“ಓ ಲಕ್ಷ್ಮಣಾ, ಮಾತನಾಡಬೇಡಾ ಇಂತಹ ಶಬ್ದ ವಾನರೇಶ್ವರನಿಗೆ I ಕಿಷ್ಕಿಂದಕಾಂಡ ರಾಮಾಯಣ ಭಾಗ-13

By admin


ಕೇಳಿ ಲಕ್ಷ್ಮಣನ ರೋಷದ ಮಾತುಗಳI
ಚಂದ್ರಮಾ ತಾರಾ ಲಕ್ಷ್ಮಣನಿಗೆ ನುಡಿದಳು: II
“ಓ ಲಕ್ಷ್ಮಣಾ, ಮಾತನಾಡಬೇಡಾ ಇಂತಹ ಶಬ್ದ ವಾನರೇಶ್ವರನಿಗೆ, I
ನಿನ್ನ ಶಬ್ದ ತಿಳಿಯು ಸ್ಥಿತಿಯಲಿಲ್ಲ, ಓ ಸುಮಿತ್ರೇಯ, II
ಸುಗ್ರೀವ ಕೃತಘ್ನನಲ್ಲಾ, ಮೋಸಗಾರನಲ್ಲಾ, ಹುಸಿಗಾರನಲ್ಲಾ, I
ಮಾತು ತಪ್ಪುವದಿಲ್ಲಾ, ಅಂತವನಲ್ಲಾ ವಾನರೇಶ್ವರ, II
ಓ ಲಕ್ಷ್ಮಣಾ, ಯಾರಿಂದಲೂ ಸಾಧ್ಯವಿಲ್ಲದ ಯುದ್ಧI
ಮಾಡಿದ ರಾಮನ ಮರೆತಿಲ್ಲ ಸುಗ್ರೀವ, ರಾಮನುಪಕಾರ, II
ರಾಮನುಪಕಾರದಿ ಪಡೆದಿಹನು ಸುಗ್ರೀವI
ರಾಜ್ಯ, ಗೌರವ, ರುಮಾ ವ ನನ್ನನು, II
ಕೋಪಗಳ ಎದುರಿಸಿ ಸುಖದ ಗಳಿಗೆ ಪಡೆದಿಹನುI
ಸಮಯಪ್ರಜ್ಞೆವಿದೆ ಸುಗ್ರೀವನಲಿ ವಿಶ್ವಾಮಿತ್ರನಂತೆ, II
ಓ ಲಕ್ಷ್ಮಣಾ, ಘೃತಾಚಿ ಜತೆ ಮಹಾಮುನಿ ವಿಶ್ವಾಮಿತ್ರI
ಹತ್ತುವರ್ಷಗಳನ್ನು ಒಂದು ದಿನದಂತೆ ಕಳೆದ, II
ಸಮಯಪ್ರಜ್ಞೆಯುಳ್ಳ ಮಹಾಮುನಿ ವಿಶ್ವಾಮಿತ್ತರI
ತಿಳಿಯಲಿಲ್ಲ ಗತವರ್ಷಗಳ, ಸಾಮಾನ್ಯನ ಗತಿಯೇನು? II
ದೇಹ-ತೃಷೆ ತೃಪ್ತಿ ಜೈವಿಕ-ಕ್ರಿಯೆಯಲಿ ತೊಡಗಿದ ಸುಗ್ರೀವI
ತೃಪ್ತನಾಗುವ ಸಮಯವರೆಗೂ ರಾಮ ಕಾಯಬೇಕು, II
ಓ ಯುವ ಲಕ್ಷ್ಮಣಾ, ಸಾಮಾನ್ಯನಂತೆ ಅವಸರದಿI
ವಾಸ್ತವಿಕತೆ ತಿಳಿಯದೇ ವರ್ತಿಸುವದು ಸರಿಯಲ್ಲ, ನಿನಗೆ, II
ಓ ಸದ್ಗುಣಿ, ಸುಗ್ರೀವನ ಪರ ಕ್ಷಮೆಕೋರುವೆ,I
ನಿನ್ನ ಕೋಪತೊರೆ, ನಮ್ಮನು ಕರುಣಿಸು, II
ಪತ್ನಿ ರುಮಾ, ನನ್ನ ವ ಅಂಗದ, ರಾಜ್ಯ,I
ಭೋಗಗಳನೆಲ್ಲ ತೊರೆವನು ಸುಗ್ರೀವ ರಾಮನಿಗಾಗಿ, II
ರಾವಣನ ವಧಿಸಿ ಸೀತೆಯನು ಒಪ್ಪಿಸುವನು ರಾಮನಿಗೆ I
ಸುಗ್ರೀವ, ಒಪ್ಪಿಸಿದಂತೆ ರೋಹಿನಿ ನಕ್ಷತ್ರ ಚಂದ್ರನಿಗೆ, II
ಶತಕೋಟಿ ಸಹಸ್ರ ರಾಕ್ಷಸರಿರುವರು ಲಂಕೆಯಲಿ,ಅಲ್ಲದೇ I
ಮೂವತ್ತಾರು ಸಾವಿರ ಸೈನ್ಯ ಘಟಕ, ಪ್ರತಿ ಘಟಕದಲಿ II
ಹತ್ತುಸಾವಿರ ಸೈನಿಕರು, ಇಚ್ಚಾಧಾರಿ ರಾಕ್ಷಸರನು ಸಂಹರಿಸದೇI
ಅಸಾಧ್ಯ ಸೀತೆ ಅಪಹರಿಸಿದ ರಾವಣನ ವಧೆ, II
ಸುಗ್ರೀವನ ಸಹಾಯವಿಲ್ಲದೇ ರಾವಣನಾಗಲಿ,I
ರಾಕ್ಷಸರನಾಗಲಿ ಸಂಹರಿಸುವದು ಅಸಾಧ್ಯ, II
ವಾಲಿಯಿಂದ ಕೇಳಿದನ್ನು ಹೇಳಿದೆ,I
ಇನ್ನೂ ಹೆಚ್ಚಿಸಿಕೊಂಡಿರಬಹುದು ತಮ್ಮ ಬಲವನು, II
ಯುದ್ಧದಲಿ ಸಹಾಯ ಬಯಸಿದರೆ, ಎಲ್ಲ ದಿಕ್ಕೂಗಳಲಿI
ತೊಡಗಿಸಬೇಕು ಬಲಶಾಲಿ ವಾನರ ಶೂರರನು, II
ರಾಮನ ಗುರಿ ಸಾಧಿಸಲು ಸುಗ್ರೀವI
ಕಾಯುತಿಹನು ಶೂರ ವಾನರರ ಹಿಂದಿರುಗುವದನು, II
ಓ ಲಕ್ಷ್ಮಣಾ, ಸುಗ್ರೀವನ ಯೋಜನೆಯಂತೆ ಸೇರುತಿಹರಿಂದು I
ಎಲ್ಲ ಸದ್ಗುಣಿ ಶೂರ ವಾನರರು, ಕೋಟಿ ಕೋಟಿ ಋಕ್ಷರು ,II
ಸಹಸ್ರ ಸಹಸ್ರ ಪಟ್ಟು ನರವಾನರರು ಸೇರುವರು, I
ನಿಯಂತ್ರಿಸಿಕೋ ಕೋಪ, ಓ ಲಕ್ಷ್ಮಣಾ, ನಿನ್ನ II
ರೋಷದ ಮುಖ ನೋಡಿ ಹೆದರಿದೆವು ವಾನಾರಿಯರು,I
ವಾಲಿ ರೀತಿಯಲಿ ಸುಗ್ರೀವನ ಕಳೆದುಕೊಳ್ಳುವ ಭೀತಿಯಲಿ”.II
ಕಿಷ್ಕಿಂಧಕಾಂಡ ರಾಮಾಯಣ

ಕೇಳಿ ಲಕ್ಷ್ಮಣನ ರೋಷದ ಮಾತುಗಳನು ಕೇಳಿ ತಾರಾಳು ಲಕ್ಷಣನಿಗೆ ಸಮಾಧಾನ ಪಡಿಸಿದ ಸಿನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ಕಂಡು ಬರುವ ಪ್ರಮುಖ ಚಿಂತನೆಗಳು: ತಾರಾಳ ಸೌಂದರ್ಯ: ತಾರಾಳ ಸೌಂದರ್ವನ್ನು