ಕಲ್ಯಾಣ ಕಲೆಯ ಕೊಡುಗೆ ಅತ್ಯಂತ ಶ್ರೇಷ್ಠ

By admin

ಚಿತ್ರಕಲಾವಿದ : ಡಾ.ಅಶೋಕ ಶಟಕಾರ

ಕಲ್ಯಾಣವೆಂಬುದು ಚಿತ್ರಕಲೆಯ ಪ್ರಣೀತಿಯಂತೆ, ನಾಡಿನುದ್ದಕ್ಕೂ ಕಲೆಯ ಕಿರಣಗಳು ಸೂಸಿ ಅದು ಬರೀ ಬಿಸಿಲಿಗೆ ಮಾತ್ರ ಹೆಸರಾದುದಲ್ಲ.ಕಲೆಯ ಕೊಡುಗೆಯಿಂದಲೂ ಸಹ ಅತ್ಯಂತ ಶ್ರೇಷ್ಠ ಎಂಬುದನ್ನು ಯಾವತ್ತೂ ಮರೆಯುವಂತಿಲ್ಲ. ಕಲೆಗಾಗಿ ಕಲಾವಿದರು ದುಡಿದಿದ್ದಾರೆ.ಕಲಾವಿದರಿಗಾಗಿ ಕಲೆ ಕೈ ಹಿಡಿದಿದೆ.ಭಕ್ತಿಯಿಂದ ಆರಾಧಿಸಿದ ಕಲಾವಿದರ ಕೈಗೆ ಶಕ್ತಿಯನ್ನು ಮಾತ್ರ ನೀಡದೆ ಕಲಾ ರಚನೆಯ ಮೂಲಕ ಶ್ರೇಯಸ್ಸು ಸಹ ತಂದುಕೊಟ್ಟ ಕೀರ್ತಿ ಈ ನೆಲಕ್ಕಿದೆ.ಕಲೆಯ ಏಳಿಗೆಗಾಗಿ ದುಡಿದ ಕಲಾಗುರು ಶಂಕರರಾವ್ ಆಲಂದಕರ್,ಎಂ.ಟಿ.ಭೋಪಲೆ,ಕುಮಾರ ಚಂದ್ರಶೇಖರ,ಶಾಂತಲಿಂಗಪ್ಪ ಪಾಟೀಲ,ಡಾ.ಎಸ್.ಎಂ.ಪಂಡಿತ,ಡಾ.ಜೆ.ಎಸ್.ಖಂಡೇರಾವ್,ಡಾ.ಎ. ಎಸ್.ಪಾಟೀಲ,ಶ್ರೀ ಬಸವರಾಜ ರೇ. ಉಪ್ಪಿನ,ಡಾ.ವಿ.ಜಿ.ಅಂದಾನಿ, ಶ್ರೀ ಮೋಹನ್ ಸೀತನೂರು, ಡಾ.ಎಸ್.ಸಿ.ಪಾಟೀಲ ಹೀಗೆ ಹಲವಾರು ಕಲಾವಿದರು ಶ್ರಮಿಸಿದ ಫಲ ಶ್ರುತಿಯಿಂದ ಕಲ್ಯಾಣ ನಾಡು ಕಲೆಯ ಶ್ರೇಷ್ಠ ಕಲೆಯ ಬೀಡಾಗಿ ಬೆಳಗಿದೆ.ಅಂತೆಯೇ ಮುಂದುವರೆದು ಗಮನಿಸುವುದಾದರೆ ಸಾವಿರಾರು ಯುವ ಕಲಾವಿದರು ಸಹ ತಮ್ಮದೆಯಾದ ನೆಲೆಯಲ್ಲಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.ಇವರೆಲ್ಲರ ಸೇವೆಯು ಸಹ ಶ್ಲಾಘನೀಯವಾದದ್ದು.

