ಸೈದಾಪೂರ ಪುರಸಭೆ ಮಾಡಲು ಸರ್ಕಾರ ನಿರ್ಲಕ್ಷ, ಕರವೇ ಆಕ್ರೋಶ

By admin

ಸೈದಾಪೂರ ಪುರಸಭೆ ಮಾಡಲು ಸರ್ಕಾರ ನಿರ್ಲಕ್ಷ, ಕರವೇ ಆಕ್ರೋಶ

ಯಾದಗಿರಿ: ಸರ್ಕಾರ ಸೈದಾಪೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡದೇ ಮಲತಾಯಿ ಧೋರಣೆ ಅನುಸರಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿಎನ್.ಭೀಮುನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ದೋರನಳ್ಳಿ, ಸಗರ ಹಾಗೂ ವಡಗೇರಿ ಗ್ರಾಪಂ ಗಳನ್ನು ಪಟ್ಟಣ ಪಂಚಾಯಿತಿಯಾಗಿಸಿದ್ದಾರೆ ಆದರೆ ಈ ಎಲ್ಲವಕ್ಕೂ ಮಿಗಿಲಾಗಿ ಸೈದಾಪೂರ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಈಗಾಗಲೇ ಎಲ್ಲ ರೀತಿಯಿಂದಲೂ ಬೆಳವಣಿಗೆ ಕಾಣುತ್ತಿರುವ ಪಟ್ಟಣಕ್ಕೆ ಪುರಸಭೆ ಆಗುವ ಎಲ್ಲ ಅರ್ಹತೆಗಳು ಇದ್ದರೂ ಇತ್ತ ಹೊರಳಿಯೂ ನೋಡದೇ ಇರುವುದು ತಾರತಮ್ಯ ಮಾಡಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 20-25 ಸಾವಿರ ಜನ ಸಂಖ್ಯೆ ಇದ್ದು, ಪಕ್ಕದಲ್ಲಿಯೇ ಅತಿದೊಡ್ಡ ಕೈಗಾರಿಕೆ ಕೇಂದ್ರವಾದ ಕಡೆಚೂರು ಬಾಡಿಯಾಲ್ ಕೈಗಾರಿಕಾ ವಲಯ ಇದ್ದು, ಭವಿಷ್ಯದ ಅತ್ಯುತ್ತಮ ನಗರವಾಗುವ ಲಕ್ಷಣ ಹೊಂದಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮುತುವರ್ಜಿ ವಹಿಸಿದಲ್ಲಿ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಬರುವ ಸಾಧ್ಯತೆ ಇರುವುದರಿಂದ ಮುನ್ನೋಟ ಇಚ್ಛಾಶಕ್ತಿಗಳನ್ನು ಪ್ರದರ್ಶಿಸಿ ಆದ್ಯತೆ ಮೇರೆಗೆ ಸೈದಾಪೂರವನ್ನು ಮೇಲ್ದರ್ಜೆಗೇರಿಸಬೇಕು. ಇಷ್ಟೆಲ್ಲ ಇದ್ದರೂ ಗ್ರಾಪಂ ಆಗಿ ಮುಂದುವರೆಸುವುದು ಸರ್ಕಾರಕ್ಕೆ ಅವಮಾನ ಎಂದು ಟೀಕಿಸಿದರು.