ಆದಿಕವಿ ಹುಣ್ಣಿಮೆ-ಬೆಳಕಿನ ಅಂದಕ್ಕೆ ಹೋಲಿಸಿರುವರು, ಅವಳು ಮಾದಕ ಚಲುವೆ ಆಗಿದ್ದಳು. (2) ತಾರಾಳ ಮಾತಿನ ಜಾಣ್ಮೆ: ಲಕ್ಷಣನಿಗೆ ತಾರಾಳು ಸಮಾದಾನ ಪಡಿಸುವಾಗ ಸುಗ್ರೀವ ರಕ್ಷಣೆಯಲ್ಲಿ ಮಾತಾಡುವಳು, “ಸುಗ್ರೀವನಿಗೆ ಇಂತಹ ಶಬ್ದಗಳನ್ನು ಮಾತನಾಡಬೇಡಾ, ಅವನು ನಿನ್ನ ಶಬ್ದಗಳನ್ನು ತಿಳಿದುಕೊಳ್ಳವ ಸ್ಥಿತಿಯಲಿಲ್ಲ; ಸುಗ್ರೀವನು ಕೃತಘ್ನನಲ್ಲಾ, ಮೋಸಗಾರನಲ್ಲಾ, ಸುಳ್ಳುಗಾರನಲ್ಲಾ, ಮಾತು ತಪ್ಪುವವನಲ್ಲಾ; ಸುಗ್ರೀವನು ಯಾರಿಂದಲೂ ಸಾಧ್ಯವಿಲ್ಲದ ವಾಲಿಯೊಂದಿಗೆ ರಾಮನು ಮಾಡಿದ ಯುದ್ಧವನ್ನು ಮರೆತಿಲ್ಲ, ರಾಮನ ಉಪಕಾರ ಮರೆತಿಲ್ಲ, ಸುಗ್ರೀವನು ತನ್ನ ರಾಜ್ಯ, ಗೌರವ, ರುಮಾಳನ್ನು ರಾಮನ ಉಪಕಾರದಿಂದ ಪಡೆದಿರುವನು, ವಾಲಿಯ ಕೋಪಗಳನ್ನು ಎದುರಿಸಿ ಇಂದು ಸುಖದ ಗಳಿಗೆ ಪಡೆದಿರುವನು, ವಿಶ್ವಾಮಿತ್ರನಂತೆ ಸುಗ್ರೀವನಲಿಯೂ ಸಮಯ ಪ್ರಜ್ಞೆವಿದೆ” ಎಂದು ತಾರಾಳು ಸುಗ್ರೀವನಿಗೆ ಕ್ಷಮಿಸುವಂತೆ ಕೋರಕೆ ಅರ್ಥದಲಿ ಲಕ್ಷಣನಿಗೆ ನುಡಿಯುವಳು, ಪ್ರತಿಕೂಲ ಸ್ಥಿತಿಯನ್ನು ನಿಭಾಯಿಸುವ ತಾರಅಳ ಜಾಣ್ಮೆಯನ್ನು ಆದಿಕವಿ ತಿಳಿಸಿರುವರು, ಅದು ಸ್ತ್ರೀಯರ ಶ್ರೇಷ್ಠಗುಣ. (3)ದೇಹ-ತೃಷೆ ತೃಪ್ತಿ ಸಹಜ ಜೈವಿಕ-ಕ್ರಿಯೆ: ಘೃತಾಚಿ ( ಅಪ್ಸರೆ ಮೆನಕಾ) ಜೊತೆ ಮಹಾಮುನಿ ವಿಶ್ವಾಮಿತ್ರ ಹತ್ತುವರ್ಷಗಳನ್ನು ಒಂದು ದಿನದಂತೆ ಕಳೆದನು, ಸಮಯಪ್ರಜ್ಞೆಯುಳ್ಳ ಮಹಾಮುನಿ ವಿಶ್ವಾಮಿತ್ತರನಿಗೆ ಮೆನಕಾ-ಸುಖದಲ್ಲಿ ವರ್ಷಗಳು ಕಳೆದದ್ದೇ ತಿಳಿಯಲಿಲ್ಲ, ಇನ್ನು ಸಾಮಾನ್ಯನ ಗತಿಯೇನು? ದೇಹ-ತೃಷೆ ತೃಪ್ತಿ ಜೈವಿಕ-ಕ್ರಿಯೆಯಲ್ಲಿ ತೊಡಗಿದ ಸುಗ್ರೀವನು ತೃಪ್ತನಾಗುವ ಸಮಯವರೆಗೂ ರಾಮನು ಕಾಯಬೇಕು, ನೀನು ಸಾಮಾನ್ಯನಂತೆ ಅವಸರದಿಂದ ವಾಸ್ತವಿಕತೆ ತಿಳಿಯದೇ ವರ್ತಿಸುವದು ಸರಿಯಲ್ಲ ಎಂದು ತಾರಾಳು ಯುವ ಲಕ್ಷ್ಮಣನಿಗೆ ತಿಳಿ ಹೇಳುವಾಗ ಕಾಮತೃಷೆ ತೃಪ್ತಿಯು ಸಹಜ ಜೈವಿಕ ಗುಣ ಎಂಬ ಸತ್ಯವನ್ನು ಅವಳ ಮುಖೇನ ವಾಲ್ಮೀಕಿಯು ಜಗಕ್ಕೆ ತಿಳಿಸಿರುವರು. (4)ತಾರಾಳಿಂದ ಲಕ್ಷಣನಿಗೆ ಭರವಸೆ: ತಾನು ಸುಗ್ರೀವನ ಪರ ಕ್ಷಮೆಕೋರುವೆ, ಕೋಪ ತೊರೆದು ಕರುಣಿಸು, ಸುಗ್ರೀವನು ರಾಮನಿಗಾಗಿ ತನ್ನ ಪತ್ನಿ ರುಮಾ, ನನ್ನನ್ನು, ಅಂಗದನನ್ನು, ರಾಜ್ಯವನ್ನು ಮತ್ತು ಎಲ್ಲ ಭೋಗಗಳನ್ನು ತೊರೆಯುವನು ಹಾಗು ರಾವಣನ ಕೊಂದು ರೋಹಿನಿ ನಕ್ಷತ್ರ ಚಂದ್ರನಿಗೆ ಒಪ್ಪಿಸಿದಂತೆ ರಾಮನಿಗೆ ಸೀತೆಯನು ಒಪ್ಪಿಸುವನು ಎಂದು ಲಕ್ಷಣನಿಗೆ ಭರವಸೆ ನೀಡುವ ಮೂಲಕ ಅವನ ಕೋಪವನ್ನು ಶಮನಗೊಳಿಸುವಳು, ಚೌಕಾಸಿಯಲ್ಲಿ ಸಂದಾನದಲ್ಲಿ ಮನವಲಿಸುವಲ್ಲಿ ಸ್ತ್ರೀಯು ನಿಪುಣಳು ಎಂದು ಆದಿ ಸ್ತ್ರೀ ಸಂವೇಧಕ ವಾಲ್ಮೀಕಿಯು ತಿಳಿಸಿರುವರು, (5) ರಾವಣನ ಸೈನ್ಯ ಬಲ: ಶತಕೋಟಿ ಸಹಸ್ರ (ಒಂದು ಲಕ್ಷ ಕೋಟಿ) ರಾಕ್ಷಸರಿರುವರು ಲಂಕೆಯಲ್ಲಿ ಮೂವತ್ತಾರು ಸಾವಿರ ಸೈನ್ಯ ಘಟಕ— ಪ್ರತಿ ಘಟಕದಲ್ಲಿ ಹತ್ತುಸಾವಿರ ಸೈನಿಕರು ಮತ್ತು ಇಚ್ಚಾಧಾರಿ ರಾಕ್ಷಸರು, ಅವರನ್ನು ಸಂಹರಿಸದೇ ಸೀತೆ-ಅಪಹರಿಸಿದ ರಾವಣನನ್ನು ಕೊಲ್ಲುವದು ಅಸಾಧ್ಯ, ಸುಗ್ರೀವನ ಸಹಾಯವಿಲ್ಲದೇ ರಾವಣನಾಗಲಿ, ರಾಕ್ಷಸರನಾಗಲಿ ಸಂಹರಿಸುವದು ಅಸಾಧ್ಯ, ಅದನ್ನು ತಾನು ಸ್ವತಃ ವಾಲಿಯಿಂದ ಕೇಳಿರುವೆ ಅದನ್ನೆ ನಿನಗೆ ಹೇಳಿದೆನು ಎಂದು ರಾವಣನ ಸೈನ್ಯ ಬಲ ಮತ್ತು ರಾವಣನ್ನು