
ಕಮಲ ಮೊಗ್ಗೆಗಳಿಂದ ತುಂಬಿದ ಸರೋವರದಂತೆI
ಕಂಡಿತು ರಾಮನಿಗೆ ವಾನರ-ಸಾಗರ ಸೇನೆ, II
ಎದ್ದು ಗಟ್ಟಿಯಾಗಿ ಆಲಂಗಿಸಿದ ಸುಗ್ರೀವನ ರಾಮI
“ಕುಳಿತುಕೋ” ಎನ್ನುತ ಸುಗ್ರೀವನಿಗೆ ನುಡಿದ ರಾಮ: II
“ ಸುಗ್ರೀವಾ, ಧರ್ಮಕಾರ್ಯ, ಅಭಿವೃದ್ಧಿಕಾರ್ಯ, ಭೋಗಸುಖಕ್ಕೆI
ಸಮಯ ನಿಗಧಿ ಮಾಡುವವನೇ ಶ್ರೇಷ್ಠ ರಾಜ, II
ಎಲ್ಲ ಮರೆತು ಭೋಗದಲ್ಲಿ ಸಮಯ ಕಳೆಯುವವI
ಕೊಂಬೆ ಮೇಲೆ ಮಲಗಿ ಕೆಳಗೆ ಬಿದ್ದು ಎಚ್ಚತ್ತ ಮನುಷ್ಯನಂತೆ, II
ವೈರಿಗಳನ್ನು ಸಂಹರಿಸುವವ, ಸ್ನೇಹಿತರೊಂದಿಗೆ ಕೂಡಿರುವವI
ಧರ್ಮರಕ್ಷಕ ವ ಪಡೆವನು ಧರ್ಮಫಲಗಳನು, II
ಓ ಶತ್ರುನಾಶಕನೇ, ಬಂತು ಸಾಹಸದ ಸಮಯ ಚರ್ಚಿಸು ಸಾಹಸದ ಬಗ್ಗೆI
ಮಂತ್ರಿಗಳೊಂದಿಗೆ”; ಕೇಳಿ ರಾಮನ II
ಸೂಕ್ಷ್ಮ ಎಚ್ಚರಿಕೆ ನುಡಿ, ಉತ್ತರಿಸಿದ ಸುಗ್ರೀವ: “ಓ ರಾಮನೇ, I
ಕಳಕೊಂಡದನ್ನು ಹಿಂಪಡೆದೆ ನಿಮ್ಮ ಸಹಾಯದಿ, II
ದೇವಪುರುಷರು ನೀವು ಎನ್ನ ಪಾಲಿಗೆI
ಉಪಕಾರಕ್ಕೆ ಅಪಕಾರ ಬಗೆವವ ಅಧರ್ಮಿ, ಓ ರಾಮಾ, II
ಇವರು ಶತ ಶತ ವಾನರ ನಾಯಕರು, ಸೇರಿಸಿಹರು ಸಕಲ ವಿಧI
ವಾನರ ವೀರರನು ಮೂಲೆ ಮೂಲೆದಿ ಭೂಮಿಯ; II
ನರಕರಡಿ, ನರವಾನರ, ಗೋಲಾಂಗೂ ವೀರರ ದಂಡI
ಶತ್ರು ಸದನ ಹೊಕ್ಕು ಸಾಧಿಸುವರು ಗುರಿ,ಓ ರಾಮಾ, II
ಓ ರಾಮಾ, ಇಚ್ಚಾರೂಪಧರಿ ವಾನರರಿವರು ಅಸಾಧ್ಯ ಅರಣ್ಯ I
ಬೇಲಿ ಪ್ರಾಂಗಣಗಳನ್ನು ಭೇದಿಸುವರು, ಕಡಲ, ವಿಂಧ್ಯ II
ಹಿಮಾಲಯಗಳಿಂದ ಬಂದ ವಾನರರು ದೂರದವರೆಗೆI
ಜಿಗಿಯುವ,ಹಾರುವ ಸಾಮರ್ಥ್ಯಯುಳ್ಳವರು, II
