ಕಿಷ್ಕಿಂದಕಾಂಡ ರಾಮಾಯಣ ಭಾಗ-18

By admin


ಕೇಳಿ ಸುಗ್ರೀವನ ನುಡಿ ಸಂತೋಷದಿ ರಾಮI
ಅಪ್ಪಿಕೊಂಡು ನುಡಿದ ಸುಗ್ರೀವನಿಗೆ: II
“ಅಬ್ಬರಿಸಲಿ ರಣಮಳೆ, ರಣರಣವಾಗಲಿ ಬಿಸಿಲುI
ಚಂದ್ರಮಾ ಮಂಕಾಗಲಿ, ನಮ್ಮ ಸ್ನೇಹ ಅಳುಕದು;II
ಓ ಸುಗ್ರೀವಾ, ನಿನ್ನಲಿಯ ಸಹಾಯ ಗುಣ ಬಲ್ಲೆ,I
ಸಂಘಟನಾ ವ್ಯವಸ್ಥೆ ನಿನ್ನ, ಅದ್ಭುತ, ಸಹಜ; II
ನನ್ನಾತ್ಮೀಯ ಸ್ನೇಹಿತನಾಗಿ ನೀನೊಬ್ಬನೇ ಸಮರ್ಥ I
ಗೆಲ್ಲುವೆ ಎಲ್ಲ ವೈರಿಗಳನು ಸಹಾಯದಿ ನಿನ್ನ; II
ಅಪಹರಿಸಿದಂತೆ ಪುಲೊಮಾಪುತ್ರಿ ಸಚಿದೇವಿಯನು ಅನುಹ್ಲಾ ರಾಕ್ಷಸ I
ತನ್ನ ನಾಶಕ್ಕಾಗಿ ವೈದೇಹಿ ಅಪಹರಿಸಿಹನು ರಾವಣ”;II
ಎದ್ದಿತು ಅದೇ ವೇಳೆ ಧೂಳ-ಗಾಳಿ,I
ಕುಗ್ಗಿತು ಸೂರ್ಯ ಕಿರಣ ಶಾಖ ತೀವ್ರತೆ; II
ಕಾನನ ಪರ್ವತ ಭೂಮಿ, ಎಲ್ಲ ದೇಸೆಗಳಲಿI
ಕವಿಯಿತು ಕತ್ತಲೆ ಧೂಳ-ಗಾಳಿಯಲಿ; II
ಕ್ಷಣಾರ್ಧದಲಿ ಪರ್ವತಾಕಾರದ ವಾನರರು ಇಳಿದರು
ಹಾರಿಬಂದು ಸಹಸ್ರ ಸಹಸ್ರ ಬಲದಲಿ ಭೂಮಿಗೆ; II
ದೈತಾಕಾರ, ಇಚ್ಚಾರೂಪಧಾರಿ, ನಿರ್ಭಯ, ವಿಭಿನ್ನI
ವಾನರರು—ಪರ್ವತ ಕಡಲ ಪ್ರದೇಶಗಳಿಂದ; II
ಅದೇಕ್ಷಣ ಪ್ರತ್ಯಕ್ಷನಾದ ಶತಬಲಿ ಹೆಸರಿನ ವೀರ ವಾನರI
ಕೋಟಿ ಸಹಸ್ರ ವಾನರ ಜತೆ ರಾಮನ ಎದಿರು;II
ತಾರಾಳ ತಂದೆ ವೀರ ಸುಶೇನ ಪ್ರತ್ಯಕ್ಷನಾದI
ಬಹು ಸಹಸ್ರ ವಾನರ ಜತೆ ರಾಮನ ಎದಿರು; II
ರಾಣಿ ರುಮಾಳ ತಂದೆ ದಂಡನಾಯಕ ತಾರI
ಪ್ರತ್ಯಕ್ಷನಾದ ಸಹಸ್ರ ಕೋಟಿ ವಾನರ ಜತೆ; II
ಹನುಮಾನಪಿತ ಜ್ಞಾನಿ ಕಮಲವರ್ಣ ಹೊಳಪಿನ ಕೇಸರಿI
ಸಹಸ್ರ ಸಹಸ್ರ ವಾನರ ದಂಡದೊಂದಿಗೆ ಪ್ರತ್ಯಕ್ಷನಾದ; II
ಗೋಲಾಂಗೂಲ ಮಹಾರಾಜ ಗವಾಕ್ಷ,I
ಸಹಸ್ರ ಸಹ್ರ ಸೇನೆಯೊಂದಿಗೆ ಪ್ರತ್ಯಕ್ಷನಾದ; II
ಶತ್ರುನಾಶಕ ಭೀಮಕಾಯದ ಧೂಮ್ರನಾಮದ ನರಕರಡಿ I
ಸಹಸ್ರ ಸಹಸ್ರ ನರಕರಡಿ ಜತೆ ಪ್ರತ್ಯಕ್ಷನಾದ; ಧೈರ್ಯ ಸಾಹಸಿ II
ಅಟಲ ಪನಸನಾಮ ಯುವ ದಂಡನಾಯಕ I
ಪರ್ವತಾಕಾರದ ಮುಕ್ಕೋಟಿ ವಾನರ ಜತೆ ಪ್ರತ್ಯಕ್ಷನಾದ; II
ದಶಕೋಟಿ ವಾನರ ಸೈನ್ಯ ಮಧ್ಯೆ ನೀಲಕಾಯದ I
ಯುವ ವಾನರ ವೀರ ನೀಲ ಪ್ರತ್ಯಕ್ಷನಾದ; II
ಕಿಷ್ಕಿಂಧಕಾಂಡ ರಾಮಾಯಣ

ಸುಗ್ರೀವನಿಂದ ವಾನರ ಸೈನ್ಯದ ಸಾಮರ್ಥ್ಯ ಮತ್ತು ಬಲದ ಪರಿಚಯ ತಿಳಿದು ಸಂತೋಷದಿಂದ ರಾಮನು ಸುಗ್ರೀವನನ್ನು ಅಪ್ಪಿಕೊಂಡ ಮತ್ತು ವಾನರ ಸೈನ್ಯದ ನಾಯಕರ ಪರಿಚಯವನ್ನು ಸುಗ್ರೀವ ಮಾಡಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ಸವಿಸ್ತಾರವಾಗಿ ವಿವರಿಸಿರುವರು:(1) ರಾಮನಿಂದ ಮೆಚ್ಚುಗೆ: ಸುಗ್ರೀವನಿಗೆ ರಾಮನು ಒಂದು ವೇಳೆ ರಣಮಳೆ(ಪ್ರಳಯಾಂತಕ ಮಳೆ) ಅಬ್ಬರಿಸಿದರೂ, ಬಿಸಿಲು ರಣರಣಿಸಿದರೂ (ತಾಪಮಾನ ಹೆಚ್ಚಾದರೂ), ಚಂದ್ರನ ಬೆಳಕು ಮಂಕಾದರೂ, ನಮ್ಮ ಸ್ನೇಹ ಅಳುಕದು (ಒಡೆಯದು); ಓ ಸುಗ್ರೀವಾ, ನಾನು ನಿನ್ನಲಿಯ ಸಹಾಯ ಗುಣ ಬಲ್ಲೆನು, ನಿನ್ನಲ್ಲಿ ಸಹಜ ಸಂಘಟನಾ- ವ್ಯವಸ್ಥೆ ಸಾಮರ್ಥ್ಯ ಅದ್ಭುತವಾಗಿದೆ, ನೀನೊಬ್ಬನೇ ನನ್ನ ಆತ್ಮೀಯ ಸಮರ್ಥ ಸ್ನೇಹಿತನು, ನಿನ್ನ ಸಹಾಯದಿಂದ ಎಲ್ಲ ವೈರಿಗಳನ್ನು ಗೆಲ್ಲುವೆನು; ಅನುಹ್ಲಾ ರಾಕ್ಷಸನು ತನ್ನ ನಾಶಕ್ಕಾಗಿ ಪುಲೊಮಾಪುತ್ರಿ ಸಚಿದೇವಿಯನು(ಇಂದ್ರ ಹೆಂಡತಿ) ಅಪಹರಿಸಿದಂತೆ ರಾವಣನು ತನ್ನ ನಾಶಕ್ಕಾಗಿ ವೈದೇಹಿಯನ್ನು ಅಪಹರಿಸಿರುವನು ” ಎಂದು ಆತ್ಮಸ್ಥೈರ್ಯದ ಮಾತುಗಳನ್ನು ಆಡಿದನು, ತದಮೂಲಕ ಆದಿಕವಿ ವಾಲ್ಮೀಕಿಯು ವಾನರ ಸೈನ್ಯದ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದನ್ನು ತಿಳಿಸಿರುವರು, (2) ವಾನರ ಸೈನ್ಯ ಜಮಾವಣೆ: ರಾಮ ಸುಗ್ರೀವನಿದ್ದ ಸ್ಥಳದಲ್ಲಿ ಧೂಳ-ಗಾಳಿ ಎದ್ದಿತು, ಸೂರ್ಯ ಕಿರಣ ಶಾಖ ತೀವ್ರತೆ ಕುಗ್ಗಿತು (ಸೂರ್ಯ ಮಂಕಾದನು), ಕಾನನ, ಪರ್ವತ ಮತ್ತು ಭೂಮಿಯ ಎಲ್ಲ ದೇಸೆಗಳಲ್ಲಿ ಧೂಳಿ-ಗಾಳಿಯಿಂದ ಕತ್ತಲ ಕವಿಯಿತು; ಕ್ಷಣಾರ್ಧದಲಿ ಸಹಸ್ರ ಸಹಸ್ರ ಬಲದಲಿ ಪರ್ವತಾಕಾರದ ವಾನರರು ಹಾರಿಬಂದು ಭೂಮಿಗೆ ಇಳಿದರು— ಪರ್ವತ ಕಡಲ ಪ್ರದೇಶಗಳಿಂದ ದೈತಾಕಾರ, ಇಚ್ಚಾರೂಪಧಾರಿ, ನಿರ್ಭಯ, ವಿಭಿನ್ನ ವಾನರರು; ಅದೇಕ್ಷಣ ಶತಬಲಿ ಹೆಸರಿನ ವೀರ ವಾನರ ಕೋಟಿ ಸಹಸ್ರ ವಾನರ ಜತೆ ರಾಮನ ಮುಂದೆ ಪ್ರತ್ಯಕ್ಷನಾದನು; ಅದರಂತೆ ಬಹು ಸಹಸ್ರ ವಾನರ ಜತೆ ತಾರಾಳ ತಂದೆ (ವಾಲಿಯ ಮಾವ) ವೀರ ಸುಶೇನ ರಾಮನ ಮುಂದೆ ಪ್ರತ್ಯಕ್ಷನಾದನು; ರಾಣಿ ರುಮಾಳ ತಂದೆ ಸುಗ್ರೀವನ ದಂಡನಾಯಕ ತಾರನು ಸಹಸ್ರ ಕೋಟಿ ವಾನರ ಜತೆ ಪ್ರತ್ಯಕ್ಷನಾದನು; ಹನುಮಾನಪಿತ ಜ್ಞಾನಿ ಕಮಲವರ್ಣ ಹೊಳಪಿನ ಕೇಸರಿ ರಾಜನು ಸಹಸ್ರ ಸಹಸ್ರ ವಾನರ ದಂಡದೊಂದಿಗೆ ಪ್ರತ್ಯಕ್ಷನಾದನು; ಗೋಲಾಂಗೂಲ ಮಹಾರಾಜ ಗವಾಕ್ಷನು ತನ್ನ ಸಹಸ್ರ ಸಹ್ರ ಸೇನೆಯೊಂದಿಗೆ ಪ್ರತ್ಯಕ್ಷನಾದನು; ಶತ್ರುನಾಶಕ ಭೀಮಕಾಯದ ‘ಧೂಮ್ರ’ನಾಮದ ನರಕರಡಿ ತನ್ನ ಸಹಸ್ರ ಸಹಸ್ರ ನರಕರಡಿಗಳ ಜತೆ ಪ್ರತ್ಯಕ್ಷನಾದನು; ಧೈರ್ಯ ಸಾಹಸಿ ಅಟಲ ‘ಪನಸ’ನಾಮ ಯುವ-ದಂಡನಾಯಕ ಪರ್ವತಾಕಾರದ ಮುಕ್ಕೋಟಿ ವಾನರ ಜತೆ ಪ್ರತ್ಯಕ್ಷನಾದನು; ದಶಕೋಟಿ ವಾನರ ಸೈನ್ಯ ಮಧ್ಯೆ ನೀಲಕಾಯದ ಯುವ ವಾನರ ವೀರ ‘ನೀಲ’ನು ಪ್ರತ್ಯಕ್ಷನಾದನು, ಹೀಗೆ ಆದಿಕವಿ ವಾಲ್ಮೀಕಿಯು ವಾನರ ಸೈನ್ಯ ಮತ್ತು ವೀರನಾಯಕರು ರಾಮನ ಸಹಾಯಕ್ಕೆ ಜಮಾವಣೆ ಆದ ದೃಶ್ಯವನ್ನು ಅದ್ಭುತ ರೀತಿಯಲ್ಲಿ ವಿವರಿಸಿರುವರು ಹಾಗು ಸ್ತ್ರೀ ಪೀಡಿತರಿಗೆ ನಾಶದ ಬಗ್ಗೆ ಎಚ್ಚರಿಕೆ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