
ಲಕ್ಷ್ಮಣನ ಅರ್ಥಪೂರ್ಣ ಮಾತು ಕೇಳಿ ರಾಮI
ನುಡಿದನು ಲಕ್ಷ್ಮಣನಿಗೆ: “ನಿಸ್ಸಂದೇಹ, ತಲುಪೇವು ಗುರಿ, II
ಸಹಾಯ ಸಹಕಾರಗಳಿಲ್ಲದೆ ವಿಳಂಬವಾದೀತುI
ಗುರಿ ತಲಪುವ ಸಾಹಸ ಕಾರ್ಯ, II
ಮಳೆಗಾಲ ತಂದು ಕೊಟ್ಟಿತು ಭೂಮಿಗೆ ತಾಯಿ-ಭಾಗ್ಯ,I
ಮೋಡಗಳು ನಿರ್ಜಲವಾಗಿ ದಣಿದವು, ಸರಿದವು, II
ಆದರೆ, ನನ್ನಲಿ ರೋಷ ಪ್ರತಿಕಾರ ತುಂಬಿದೆ,I
ಗುರಿ ಮುಟ್ಟುವ ತನಕ ನಾ ದಣಿಯೆನು, II
ಕುಟಜ ಅರ್ಜುನ ಹೂ-ಮಕರಂದ ಕೊಚ್ಚಿಕೊಂಡು ಹೋದI
ರಭಸದಿ ಗರ್ಭ-ಜಲ ಸುರಿಸುವ ಮೋಡಗಳಿಲ್ಲ, II
ಮೋಡಗಳ ಗುಡುಗು, ಆನೆಗಳ ಘೀಂಕಾರ, I
ನವಿಲಗಳ ನೃತ್ಯ, ಎಲ್ಲವೂ ನಿಶಬ್ದ,II
ಚಂದ್ರನ ಬೆಳಕಿನಲಿ ಪಡೆದಿವೆ ಹೊಳಪುI
ಮತ್ತೆ ಗಿರಿ ಪರ್ವತಗಳು ಬಿಳಿವರ್ಣದಿ, II
ಶರದ ಋತು ಏಳು-ಎಲೆ ಬಾಳೆ ವಿಭಜಿಸಿದಂತೆ, ಸೂರ್ಯ ಚಂದ್ರ I
ನಕ್ಷತ್ರ ಬೆಳಕು ಚಲ್ಲಿವೆ ಗುರುತಿಸಲು ಪ್ರಾಣಿಗಳ, II
ಸರೋವರ-ಕಮಲಗಳು ಹೊಳೆಯುತ್ತಿವೆI
ಗರ್ವದಿ ಬೆಳಕಿನಲಿ ಸೂರ್ಯನ, II
ಚಕ್ರವಾಕ ಹಂಸ ಕಮಲಗಳಿಂದೆ ತುಂಬದೆI
ಮತ್ತೆ ನದಿ ಸರೋವರ ಮರಳುಗಡ್ಡೆ,II
ಗೂಳಿ ದನಕರ ಆನೆಗಳ ಹಿಂಡು ತುಂಬಿವೆI
ಮತ್ತೆ ನದಿ ಸರೋವರ ಮರಳುಗಡ್ಡೆ, II
ಗಂಡು ನವಿಲು ಕಳೆದುಕೊಂಡಿದೆ ಹೆಣ್ಣಿನ ಬಯಕೆ,I
ಆದರೂ ಅವುಗಳ ಅಂದಚಂದ ಕುಗ್ಗದು, II
ಭೂಮಿ ಒಣಗಿ ಧೂಳದಿ ಪುನಃ ತುಂಬುವದು,I
ಶತ್ರು ಸದೆಬಡೆಯಲು ಸೈನ್ಯ-ಸಜ್ಜು ನಡೆಯುವದು, II
ಧೂಳಲಿ ಹೊರಳಾಡಿ ಹೂಂ-ಕರಿಸುವ ಗೂಳಿI
ಕಾದಾಟಕೆ ಸಜ್ಜಾಗುವದು ಪ್ರತಿಸ್ಪರ್ಧಿಗಾಗಿ, II
ಹಿಂಡಿನಲ್ಲಿದ ಹೆಣ್ಣಾನೆ ಮದದಲಿ ಸಾಗುತ ಅರಣ್ಯದಲಿI
ಗಂಡಾನೆಯೊಂದಿಗೆ ಚೇಷ್ಟೆಯಲಿ ತೊಡಗುವದು, II
ಹುತ್ತದಲಿ ಅವಿತ ಸರ್ಪಗಳು, ಮಳೆಗಾಲದಲಿ,I
