

ಗೆರೆಗಳ ಸಾಮ್ರಾಜ್ಯದಲ್ಲಿ ರಮೇಶ ಸಾಸನೂರ
ಅಂಗೈ ತುಂಬಾ ಕೊರೆದ ಗೆರೆಗಳ ಬಗೆಗೆ ನಾವೆಷ್ಟು ಕಥಾ ವಸ್ತುವಿನ ಹಂದರವನ್ನು ಎಣೆದು ಚರ್ಚಿಸಿದೆವೆಂದರೆ ಅಡ್ಡ,ಉದ್ದ,ವೃತ್ತ,ನೇರ,ವಕ್ರ, ಸರಳ ಹೀಗೆ ಅನೇಕ ಬಗೆಯ ಗೆರೆಗಳ ಕುರಿತು ಮಾತಾಡಿದ್ದೇವೆ. ಹೀಗಿದ್ದರೆ ಚೆನ್ನ,ಹೀಗಿದ್ದರೆ ನಷ್ಟ,ಹೀಗಿರಬೇಕಿತ್ತು,ಹೀಗೆ ಇರಬಾರದು, ಇದು ಒಳ್ಳೆಯ ಗೆರೆ,ಇದು ಕೆಟ್ಟ ಗೆರೆ ಎಂಬ ಏನೆಲ್ಲ ಸಂಗತಿಗಳನ್ನು ಚರ್ಚಿಸಲು ಹಚ್ಚುವ ಅಂಗೈ ಗೆರೆಗೆಳು ಮಾನವ ಬದುಕಿನ ಪ್ರಮುಖ ಚಿಂತನಾರ್ಹ ರೇಖೆಗಳಾಗಿ ಕಂಗೊಳಿಸುತ್ತವೆ.ಜೀವನದಲ್ಲಿ ವೈವಿಧ್ಯಮಯ ಚಿಂತನೆಯ ಕಡೆ ಕರೆದೊಯ್ಯುತ್ತವೆ.
ಅಂಗೈಯಲ್ಲಿ ಮೂಡಿದ ಗೆರೆಗಳ ಕುರಿತು ಅರಿತಷ್ಟೇ ಬದುಕಿನ ಸಾಗುವಿಕೆಯಲ್ಲೂ ಸಹ ಗೆರೆಗಳು ಏನೆಲ್ಲ ಅರ್ಥದ ಹೊಳೆಯನ್ನೇ ಹರಿಸಿವೆ.ಉದಾಹರಣೆಗೆ ಅಪ್ಪ ಹಾಕಿದ ಗೆರೆ ಮಕ್ಕಳು ದಾಟಬಾರದು.ಗೆರೆಗಳೆಂದರೆ ಅವ್ವನ ಸ್ಥಾನ,ಗೆರೆ ಎಳೆದಾಗಲೊಮ್ಮೆ ಅವ್ವ ನೆನಪಾಗುತ್ತಾಳೆ(ಕಲೆಗಾರ),ರಾಮಾಯಣದಲ್ಲಿ ಲಕ್ಷ್ಮಣ ರೇಖೆ,ಜನಪದರು ತಮ್ಮ ದನ ಕರುಗಳಿಗೆ ರೋಗ ರುಜಿನಿ ಬರಬಾರದು ಎಂಬ ಅಥವಾ ರೋಗ ಬಂದರೂ ಮಲಾಮು ರೀತಿಯ ಗುಣವುಳ್ಳ ಗೆರೆಗಳನ್ನೇ ಮೈಗೆ ಬರೆದು ರೋಗ ವಾಸಿ ಮಾಡಿದ್ದು ಹೀಗೆ ಹಲವು ವಿಭಿನ್ನತೆಯ ಪ್ರತಿರೂಪವಾಗಿ ಗೆರೆ ಮಾನವ ಬದುಕಿನಲ್ಲಿ ಅತ್ಯಂತ ಔಷಧಿಯ ಗುಣವನ್ನು ಪಡೆದಿದೆ.

