
ಅಣ್ಣನ ಬೋಧನೆಯಂತೆ ಶಾಂತಚಿತ್ತದಿI
ಧನುಷ್ಯಧರಿಸಿ ಸುಗ್ರೀವನ ಭೇಟಿಗೆ ನಡೆದ ಲಕ್ಷ್ಮಣ, II
ರಾಮನ ವಿರಹಗ್ನಿದಿ ಹುಟ್ಟಿದ ಕೋಪಾಗ್ನಿಯಂತೆI
ಜ್ವಲಿಸುತ, ಸಾಗಿದ ಲಕ್ಷ್ಮಣ ಮದದಾನೆಯಂತೆ, II
ಪರ್ವತಗಳ ಮಧ್ಯೆ ವಾನರ ಸೈನ್ಯದಿ ಸುತ್ತುವರೆದI
ನುಸುಳಲಸಾಧ್ಯ ಕಿಷ್ಕಿಂಧ ಕಂಡ ಲಕ್ಷ್ಮಣ, II
ಪ್ರವೇಶಿಸಿದಂತೆ ಕಿಷ್ಕಿಂಧ ವಾನರ ವೀರರು ಅಂಗದ I
ಬಳಿ ಬಂದರು ವೀರಾವವೇಶದ ಲಕ್ಷ್ಮಣ ಕಂಡು, II
ಲಕ್ಷ್ಮಣ ನುಡಿದನು ಅಂಗದನಿಗೆ: “ ಓ ಬಾಲಕಾ,I
ಸುಗ್ರೀವನಿಗೆ ತಿಳಿಸು ನಾ ಬಂದ ವಾರ್ತೆ”II
ಓಡಿ ಸುಗ್ರೀವನ ಬಳಿ ಬಂದು ಅಂಗದI
ಲಕ್ಷ್ಮಣ ಭೇಟಿಗೆ ಬಂದ ವಾರ್ತೆ ತಿಳಿಸಿದ, II
ತಾರಾ, ರುಮಾ ಕಕ್ಷದಲಿದ್ದ ಸುಗ್ರೀವನಿಗೆI
ಮದ್ಯದಮಲಿನಲಿ ತಿಳಿಯಲಿಲ್ಲ ಅಂಗದನ ಮಾತು, II
ವಾನರರ ಗದ್ದಲ ಕೇಳಿ ಅಂತಪುರ ಹೊರಬಂದ, ಅಸ್ತವ್ಯಸ್ತ I
ಆಭರಣ ಹೊಯ್ದಾಡುವ ಕಣ್ಣುಗಳ, ಸುಗ್ರೀವ; II
ಪ್ಲಕ್ಷ , ಪ್ರಭಾವ, ಹನುಮ ಮಂತ್ರಿಗಳು ಬಂದು ಬಳಿ ಲಕ್ಷ್ಮಣ I
ಬಂದ ವಾರ್ತೆ ಸುಗ್ರೀವನಿಗೆ ತಿಳಿಸಿದರು, ನುಡಿದರು: II
“ರಾಮ ಲಕ್ಷ್ಮಣ ನಿಜ ಸ್ನೇಹಿತರು ನಿನ್ನ,I
ಧನುರ್ಧಾರಿ ಲಕ್ಷ್ಮಣ ಬಂದಿಹನು ಭೇಟಿಗೆ ನಿನ್ನ, II
ಕಿಷ್ಕಿಂಧವನ್ನೇ ಸುಡುವ ಕೋಪದ ಕಣ್ಣಿನ ಲಕ್ಷ್ಮಣ,I
ಹಿತಮಾತುಗಳಿಂದ ಶಾಂತಪಡಿಸು ಅಗ್ನಿಯನು, II
ಪಾಲಿಸು ರಾಮನಿಗೆ ಕೊಟ್ಟ ವಚನI
ಒಪ್ಪಂದಕ್ಕೆ ಅಟಲನಾಗು, ಓ ಸುಗ್ರೀವ”.II
ಕಿಷ್ಕಿಂಧಕಾಂಡ ರಾಮಾಯಣ
ಅಣ್ಣನ ಬೋಧನೆಯಂತೆ ಶಾಂತಚಿತ್ತದಿಂದ ಲಕ್ಷ್ಮಣನು ಧನುಷ್ಯಧರಿಸಿ ಸುಗ್ರೀವನ ಭೇಟಿಗೆ ಬಂದದ್ದು ಮತ್ತು ಅಲ್ಲಿ ನಡೆದ ಅವನ ಸಂವಾದಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ಗಮನಾರ್ಹ ಅಂಶಗಳು: (1) ರಾಮನ ವಿರಹ ಅಗ್ನಿಯಿಂದ ಹುಟ್ಟಿದ ಕೋಪಾಗ್ನಿಯಂತೆ ಜ್ವಲಿಸುತ ಲಕ್ಷ್ಮಣನು ಮದದಾನೆಯಂತೆ ಕಿಷ್ಕಿಂಧದತ್ತ ಸಾಗಿದನು; ಪರ್ವತಗಳ ಮಧ್ಯೆ ವಾನರ ಸೈನ್ಯದಿಂದ ಸುತ್ತುವರೆದ ನುಸುಳಲಸಾಧ್ಯ ಕಿಷ್ಕಿಂಧವನ್ನು ಲಕ್ಷ್ಮಣನು ಕಂಡನು; ಲಕ್ಷ್ಮಣನು ಕಿಷ್ಕಿಂಧವನ್ನು ಪ್ರವೇಶಿಸಿದಂತೆ ವಾನರ ವೀರರು ಅವನ ವೀರಾವೇಶ ನೋಡಿ ಅಂಗದ ಬಳಿ ಬಂದ ಸನ್ನಿವೇಶ ವಿವರಿಸುವಾಗ ಆದಿಕವಿ ವಾಲ್ಮೀಕಿಯು ಒಂದುಕಡೆ ಕಿಷ್ಕಿಂಧ ರಾಜ್ಯದ ಭದ್ರತೆ ಬಗ್ಗೆ ವಿವರಿಸುವರು ಮತ್ತೊಂದೆಡೆ ಕೋಪದಲ್ಲಿ ಕಿಷ್ಕಿಂಧದತ್ರ ಬರುವ ಲಕ್ಷ್ಮಣನ ಕಂಡು ವಾನರರು ಆತಂಕದಲ್ಲಿ ಆ ವಿಷಯವನ್ನು ಅಂಗದನಿಗೆ ತಿಳಿಸಿದನ್ನು ವಿವರಿಸಿರುವರು, (2) ಲಕ್ಷ್ಮಣನು ಅಂಗದನ ಬಳಿ ಬಂದು ಅವನಿಗೆ ತಾನು ಬಂದ ವಾರ್ತೆಯನ್ನು ಸುಗ್ರೀವನಿಗೆ ತಿಳಿಸು ಎಂದು ಸಂದೇಶ ನೀಡಿದ ಮತ್ತು ತಕ್ಷಣ ಅಂಗದನು ಓಡಿ ಸುಗ್ರೀವನ ಬಳಿ ಬಂದು ಲಕ್ಷ್ಮಣ ಭೇಟಿಗೆ ಬಂದ ವಾರ್ತೆಯನ್ನು ತಿಳಿಸಿದನು ಆದರೆ ತಾರಾ ಮತ್ತು ರುಮಾ ಕಕ್ಷದಲಿದ್ದ ಸುಗ್ರೀವನಿಗೆ ಮದ್ಯದಮಲಿನಲಿ ಅಂಗದನ ಮಾತು ತಿಳಿಯಲಿಲ್ಲ, ಆ ಸನ್ನಿವೇಶದಲ್ಲಿ ಸುಗ್ರೀವನು ಪಾನ ಮತ್ತು ಲಂಪಟದಲ್ಲಿ ಮಗ್ನನಾಗಿ ಮೈಮರೆತದನ್ನು ಆದಿಕವಿ ವಾಲ್ಮೀಕಿಯು ಲಂಪಟ-ದೌರ್ಬಲ್ಯವು ವೀರರನ್ನು ಮತಿಹೀನರನ್ನಾಗಿ ಮಾಡುವದೆಂದು ಎಚ್ಚರಿಕೆಯನ್ನು ನೀಡುವರು, ಆ ದುರ್ಬಲತೆಗಲೇ ವ್ಯಕ್ತಿ ಮತ್ತು ರಾಜ್ಯಗಳನ್ನು ಪತನಗೊಂಡ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿ ಸಿಗುವವು, (3) ಅಲ್ಲಿ ನೆರೆದ ವಾನರರ ಗದ್ದಲ ಕೇಳಿ ಸುಗ್ರೀವನು ಅಂತಪುರದಿಂದ ಹೊರಬಂದನು, ಸುಗ್ರೀವನ ಕಣ್ಣುಗಳು ಮದ್ಯದಮಲಿನಲ್ಲಿ ಹೊಯ್ದಾಡುತಿದ್ದವು ಹಾಗು ಅವನ ಮೈಮೇಲಿನ ಆಭರಣಗಳು ಅಸ್ತವ್ಯಸ್ತಗೊಂಡಿದ್ದವು; ಸುಗ್ರೀವನು ಹೊರಗೆ ಬಂದದ್ದನು ನೋಡಿ ಪ್ಲಕ್ಷ , ಪ್ರಭಾವ, ಹನುಮ ಮಂತ್ರಿಗಳು ಅವನ ಬಳಿ ಬಂದು ಲಕ್ಷ್ಮಣ ಬಂದ ವಾರ್ತೆ ಅವನಿಗೆ ತಿಳಿಸುತ ರಾಮ ಲಕ್ಷ್ಮಣರು ನಿಜ ಸ್ನೇಹಿತರು, ಧನುರ್ಧಾರಿ ಲಕ್ಷ್ಮಣ ಭೇಟಿಗೆ ಬಂದಿರುವನು; ಕಿಷ್ಕಿಂಧವನ್ನೇ ಸುಡುವ ಕೋಪದ ಕಣ್ಣಿನ ಲಕ್ಷ್ಮಣ ಅಗ್ನಿಯನು ಹಿತಮಾತುಗಳಿಂದ ಶಾಂತಪಡಿಸು, ಒಪ್ಪಂದಕ್ಕೆ ಬದ್ಧನಾಗು ರಾಮನಿಗೆ ಕೊಟ್ಟ ವಚನ ಪಾಲಿಸು ಎಂದು ಹನುಮಾನನು ಸುರೀವನಿಗೆ ಎಚ್ಚರಿಕೆ ಮಾತುಗಳನ್ನು ಆಡಿದರು. ನಿಜ ಸ್ನೇಹಿತರು ಮಾತ್ರ ಹಿತೈಸಿಗಳು ಎಂಬ ಸಂದೇಶವನ್ನು ತದ್ಮೂಲಕ ಆದಿಕವಿ ವಾಲ್ಮೀಕಿಯು ಜಗಕ್ಕೆ ನೀಡಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