ನಿನ್ನ ಬಳಿ ಬರುವರು ಶೂರ ವಾನರರು, I
ರಾವಣನ ಹೊಡೆದು ಯುದ್ಧದಲಿ, ಸೀತೆಯನು ತರುವರು”, II
ನೋಡಿ ಸುಗ್ರೀವನ ನೇತೃತ್ವದ ವಾನರ ಸೇನೆI
ಕಮಲದಂತೆ ಅರಳಿತು ಸಂತೋಷದಿ ರಾಮನ ಮನ. II
ಕಿಷ್ಕಿಂಧಕಾಂಡ ರಾಮಾಯಣ
ವಾನರ-ಸಾಗರ ಸೇನೆ ರಾಮನಿಗೆ ಕಮಲ ಮೊಗ್ಗೆಗಳಿಂದ ತುಂಬಿದ ಸರೋವರದಂತೆ ಕಂಡ ಮತ್ತು ಹುರುಪಿನಿಂದ ಎದ್ದು ರಾಮನು ಗಟ್ಟಿಯಾಗಿ ಸುಗ್ರೀವನನ್ನು ಆಲಂಗಿಸಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ಮೂಡಿ ಬರುವ ಅಂಶಗಳು: (1) ಸುಗ್ರೀವನಿಗೆ ರಾಮನ ಬೋಧನೆ: “ಧರ್ಮಕಾರ್ಯ, ಅಭಿವೃದ್ಧಿಕಾರ್ಯ, ಭೋಗಸುಖಕ್ಕೆ ಸಮಯ ನಿಗಧಿ ಮಾಡುವವನೇ ಶ್ರೇಷ್ಠ ರಾಜನು, ಎಲ್ಲ ಮರೆತು ಕೆವಲ ಭೋಗದಲ್ಲಿ ಸಮಯ ಕಳೆಯುವವ ಕೊಂಬೆ ಮೇಲೆ ಮಲಗಿ ಕೆಳಗೆ ಬಿದ್ದು ಎಚ್ಚತ್ತ ಮನುಷ್ಯನಂತೆ” ಮತ್ತು ” ವೈರಿಗಳನ್ನು ಸಂಹರಿಸುವವ, ಸ್ನೇಹಿತರೊಂದಿಗೆ ಕೂಡಿರುವವ ಧರ್ಮರಕ್ಷಕನು ಹಾಗು ಅವನು ಧರ್ಮಫಲಗಳನು ಪಡೆಯುವನು; ಈಗ ಸಾಹಸದ ಸಮಯ ಬಂತು, ನಿನ್ನ ಮಂತ್ರಿಗಳೊಂದಿಗೆ ಸಾಹಸದ ಬಗ್ಗೆ (ಸೀತೆಯನ್ನು ಹುಡುಕಿ ರಾವಣನಿಂದ ಹಿಂಪಡೆಯುವ ಬಗ್ಗೆ) ಚರ್ಚಿಸು”ಎಂಬ ರಾಮನು ಸುಗ್ರೀವನಿಗೆ ರಾಜ-ಧರ್ಮ ಬೋಧನೆ, ಮತ್ತು ಎಚ್ಚರಿಸುವ ಉಪದೇಶಗಳನ್ನು ಮಾಡಿದನು ತದ್ಮೂಕ ಆದಿರಾಜಕೀಯ ಶಾಸ್ತ್ರಜ್ಞ ವಾಲ್ಮೀಕಿಯು ಶ್ರೇಷ್ಠ ರಾಜ ಅತವಾ ಆಡಳಿತಗಾರನ ಲಕ್ಷಣಗಳನ್ನು ವ್ಯಕ್ತ ಪಡಿಸಿರುವರು,(2) ಸುಗ್ರೀವನು ರಾಮನಿಗೆ ಕೃತಜ್ಞತೆಯನ್ನು