ಹಾಗೆ ಚಿತ್ರಕಲೆಯಲ್ಲೂ ಸಹ ಗೆರೆ (ರೇಖೆ)ಕಲೆಯ ತಾಯಿಯಾಗಿ ಕೊನೆವರೆಗೂ ಕೈ ಹಿಡಿದೆ ನಡೆಸುತ್ತದೆ.ಗೆರೆಗಳಿಲ್ಲದ ಚಿತ್ತಾರಗಳಿಲ್ಲ. ಗೆರೆ ಅಂದ್ರೆ ಮನದ ಭಾವದ ಪ್ರತೀಕ, ಮುಂದೆ ಸಮಾಜಮುಖಿಯ ನೆಲೆಯಾಗಿ,ಕಲಾವಿದನೋರ್ವನ ಬೆಳವಣಿಗೆಯ ಸಂಕೇತವಾಗಿ, ಶಕ್ತಿಯುತ ಕಲಾವಿದರನ್ನಾಗಿ ರೂಪಿಸುವ ಸೂಚಕವಾಗಿ, ಬಣ್ಣ ಮತ್ತು ಭಾವದ ಕೊಂಡಿಯಾಗಿ ಉತ್ತಮ ಕಲಾಕೃತಿಯೊಂದು ರೂಪಿಸುವ ಮಹತ್ವದ ನೆಲೆಯಾಗಿ ಗೆರೆ ಚಿತ್ತಾರ ಅರಳುತ್ತದೆ.ಗೆರೆಗಳಿಗೆ ಮತ್ತೊಂದು ಶಾಸ್ತ್ರೀಯ ಭಾಷಿಕ ಹೆಸರೆಂದರೆ ರೇಖಾಚಿತ್ರವೆಂದು ಕರೆಯುವುದು ರೂಢಿಯಲ್ಲಿದೆ.
ಲಲಿತಕಲೆಗಳ ಕ್ಷೇತ್ರದಲ್ಲಿ ರೇಖಾಚಿತ್ರಕ್ಕೆ ತನ್ನದೆಯಾದ ಅಸ್ತಿತ್ವವಿದೆ.ಸತ್ವಭರಿತ ಇತಿಹಾಸವಿದೆ.ಮನಮೋಹಕ ಆವಿಸ್ಕಾರಗಳೊಂದಿಗೆ ಬದುಕಿನ ಜಂಜಾಟದ ವಿಶ್ಲೇಷಣೆಯಿದೆ.ಆದಿ ಮಾನವನ ಸಾಂಸ್ಕೃತಿಕ ಕಾಲಘಟ್ಟದಲ್ಲಿನ ಚಿಂತನೆಯ ಹೊರಹುಗಳಿವೆ.ಪ್ರಾಗೈತಿಹಾಸಿಕ,ಜನಪದ,ಶಿಷ್ಟ,ಆಧುನಿಕ, ಸಮಕಾಲೀನ ಸೃಷ್ಟಿಶೀಲ ಕಲಾ ಚಿಂತನೆಗಳಲ್ಲಿಯೂ ಸಹ ರೇಖಾ ಪ್ರಧಾನ ಚಿತ್ರಕಲೆಗೆ ಎಂದೂ ಕಳೆಗುಂದದಂತಹ ಮೆರೆಗು ಇದೆ. ಹಾಗಾಗಿ ರೇಖಾಚಿತ್ರಕಲೆ ಮಾನವ ಬದುಕಿನ ಶ್ರೇಷ್ಠ ಅಭಿವ್ಯಕ್ತಿಯ ಕ್ರಮವೆಂದೇ ಭಾವಿಸಿಕೊಳ್ಳುವುದು ಉತ್ತಮ.

ಇಂತಹ ರೇಖಾತ್ಮಕ ಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಚಿತ್ರಕಲಾವಿದರಲ್ಲಿ ಕರ್ನಾಟಕದ ಕೆ.ಕೆ.ಹೆಬ್ಬಾರ,ಚಂದ್ರನಾಥ ಆಚಾರ್ಯ, ಪ.ಸ.ಕುಮಾರ ಸೇರಿದಂತೆ ಹಲವಾರು ಕಲಾವಿದರು ನೆನಪಿಗೆ ಬರುತ್ತಾರೆ.ನಾಡಿನ ಹಿರಿಯ ಕಲಾವಿದರನ್ನು ನೆನಪಿಸಿಕೊಂಡಂತೆ ಇತ್ತೀಚೆಗೆ ಪರಿಣಾಮಕಾರಿಯಾಗಿ ಗಮನ ಸೆಳೆದ ವಿಜಯಪುರ ಜಿಲ್ಲೆಯ ಕಲಾವಿದ ರಮೇಶ ಸಾಸನೂರು ಸಹ ಬಹುಮುಖ್ಯ ಚಿತ್ರಕಲಾವಿದ.
