“ಶಹಾಪೂರ| ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ: ನಿಂಗಣ್ಣ ಮುದ್ದಾ ಸಲಹೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪೂರ :
ಪ್ರತಿಯೊಬ್ಬರೂ ಆಸಕ್ತಿಯಿಂದ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು, ಇದರಿಂದ ಜ್ಞಾನಾರ್ಜನೆ ಸಾಧ್ಯವಾಗುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ ನಿಂಗಣ್ಣ ಮುದ್ದಾ ಹೇಳಿದರು.
ತಾಲ್ಲೂಕಿನ ಸಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಯುವ ಸಮೂಹ ಹೆಚ್ಚು ಓದಿನ ಕಡೆಗೆ ಆಸಕ್ತಿ ತೋರಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯ ಸರ್ಕಾರ ನವೆಂಬರ್ 14 ರಿಂದ 20 ರವರೆಗೆ ಗ್ರಂಥಾಲಯ ಸಪ್ತಾಹ ಆಚರಿಸುತ್ತಿದೆ ಎಂದು ಹೇಳಿದರು.
ಸಾಹಿತಿ-ಪತ್ರಕರ್ತ ಬಸವರಾಜ ಶಿಣ್ಣೂರ ಗ್ರಂಥಾಲಯಗಳನ್ನು ಜೀವಂತ ದೇವಾಲಯಗಳೆಂದು ವಿವರಿಸಿ, “ನಾಡಿನ ಹಿರಿಯ ಸಾಹಿತಿಗಳ, ದಾರ್ಶನಿಕರ, ಶರಣರ ಪುಸ್ತಕಗಳನ್ನು ಓದುವುದರೊಂದಿಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ” ಎಂದು ಸಲಹೆ ನೀಡಿದರು.
ಈ ಸಂದರ್ಭ ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ, ನಿವೃತ್ತ ಶಿಕ್ಷಕ ವೀರಭದ್ರಯ್ಯ, ಗ್ರಂಥಾಲಯ ಮೇಲ್ವಿಚಾರಕ ವಿಶ್ವರಾಧ್ಯ ದೇಸಾಯಿ ಮಠ, ಚಂದಣ್ಣ ಚಡಗುಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ, ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.