ಮೇಲಿನ ವಿವರಕ್ಕೆ ಸಂಬಂಧಿಸಿದಂತೆ ಈ ಹೊತ್ತಿನ ಕಲಾವಿದರಾದ ಡಾ.ಅಶೋಕ ಶಟಕಾರ ಅವರು ಸಹ ಬಹುಮುಖ್ಯ ಕಲಾವಿದರು. ಕಲಬುರ್ಗಿಯ ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್ ಸ್ನಾತಕ ಪದವಿ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ, ಕಲಾ ಸಮುದಾಯದ ಪ್ರೀತಿಯ ಕಲಾವಿದರಾಗಿಯೂ ಸಹ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಕಲೆ ಮತ್ತು ಕಲಾವಿದರ ಕುರಿತು ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿ, ಅನೇಕ ಕಲಾವಿದರ ಮತ್ತು ಕಲಾ ಪ್ರಗತಿಯ ವಿಚಾರಗಳಿಗೆ ಪೂರಕವಾಗಿ ಮಾತನಾಡುತ್ತ,ಕಲೆಯ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸಬೇಕು ಅನ್ನುವ ಕಳಕಳಿಯ ಮಹತ್ವದ ಕಲಾವಿದರು.
ಆ ಕಾರಣಕ್ಕಾಗಿ ಕಲೆಯ ಬೋಧನೆಯೊಂದಿಗೆ ಕಲಾ ರಚನೆಯಲ್ಲಿಯೂ ಸಹ ತೊಡಗಿಕೊಂಡು ಅನೇಕ ಕಲಾಕೃತಿಗಳನ್ನು ರಚಿಸಿ ಹಲವೆಡೆ ಕಲಾ ಪ್ರದರ್ಶನಗಳನ್ನು ಸಹ ಏರ್ಪಡಿಸಿ ಯಶಸ್ಸು ಗಳಿಸಿದ್ದಾರೆ.ರೇಖೆ ಬಣ್ಣ ಭಾವಗಳೊಂದಿಗೆ ಸಮುದಾಯ ಸಂಘಟನೆಯೊಂದಿಗೆ ಸಹ ಗುರುತಿಸಿಕೊಂಡು, ಕಲೆ ಸಾಹಿತ್ಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯದಲ್ಲೂ ಸಹ ಕೆಲಸ ಮಾಡುತ್ತಾ ಸಮ ಸಮಾಜದ ಕನಸನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.ಹೀಗಾಗಿ ಡಾ.ಅಶೋಕ ಶಟಕಾರ ಬರೀ ಕಲಾವಿದರಾಗಿ ಮಾತ್ರ ಕಾಣದೆ ಸಾಮಾಜಿಕ ಚಿಂತನೆಯ ನೆಲೆಯಲ್ಲಿಯೂ ಸಹ ಪ್ರಮುಖರಾಗಿ ಕಂಡುಬರುತ್ತಾರೆ.ಹೀಗಾಗಿ ವಯಕ್ತಿಕ ನೆಲೆಯಲ್ಲಿ ನನಗೆ ಮತ್ತು ಹಲವರಿಗೆ ಆಪ್ತ ಕಲಾವಿದರಾಗಿ ಗಮನ ಸೆಳೆಯುತ್ತಾರೆ.

ಡಾ.ಅಶೋಕ ಶಟಕಾರ ಅವರು ಕರ್ನಾಟಕದ ಕಿರಿಟವೆಂದೇ ಖ್ಯಾತಿ ಪಡೆದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೆಳಕುಣಿ (ಕೆ) ಗ್ರಾಮದವರು.1 ಜೂನ್ 1972 ರಲ್ಲಿ ಜನಿಸಿದ್ದಾರೆ.ಚಿತ್ರಕಲೆಯ ಅಭ್ಯಾಸವನ್ನು ಕಲಬುರ್ಗಿಯ ದಿ ಐಡಿಯಲ್ ಫೈನ್ ಆರ್ಟ್ ಕಲಾ ಮಹಾವಿದ್ಯಾಲಯದಲ್ಲಿ ಡಿಪ್ಲೊಮಾ ಮತ್ತು ಎ. ಎಂ,ಪದವಿಯನ್ನು ಪಡೆದವರು.ನಂತರ (ಬಿ.ಎಫ್.ಎ) ಬ್ಯಾಚುಲರ್ ಆಫ್ ಫೈನ್ ಆರ್ಟ್ ಸ್ನಾತಕ ಪದವಿ ಅಧ್ಯಯನ ಮಾಡಿ ನಂತರ ಎಂ.ಎಂ.ಕೆ ಕಾಲೇಜಿನಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ (ಎಂ.ಎಫ್.ಎ),ಸ್ನಾತಕೋತ್ತರ ಪದವಿ ಸಹ ಪೂರೈಸಿದರು.ಮುಂದುವರೆದು ನಾಡೋಜ ಡಾ.ಜೆ.ಎಸ್.ಖಂಡೇರಾವ್ ಅವರ ಜೀವನ ಮತ್ತು ಕಲಾಕೃತಿಗಳ ಕುರಿತಂತೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ ಎಚ್.ಡಿ, ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಯನ್ನು ಸಹ ಪಡೆದಿದ್ದಾರೆ.