ಸಲ್ಲಿಸುವನು: “ಓ ಮಹಾಪರಾಕ್ರಮಿ ರಾಮನೇ, ನಾನು ನಿಮ್ಮ ಸಹಾಯದಿಂದ ಕಳಕೊಂಡದನ್ನು ಹಿಂಪಡೆದಿರುವೆನು, ನನ್ನ ಪಾಲಿಗೆ ನೀವು ದೇವಪುರುಷರು, ಉಪಕಾರಕ್ಕೆ ಅಪಕಾರ ಬಗೆವವನು ಅಧರ್ಮಿ” ಎಂದು ಸುಗ್ರೀವನು ರಾಮನಿಗೆ ತಾನು ಅವನ ಉಪಕಾರ ಮರೆತಿಲ್ಲ ಎಂದು ನೆನಪಿಸಿ ಕೊಟ್ಟದನ್ನು ಆದಿಕವಿ ವಾಲ್ಮೀಕಿಯು ವ್ಯಕ್ತ ಪಡಿಸಿರುವರು (3) ವಾನರ ಸೇನೆಯ ಪರಿಚಯ: “ಓ ರಾಮಾ, ಇವರು ಶತ ಶತ ವಾನರ ನಾಯಕರು, ಸಕಲ ವಿಧ ವಾನರ ವೀರರನು ಭೂಮಿಯ ಮೂಲೆ ಮೂಲೆಗಳಿಂದ ವಾನರ ಸೈನ್ಯ ಸೇರಿಸಿರುವರು; ಓ ರಾಮಾ, ಶತ್ರು ಸದನ ಹೊಕ್ಕು ತಮ್ಮ ಗುರಿ ಸಾಧಿಸುವ ನರಕರಡಿ, ನರವಾನರ ಮತ್ತು ಗೋಲಾಂಗೂ (ಭೂ-ವಾಸಿ ದೈತ ಕಪಿಗಳು, ಸಂಘಜೀವಿಗಳು/ಗೋರಿಲಾ) ವೀರರ ದಂಡ ಇದು; ಓ ರಾಮಾ, ಇವರು ಅಸಾಧ್ಯ ಅರಣ್ಯ ಬೇಲಿ ಪ್ರಾಂಗಣಗಳನ್ನು ಭೇದಿಸುವ ಇಚ್ಚಾರೂಪಧರಿ ವಾನರರು’ ಇವರು ದೂರದವರೆಗೆ ಜಿಗಿಯುವ,ಹಾರುವ ಸಾಮರ್ಥ್ಯಯುಳ್ಳ ಕಡಲ, ವಿಂಧ್ಯ ಹಿಮಾಲಯಗಳಿಂದ ಬಂದ ವಾನರರು; ನಿನ್ನ ನೇತೃತ್ವದಲ್ಲಿ ಬರುವರು “ಈ ಶೂರ ವಾನರರು ಯುದ್ಧದಲ್ಲಿ ರಾವಣನ ಹೊಡೆದು, ಸೀತೆಯನು ತರುವರು” ಎಂದು ಸುಗ್ರೀವನ ವಾನರ ಸೈನ್ಯದ ಪರಿಚಯ ಮಾತುಗಳು ರಾಮನಲ್ಲಿ ತನ್ನ ಗುರಿ ತಲುಪುವ ವಿಶ್ವಾಸ ಮೂಡಿದ ಸತ್ಯ ಮತ್ತು ಕಠೋರ ಸಂಗತಿಗಳು ಧರ್ಮರಕ್ಷಣೆಯ ಬುನಾದಿಗಳೆಂಬ ಸಂದೇಶವನ್ನು ಈ ಮುಖೇನ ಆದಿಚಿಂತಕ ವಾಲ್ಮೀಕಿಯು ಲೋಕಕ್ಕೆ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