ಆಹಾರಕ್ಕಾಗಿ ಹೊರ ಬೀಳುವವು,ಶರತ-ಕಾಲದಲಿ,II
ತುಂಬಿದೆ ರಾತ್ರಿ ಚಂದ್ರ-ಬೆಳಕಿನಿಂದI
ನಕ್ಷತ್ರಗಳು ತೋರುತಿವೆ ಚಂದ್ರನಿಗೆ ಪ್ರೇಮ,II
ಮುಖದಂತಹ ಚಂದ್ರ, ಕಣ್ಣುಗಳಂತಹ ನಕ್ಷತ್ರಗಳುI
ಉಡುಗೆಯಂತಹ ಬೆಳದಿಂಗಳು,ನಾರಿಯಂತೆ ಕಂಡವು, II
ಕುಕ್ಕಿ ಕುಕ್ಕಿ ಭತ್ತದತೆನೆ ತಿನ್ನು ಸಾರಸ ಹಕ್ಕಿಗಳು,ಅತ್ತI
ಸಾಲು ಸಾಲುಗಳಲ್ಲಿ ಗಗನದಲಿ ಹಾರುವ ಹಕ್ಕಿಗಳು,ಇತ್ತII
ಕಿಷ್ಕಿಂಧಕಾಂಡ ರಾಮಾಯಣ
ಶರತ ಋತುವಿನ ಸೌಂದರ್ಯವನ್ನು ಆದಿಕವಿ ವಾಲ್ಮೀಕಿಯು ಮುಂದುವರೆಸುತ ರಾಮ ಲಕ್ಷ್ಮಣರ ಸಂವಾದವನ್ನು ವಿವರಿಸಿರುವರು:(1) ಶರತ್ ಋತುವಿನ ಚೇಷ್ಟೆಗಳು: ಶರದ ಋತುವಿನಲ್ಲಿ ತನ್ನ ಗರ್ಭ-ಜಲವನ್ನು ರಭಸದಿಂದ ಸುರಿಸಿ ಕುಟಜ ಅರ್ಜುನ ಹೂ-ಮಕರಂದ ಕೊಚ್ಚಿಕೊಂಡು ಹೋಗುವ ಮೋಡಗಳಿಲ್ಲ, ಮೋಡಗಳ ಗುಡುಗುಗಳಿಲ್ಲ, ಆನೆಗಳ ಘೀಂಕಾರವಿಲ್ಲ, ನವಿಲಗಳ ನೃತ್ಯವಿಲ್ಲ, ಎಲ್ಲವೂ ನಿಶಬ್ದವಾಗಿವೆ; ಆದರೆ ಶರದ ಋತುವಿನ ಚಂದ್ರನ ಬೆಳಕಿನಲಿ ಮತ್ತೆ ಗಿರಿ ಪರ್ವತಗಳು ಬಿಳಿವರ್ಣದಿಂದ ಹೊಳಪು ಪಡೆದಿವೆ; ಶರದ ಋತುವು ಬಾಳೆ ಗಿಡ ಏಳು-ಎಲೆಗಳನ್ನು ವಿಭಜಿಸಿ ಬಿಟ್ಟಂತೆ ಸೂರ್ಯ ಚಂದ್ರ ಮತ್ತು ನಕ್ಷತ್ರಗಳು ಬೆಳಕು ಚಲ್ಲಿವೆ ಪ್ರಾಣಿಗಳನ್ನು ಗುರುತಿಸಲು; ಸೂರ್ಯನ ಬೆಳಕಿನಲ್ಲಿ ಗರ್ವದಿಂದ ಸರೋವರ-ಕಮಲಗಳು ಹೊಳೆಯುತ್ತಿವೆ, ಮತ್ತೆ ನದಿ ಸರೋವರ ಮರಳುಗಡ್ಡೆಗಳು ಚಕ್ರವಾಕ ಹಂಸ ಕಮಲ, ಗೂಳಿ ದನಕರ ಆನೆಗಳ ಹಿಂಡುಗಳಿಂದ ತುಂಬಿವೆ; ಗಂಡು ನವಿಲು ಹೆಣ್ಣಿನ ಬಯಕೆ ಕಳೆದುಕೊಂಡಿದೆ ಆದರೂ ಅವುಗಳ ಅಂದಚಂದ ಕುಗ್ಗಿರುವದಿಲ್ಲ; ಕಾಲದಲ್ಲಿ ಮಳೆಗಾಲದಲ್ಲಿ ಒದ್ದೆಯಾಗಿದ್ದ ಭೂಮಿ ಪುನಃ ಒಣಗಿ ಧೂಳದಿಂದ ತುಂಬುವದು, ಶತ್ರು