ಸಂಹರಿಸಲು ಸುಗ್ರೀವನ ಮಹತ್ವವನ್ನು ತಿಳಿಸಿಕೊಟ್ಟಳು. ಕಬಂಧನು ಸಹ ರಾಮನಿಗೆ ಸುಗ್ರೀವನ ಸಹಾಯವಿಲ್ಲದೇ ರಾವಣನನ್ನು ಗೆಲ್ಲುವದು ಅಸಾಧ್ಯ ವೆಂದು ಹೇಳಿದನ್ನು ಇಲ್ಲಿ ಸರಿಸ ಬಹುದು, (6) ವಾನರ ಶೂರರನ್ನು ಸುಗ್ರೀವನು ಕೂಡಿಸುತ್ತಿರುವ ಸುದ್ಧಿ: ಯುದ್ಧದಲಿ ಸಹಾಯ ಮಾಡಲು ಎಲ್ಲ ದಿಕ್ಕೂಗಳಲ್ಲಿ ಬಲಶಾಲಿ ವಾನರ ಶೂರರನು ತೊಡಗಿಸಬೇಕು; ರಾಮನ ಗುರಿ ಸಾಧಿಸಲು ಸುಗ್ರೀವನು ಶೂರ ವಾನರರು ಬೇರೆ ಬೇರೆ ಕಡೆಗಳಿಂದ ಹಿಂದಿರುಗುವದನು ಕಾಯುತಿರುವನು, ಎಲ್ಲ ಸದ್ಗುಣಿ ಶೂರ ವಾನರರು ಸುಗ್ರೀವನ ಯೋಜನೆಯಂತೆ ಕಿಷ್ಕಿಂಧದಲ್ಲಿ ಸೇರುತಿರುವ ವಿಷಯವನ್ನು ತಾರಾಳು ಲಕ್ಷಣನಿಗೆ ತಿಳಿಸುವಳು, (7) ವಾನರ ಸೈನ್ಯದ ವಿವರ: ಕೋಟಿ ಕೋಟಿ ಋಕ್ಷರು (ನರಕರಡಿಗಳು/Humanoid Bears), ಸಹಸ್ರ ಸಹಸ್ರ ಪಟ್ಟು ನರವಾನರರು(Humanoid Apes) ಸೇರುವರು, ದೈತ ಮಾನವ, ನರ ಕರಡಿ, ನರವಾನರ ಪ್ರಭೇಧಗಳ ವಿಷ್ಮಯ ಪ್ರಾಣಿ-ಪ್ರಪಂಚದ ವಿವರಣೆಯನ್ನು ಆದಿಪ್ರಾಣಿಶಾಸ್ತ್ರಜ್ಞ ವಾಲ್ಮೀಕಿಯು ನೀಡಿರುವರು, ಹೀಗೆ ಹೇಳುತ ತಾರಾಳು ಲಕ್ಷನನಿಗೆ ಕೋಪವನ್ನು ನಿಯಂತ್ರಿಸಿಕೊಳ್ಳಲು ಮತ್ತು, ಸುಗ್ರೀವನನ್ನು ಕಳೆದುಕೊಳ್ಳುವ ಭೀತಿಯಲಿ ಹೆದರಿದ ವಾನಾರಿಯರಿಯರಿಗೆ ಸುಗ್ರೀವನ ರಕ್ಷಣೆ ಬಗ್ಗೆ ಮನವರಿಕೆ ಮಾಡಿಕೊಡಲು ತಿಳಿಸುವಳು, ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ರಾಮಣನ ಗೆಲ್ಲಲು ರಾಮನಿಗೆ ವಾನರರ ಸಹಾಯದ ಅನಿವಾರ್ಯತೆಯನ್ನು ತಿಳಿಸಿರುವರು
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