ಸದಾ ಕಾಲ ಕಲೆಯ ಅಧ್ಯಯನ, ಕಲಾ ಬೋಧನೆ,ಕಲೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ನಾಡಿನ ಹಲವೆಡೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳನ್ನು ಮಾಡಿದ್ದಾರೆ. ಕಲ್ಕತ್ತಾ,ಮದ್ರಾಸ್,ಬೆಂಗಳೂರು, ದೆಹಲಿ,ಮುಂಬೈ,ಕಲಬುರ್ಗಿ, ಹೈದ್ರಾಬಾದ್, ಭುವನೇಶ್ವರ ಮತ್ತು ಕೊಚ್ಚಿ, ಸೇರಿದಂತೆ ಸುಮಾರು ಹದಿನಾರು ಕಡೆ ಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.ಮುಂಬೈ, ಬೆಂಗಳೂರು, ನಗರಗಳಲ್ಲಿ ಎರಡೆರಡು ಸಲ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ.ಒಟ್ಟು ನಾಲ್ಕು ಏಕವ್ಯಕ್ತಿ, ಹನ್ನೆರಡಕ್ಕೂ ಹೆಚ್ಚು ಸಾಮೂಹಿಕ ಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿ ಜನಮನ ಸೆಳೆದಿದ್ದಾರೆ.ಅಲ್ಲದೆ ನಾಗಪುರ,ಪುಣೆ,ಹುಬ್ಬಳ್ಳಿ, ಇತ್ಯಾದಿ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.

ರಾಯಚೂರು, ಬೆಂಗಳೂರು, ಕಲಬುರ್ಗಿ, ವಿಜಯಪುರ,ಮುಂಬಯಿ, ಬೀದರ್,ಹಾಸನ್,ಸೇರಿದಂತೆ ಸುಮಾರು ಇಪ್ಪತ್ತೈದು ಚಿತ್ರಕಲಾ ಶಿಬಿರಗಳಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ,ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು,ಇ. ಎಂ.ಎಸ್.ಎ ದಾವಣಗೆರೆ, ಯು.ಎಸ್.ಎ, ಡಾ.ವಿಜಯ ಹಾಗರಗುಂಡಗಿ ಅವರ ಕಲಾ ಸಂಗ್ರಹಾಲಯ ಕಲಬುರ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಹೀಗೆ ನಾಡಿನ ವಿವಿಧೆಡೆಗಳಲ್ಲಿ ಸಂಗ್ರಹಗೊಂಡಿವೆ.

ಕಲಾವಿದರಾಗಿ,ಕಲಾ ತೀರ್ಪುಗಾರರಾಗಿ,ಸಮಾಜದ ಒಳತಿಗಾಗಿ ಉತ್ತಮ ಸೇವಕರಾಗಿ ಹಲವಾರು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ.ಇವರ ಕಲೆ ಮತ್ತು ಸಾಮಾಜಿಕ ಸೇವೆಯನ್ನು ಗಮನಿಸಿ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂರು ಸಲ ಪಡೆದಿದ್ದಾರೆ.ಮೆರಿಟ್ ಅವಾರ್ಡ್ ದೆಹಲಿ,ಜ್ಯೂನಿಯರ್ ಫೆಲೋಶಿಪ್ ಮಿನಿಸ್ಟರಿ ಆಫ್ ಕಲ್ಚರಲ್ ನವ ದೆಹಲಿ,ಅಲ್ಲದೆ 46 ನೇ ವಾರ್ಷಿಕ ಕಲಾ ಪ್ರದರ್ಶನದ ಬಹುಮಾನವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರಿಂದ ಪಡೆದಿದ್ದಾರೆ.

