ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ: ಡಿಸಿ ಸ್ನೇಹಲ್ ಆರ್.

By admin

ಯಾದಗಿರಿ: ನೀಲಕಂಠರಾಯನಗಡ್ಡಿ ಗ್ರಾಮಸ್ಥರ ರಕ್ಷಣೆ ಮಾಡುವುದರ ಜತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.

ಸುರಪುರ ತಾಲೂಕಿನ ನೀಲಕಂಠರಾಯನ (ನಡು) ಗಡಗಡಿ
ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸಿ , ಸಸಿಗೆ ನಿರೆರೆದು, ಪಿಂಚಣಿ ಪ್ರಮಾಣ ಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಳೆಗಾಲ ಬಂದಾಗಲೆಲ್ಲ ಪ್ರವಾಹಪೀಡಿತವಾಗಿ ಅನೇಕ ಸಮಸ್ಯೆಯನ್ನು ಎದುರಿಸುತ್ತಿರುವ ನೀಲಕಂಠರಾಯನ ( ನಡು) ಗಡ್ಡಿ ಜನತೆಯು ಗಡ್ಡಿ ತೊರೆದು ಬೇರೆಡೆಗೆ ಸ್ಥಳಾಂತರವಾಗಲು ಒಪ್ಪಿದರೆ ಸರ್ಕಾರ ಅನುಕೂಲ ಮಾಡಿಕೊಡಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.

*ಅದ್ದೂರಿ ಸ್ವಾಗತ; ಹಳ್ಳಿ ಸೊಗಡು ಡೊಳ್ಳು ವಾದ್ಯಗಳ ಮೆರವಣಿಗೆಯೊಂದಿಗೆ ಊರಿನ ಬೀದಿಯಲ್ಲಿ ಮೆರವಣಿಗೆ ಮಾಡಿ, ಹೃದಯಸ್ಪರ್ಶಿ ಸ್ವಾಗತ ನೀಡಿ ಮಹಿಳೆಯರು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ಆರತಿ ಬೆಳಗಿ ಗ್ರಾಮದ ಸಂಪ್ರದಾಯ ಮೆರೆದರು.

*ಅಮ್ಮೋರೆ ನಾವು ಸ್ಥಳಾಂತರ ಆಗುವುದಿಲ್ಲ: ನಿಲಕಂಠರಾಯನಗಡ್ಡಿಗೆ ಸೇತುವೆ ನಿರ್ಮಿಸಿದ್ದು ಈ ಸೇತುವೆ ಮೂಲಕ ಬೇರೆ ಗ್ರಾಮಗಳಿಗೆ ತೆರಳಲು ಅನುಕೂಲವಾಗಿದೆ. ಸುತ್ತಲಿರುವ ಫಲವತ್ತಾದ ಜಮೀನು ಇರುವ ಹಿನ್ನೆಲೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಮ್ಮೋರೆ ನಾವು ಸ್ಥಳಾಂತರ ಆಗಲು ಒಪ್ಪುವುದಿಲ್ಲ. ನಮಗೆ ಈ ಸೇತುವೆಯನ್ನೇ ಅಗಲೀಕರಣಗೊಳಿಸಿಕೊಡಿ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.


2014 ರಲ್ಲಿ ಕೃಷ್ಣಾ ನದಿ ಸುತ್ತುವರಿದ ನೀಲಕಂಠರಾಯನ ಗಡ್ಡಿಯಲ್ಲಿ ಪ್ರವಾಹಕ್ಕೆ ಹೆದರದೆ ಈಜಿ ದಡ ಸೇರಿ ಸಾಹಸ ಮೆರೆದ ತುಂಬು ಗರ್ಭಿಣಿ ಯಲ್ಲಮ್ಮ ಮತ್ತು ಮಗನಿಗೆ ಹಾಗೂ 6 ಜನರ ಪ್ರಾಣವನ್ನು ರಕ್ಷಿಸಿದ ಶೌರ್ಯ ಸಾಹಸ ಪ್ರಶಸ್ತಿ ವಿಜೇತ ನೀಲಕಂಠರಾಯನಗಡ್ಡಿ ಗ್ರಾಮದ ಕನಕಪ್ಪ ತಂ.ಮುದಕಪ್ಪ ಇವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.

*ಶಾಸಕ ರಾಜುಗೌಡ (ನರಸಿಂಹನಾಯಕ) ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿ ಜನರ ಸಮಸ್ಯೆಗಳನ್ನು ಆಲಿಸಿದ್ದು ಐತಿಹಾಸಿಕವಾಗಿದೆ ಎಂದರು.

ಪ್ರವಾಹ ಸಂದರ್ಭದಲ್ಲಿ ಗ್ರಾಮದ ಜನರು ಸಮಸ್ಯೆ ಎದುರಿಸುತ್ತಿದ್ದರಿಂದ ಪ್ರವಾಹ ಬರುವ ಹೊತ್ತಲ್ಲಿ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಗೊಳ್ಳಲು ಹೊಸೂರು ಗ್ರಾಮದ ಹತ್ತಿರ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಶಾಂತಗೌಡ ಪಾಟೀಲ್, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸವ ಎಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭುದೊರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಕವಿತಾಳ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ, ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ ಶೇಷಲು, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ, ಜಿಲ್ಲಾ ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿ ಅವಿನಾಶ ಎಂ, ಕೌಶಲ್ಯ ಅಭಿವೃದ್ದಿ ಸಹಾಯಕ ಅಧಿಕಾರಿ ಬಸಪ್ಪ ಎಸ್ ತಳವಡಿ ಹಾಗೂ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.