LOCAL NEWS: “ಕುಕನೂರ|ಮೆಕ್ಕೆಜೋಳ ಬೆಲೆ ಕುಸಿತ; ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರಾಜ್ಯ ರೈತ ಸಂಘ ಮನವಿ”

By admin

“ಕುಕನೂರ|ಮೆಕ್ಕೆಜೋಳ ಬೆಲೆ ಕುಸಿತ; ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರಾಜ್ಯ ರೈತ ಸಂಘದಿಂದ  ಮನವಿ”

• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಕುಕನೂರು :

ಮೆಕ್ಕೆಜೋಳದ ದರ ಕ್ವಿಂಟಾಲ್‌ಕ್ಕೆ 2,300 ರೂ.ನಿಂದ 1,300–1,400 ರೂ. ಮಟ್ಟಕ್ಕೆ ಕುಸಿದಿದ್ದು, ಕುಕನೂರು–ಯಲಬುರ್ಗಾ ಪ್ರದೇಶದ ರೈತರನ್ನು ಸಂಕಟಕ್ಕೆ ತಳ್ಳಿದೆ. ಸಾಲಮಾಡಿ ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ರೈತರು ನಿರಾಶೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ನಿಗದಿಪಡಿಸಿದ 2,400 ರೂ. ಬೆಂಬಲ ಬೆಲೆ ಇನ್ನೂ ಜಾರಿಗೆ ಬರದೇ ಇರುವುದನ್ನು ರೈತರು ಪ್ರಶ್ನಿಸುತ್ತಾ, ತಕ್ಷಣ ಸರ್ಕಾರ ಹಸ್ತಕ್ಷೇಪ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಅವರ ನೇತೃತ್ವದಲ್ಲಿ ರೈತರು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರ ಕಚೇರಿಗೆ ತೆರಳಿ, ಅವರ ಆಪ್ತ ಕಾರ್ಯದರ್ಶಿ ಪದ್ಮನಾಭ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು. ಪ್ರತಿ ರೈತನಿಂದ 45–50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಮುಂದಾಬೇಕು. ಖರೀದಿ ಮೊತ್ತವನ್ನು ಒಂದು ತಿಂಗಳೊಳಗೆ ರೈತರ ಖಾತೆಗೆ ಜಮಾ ಮಾಡಬೇಕೆಂದು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅನ್ನಪ್ಪ ನೆರಗಲ್ಲ್, ಶರಣಪ್ಪ ಕರಮುಡಿ, ಮಾರುತಿ, ಬಸವರಾಜ ಮುಂತಾದವರು ಮನವಿ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು.