳುತ್ತದೆ. ಸಮಾಜದ ಆಂತರ್ಯವನ್ನು ತಮ್ಮ ಅನನ್ಯವಾದ ವಿವೇಚನೆಯ ಮೂಲಕ ಗ್ರಹಿಸಿ, ಜನಸಮುದಾಯಗಳ ತೊಡಕುಗಳನ್ನು ನಿವಾರಿಸುವ ತತ್ವಪದಗಳನ್ನು ಹುಟ್ಟುಹಾಕಿ ಜನಸಮೂಹವನ್ನು ಎಚ್ಚರಗೊಳಿಸಿ, ಅವರಿಗೆ ಬಂದೆರಗುವ ವಿಪತ್ತುಗಳನ್ನು ತಪ್ಪಿಸುವ ಕಾರ್ಯ ಮಡಿವಾಳಪ್ಪನವರು ಮಾಡುತಿದ್ದದ್ದು ಸ್ಮರಣಿಯವಾದದ್ದು. ಹೀಗೆ ಮಡಿವಾಳಪ್ಪನವರ ಬಹುಪಾಲು ತತ್ವಪದ ಸಾಹಿತ್ಯವು ಸಮಾಜಮುಖಿ ಧೋರಣೆಯನ್ನು ಹೊಂದಿದ್ದು, ಸಮಾಜಕ್ಕಾಗಿ ಮಿಡಿಯುವ ಜೀವಂತಿಕೆಯನ್ನು ಹೊಂದಿದೆ. ಹಾಗಾಗಿ ಮಡಿವಾಳಪ್ಪನವರನ್ನು ಕೇವಲ ಸಾಹಿತ್ಯದ ನೆಲೆಯಲ್ಲಿ ಗ್ರಹಿಸದೆ, ಅವರನ್ನು ಸಾಮಾಜಿಕ ಅಭಿವೃದ್ಧಿಕಾರರು, ಚಿಂತಕರು ಎನ್ನುವ ನಿರ್ವಿವಿವಾದದ ಸಂಗತಿಯನ್ನು ಸಮಾಜದೆದುರು ತರುವ ಕಾರ್ಯದೆಡೆಗೆ ನಾಡಿನ ವಿದ್ವತ ವಲಯ ಪ್ರಯತ್ನಿಸಬೇಕಾದ ಅಗತ್ಯತೆಯಿದೆ. ಈ ದೆಸೆಯಲ್ಲಿ ಅರ್ಥಪೂರ್ಣ ಕಾರ್ಯಗಳು ಆರಂಭಗೊಂಡು ಮಡಿವಾಳಪ್ಪನೆಂಬ ಸಾಮಾಜಿಕ ಹರಿಕಾರರ ಬಹುಮುಖಿ ಕಾರ್ಯಗಳು ಪ್ರವಾಹದಂತೆ ಪ್ರಚುರಗೊಂಡು ಸರ್ವರನ್ನು ತಲುಪಿ, ಇವರ ಆಶಯಗಳಿಗೆ ವ್ಯಾಪಕವಾದ ಮನ್ನಣೆ ದೊರೆಯುವಂತಾಗಲಿ ಎನ್ನುವದೆ ಬಹುಜನರ ಆಸೆಯಾಗಿದೆ

ಡಾ. ಸಾಯಿಬಣ್ಣ ಮುಡಬೂಳ, ಸಾಹಯಕ ಪ್ರಾಧ್ಯಾಪಕರು, ಸುರಪುರ