ಬಣ್ಣಗಳೊಂದಿಗೆ ಬಾಂಧವ್ಯ ಬೆಳೆಸಿಲ್ಲವೆಂದಲ್ಲ.ಬಣ್ಣಗಳ ಜೊತೆಗೆ ರೇಖೆಗಳ ಮೇಲೂ ಬಲು ಪ್ರೀತಿ.ವರ್ಣ ವಿನ್ಯಾಸದ ಮಧ್ಯೆ ಬಿಡುವಿದ್ದಾಗ ಗೆರೆಗಳ ಗುರುತಿನ ಚಿತ್ರಗಳು ಸಾವಿರಾರು ಸಂಖ್ಯೆ ದಾಟಿ ಅರಳುತ್ತಿವೆ.ದಾರಿಯುದ್ದಕ್ಕೂ ಸಾಗಿದ ಅನುಭವಗಳಲ್ಲಿ ಬಣ್ಣ ಮತ್ತು ರೇಖೆ ಬದುಕಿನ ಭಾವದೊಂದಿಗೆ ಸಂವಾದಿಸಿದ ನೆಲೆಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.ಗೆರೆಗಳು ಆಟಕ್ಕಾಗಿ ಮೋಜಿಗಾಗಿ ಗೀಚಿದವುಗಳಲ್ಲ.ಗೆರೆ ಬರೆಯುವುದಕ್ಕೂ ಅರ್ಥಗಳಿವೆ.ಕಲಿಕೆಯ ಕರಡುಗಳಾಗಿ,ಪ್ರಯತ್ನಗಳ ಫಲಿತದ ಕೊಂಡಿಯಾಗಿ,ಬೋರ್ಗೆರೆವ ಭಾವದ ಹಿಡಿತವಾಗಿ,ಸಮಾಜ ಕಲಿಸಿದ ಪಾಠವಾಗಿ,ಪ್ರಚಲಿತ ವಿದ್ಯಾಮಾನಗಳ ತುಡಿತವಾಗಿ,ಸಾಂಸ್ಕೃತಿಕ ಪ್ರಜ್ಞೆಯ ಪ್ರತಿಬಿಂಬವಾಗಿ,ಅವುಗಳೆಲ್ಲವುಗಳಾಚೆ ಭಾವನೆಗಳನ್ನು ಕೆದಕುವ ಹೆಂಗೆಳೆಯರ ಭಾವಗಳ ಸೆರೆ ಹಿಡಿಯುವಿಕೆಯಾಗಿ,ಇತಿಹಾಸ ಮರುಕಳಿಸಿದಂತೆ ಕಲ್ಪಿಸಿಕೊಂಡು ಚಿತ್ರಿಸಿದ ಸ್ಮರಣ ಶಕ್ತಿ ಕಲಾಕೃತಿಗಳಂತೆ ಹೀಗೆ ಅನೇಕ ಬಗೆಯ ಅರ್ಥ ವಿವರಣೆಯ ಕಥನವನ್ನು ಕಟ್ಟಿಕೊಂಡು ಸಾಗುವ ಪ್ರಕ್ರಿಯೆಗಳಾಗಿ ಸಾಸನೂರ ಅವರ ರೇಖಾಚಿತ್ರಗಳು ಅರ್ಥ ನೀಡುತ್ತವೆ.ಗೆರೆಗಳ ಬಗೆಗೆ ಹೇಳೋದಾದರೆ ಇವರ ಗೆರೆಗಳಲ್ಲಿ ಹರಿವ ನೀರಿನ ಗುಣವಿದೆ.ಭಾವತುಂಬಿ ಬರೆದ ಸಂಯಮವಿದೆ.ಭಕ್ತಿದಾಯಕ ಪ್ರಜ್ಞೆಯ ನಡಿಗೆಯಿದೆ. ಕಲಾಲೋಕ ಎಂದೂ ಮರೆಯದ ಹಾಗೆ ಪುನರ್ ಮನನ ಮಾಡಿಕೊಳ್ಳುವ ತವಕ ಸೇರಿದಂತೆ ಎಲ್ಲಾ ಸಾಧ್ಯತೆಗಳು ಇವರ ರೇಖಾ ಕೌಶಲ್ಯದ ಪ್ರಕ್ರಿಯೆಯಾಗಿದೆ.ಹಾಗಾಗಿ ರಮೇಶ ಸಾಸನೂರು ಇವತ್ತಿನ ಕಣ್ಣ ಮುಂದಿನ ಹೆಬ್ಬಾರ ಆಗಿ ಕಾಣುತ್ತಾರೆ.
ಹೆಬ್ಬಾರರನ್ನು ಕಾಣಬೇಕೆಂಬ ತವಕವಿದ್ದರೂ ದೈಹಿಕವಾಗಿ ಕಾಣದ ಹಾಗೆ ಕಾಡುವ ಕೆ.ಕೆ.ಹೆಬ್ಬಾರ ಅವರು ಸಾಸನೂರ ಅವರ ರೇಖಾಚಿತ್ರದ ಚೆಲುವುಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ. ಎಳೆವ ಗೆರೆಗಳಲ್ಲಿ ಹೆಬ್ಬಾರರ ರೇಖಾಚಿತ್ರ ನೆನಪಿಸುತ್ತಾರೆ.ಅಷ್ಟೊಂದು ಪರಿಣಾಮಕಾರಿಯಾಗಿ ಸಾಸನೂರ ಅವರು ರೇಖಾಚಿತ್ರಗಳನ್ನು ರಚಿಸುತ್ತಾರೆ.
ಸಾಸನೂರು ಅವರ ರೇಖಾಚಿತ್ರಗಳನ್ನು ಗಮನಿಸಿದಾಗ ಯುವತಿಯ ಮೈ ಮುರಿದು ಬೆಂಡಾಗಿಸಿದ್ದಾರೆ.ಕಾಲುಗಳು ನೆಲಕ್ಕೆ ಅರ್ಥವತ್ತಾಗಿ ನೃತ್ಯ ಮಾಡಿದಂತೆ ಬಿಡಿಸಿದ್ದಾರೆ. ಕೆಲವೊಂದು ಚಿತ್ರಗಳಲ್ಲಿ ಸಖ ತನ್ನ ಸಖಿಯೊಂದಿಗೆ ಮುಖಾಮುಖಿಯಾಗಿ ಮುಂದಿನ ಪ್ರಕ್ರಿಯೆಗೆ ಚಾಲನೆ ಕಂಡುಕೊಂಡಂತಿದೆ. ಕೆಲವೊಂದು ರೇಖಾಚಿತ್ರಗಳು ಅಲಂಕಾರಿಕವೆಂದೆನಿಸಿದರೂ ಸಹ ಸಮಕಾಲೀನ ಚಿತ್ರ ರಚನಾ ವಿಧಾನದಂತೆ ಸೃಜನಶೀಲ ಚಿಂತನೆಯ ಹೊಳಹುಗಳಿವೆ.ಹಾಗಾಗಿ ಸಾಂಸ್ಕೃತಿಕ ಲೋಕದ ಸಾಂಪ್ರದಾಯಿಕ ಮತ್ತು ಸಮಕಾಲೀನತೆಯ ಸಮ್ಮಿಲನತೆಯೊಂದಿಗೆ ಸೃಜನಾತ್ಮಕ ಕ್ರಿಯೆಗಳು ಕಾಣಿಸಿಕೊಂಡಿವೆ.ಹೀಗೆ
ಪ್ರತಿಯೊಂದು ರೇಖಾಚಿತ್ರಗಳು ತನ್ನದೆಯಾದ ನೆಲೆಯಲ್ಲಿ ಅರ್ಥವನ್ನು ಕಲ್ಪಿಸಿಕೊಂಡು ನೋಡುಗರ ಮನ ಅರಳುವಂತೆ ಮಾಡುತ್ತವೆ.ಇತ್ತೀಚೆಗೆ ಧಾರವಾಡದ ಎಮ್.ಆರ್.ಬಾಳೀಕಾಯಿ ಕಲಾಗ್ಯಾಲರಿಯಲ್ಲಿ ನಡೆದ ಏಕವ್ಯಕ್ತಿ ರೇಖಾ ಚಿತ್ರಕಲಾ ಪ್ರದರ್ಶನವಂತೂ ಬೇಲೂರು ಚನ್ನಕೇಶವ ದೇವಾಲಯದ ಸರಣಿ ಶಿಲ್ಪಗಳು ಹೇಗೆ ನೋಡುತ್ತೇವೆಯೋ ಅದೇ ಮಾದರಿಯಂತೆ ಸಾಸನೂರು ಅವರ ರೇಖಾಚಿತ್ರಗಳಲ್ಲಿ ಶೀಲಾ ಬಾಲಿಕೆ ವಿವಿಧ ಭಂಗಿಯ ಮೈವಳಿಕೆಯುಳ್ಳ ಯುವತಿಯ ಚಿತ್ರಗಳು ಕಾಣಿಸಿಕೊಂಡವು.

ಸುಂದರ ಯುವತಿಯರ ಮುಖದ ಚೆಲುವು,ದೇಹದ ಅಂಗಾಂಗಳ ಚಲನವಲನ,ಭಾವ ಸಂವಹನ ಕ್ರಿಯೆಯ ಪ್ರತಿರೂಪವಾಗಿ ಕಂಡವು. ಸಹಜತೆಯ ಹತ್ತು ರೂಪಾಯಿ ಬೆಲೆಯುಳ್ಳ ಕರಿ ಮಸಿಯ ಪೆನ್ನು,ಬಿಳಿಯ ವರ್ಣದ ಕಾಗದ,ಮೊಳ ಅಳತೆಯ ಅವಕಾಶದಲ್ಲಿ ಮೂಡಿ ಬಂದ ರೇಖಾಚಿತ್ರಗಳು ಕಲಾ ತಜ್ಞನ ಮನಕ್ಕೆ ಸವಾಲನ್ನು ಹಾಕಿದಂತೆ ಇದ್ದವು. ಅಧ್ಯಯನಕಾರರಿಗೆ ನೋಡಿ ಕಲಿಯುವಂತೆ,ಕಲಾವಿದ ಸಾಸನೂರು ಅವರನ್ನು ಹಿಂಬಾಲಿಸುವಂತೆ,ಮುಂದೆ ಈ ಪ್ರಕಾರದಲ್ಲಿ ಕಾರ್ಯ ನಿರ್ವಹಿಸಿದರೆ ಕಲಾ ಲೋಕ ಮರೆಯದೆ ಸ್ಮರಿಸುವ ಭಾಗ್ಯ ಬರುತ್ತೆ ಎಂಬ ಆತ್ಮಾಭಿಮಾನದ ನಡೆಯನ್ನು ಈ ಕಲಾ ಪ್ರದರ್ಶನ ತಿಳಿಸಿತು.
ಸುಮಾರು ಐವತ್ತಕ್ಕೂ ಹೆಚ್ಚು ರೇಖಾ ಕಲಾಕೃತಿಗಳು ಉತ್ತಮ ಮೌಂಟ್, ಗಾಜಿನ ಮೆರಗಿನೊಂದಿಗೆ ಆಕರ್ಷಕವಾಗಿ ನೋಡುಗರ ಮನ ಸೆಳೆದವು.ಹಿರಿಯ ಕಲಾ ಸಾಧಕರಾದ ಶ್ರೀ ಎಮ್. ಆರ್.ಬಾಳೀಕಾಯಿ ಅವರು ರಮೇಶ ಸಾಸನೂರ ಅವರ ಕಲಾ ರಚನೆಯನ್ನು ಕಂಡು ಮುಂದೆ ಉತ್ತಮ ಭವಿಷ್ಯವಿದೆ ಎಂಬ ಹೊಸ ಬೆಳಕಿನ ನುಡಿಗಳನ್ನು ಸಂತಸದಿಂದ ವ್ಯಕ್ತಪಡಿಸಿದರು.
ಸಾಸನೂರ ಅವರು ಇಲ್ಲಿಯವರೆಗೆ ಅಂದಾಜು ಐದು ಸಾವಿರಕ್ಕೂ ಹೆಚ್ಚು ರೇಖಾ ಪ್ರಧಾನ ಕೇಂದ್ರಿತ ಚಿತ್ರಗಳನ್ನು ರಚಿಸಿದ್ದಾರೆ. ಅವೆಲ್ಲವೂ ನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಮಹತ್ವದ ಚಿತ್ರಗಳು.ರೇಖೆಗಳು ಎಳೆವಾಗ ಕೈಯಲ್ಲಿ ಚಾಣಾಕ್ಷತನ,ಅನುಭವ,ವಸ್ತು ವಿಷಯದ ಸ್ಪಷ್ಟತೆ,ಗೆರೆ ಯಾಕೆ ಹೀಗೆ ಎಳೆಯಬೇಕು ಅನ್ನುವ ವಿಚಾರ ಎಲ್ಲವೂ ಅನುಭವದ ಅಮೃತವಾಗಿ ಕಂಡುಬರುತ್ತವೆ.
