LOCAL EXPRESS: “ಕುಷ್ಟಗಿ|ಮೆಕ್ಕೆಜೋಳ,ತೊಗರಿ ಧಾನ್ಯ ಖರೀದಿ ಕೇಂದ್ರ ತೆರೆಯಲು ನಜೀರಸಾಬ ಮೂಲಿಮನಿ ಒತ್ತಾಯ

By admin

“ಕುಷ್ಟಗಿ|ಮೆಕ್ಕೆಜೋಳ,ತೊಗರಿ ಧಾನ್ಯ ಖರೀದಿ ಕೇಂದ್ರ ತೆರೆಯಲು ನಜೀರಸಾಬ ಮೂಲಿಮನಿ ಒತ್ತಾಯ”


• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌  ಕುಷ್ಟಗಿ

ತಾಲ್ಲೂಕಿನ ಹನುಮಸಾಗರ ನಲ್ಲಿ ಮೆಕ್ಕೆಜೋಳ ಮತ್ತು ತೊಗರಿಬೇಳೆ ಬೆಳೆದ ಲಕ್ಷಾಂತರ ರೈತರು ಮಾರುಕಟ್ಟೆ ದರ ಕುಸಿತದಿಂದ ನಷ್ಟದ ಅಂಚಿನಲ್ಲಿ ನಿಂತಿರುವ ಹಿನ್ನೆಲೆಯಲ್ಲಿ, ಸರ್ಕಾರ ತಕ್ಷಣ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಅವರು ಸೋಮವಾರ ಎಪಿಎಂಸಿ ಆವರಣದಲ್ಲಿ ನಡೆದ ರೈತ ನಾಯಕರ ವಿಶೇಷ ಸಭೆಯಲ್ಲಿ ಹೇಳಿದರು.

ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ಅತ್ಯಧಿಕ ಪ್ರಮಾಣದಲ್ಲಿ ಬೆಳೆದರೂ, ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ದರ ಉತ್ಪಾದನಾ ವೆಚ್ಚವನ್ನೂ ಮುಚ್ಚದ ಮಟ್ಟದಲ್ಲಿ ಇಳಿದಿದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ರೈತರು ತಮ್ಮ ಬೆಳೆ ಮಾರಾಟಕ್ಕೆ ಮುಂದಾಗಿದ್ದು, ಬೆಲೆ ಕಡಿಮೆ ಇದ್ದು ರೈತರು ಕಂಗಾಲಾಗಿದ್ದಾರೆ.

ಸಭೆಯಲ್ಲಿ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೆಕ್ಕೆಜೋಳದ ಕಡಿಮೆ ದರದಿಂದಾಗುವ ನಷ್ಟಕ್ಕೆ ಪ್ರತಿ ಕ್ವಿಂಟಲ್‌ಗೆ ₹1000 ಧನಸಹಾಯ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತೊಗರಿಬೇಳೆ ಬೆಳೆದ ರೈತರು ಸರ್ಕಾರದ ನಿರ್ಲಕ್ಷ್ಯದಿಂದ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ತೊಗರಿಬೇಳೆ ಖರೀದಿ ಕೇಂದ್ರವನ್ನು ಕೂಡ ತಕ್ಷಣ ತೆರೆಯಬೇಕು ಎಂದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರವು ಸೂಕ್ತ ಬೆಲೆ ನಿಗದಿ, ಸಮಯಕ್ಕೆ ಖರೀದಿ ಕೇಂದ್ರ ಮತ್ತು ಹಾನಿಗೆ ಪರಿಹಾರ ನೀಡುವ ಮೂಲಕ ರೈತರ ಬದುಕಿಗೆ ನೆರವಾಗಬೇಕು ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರ ಪೈಕಿ ಯಮನೂರಪ್ಪ ಮಡಿವಾಳರ, ಶರಣಪ್ಪ ಬಾಚಲಾಪುರ, ಬಸವರಾಜ ಮೋಟಗಿ, ಮುತ್ತಣ್ಣ ಹಲಕುಲಿ, ಮುತ್ತಣ್ಣ ಕಟಗಿ, ಇಸ್ಮಾಯಿಲ್ ಸಾಬ್ ತಹಶೀಲ್ದಾರ್, ಹಸನಸಾಬ್ ಕಸಾಬ್, ಕಾಡಪ್ಪ ಗದ್ದಿ, ಮಂಜುನಾಥ್ ಎಮ್ಮಿ, ಯಮನೂರು ಮುದುಗಲ್ಲ ಮತ್ತಿತರರು ಕೂಡಿದ್ದರು. ಹನುಮಸಾಗರ ಎಪಿಎಂಸಿ ಆವರಣದಲ್ಲಿ ನಡೆದ ಈ ಸಭೆಯಲ್ಲಿ ರೈತರು ತಕ್ಷಣ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದರು.