
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ಆಧುನಿಕರಣಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಜ್ಯ ಗೃಹ ಖಾತೆ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಆಧುನಿಕತೆಗೆ ತಕ್ಕಂತೆ ರಾಜ್ಯದಲ್ಲಿರುವ ಸುಮಾರು 1000 ಪೋಲಿಸ್ ಠಾಣೆಗಳನ್ನು ಆಧುನಿಕರಣ ಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ವಿವಿಧ ಪೊಲೀಸ್ ಠಾಣೆಗಳ ಮೇಲೆ ಬೆಂಗಳೂರುನಿಂದಲೇ ನಿಗಾ ಇಡುವಂತಹ ವ್ಯವಸ್ಥೆ ಜೊತೆಗೆ ಎಲ್ಲ ಪೊಲೀಸ್ ಠಾಣೆಗಳನ್ನು ತಾಂತ್ರಿಕವಾಗಿ ಅತ್ಯಾಧುನಿಕರಣಗೊಳಿಸಲು ಸರ್ಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳು ದೂರ ದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.
ಪೋಲಿಸ್ ಇಲಾಖೆಯಿಂದ ಕಣ್ಣು ತಪ್ಪಿಸಿ ಏನು ಮಾಡಲು ಸಾಧ್ಯವಿಲ್ಲ. ಇಂತಹ ಆಧುನಿಕತೆಯಿಂದಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣವನ್ನು 48 ಗಂಟೆಯಲ್ಲಿ ಪರಿಹರಿಸಲಾಗಿದೆ. ಅದರಂತೆ ಬೀದರ್ ನಲ್ಲಿ ನಡೆದ ಎಟಿಎಂ ದರೋಡೆ ಪ್ರಕರಣವನ್ನು ಶೀಘ್ರವೇ ಪರಿಹರಿಸಿ, ತಪ್ಪಿತಸ್ಥರನ್ನು ಶೀಘ್ರದಲ್ಲಿಯೇ ಬಂಧಿಸಲಾಗುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಗಳ ಕರ್ತವ್ಯವು ಅತ್ಯಂತ ಸೂಕ್ಷ್ಮವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ ಪೊಲೀಸ ಇಲಾಖೆಯಿಂದಲೇ ಅಂತ್ಯ ಮಾಡಲಾಗುತ್ತದೆ. ಇದಕ್ಕಾಗಿ ಪೊಲೀಸ್ ಇಲಾಖೆ ಇನ್ನಷ್ಟು ಬಲಗೊಳಿಸಲು ರಾಜ್ಯಾದ್ಯಂತ ಒಟ್ಟು 1000 ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಹಗರಣದಿಂದಾಗಿ ನೆನೆಗುದಿಗೆ ಬಿದ್ದಿದ್ದ 402 ಸಬ್ ಇನ್ಸ್ಪೆಕ್ಟರ ಗಳ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ.
ಸಾವಿರಾರು ಜನ ಮಹಿಳಾ ಪೊಲೀಸ್ ಕಾನ್ಸ್ಟೇಬಲಗಳ ನೇಮಕಾತಿಗೂ ಪ್ರಾಮುಖ್ಯತೆ ನಮ್ಮ ಸರ್ಕಾರ ನೀಡಿದೆ. ಪ್ರತಿವರ್ಷ ಹಲವಾರು ಹುದ್ದೆಗಳು ಪೊಲೀಸ್ ಸಿಬ್ಬಂದಿಗಳ ನಿವೃತ್ತಿಯಿಂದ ತೆರವಾಗುತ್ತಿರುವದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಈ ಇಲಾಖೆಯನ್ನು ಬಲಗೊಳಿಸಲು ನಿಗಾ ಇಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಪೋಲಿಸ್ ಸಿಬ್ಬಂದಿಗಳ ಅನುಕೂಲಕ್ಕಾಗಿ 2.12 ಕೋ.ರೂ ವೆಚ್ಚದಲ್ಲಿ ನೂತನ ಪೊಲೀಸ್ ಠಾಣೆ ಹಾಗೂ 17 ಕೋ. ರೂ ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಹೇಳಿದರು.
ಪೋಲಿಸರು ಜನಸ್ನೇಹಿಗಳಾಗಿ ಕಾನೂನಿನ ಅನ್ವಯ ಕಾರ್ಯನಿರ್ವಹಿಸಬೇಕು. ಕಷ್ಟ ದಲ್ಲಿ ಬರುವ ಸಾರ್ವಜನಿಕರಿಗೆ ಸ್ನೇಹಿತರಾಗಿ ವರ್ತಿಸಬೇಕು. ವಿಶೇಷವಾಗಿ ಹೆಣ್ಣು ಮಕ್ಕಳನ್ನು ಗೌರವಾದರಗಳಿಂದ ನೋಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾರ್ವಜನಿಕರು ಕೂಡ 24 ಗಂಟೆಗಳ ಕಾಲ ದಿನನಿತ್ಯ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೂ ಗೌರವ ನೀಡುವಂತೆ ಸಲಹೆ ನೀಡಿದರು.
