LOCAL EXPRESS: “ಕುಕನೂರ|ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಜಿ.ಪಂ.ಮಾಜಿ ಸದಸ್ಯ ಈರಪ್ಪ ಕೊಡಗುಂಟಿ ಕರೆ”

By admin

LOCAL EXPRESS: “ಕುಕನೂರ|ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಜಿ.ಪಂ.ಮಾಜಿ ಸದಸ್ಯ ಈರಪ್ಪ ಕೊಡಗುಂಟಿ ಕರೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರು:

ಮಾನವಕುಲದ ಘನತೆ, ಸಮಾನತೆ ಮತ್ತು ಮೂಲಭೂತ ಅಗತ್ಯಗಳಿಗೆ ಸಂವಿಧಾನವೇ ಪೂರಕ ಶಕ್ತಿ ಎಂದು ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಈರಪ್ಪ ಕೊಡಗುಂಟಿ ತಿಳಿಸಿದ್ದಾರೆ.

ಅವರು ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವು ಎಲ್ಲ ವರ್ಗಗಳಿಗೂ ಸಮಾನತೆ ಮತ್ತು ರಕ್ಷಣೆಯನ್ನು ಒದಗಿಸಿರುವ ಮಹತ್ವದ ದಾಖಲೆ ಎಂದು ಅವರು ಹೇಳಿದರು. ಸಮಾಜದ ಹಿಂದುಳಿದ ವರ್ಗ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯುವುದಕ್ಕೆ ಸಂವಿಧಾನ ಬಲವಾಗಿರುವುದನ್ನು ನೆನಪಿಸಿದರು.

ಯಲಬುರ್ಗಾ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಬೂದಗುಂಪಾ ಮಾತನಾಡಿ, ದೇಶದ ಮೂರೂ ಪ್ರಮುಖ ಅಂಗಗಳು — ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ — ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸುತ್ತಿದ್ದರೂ ಅದರ ಆತ್ಮಕ್ಕೆ ವಿರುದ್ಧವಾದ ಘಟನೆಗಳು ಹೆಚ್ಚುತ್ತಿರುವುದು ಚಿಂತಾಜನಕ ಎಂದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಸಂತೋಷ್ ಬಿರಾದಾರ ಪಾಟೀಲ್ ಮಾತನಾಡಿ, ತಾರತಮ್ಯ ನಿಷೇಧ, ಸಮಾನ ಅವಕಾಶ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಸಂವಿಧಾನ ನೀಡಿದ ಮೂಲಾಧಾರಗಳು ಎಂದು ವಿವರಿಸಿದರು. ತಹಶೀಲ್ದಾರ ಹೆಚ್. ಪ್ರಾಣೇಶ ಅವರು ನಮ್ಮ ಸಂವಿಧಾನವು ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿಗಳಿಗೆ ಸೇತುವೆಯಾಗಿರುವ ದಸ್ತಾವೇಜು ಎಂದರು.

 ಅಂಬೇಡ್ಕರ್ ವೃತ್ತದಿಂದ ಸಂವಿಧಾನ ಪೀಠಿಕೆ ವಾಚನದೊಂದಿಗೆ ಜಾಗೃತಿ ಜಾಥಾ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ್ ಆರ್. ಬೆರಳಿನ್, ಸಮಾಜ ಕಲ್ಯಾಣ ಇಲಾಖೆಯ ವಿಜಯಕುಮಾರ್, ಈಶಪ್ಪ ಮಳಗಿ, ಯಮನೂರಪ್ಪ ಗೊರಲೆಕೊಪ್ಪ, ಪಾಂಡುರಂಗ, ಆರೋಗ್ಯ ಇಲಾಖೆಯ ಕಾಳಪ್ಪ ಕುಂಬಾರ್, ಶಿಕ್ಷಣ ಇಲಾಖೆಯ ಶಿವಪ್ಪ ಈಬೇರಿ, ಸದಸ್ಯ ಈರಣ್ಣ ಯಲಬುರ್ಗಿ, ಅರುಣ ಹಿರೇಮಠ, ವಕೀಲರು ರಮೇಶ ಗಜಕೋಶ, ರಮೇಶ್ ಶಾಸ್ತ್ರಿ, ಲಕ್ಷ್ಮಣ ಕಾಳೆ, ಮಲ್ಯಿಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲೆಕೊಪ್ಪ, ಬಸವರಾಜ ನಡಲಮನಿ, ಗಾಳೆಪ್ಪ ಎಂ.ಡಿ., ಹನುಮಂತ ಕೆ. ಕಡೇಮನಿ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.