ಸದೆಬಡೆಯಲು ಸೈನ್ಯ-ಸಜ್ಜು ಮಾಡುವ ಕಾರ್ಯ ನಡೆಯುವದು; ಧೂಳಲಿ ಹೊರಳಾಡಿ ಹೂಂ-ಕರಿಸುವ (ಮದವೇರಿದ) ಗೂಳಿ ಕಾದಾಟಕ್ಕಾಗಿ ಪ್ರತಿಸ್ಪರ್ಧಿಗಾಗಿ ಸಜ್ಜಾಗುವದು; ಹಿಂಡಿನಲ್ಲಿದ್ದ ಹೆಣ್ಣಾನೆ ಮದದಲಿ ಅರಣ್ಯದಲ್ಲಿ ಸಾಗುತ ಗಂಡಾನೆಯೊಂದಿಗೆ ಚೇಷ್ಟೆಯಲ್ಲಿ ತೊಡಗುವದು; ಮಳೆಗಾಲದಲ್ಲಿ ಹುತ್ತದಲಿ ಅವಿತ ಸರ್ಪಗಳು ಶರತ-ಕಾಲದಲಲ್ಲಿ ಆಹಾರಕ್ಕಾಗಿ ಹೊರ ಬೀಳುವವು; ಶರದ ಋತುವಿನ ರಾತ್ರಿ ಚಂದ್ರ-ಬೆಳಕಿನಿಂದ ತುಂಬಿದೆ, ನಕ್ಷತ್ರಗಳು ಚಂದ್ರನಗೆ ಪ್ರೇಮ ತೋರುತಿವೆ; ಮುಖದಂತಹ ಚಂದ್ರ, ಕಣ್ಣುಗಳಂತಹ ನಕ್ಷತ್ರಗಳು, ಉಡುಗೆಯಂತಹ ಬೆಳದಿಂಗಳು, ನಾರಿಯಂತೆ ಕಂಡವು; ಕುಕ್ಕಿ ಕುಕ್ಕಿ ಭತ್ತದ ತೆನೆ ತಿನ್ನು ಸಾರಸ ಹಕ್ಕಿಗಳು ಮತ್ತು ಗಗನದಲ್ಲಿ ಸಾಲು ಸಾಲುಗಳಲ್ಲಿ ಹಾರುವ ಹಕ್ಕಿಗಳ ದೃಶ್ಯ ಸಾಮನ್ಯವಾಗಿತು; ಹೀಗೆ ಆದಿಕವಿ ವಾಲ್ಮೀಕಿಯು ಸಮಯೋಚಿತ, ಅರ್ಥಮಯ, ಅಲಂಕಾರಗಳನ್ನು ಬಳಿಸಿ ಕಾವ್ಯದ ಮದ ಹರಿಸಿರುವರು, ಸರ್ವಕಾಲಿಕ ಅನುಕರಣೀಯ ಶೈಲಿ. (2) ಸ್ತ್ರೀ ಚಂಚಲೆ: ಶರದ ಋತುವಿನ ಸೌಂದರ್ಯ ಕಂಡರೂ ಸೀತೆಯೂ ಸಂತುಷ್ಟಳಾಗುವದಿಲ್ಲ, ಶರದ ಋತುವಿನಲ್ಲಿ ಹೆಣ್ಣು ಗಂಡು ಹಂಸ ಪಕ್ಷಿಗಳ ಮಿಲನ ಮತ್ತು ಚಕ್ರವಾಕ ಪಕ್ಷಿಗಳ ಪರಸ್ಪರ ಸರಸ ನಡೆಯುವದು ಆದರೆ ಈ ಸಮಯದಲ್ಲಿ ಕಮಲಾಕ್ಷಿ ಸೀತೆ ಇಲ್ಲ; ಮಳೆಗಾಲದ ಮಳೆನೀರು ಅರಣ್ಯ ನದಿ ಸರೋವರಗಳ ತೃಷೆಯನ್ನು ತೃಪ್ತಿ ಪಡಿಸಿದೆ ಆದರೆ ಅದು ನನ್ನಲ್ಲಿಯ ಸೀತೆ-ತೃಷೆಯನ್ನು ತೃಪ್ತಿ ಪಡಿಸಲಿಲ್ಲ; ಸ್ತ್ರೀ ಚಂಚಲೆ, ಮನ್ಮಥನ ಬಾಣಕ್ಕೆ ಸೀತೆಯೂ ನನ್ನ ವಿರಹದಲ್ಲಿ ನೊಂದಿರಬೇಕು. ಶರದ ಋತು ನಿಸರ್ಗದಲ್ಲಿ ಸಂತೋಷ ಉಲ್ಲಾಸ ತಂದಿದೆ ಆದರೆ ಅದು ರಾಮ ಮತ್ತು ಸೀತೆಗೆ ಮಾತ್ರ ನೆನಪಿನ ದುಃಖ ತಂದಿದೆ;” ಅಗ್ನಿಯು ತನ್ನ ಬಳಿ ಬಂದುದ್ದನು ಸುಡುವಂತೆ ಸೀತೆಯೂ ತನ್ನ ಬಳಿ ಪರಪುರುಷರು ಬಂದರೆ ಸುಡುವಳು ಎಂಬ ಲಕ್ಷ್ಮಣನ ಮಾತಿನಲ್ಲಿ ಸೀತೆಯೂ ಚಂಚಲ ಸ್ವಭಾವದ ಸ್ತ್ರೀಯಾಗಿದ್ದರೂ ಪತಿಧರ್ಮ ನಿಷ್ಠೆಯುಳ್ಳವಳೆಂಬ ವಿಶ್ವಾಸ ರಾಮನಿಗೆ ತಂದುಕೊಡುವದು, ಆದಿಕವಿ ಸ್ತ್ರೀಸಂವೇಧಕ ವಾಲ್ಮೀಕಿಯು ಸ್ತ್ರೀ ಸ್ವಭಾವದಲ್ಲಿ ಚಂಚಲಳು, ಆದರೂ ಸೀತೆಯಂತಹ ಪತಿನಿಷ್ಠೆ ಸ್ತ್ರೀಯರು ತಮ್ಮ ನಿಲುವಿನಲ್ಲಿ ಅಟಲರು ಎಂಬದನ್ನು ಜಗಕ್ಕೆ ಸಾರಿರುವರು.; ಇಂತಹ ಸಂದರ್ಭಗಳನ್ನು ವಿವರಿಸುವಾಗ ಇಂದಿನ ಸಾಹಿತಿಗಳು ಅಂಗ್ಲ ಸಾಹಿತಿಗಳ ಉಲ್ಲೇಖಗಳನ್ನು ನೀಡುವ ವಾಡಿಕೆ ಬೆಳೆದಿದೆ, ಆದರೆ ನಮ್ಮದೇ ಸಾಹಿತ್ಯವನ್ನು ಉಲ್ಲೇಖಿಸಲು ಹಿಂದೆಯೇಟು ಹಾಕುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸುವರು,(3) ತಮ್ಮ ಲಕ್ಷ್ಮಣನ ಅರ್ಥಪೂರ್ಣ ಮಾತುಗಳನ್ನು ಕೇಳಿದ ರಾಮನು ಲಕ್ಷ್ಮಣನಿಗೆ “ಗುರಿ ತಲುಪುವದರಲ್ಲಿ ಯಾವ ಸಂದೇಹವೂ ಇಲ್ಲಾ, ಸಹಾಯ ಸಹಕಾರಗಳಿಲ್ಲದೆ ವಿಳಂಬವಾದೀತು ( ಎಲ್ಲರೂ ಬಿಟ್ಟರು ತಾವು ಬಿಡದ ಕೆಲಸ); ಮಳೆಗಾಲವು ಭೂಮಿಗೆ ತಾಯಿ-ಭಾಗ್ಯ ತಂದು ಕೊಟ್ಟಿತು ಹಾಗು ಮಳೆ ಸುರಿಸದ ಮೋಡಗಳು ನಿರ್ಜಲವಾಗಿ ದಣಿದವು ಮತ್ತು ಬೇರೆಡೆ ಸರಿದವು ಆದರೆ ನನ್ನಲಿ ತುಂಬಿದ ರೋಷದ ಪ್ರತಿಕಾರವು ಗುರಿ ಮುಟ್ಟುವ ತನಕ ದಣಿಯದು ಎಂದು ರಾಮನು ತಾವು ಸೀತೆಯನ್ನು ಹುಡುಕುವ ಅನಿವಾರ್ಯತೆಯನ್ನು ಉಚ್ಚರಿಸುವರು, ತದಮೂಲಕ ವಾಲ್ಮೀಕಿಯು ರಾಮನಲ್ಲಿಯ ಸೀತೆಯ ಅನ್ಯೋನ್ಯತೆಯನ್ನು ತಿಳಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