ನಮ್ಮ ಸರ್ಕಾರ ಬಂದ ನಂತರ ಕಳೆದ ಎರಡು ವರ್ಷಗಳಲ್ಲಿ ಯಾವುದೇ ರೀತಿಯ ಕೋಮುಗಲಭೆ ನಡೆದಿಲ್ಲ. ವಿವಿಧ ಹಬ್ಬಗಳ ಸಂದರ್ಭದಲ್ಲಿ ಸಿಬ್ಬಂದಿಗಳು ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಯಾದಗಿರಿ ನಗರ ಪೊಲೀಸ್ ಠಾಣೆ ಉನ್ನತೀಕರಿಸುವ ಬೇಡಿಕೆ ಇದ್ದು ,ಅದನ್ನು ಈಡೇರಿಸಲಾಗುವುದು. ಅದರಂತೆ ಖಾನಾಪುರ್ ಪೊಲೀಸ್ ಠಾಣೆ, ಗುರುಮಿಟ್ಕಲ್ ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ಸಂಬಂಧಪಟ್ಟಂತೆ ನಿಯಮಾವಳಿಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಕ್ಕೇರ ಔಟ್ ಪೋಸ್ಟ್ ಪೋಲೀಸ್ ಠಾಣೆ ಉನ್ನತಿಕರಣಗೊಳಿಸುವ ಬಗ್ಗೆ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆದವರಿಗೆ, ಕಾನೂನನ್ನು ಉಲ್ಲಂಘಿಸಿ ಕಿರುಕುಳ ನೀಡಿದವರ ಬಂಧನಕ್ಕೆ ಸೂಚಿಸುವ ಜೊತೆಗೆ ಅವರ ಲೈಸೆನ್ಸ್ ರದ್ದತಿಗೂ ಸೂಚಿಸಲಾಗಿದೆ. ಅನಧಿಕೃತವಾಗಿ ನಡೆಸುವಂತಹ ಫೈನಾನ್ಸ್ ಗಳ ವಿರುದ್ಧ ಕಾನೂನಿನ ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ದೂರು ಬಂದಲ್ಲಿ ಅಥವಾ ಸೊ- ಮೋಟೊ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯಕ್ಕಾಗಿ ಬಡವರು, ದೀನ ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಜನಾಂಗ ನೆಮ್ಮದಿಯ ಬದುಕು ಸಾಗಿಸಲು ನೆರವಾಗಿದೆ ಎಂದು ಹೇಳಿದರು.
ಈ ಹಿಂದೆ ಇದ್ದ ಮಾನ್ಯ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ 65,000 ಕೋ ರೂಗಳನ್ನು ನೀರಾವರಿಗೆ ಒದಗಿಸಿ ನಾಲ್ಕು ಲಕ್ಷ. ಹೆ ಭೂಮಿಗೆ ನೀರಾವರಿ ಕಲ್ಪಿಸಲಾಗಿದೆ. ಹೈದರಾಬಾದ್ ಕರ್ನಾಟಕದ ಶೈಕ್ಷಣಿಕ ಮತ್ತು ನಿರುದ್ಯೋಗಿಗಳ ಅನುಕೂಲಕ್ಕಾಗಿ 371 (ಜೆ) ಜಾರಿಗೊಳಿಸಲಾಗಿದೆ. ಈಗಿನ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ಅಡಿ 9775 ಕೋಟಿ.ರೂ ಒದಗಿಸಿದೆ. ಯಾದಗಿರಿ ಜಿಲ್ಲೆಗೆ 212 ಕೋ. ರೂ. ಒದಗಿಸಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ತಲಾ 2000 ರೂ.ಗಳಂತೆ ತಾಯಂದಿರಿಗೆ ಜಮೆ ಮಾಡಲಾಗಿದೆ. ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ 10 ಸಾವಿರ. ಕೋ.ರೂ ವ್ಯಯಮಾಡಿದೆ. ಗೃಹ ಜ್ಯೋತಿ ಯೋಜನೆಗೆ 2000 ಕೋ. ರೂ ಒದಗಿಸಿದೆ. ಯುವ ನಿಧಿ ಯೋಜನೆ ಅಡಿ 400 ಕೋಟಿ ಸೇರಿದಂತೆ ಈವರೆಗೆ 58,000 ಕೋ.ರೂಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ್ ಅವರು ಮಾತನಾಡಿ, ರಾಜ್ಯ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದೆ. ಆರ್ಥಿಕವಾಗಿ ಬಡವರಿಗೆ ಶಕ್ತಿ ತುಂಬುವ ಕಾರ್ಯ ಮಾಡಿದೆ. 4 ಲಕ್ಷ ಹೆ. ಪ್ರದೇಶವನ್ನು ನೀರಾವರಿ ಗೊಳಿಸಿದೆ. 371 (ಜೆ) ಜಾರಿಗೊಳಿಸಿ, ನಿರುದ್ಯೋಗಿ ಯುವಕರಿಗೆ. ಉದ್ಯೋಗ ಹಾಗೂ ಶಿಕ್ಷಣಕ್ಕೆ ನೆರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ನಗರ ಪೊಲೀಸ್ ಠಾಣೆ ಉನ್ನತೀಕರಣಗೊಳಿಸಬೇಕು. ಖಾನಾಪುರದಲ್ಲಿ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶರಣಗೌಡ ಕಂದಕೂರು, ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ್, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ್, ನಗರಸಭೆ ಅಧ್ಯಕ್ಷರಾದ ಲಲಿತ ಅನಪುರ್, ನರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ವಿನಾಯಕ್ ಪಾಟೀಲ್, ಕಲ್ಬುರ್ಗಿ ಈಶಾನ್ಯ ವಲಯ ಉಪ- ಪೊಲೀಸ್ ಮಹಾನಿರೀಕ್ಷಕರಾದ ಅಜಯ್ ಹಿಲೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ್ ಸೇರಿದಂತೆ ಪೊಲೀಸ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