ನಾಡಿನ ವಿವಿಧೆಡೆ ಏಕವ್ಯಕ್ತಿ ಮತ್ತು ಸಮೂಹ ಚಿತ್ರಕಲಾ ಪ್ರದರ್ಶನ ಮಾಡಿ ಯಶಸ್ವಿಯಾಗಿದ್ದಾರೆ.ಅಲ್ಲದೆ ಹಲವು ಗೌರವಕ್ಕೂ ಸಹ ಭಾಜನರಾಗಿದ್ದಾರೆ.ಅನೇಕ ಕಾರ್ಯಕ್ರಮಗಳಲ್ಲಿ ಕ್ಯಾನವಾಸ್ ಮತ್ತು ಕಾಗದದ ಅವಕಾಶದಲ್ಲಿ ಜನರ ಎದುರೇ ರೇಖಾಚಿತ್ರಗಳು ರಚಿಸಿ ಜನಮನ ಗೆದ್ದಿದ್ದಾರೆ.ಕೈಯಲ್ಲಿ ಹಿಡಿದ ಪೆನ್ನು ನೇರವಾಗಿ ಅವಕಾಶಕ್ಕೆ ಮುಂದಾದಾಗ ಯಾವ ಚಿತ್ರ,ಹೇಗೆ ರಚಿಸಬೇಕು ಎಂಬ ಸ್ಪಷ್ಟ ಚಿಂತನೆಯ ಒಲವು ಮನಸಲ್ಲಿ ಮೂಡಿರುತ್ತದೆ. ಪೆನ್ಸಿಲ್ ಸಹಾಯ ಪಡೆಯದೆ ಪರಮನೆಂಟ್ ಮಾರ್ಕರ್ ಪೆನ್ನಿನ ಮೂಲಕ ಸರ ಸರನೆ ಎಳೆವ ರೇಖೆ ನೋಡುಗನ ಮನ ಕುತೂಹಲಕ್ಕೆ ಕರೆದು ಕಣ್ಣುಗಳು ನೆಟ್ಟಗೆ ನಿಲ್ಲಿಸುತ್ತಾರೆ.ಮನ ಲವ ಲವಿಕೆಯೊಂದಿಗೆ ಚಿತ್ರದ ಸುತ್ತ ಗಮನಿಸುತ್ತಿರುವಾಗ ಐದಾರು ನಿಮಿಷದಲ್ಲಿ ಯೇ ಕ್ಯಾನವಾಸ್ ತುಂಬಾ ಅರ್ಥವನ್ನು ಹುಟ್ಟುಹಾಕುವ,ಚೆಲುವನ್ನೇ ಸೂಸುವ,ವಿವಿಧತೆಯ ಸಾರವನ್ನೇ ಉಣ ಬಡಿಸುವ ಚಿತ್ರವೊಂದು ಅನಾವರಣ ಗೊಂಡಿರುತ್ತದೆ ಆಗ ಸಾಸನೂರ ಅವರ ಕಲಾ ಚಾಣಾಕ್ಷತನಕ್ಕೆ ಪ್ರೇಕ್ಷಕರ ಚಪ್ಪಾಳೆ ಸುರಿಮಳೆಯಾಗುತ್ತದೆ.ಅಷ್ಟೊಂದು ಪರಿಣಾಮವಾಗಿ ಚಿತ್ರ ಬಿಡಿಸುವ ಕಲಾವಿದ ರಮೇಶ ಸಾಸನೂರ ಅವರು ಬದುಕಿನಲ್ಲಿಯೂ ಸಹ ಅಷ್ಟೇ ಸರಳತೆಯುಳ್ಳವರು.ಯಾರೇ ಬಂದು ಮಾತಾಡಿಸಿದರೂ ಮುಕ್ತವಾಗಿ ಮಾತಾಡಿ ತಮಗೆ ತಿಳಿದ ಕಲೆಯ ಸಂಗತಿಗಳನ್ನು ಹಂಚಿಕೊಳ್ಳಲು ಮುಂದಾಗುತ್ತಾರೆ. ಎಲ್ಲವೂ ತಿಳಿದು ತಿಳಿಯದವರಂತೆ ಕಾಣುವ,ಪೂರ್ಣ ಪ್ರಜ್ಞೆಯ ಕಲಾ ದೀವಿಗೆ ನಮ್ಮ ಸಾಸನೂರ ಎಂಬ ಕಲಾವಿದ.
