ಕೇಳಿ ಅಂಗದ ಹನುಮಾನ ಮಂತ್ರಿಗಳ ನುಡಿI ಕಿಷ್ಕಿಂದಕಾಂಡ ರಾಮಾಯಣ-ಭಾಗ 10

By admin


ಕೇಳಿ ಅಂಗದ ಹನುಮಾನ ಮಂತ್ರಿಗಳ ನುಡಿ,I
ಸುಧಾರಿಸಿಕೊಂಡ ಸುಗ್ರೀವ ನುಡಿದನು: “ಅವರಿಗೆ II
ಕ್ಷುಲಕ ನುಡಿಯುನಲ್ಲ, ಅಗೌರವ ತೋರಿಸುವವನಲ್ಲ ನಾI
ಲಕ್ಷ್ಮಣನ ಕೊಪವೇಕೇ ನನ್ನ ಮೇಲೆ? II
ರಾಘವಾನುಜನ ಕಿವಿ ತುಂಬಿದನೆ ನನಗಾಗದವI
ಸುಳ್ಳು ಕಟ್ಟುಕಥೆ ನನ್ನ ಬಗ್ಗೆ ಹೇಳಿ, II
ನಿಮ್ಮ ನಿಮ್ಮ ವಿವೇಕದಿ ಅರಿಯಿರಿ ಮೊದಲುI
ಲಕ್ಷ್ಮಣನ ಕೋಪದ ಕಾರಣ, ನಂತರ ತೀರ್ಮಾನಿಸೋಣ, II
ನನಗೆ ಬಯವಿಲ್ಲ ರಾಮ ಲಕ್ಷ್ಮಣರI
ಆದರೆ ಮಿತ್ರನ ಕೋಪ ಶಾಂತಿ ಕದಡಿದೆ ಎನ್ನ, II
ಗೆಳೆತನ ಮಾಡುವದು ಸುಲಭ, ಗೆಳೆತನ ಪಾಲನೆ ಸುಲಭವಲ್ಲ,I
ಒಡೆಯುವದು ಸ್ನೇಹ ಕ್ಷುಲಕ ವಿಷಯದಿ, II
ಬಗೆಯಲಾರೆ ನಾ ರಾಮನಿಗೆ ದ್ರೋಹI
ಅವನ ಉಪಕಾರಕ್ಕೆ ಸಲ್ಲಿಸುವೆ ಪ್ರತ್ಯುಪಕಾರ”;II
ಸುಗ್ರೀವನ ನುಡಿಗಳನ್ನು ಕೇಳುತ್ತಲೆI
ಮಂತ್ರಿಗಳ ಮಧ್ಯದಿ ನುಡಿದ ಹನುಮಾನ: II
“ಓ ವಾನರೇಶ್ವರಾ, ಮೊಟ್ಟಮೊದಲು ಸ್ಮರಿಕೋI
ನಿನಗೆ ಮಾಡಿದ ಅವರ ಉಪಕಾರ, ಆಶ್ಚರ್ಯವೆನಲ್ಲ, II
ನಿನ್ನ ಹೇತುಗಾಗಿ ವಧಿಸಿದ ಪರಾಕ್ರಮಿ ವಾಲಿನI
ನಿರ್ಭಯದಿ ರಾಮ ದೂರದಿ, II
ನಿನ್ನ ಸ್ನೇಹ ರಾಮನಿಗೆ ನೋವನುಂಟುಮಾಡಿದೆಲ್ಲೋI
ಪ್ರಕಟಿಸಿದೆ ಲಕ್ಷ್ಮಣ ಮೂಲಕ ಅವನ ಕೋಪ, ಸಹಜ, II
ಓ ಸಮಯಪಾಲಕನೇ, ವರ್ಷಾ ಕಳೆದು ಶರದ ಬಂದಿದೆI
ಎಲ್ಲೆಡೆ ಹಚ್ಚಹಸಿರು ಮೈದೆಳೆದಿದೆ ಬಾಳೆ ಏಳು ಎಲೆಗಳ, II
ಮೋಡಗಳಿಲ್ಲದ ಸ್ವಚ್ಚ ಆಕಾಶ, ಗ್ರಹ ನಕ್ಷತ್ರಗಳು ಕಾಣುತ್ತಿವೆI
ಹತ್ತೂ ದಿಕ್ಕೂಗಳಲ್ಲಿ, ನದಿ ಸರೋವರಗಳು ತುಂಬಿವೆ, II
ನೀನು ಗಾಢನಿದ್ರೆಯಲಿ ತಿಳಿದಿಲ್ಲೀ ಬದಲಾವಣೆ,I