ಪ್ರತಿಭಾವಂತ ಕಲಾವಿದರಾದ ಡಾ.ಅಶೋಕ ಶಟಕಾರ ಅವರ ಕಲಾಕೃತಿಗಳ ಅಂತರ್ಗತವನ್ನರಿತಾಗ ಪ್ರಬುದ್ಧ ಮಾದರಿಯ ಕಲಾವಿದನೆಂಬುದು ಮರೆಯುವಂತಿಲ್ಲ. ಇವರ ಕಲಾಕೃತಿಗಳು ರೇಖೆ ಬಣ್ಣಗಳ ಸಂಗಮದಿಂದ ಮತ್ತು ಬಣ್ಣವನ್ನೂರತುಪಡಿಸಿ ಗೆರೆಗಳ ಸಮೂಹದಿಂದಲೂ ಸಹ ಜೀವ ಪಡೆದು ಸಾಮಾಜಿಕ ಸಮಸ್ಯೆಗಳ ಹೂರಣವನ್ನು ಅಭಿವ್ಯಕ್ತಿಸುತ್ತವೆ.ಮಾನವ ಬದುಕಿನ ಬಯಕೆಯನ್ನು ಪ್ರತಿಪಾದಿಸುವ,ಅಲ್ಲದೆ ಕಲಾ ಸಮುದಾಯದ ದೃಷ್ಟಿಯಿಂದ ಅಧ್ಯಯನಕ್ಕೊಳಪಡಿಸಿದಾಗ ಇವರ ಗೆರೆ ಚಿತ್ರಗಳು ಹಲವು ವೈವಿಧ್ಯಮಯ ಚಿಂತನೆಗಳನ್ನು ತಿಳಿಸುವಂತಿವೆ.ರೇಖೆಗಳಲ್ಲಿರುವ ಚಲನಶೀಲತೆ ಅರ್ಥಪೂರ್ಣ.
ಭಾವ ಬಂಧನದಿಂದ ಕಲಾವಿದನೋರ್ವನ ಆಂತರಿಕ ಸಂವೇದನೆಯ ಆಚೆ ಸಮಾಜದಲ್ಲಿನ ಅಸಮಾನತೆಯ ಸಂಗತಿಗಳನ್ನು,ಸಾಂಸ್ಕೃತಿಕ ರಾಜಕಾರಣದ ಚಹರೆಗಳನ್ನು ತಿಳಿಸುವಂತೆ ಕಂಡುಬರುತ್ತವೆ. ರೇಖೆ ಕಲಾವಿದನ ಜೀವಂತಿಕೆಯಾಗಿ ಕ್ಯಾನ್ವಾಸಿನ ಮೇಲೆ ರೂಪ ಪಡೆದಿವೆ.ಬ್ರೇಷಗಳಿಂದ ಮೂಡಿದ ದಪ್ಪ ಸಣ್ಣ ವಕ್ರ ನೇರ ರೇಖೆಗಳ ಚೆಲುವು ಕ್ಯಾನ್ವಾಸಿನ ಅರ್ಥರೂಪಕ್ಕೆ ಕಾರಣವಾಗಿವೆ.
ಮಾನವಾಕೃತಿಯ ರೂಪಗಳಲ್ಲಿ ಸಾಮಾಜಿಕ ಸಮಸ್ಯೆಗಳ ನಾದವನ್ನು ತಿಳಿಸಿದಂತೆ,ಕಾಮ ಪ್ರೇಮದ ಚಟುವಟಿಕೆಗಳಲ್ಲಿ ವಾಸ್ತವತೆಯ ನೆಲೆಯನ್ನು ಗ್ರಹಿಸಿದಂತೆ,ಬೆತ್ತಲೆಯ ಬದುಕಿನ ನೈಜ ಘಟನೆಗಳು ನಿರೂಪಿಸಿದಂತೆ,ನಾಲ್ಕು ಗೋಡೆಗಳ ಸಂದಿಯಲ್ಲಿ ಪ್ರಾಮಾಣಿಕ ವ್ಯಕ್ತಿಗಳ ರೋಧನೆಯ ಕಥೆಗಳು ಚಿತ್ರಿಸಿದಂತೆ ಹೀಗೆ ಹಲವು ನೋಟಗಳ ನೋಟದಲ್ಲಿ ಏನೆಲ್ಲಾ ಅರ್ಥವನ್ನು ಕಟ್ಟಿಕೊಳ್ಳುವಂತೆ ಕಣ್ಣುಗಳಿಗೆ ಸಹಾಯವಾಗುತ್ತವೆ ಶಟಕಾರ ಅವರ ಕಲಾಕೃತಿಗಳು.ಆಯಾ ನೋಡುಗನ ನೋಟದಲ್ಲಿ ಕಾಣುವ ಅರ್ಥವಿದೆ,ಆಯಾ ಗಮನಧಾರಿತ ಮನಸ್ಸುಗಳು ಬಿಚ್ಚಿಡುವ ನಿರ್ಧಾರದ ಮೇಲೆ ಕಲಾವಿದನ ಕಲಾಕೃತಿಗಳು ಅರ್ಥವನ್ನು ವಿವರಿಸಬಲ್ಲವು.ಹಾಗಾಗಿ ಕಲೆಯನ್ನು ಬಲ್ಲ ಕಣ್ಣುಗಳು ವಾಸ್ತವತೆಯ ಅರಿವಿನ ಜಾಗೃತಿ ದೃಷ್ಟಿಯ ಫಲದಿಂದ ಶಟಕಾರ ಎಂಬ ಕಲಾವಿದನನ್ನು ಶ್ರೇಷ್ಠ ಚಿಂತನೆಯ ಕಲಾವಿದನೆಂಬ ಪಟ್ಟವನ್ನು ಕಟ್ಟಬೇಕಾಗುತ್ತದೆ.
ಇಂತಹ ಕಲಾವಿದನನ್ನು ಹೊಂದಿದ ಕಲ್ಯಾಣ ನಾಡು ಮತ್ತಷ್ಟು ಶ್ರೀಮಂತಿಕೆಗೆ ಕಾರಣವಾಗಿದೆ.

ಲೇಖನ : ಡಾ.ಬಸವರಾಜ ಎಸ್.ಕಲೆಗಾರ
ಅತಿಥಿ ಉಪನ್ಯಾಸಕರು
ದೃಶ್ಯಕಲಾ ಅಧ್ಯಯನ ವಿಭಾಗ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಪಾವಟೆ ನಗರ – 580003