ಆಡಳಿತ ಪಕ್ಷದ ವ್ಯಾಪ್ತಿಯಲ್ಲಿ ಬರುವ 3 ಗ್ರ‍್ರಾಪಂ ಗಳನ್ನು ಪಪಂ ಗಳು ಮಾಡಿರುವುದಕ್ಕೆ ಸ್ವಾಗತವಿದೆ ಆದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬAತೆ ವರ್ತಿಸಿರುವ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತಾರತಮ್ಯ, ನಿರ್ಲಕ್ಷö್ಯ ಖಂಡನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅತ್ತ ಗುರುಮಠಕಲ್ ಶಾಸಕರು ಸಹ ಸೈದಾಪೂರದ ಬಗ್ಗೆ ದನಿ ಎತ್ತುವ ಗೋಜಿಗೆ ಹೋಗಿಲ್ಲದಿರುವುದು ಬೇಸರದ ಸಂಗತಿಯಾಗಿದೆ, ಸರ್ಕಾರದ ಮಟ್ಟದಲ್ಲಿ ಅದರಲ್ಲೂ ಮುಂದೆ ಬರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತುವ ಮೂಲಕ ಪುರಸಭೆಯನ್ನಾಗಿ ಮಾಡಲು ಮುಂದಾಗಬೇಕೆAದು ಅವರು ಒತ್ತಾಯಿಸಿದರು.
ಆಡಳಿತ ಮತ್ತು ವಿಪಕ್ಷದ ವರ ಮದ್ಯೆ ಕೂಸು ಬಡವಾಯಿತು ಎಂಬAತೆ ಸೈದಾಪೂರ ನಿರ್ಲಕ್ಷö್ಯ ವಹಿಸಿರುವುದು ಸಹಿಸಲಾಗುವುದಿಲ್ಲ. ಕೂಡಲೇ ಅಧಿವೇಶನದಲ್ಲಿ ಈ ಕುರಿತು ಶಾಸಕರು ದನಿ ಎತ್ತಬೇಕು ಸಚಿವರು ಇದಕ್ಕೆ ಸ್ಪಂದಿಸಬೇಕು ಸರ್ಕಾರ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದರ ಜೊತೆಗೆ ಗುರುಮಠಕಲ್ ಕ್ಷೇತ್ರದ ತೆಲಂಗಾಣ ಗಡಿ ಭಾಗದಲ್ಲಿ ಇರುವ ಹಳ್ಳಿಗಳು ಪಲ್ಲಿಗಳಾಗಿಯೇ ಉಳಿದಿವೆ. ನಿರಂತರ ಕರವೇ ಒತ್ತಾಯ ಮಾಡಿದರೂ ಇದಕ್ಕೆ ಸ್ಪಂದನೆ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೋಲಾರ ಜಿಲ್ಲೆಯ ಬಾಗೇಪಲ್ಲಿಯನ್ನು ಭಾಗ್ಯನಗರ ಮಾಡಿದರು, ಗುಲಬರ್ಗಾವನ್ನು ಇದೇ ಮುಖ್ಯಮಂತ್ರಿಗಳು ಕಲ್ಬುರ್ಗಿ ಮಾಡಿದರು ಎಂದು ಅವರು ಉದಾಹರಣೆ ನೀಡಿ, ಕೂಡಲೇ ಅಧಿವೇಶನದಲ್ಲಿ ಈ ಎರಡು ವಿಚಾರಗಳನ್ನು ಗಂಭೀರವಾಗಿ ಎತ್ತುವ ಮೂಲಕ ತಾರ್ಕಿಕ ಅಂತ್ಯ ಗೊಳಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಕರವೇ ಉಗ್ರ ಹೋರಾಟ ರೂಪಿಸುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಪ್ರಕಾಶ ಪಾಟೀಲ್ ಜೈಗ್ರಾಮ್, ಅಂಬ್ರೇಷ್ ಹತ್ತಿಮನಿ, ಸುರೇಶ ಬೆಳಗುಂದಿ, ಸಾಗರ ಹುಲೇರಿ, ಬಸ್ಸು ನಾಯಕ ಸೈದಾಪೂರ, ಸೈದಪ್ಪ ಬಾಂಬೆ, ಮೌನೇಶ ಮಾಧ್ವಾರ, ಮಹೇಶ ಸೈದಾಪೂರಮ ಮಲ್ಲು ಬಾಡಿಯಾಲ, ಸೇರಿದಂತೆ ಇನ್ನಿತರರು ಎಚ್ಚರಿಕೆ ನೀಡಿದ್ದಾರೆ.