ಲಕ್ಷ್ಮಣ ಬಂದ ವಿಷಯ, ಅದೂ ಸ್ಪಷ್ಟ.II
ಕ್ಷಮೆಯಾಚಿಸು ಲಕ್ಷ್ಮಣನಲಿ ತಿಳಿಯದೇ ಮಾಡಿದI
ತಪ್ಪಿಗಾಗಿ, ಇದೊಂದೇ ಆಲೋಚನೆ ಎನಗೆ ಹೊಳೆದಿದ್ದು, II
ಹೆದರದೆ, ತಡವರಿಸದೆ ಹಿತವಚನ ಹೇಳುವದು ರಾಜನಿಗೆI
ಮಂತ್ರಿಗಳ ಕರ್ತವ್ಯ, ಓ ವಾನರೇಶ್ವರಾ, II
ಹೆಂಡತಿಮಕ್ಕಳು ಮಂತ್ರಿಗಳೊಂದಿಗೆ ಕ್ಷಮೆಯಾಚಿಸುI
ಲಕ್ಷ್ಮಣನಿಗೆ, ಹಿತವಾಗುವದು ನಿನಗೆ ಅವರಿಂದ”.II
ಕಿಷ್ಕಿಂಧಕಾಂಡ ರಾಮಾಯಣ

ರಾಮನ ಆದೇಶದಂತೆ ಲಕ್ಷಣನು ಸುಗ್ರೀವನಿಗೆ ಭೇಟಿಯಾಗಲು ಕಿಷ್ಕಿಂಧಕ್ಕೆ ಬಂದಾಗ ಅಲ್ಲಿ ನಡೆದ ಬೆಳವಣಿಗೆಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು ಹಾಗು ಸ್ನೇಹ, ತಪ್ಪಿನ ಅರಿವು ಮತ್ತು ನೇರ ದಿಟ್ಟ ನುಡಿಗಳ ಮಹತ್ವ ಕುರಿತು ಕೆಲವು ಉಪದೇಶಗಳನ್ನು ಜಗಕ್ಕೆ ನೀಡಿರುವರು:(1) ಕಾರಣ ತಿಳಿಯದೇ ಸಮಸ್ಯೆಗೆ ಪರಿಹಾರ ಸಿಗದು: ಯಾವುದೇ ರೀತಿ ತಾನು ರಾಮ ಲಕ್ಷ್ಮಣರಿಗೆ ಕೇಡು ಬಗೆಯದಿದ್ದರೂ ಅವರ ಕೋಪಕ್ಕೆ ಕಾರಣ ತಿಳಿಯಲು ಸುಗ್ರೀವನು ಮಂತ್ರಿಗಳಿಗೆ ಹೇಳುವನು, ಕಾರಣ ತಿಳಿದಾಗ ಪರಿಹಾರವು ಸುಲಭ ಇಲ್ಲವೇ ದುಡುಕಿ ತೀರ್ಮಾನಕ್ಕೆ ಬರುವದು ತಪ್ಪು ಎಂಬ ಸಂದೇಶವನ್ನು ಆದಿಕವಿ ನೀಡಿರುವರು, ಅಂಗದ, ಹನುಮಾನ ಮತ್ತು ಮಂತ್ರಿಗಳ ಎಚ್ಚರಿಕೆ ಸಂದೇಶವನ್ನು ಕೇಳಿದ ಸುಗ್ರೀವನು ಸುಧಾರಿಸಿಕೊಂಡು ತಾನು ರಾಮ ಲಕ್ಷ್ಮಣರಿಗೆ ಹಗುರಾಗಿ ನುಡಿಯುವವನಲ್ಲ, ಅಗೌರವ ತೋರಿಸುವವನಲ್ಲ, ತನ್ನ ಮೇಲೆ ಲಕ್ಷ್ಮಣನ ಕೊಪವೇಕೇ? ತನಗಾಗದ ವೈರಿಗಳು ರಾಮನಿಗೆ ತನ್ನ ಬಗ್ಗೆ ಹೇಳಿ ಸುಳ್ಳು ಕಟ್ಟುಕಥೆ ಹೇಳಿ ಕಿವಿ ತುಂಬಿರಬೇಕು, ಮೊದಲು ವಿವೇಕದಿಂದ ಲಕ್ಷ್ಮಣನ ಕೋಪದ ಕಾರಣವನ್ನು ಅರಿಯಿರಿ , ನಂತರ ಅದರ ಬಗ್ಗೆ ತೀರ್ಮಾನಿಸೋಣ ಎಂದು ಸುಗ್ರೀವನು ತನ್ನ ಮಂತ್ರಿಗಖಿಗೆ ಹೇಳಿದನು; (2) ಸ್ನೇಹ ಪಾಲನೆ, ಒಂದು ದೊಡ್ಡ ಸವಾಲು: ತನಗೆ ರಾಮ ಲಕ್ಷ್ಮಣರ ಭಯವಿಲ್ಲ ಆದರೆ ಸ್ನೇಹಿತನ ಕೋಪದ ಕಾರಣ ತಿಳಿಯದೇ ತನ್ನ ಮನಶಾಂತಿ ಕದಡಿದೆ ಎಂಬ ಸುಗ್ರೀವನ ವಿಚಾರ ಸ್ನೇಹದ ಗಟ್ಟಿತನವನ್ನು ಪ್ರತಿಪಾದಿಸಿದೆ; “ಗೆಳೆತನ ಮಾಡುವದು ಸುಲಭ ಆದರೆ ಗೆಳೆತನ ಪಾಲನೆ ಸುಲಭವಲ್ಲ; ಕ್ಷುಲಕ ವಿಷಯಕ್ಕಾಗಿ ಸ್ನೇಹ ಒಡೆಯುವದು” ಎಂಬ ಸುಗ್ರೀವನ ಮಾತುಗಳಲ್ಲಿ ಸ್ನೇಹ ಪಾಲನೆಯ ಸೂಕ್ಷ್ಮತೆ ಅಡಗಿದೆ, ತಾನು ರಾಮನಿಗೆ ದ್ರೋಹ ಬಗೆಯಲಾರೆನು ಅವನ ಉಪಕಾರಕ್ಕೆ ಪ್ರತ್ಯುಪಕಾರ ಸಲ್ಲಿಸುವೆ” ಎಂದು ವೀರನ ಶೈಲಿಯಲ್ಲಿ ಸುಗ್ರೀವನು ಅವರಿಗೆ ಹೇಳಿದನು. ಸ್ನೇಹಧರ್ಮ ಪಾಲನೇ ಮತ್ತು ಉಪಕಾರ ಸ್ಮರಣನೆ ಬಹು ಮುಖ್ಯ ಎಂಬ ತತ್ವವನ್ನು ಆದಿಕವಿ ವಾಲ್ಮೀಕಿಯು ಜಗಕ್ಕೆ ತಿಳಿಸಿರುವರು,(3) ತಿಳಿಯದೇ ಮಾಡಿದ ತಪ್ಪಿಗಾಗಿ ಲಕ್ಷ್ಮಣನಲ್ಲಿ ಕ್ಷಮೆ ಕೇಳು, ಹೆಂಡತಿ ಮಕ್ಕಳು ಮತ್ತು ಮಂತ್ರಿಗಳೊಂದಿಗೆ ಲಕ್ಷ್ಮಣನಲ್ಲಿ ಕ್ಷಮೆಯಾಚಿಸು ನಿನಗೆ ಅವರಿಂದ ಹಿತವಾಗುವದು”ಎಂದು ಸುಗ್ರೀವನಿಗೆ ಅವನ ತಪ್ಪಿನ ಅರಿವು ಮುಡಿಸುತ್ತ ಹಿತೋಪದೇವನ್ನು ಹನುಮಾನನು ಸುಗ್ರೀವನಿಗೆ ನೀಡಿದನು,ತಪ್ಪಿನ ಅರಿವು ಮಾಡಿಕೊಡುವದು ನಿಜವಾದ ಸ್ನೇಹ ಮತ್ತು ಸ್ವಾಮಿನಿಷ್ಠೆ, “ಎಲ್ಲೋ ಒಂದು ವಿಷಯದಲ್ಲಿ ನಿನ್ನ ಸ್ನೇಹ ರಾಮನಿಗೆ ನೋವನುಂಟು ಮಾಡಿದೆ, ಅದು ಸಹಜವಾಗಿ ಲಕ್ಷ್ಮಣನ ಕೋಪ ಮೂಲಕ ಪ್ರಕಟವಾಗಿದೆ” ಎಂದು ನೇರ ದಿಟ್ಟ ಮಾತುಗಳಿಂದ ಹನುಮಾನನು ಸುಗ್ರೀವನಿಗೆ ಸುಖ-ಭೋಗ ನಿದ್ರೆಯಲ್ಲಿ ಸಮಯ ಬದಲಾವಣೆ ತಿಳಿಯದೇ ಕರ್ತವ್ಯ ಮರೆತ ಅವನ ತಪ್ಪು ರಾಮ ಲಕ್ಷ್ಮಣರ ಕೋಪಕ್ಕೆ ಕಾರಣವೆಂದು ಮನವರಿಕೆ ಮಾಡಿದ ಸಾಹಸ ಹನುಮಾನನ ಸ್ನೇಹ ಮತ್ತು ಸ್ವಾಮಿನಿಷ್ಠೆಯನ್ನು ತೋರಿಸಿದ ಪ್ರತಿವಾದ ಮತ್ತು ಸುಗ್ರೀವನಿಗೆ ರಾಮನಿಂದಾದ ಉಪಕಾರದ ಸ್ಮರಣನೆ ಮನವರಿಕೆ ಮಾಡಿ ಕೊಟ್ಟ ಹನುಮಾನನ ದಿಟ್ಟತನದ ಪ್ರತಿವಾದ,ತಮ್ಮವರನ್ನು ಮಾಡಿದ ತಪ್ಪು ಅಥವಾ ಅಪರಾಧವನ್ನು ತಿಳಿದು ಅವರಿಗೆ ಬುದ್ಧಿ ಹೇಳುವವನಾದದರಿಂದ ನಿಜ ಹಿತೈಷಿ, ತಿಳಿದೂ ಹೊಗಳಿ ಶೈಲಕ್ಕೆ ಏರಿಸುವುದು ಹಿತಮಿತ್ರರು ಅಲ್ಲ, ಅವರೇ ನಿಜ ಶತ್ರುಗಳೆಂದು ಆದಿಕವಿ ಬೋಧಿಸಿರುವರು,(4) ಋತುಗಳ ಬಗ್ಗೆ ವಿವರಣೆ: “ವರ್ಷಾ ಋತು ಕಳೆದು ಶರದ ಋತು ಬಂದಿದೆ, ಎಲ್ಲೆಡೆ ಏಳು ಎಲೆಗಳ ಬಾಳೆಗಳ ಹಚ್ಚಹಸಿರು ಮೈದೆಳೆದಿದೆ, ಮೋಡಗಳಿಲ್ಲದ ಸ್ವಚ್ಚ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಕಾಣುತ್ತಿವೆ ಹತ್ತೂ ದಿಕ್ಕೂಗಳಲ್ಲಿ ನದಿ ಸರೋವರಗಳು ತುಂಬಿವೆ, ಭೋಗದ ಗಾಢನಿದ್ರೆಯಲಿ ಇದ್ದದರಿಂದ ನಿನಗೆ ಈ ಹೊರಗಿನ ಬದಲಾವಣೆಗಳು ತಿಳಿದಿಲ್ಲ, ಲಕ್ಷ್ಮಣ ಬಂದ ವಿಷಯವು ಅದನ್ನು ಸ್ಪಷ್ಟಪಡಿಸುವದು” ಎಂದು ಹನುಮಾನನು ಸುಗ್ರೀವನಿಗೆ ಋತು ಬದಲಾದ ಬಗ್ಗೆ ತಿಳಿಸುವನು, ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಒಂದು ಋತುವಿನಲ್ಲಿ ನಾಲ್ಕು ಮಾಸಗಳ ಬಗ್ಗೆ ತಿಳಿಸಿರುವರು,ಋತು ಬದಲಾದಾಗ ಪ್ರಕೃತಿಯಲ್ಲೂ ಬದಲಾವಣೆಗಳು ಕಂಡು ಬರುವದನ್ನು ತಿಳಿಸಿರುವರು, ಸ್ತ್ರೀ ಮತ್ತು ಮದಿರೆಯ ಸುಖಭೋಗದಲ್ಲಿ ಇದ್ದವನಿಗೆ ಸಮಯ ಮತ್ತು ಸ್ಥಳದ ಪ್ರಜ್ಞೆ ಇರುವದಿಲ್ಲ ಎಂಬ ಸತ್ಯದ ಅರಿವು ಮೂಡಿಸಿರುವರು.

-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